ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕಣಕ್ಕಿಳಿದಿದ್ದಾರೆ. ಸತತ ಎರಡನೇ ಬಾರಿ ಅದೃಷ್ಟ ಪರೀಕ್ಷೆಗಿಳಿದ ಅವರು, ಗೆಲ್ಲುವ ಹುಮ್ಮಸ್ಸಿನಿಂದ ಕ್ಷೇತ್ರದ ಹಳ್ಳಿ–ಹಳ್ಳಿಗಳನ್ನು ಸುತ್ತುತ್ತಿದ್ದಾರೆ. ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಕ್ಷೇತ್ರದಲ್ಲಿ ಪ್ರಚಾರ ಹೇಗೆ ನಡೆದಿದೆ?
ಚುನಾವಣೆಗೆ ಒಂದೇ ವಾರ ಬಾಕಿ ಇದ್ದು, ಕ್ಷೇತ್ರದ ತುಂಬೆಲ್ಲ ಪ್ರಚಾರ ಮಾಡುತ್ತಿದ್ದೇವೆ. ಜಾತಿ, ಧರ್ಮ ಮೀರಿ, ಎಲ್ಲ ವರ್ಗಗಳ ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಕಾಂಗ್ರೆಸ್‌ನವರು ‘ಗ್ಯಾರಂಟಿ’ ಮಂತ್ರ ಜಪಿಸುತ್ತಿದ್ದಾರೆ. ನೀವು ಯಾವ ವಿಷಯ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ?
ನಾನು ಕಳೆದ ಐದು ವರ್ಷಗಳಲ್ಲಿ ಚಿಕ್ಕೋಡಿ ಕ್ಷೇತ್ರಕ್ಕೆ ₹8,810 ಕೋಟಿ ಅನುದಾನ ತಂದಿದ್ದೇನೆ. ನನ್ನ ಕ್ಷೇತ್ರದಲ್ಲಿ ಹಾಯ್ದುಹೋಗಿರುವ ರಾಜ್ಯ ಹೆದ್ದಾರಿಗಳನ್ನು ಸುಧಾರಿಸಿದ್ದೇನೆ. ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿದ್ದೇನೆ. ಕೇಂದ್ರ ಸರ್ಕಾರ ಅನೇಕವೂ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳನ್ನೇ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ.
ಬೆಳಗಾವಿಗೆ ಮೋದಿ ನೀಡಿದ ಭೇಟಿಯಿಂದ ನಿಮಗೆ ಆಗಿರುವ ಲಾಭವೇನು?
ದೇಶದಾದ್ಯಂತ ಮೋದಿ ಅಲೆಯಿದೆ. ಬೆಳಗಾವಿಗೆ ಮೋದಿ ಭೇಟಿ ನೀಡಿದ್ದರಿಂದ ಸ್ಥಳೀಯ ಕಾರ್ಯಕರ್ತರಲ್ಲೂ ಇನ್ನಷ್ಟು ಹುಮ್ಮಸ್ಸು ಬಂದಿದೆ. ಇಡೀ ಜಿಲ್ಲೆಯಲ್ಲಿ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ.
ನೀವು ಚಿಕ್ಕೋಡಿ ಕ್ಷೇತ್ರದ ಹಲವು ಹಳ್ಳಿಗಳಿಗೆ ಒಮ್ಮೆಯೂ ಬಂದಿಲ್ಲವೆಂಬ ಆರೋಪ ಕೇಳಿಬರುತ್ತಿದೆಯಲ್ಲ...
ಇದು ವಿರೋಧ ಪಕ್ಷದವರ ಆರೋಪವಷ್ಟೇ. ಆದರೆ, ಚಿಕ್ಕೋಡಿ ಕ್ಷೇತ್ರದ 650 ಹಳ್ಳಿಗಳ ಪೈಕಿ 550 ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದೇನೆ. ಪ್ರತಿ ಹಳ್ಳಿಗೂ ಕನಿಷ್ಠ ₹5 ಲಕ್ಷ ಅನುದಾನ ನೀಡಿದ್ದೇನೆ. ಇಡೀ ಕ್ಷೇತ್ರದ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದೇನೆ.
ಬಿಜೆಪಿಯಲ್ಲಿರುವ ಹಲವು ಹಿರಿಯ ನಾಯಕರು ನಿಮ್ಮ ಪರವಾಗಿ ಪ್ರಚಾರಕ್ಕೆ ಬರುತ್ತಿಲ್ಲವಲ್ಲ. ನಿಮಗೆ ಬಂಡಾಯದ ಬಿಸಿ ತಟ್ಟಬಹುದೇ?
ನಮ್ಮಲ್ಲಿ ಬಂಡಾಯವೇ ಇಲ್ಲ. ಪಕ್ಷದಲ್ಲಿರುವ ಎಲ್ಲ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರು ಪ್ರಚಾರ ಕೈಗೊಳ್ಳುತ್ತಿದ್ದಾರೆ.
ಕ್ಷೇತ್ರದ ಮತದಾರರು ನಿಮಗೆ ಏಕೆ ಮತ ಹಾಕಬೇಕು?
ಕೋವಿಡ್, ನೆರೆ ಆತಂಕದ ಮಧ್ಯೆಯೂ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಇಡೀ ವಿಶ್ವವೇ ಭಾರತದತ್ತ ತಿರುಗಿನೋಡುವಂತೆ ಪ್ರಧಾನಿ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಕ್ಷೇತ್ರದ ಮನೆ–ಮನೆಗೆ ತಲುಪಿಸಿದ್ದು, ನಾನೂ ಸಮರ್ಥವಾಗಿ ಕೆಲಸ ನಿರ್ವಹಿಸಿದ್ದೇನೆ. ಇವೆಲ್ಲ ಕಾರಣಕ್ಕೆ, ಬಿಜೆಪಿಗೆ ಮತ ಕೊಡಿ ಎಂಬುದು ನನ್ನ ಮನವಿ. ಜನ ಈ ಬಾರಿಯೂ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ.
ನೀವು ಆಯ್ಕೆಯಾದರೆ, ಕ್ಷೇತ್ರದಲ್ಲಿ ಕೈಗೊಳ್ಳಲಿರುವ ಮೊದಲ ಮೂರು ಕೆಲಸಗಳೇನು?
ನಾನು ಪ್ರತಿನಿಧಿಸುವ ಕ್ಷೇತ್ರ ಪ್ರತಿವರ್ಷ ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದೆ. ಅದಕ್ಕೆ ಶಾಶ್ವತ ಪರಿಹಾರ ಒದಗಿಸುತ್ತೇನೆ. ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳ ಬಲವರ್ಧನೆಗೆ ಆದ್ಯತೆ ನೀಡುತ್ತೇನೆ. ಎಲ್ಲ ವರ್ಗಗಳ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತ, ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಕನಸು ಹೊತ್ತಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.