ರಾಮನಗರ: ಸತತ ಏಳು ಗೆಲುವಿನೊಂದಿಗೆ ಕನಕಪುರ ಕ್ಷೇತ್ರದಲ್ಲಿ ‘ಬಂಡೆ’ಯಂತೆ ನಿಂತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎದುರು ಬಿಜೆಪಿಯು ಸಚಿವ ಆರ್. ಅಶೋಕ ಅವರನ್ನು ಕಣಕ್ಕೆ ಇಳಿಸಿದೆ. ಅವರು ಡೈನಮೈಟ್‌ನಂತೆ ಸಿಡಿಯುತ್ತಾರೋ ಅಥವಾ ಡಿ.ಕೆ. ಸಹೋದರರ ಅಬ್ಬರದಲ್ಲಿ ಠುಸ್ ಪಟಾಕಿ ಆಗುತ್ತಾರೋ ಎಂಬುದು ಸದ್ಯದ ಕುತೂಹಲ.

ಎರಡು ದಶಕಗಳಿಂದಲೂ ಕಾಂಗ್ರೆಸ್ ಭದ್ರಕೋಟೆ ಆಗಿರುವ ಕನಕಪುರದಲ್ಲಿ ಬಿಜೆಪಿ ಈ ಬಾರಿ ಪ್ರಯೋಗಕ್ಕೆ ಕೈ ಹಾಕಿದೆ. ತನ್ನೆಲ್ಲ ಶಕ್ತಿಯನ್ನು ಬಳಸಿ ಕೆಪಿಸಿಸಿ ಅಧ್ಯಕ್ಷರನ್ನು ತವರಿನಲ್ಲೇ ಕಟ್ಟಿ ಹಾಕುವ ಪ್ರಯತ್ನ ಮಾಡಿದೆ. ಹಿಂದೆಲ್ಲ ಇಲ್ಲಿ ಬಿಜೆಪಿ ಸ್ಪರ್ಧೆ ಹೆಸರಿಗಷ್ಟೇ ಸೀಮಿತವಾಗಿತ್ತು. ಒಮ್ಮೆಯೂ ಠೇವಣಿ ಉಳಿದಿಲ್ಲ. ಆದರೆ, ಈ ಬಾರಿ ಅಶೋಕ ಸ್ಪರ್ಧೆಯಿಂದ ಚಿತ್ರಣ ಬದಲಾಗಿದೆ.

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಸಾತನೂರು ಕ್ಷೇತ್ರ ಅಸ್ತಿತ್ವ ಕಳೆದುಕೊಂಡು ಕನಕಪುರ ಕ್ಷೇತ್ರದಲ್ಲಿ ವಿಲೀನವಾಯಿತು. ಡಿ.ಕೆ. ಶಿವಕುಮಾರ್ ಇಲ್ಲಿಯೂ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ. ಚುನಾವಣೆಯಿಂದ ಚುನಾವಣೆಗೆ ಅವರ ಗೆಲುವಿನ ಅಂತರ ಹೆಚ್ಚುತ್ತಲೇ ಇದೆ. ಈ ಬಾರಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಮುಖ್ಯಮಂತ್ರಿ ಆಗುವ ಕನಸನ್ನು ಶಿವಕುಮಾರ್ ಬಿಚ್ಚಿಟ್ಟಿದ್ದಾರೆ.

ಈ ಹಿಂದೆ ಜೆಡಿಎಸ್‌ನಿಂದ ಪೈಪೋಟಿ ನೀಡುತ್ತಿದ್ದ ಡಿ.ಎಂ. ವಿಶ್ವನಾಥ್, ನಾರಾಯಣಗೌಡ ಸೇರಿದಂತೆ ಹಲವರನ್ನು ಕಾಂಗ್ರೆಸ್‌ಗೆ ಸೆಳೆದು ವಿರೋಧ ಪಕ್ಷಗಳಿಗೆ ನಾಯಕತ್ವ ಇಲ್ಲದಂತೆ ನೋಡಿಕೊಂಡಿದ್ದಾರೆ. ಹೀಗಿರುವಾಗ ಬಿಜೆಪಿಯ ‘ಅನಿರೀಕ್ಷಿತ ಅಭ್ಯರ್ಥಿ’ಯ ಸ್ಪರ್ಧೆ ಕೊಂಚ ಬಿಸಿ ಮುಟ್ಟಿಸಿದೆ.

ಕನಕಪುರ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಹೀಗಾಗಿ ಮೂರು ಪ್ರಮುಖ ಪಕ್ಷಗಳೂ ಇದೇ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ಬಿಜೆಪಿ ಸಹ ತನ್ನಲ್ಲಿನ ಒಕ್ಕಲಿಗ ನಾಯಕನನ್ನೇ ಕಣಕ್ಕೆ ಇಳಿಸಿದೆ. ಜೊತೆಗೆ ಪಕ್ಷದಲ್ಲಿನ ಇದೇ ಸಮುದಾಯದ ಮುಖಂಡರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡರಿಗೆ ಸ್ಥಳೀಯ ಸಂಘಟನೆಯ ಜವಾಬ್ದಾರಿ ಕೊಟ್ಟಿದೆ.

ಶಿವಕುಮಾರ್‌ರನ್ನು ತವರಿನಲ್ಲೇ ಕಟ್ಟಿ ಹಾಕಬೇಕು ಎನ್ನುವ ಬಿಜೆಪಿ ತಂತ್ರ ಸದ್ಯಕ್ಕೆ ಯಶಸ್ಸು ಕಂಡಂತಿಲ್ಲ. ಏಕೆಂದರೆ, ನಾಮಪತ್ರ ಸಲ್ಲಿಸಿ ಹೋದ ಶಿವಕುಮಾರ್ ಮತ್ತೆ ಕನಕಪುರದತ್ತ ಮುಖ ಮಾಡಿಲ್ಲ. ಡಿ.ಕೆ. ಸುರೇಶ್ ಚುನಾವಣೆಯ ಉಸ್ತುವಾರಿ ವಹಿಸಿದ್ದಾರೆ. ಡಿಕೆಶಿ ಪತ್ನಿ ಉಷಾ ಸಹ ಹೆಚ್ಚಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಹೋದರರಿಬ್ಬರೂ ಇಲ್ಲಿ ಅಭೇದ್ಯ ಕೋಟೆ ನಿರ್ಮಿಸಿಕೊಂಡಿದ್ದು, ಅದನ್ನು ನೆಲಕ್ಕೆ ಉರುಳಿಸುವುದು ಸುಲಭದ ಮಾತಲ್ಲ ಎನ್ನುವ ಅರಿವು ಕಮಲ ಪಾಳಯಕ್ಕೂ ಇದೆ. ಹಳ್ಳಿ–ಹಳ್ಳಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಡೆ ಇದೆ. ಈ ವಿಚಾರದಲ್ಲಿ ಬಿಜೆಪಿ ಕೊಂಚ ಹಿಂದೆ ಉಳಿದಿದೆ.

ಹೈಕಮಾಂಡ್ ಸೂಚನೆ ಮೇರೆಗೆ ಪದ್ಮನಾಭನಗರದ ಜೊತೆಗೆ ಕನಕಪುರದಲ್ಲೂ ಸ್ಪರ್ಧೆ ಮಾಡಿರುವ ಅಶೋಕ ನಿತ್ಯ ಪ್ರಚಾರದ ಮೂಲಕ ಬೆವರು ಹರಿಸುತ್ತಿದ್ದಾರೆ. ಬಿಜೆಪಿ ಪಾಳಯ ಅವರ ಬೆನ್ನಿಗೆ ನಿಂತಿದೆ. ಅರುಣ್ ಸಿಂಗ್, ಸಿ.ಟಿ. ರವಿ, ಬಿ.ಎಲ್. ಸಂತೋಷ್ ಸೇರಿದಂತೆ ಬಿಜೆಪಿ ರಾಜ್ಯ–ರಾಷ್ಟ್ರೀಯ ನಾಯಕರ ದಂಡು ಪ್ರಚಾರ ನಡೆಸಿದೆ.

ಡಿ.ಕೆ. ಸಹೋದರರ ಮೇಲೆ ಇರುವ ಅಕ್ರಮ ಆಸ್ತಿ ಗಳಿಕೆ, ದಬ್ಬಾಳಿಕೆ ಆರೋಪಗಳನ್ನೇ ಅಸ್ತ್ರವಾಗಿಸಿಕೊಂಡು ಬಿಜೆಪಿ ಪ್ರಚಾರ ಮಾಡುತ್ತಿದ್ದು, ಮತದಾರರ ಮನ ಪರಿವರ್ತನೆ ತಮ್ಮ ಪಾಲಿಗೆ ವರವಾಗಲಿದೆ ಎಂದು ನಂಬಿದೆ. ಜೊತೆಗೆ ಕ್ಷೇತ್ರದಲ್ಲಿ ನೊಂದಿರುವ ಜೆಡಿಎಸ್ ಕಾರ್ಯಕರ್ತರೂ ತಮ್ಮ ಬೆನ್ನಿಗೆ ನಿಲ್ಲುತ್ತಾರೆ ಎನ್ನುವ ವಿಶ್ವಾಸದಲ್ಲಿದೆ.

ಕಾಂಗ್ರೆಸ್–ಜೆಡಿಎಸ್ ಒಳ ಒಪ್ಪಂದ?

ಕನಕಪುರದಲ್ಲಿ ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಕದನವನ್ನು ಮೂಕಪ್ರೇಕ್ಷಕನಂತೆ ನೋಡುತ್ತಿರುವ ಜೆಡಿಎಸ್ ಕ್ಷೇತ್ರದಲ್ಲಿ ಹೆಚ್ಚು ಸದ್ದು ಮಾಡುತ್ತಿಲ್ಲ. ಪಕ್ಷದ ಅಭ್ಯರ್ಥಿಯಾಗಿ ನಾಗರಾಜು ಸ್ಪರ್ಧೆಯಲ್ಲಿದ್ದಾರೆ. ದೇವೇಗೌಡರು ಕುಮಾರಸ್ವಾಮಿ ಸೇರಿದಂತೆ ಯಾರೊಬ್ಬರೂ ಪ್ರಚಾರಕ್ಕೆ ಬಾರದಿರುವುದು ಹೊಂದಾಣಿಕೆ ರಾಜಕೀಯದ ಮುನ್ಸೂಚನೆ ಎಂಬ ಮಾತು ಕೇಳಿಬರುತ್ತಿದೆ. ಕನಕಪುರ ತಾಲ್ಲೂಕಿನ ಸಾತನೂರು ಕ್ಷೇತ್ರದಿಂದ 1985ರಲ್ಲಿ ಎಚ್.ಡಿ. ದೇವೇಗೌಡರು 1999ರಲ್ಲಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಅಂದಿನಿಂದಲೂ ಇಲ್ಲಿನ ಸಾವಿರಾರು ಕಾರ್ಯಕರ್ತರು ಜೆಡಿಎಸ್‌ನೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದಾರೆ. ಮರಾಠ ಸಮುದಾಯಕ್ಕೆ ಸೇರಿದ ಪಿ.ಜಿ.ಆರ್. ಸಿಂಧ್ಯಾ ಜನತಾ ಪರಿವಾರದಿಂದ ಸ್ಪರ್ಧಿಸಿ ಸತತವಾಗಿ ಆರಿಸಿಬಂದ ಇತಿಹಾಸವಿದೆ. ಇಲ್ಲಿ ಯಾರೇ ಅಭ್ಯರ್ಥಿಯಾದರೂ ಜೆಡಿಎಸ್ ಚಿಹ್ನೆ ನೋಡಿ ಮತ ಹಾಕುವ 40–50 ಸಾವಿರದಷ್ಟು ಕಾರ್ಯಕರ್ತರು ಇದ್ದಾರೆ. ಈ ಬಾರಿ ಜೆಡಿಎಸ್ ಇಲ್ಲಿ ಎಷ್ಟು ಮತದಾರರನ್ನು ಸೆಳೆಯಲಿದೆ. ಯಾವ ಸ್ಥಾನದಲ್ಲಿ ಇರಲಿದೆ ಎನ್ನುವ ಕುತೂಹಲ ಜನರಿಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.