ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯ ‘ಅರಸು ಕುಡಿ’ಯೋ ಅಥವಾ ಕಾಂಗ್ರೆಸ್ನ ‘ಸಾಮಾನ್ಯ ಕಾರ್ಯಕರ್ತ’ನೋ ಎಂಬ ಚರ್ಚೆ ಬಿಸಿಲ ತಾಪವನ್ನೂ ಮೀರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಆಗಿರುವುದರಿಂದ, ಅವರಿಗೂ ತಮ್ಮ ಅಭ್ಯರ್ಥಿ ಎಂ.ಲಕ್ಷ್ಮಣ ಅವರನ್ನು ಗೆಲ್ಲಿಸಿಕೊಳ್ಳುವ ಅನಿವಾರ್ಯ ಇದೆ. ‘ಗೆಲ್ಲಿಸಿಕೊಳ್ಳದಿದ್ದರೆ ಅಧಿಕಾರ ತ್ಯಜಿಸಬೇಕಾಗುವುದೇ’ ಎಂಬ ಚರ್ಚೆ ರಾಜ್ಯದಾದ್ಯಂತ ನಡೆದಿದೆ. ಹೀಗಾಗಿಯೇ ಅವರು, ‘ಲಕ್ಷ್ಮಣ ಗೆದ್ದರೆ ನಾನೇ ಗೆದ್ದಂತೆ’ ಎಂದು ಪ್ರಚಾರ ಮಾಡುತ್ತಿದ್ದಾರೆ.

ಕಾಂಗ್ರೆಸ್ ಭದ್ರಕೋಟೆ ಎನ್ನಿಸಿದ್ದರೂ, ಕಳೆದ ಎರಡು ಅವಧಿಯಲ್ಲಿ ಕ್ಷೇತ್ರ ಕೈತಪ್ಪಿದೆ. ಇದುವರೆಗೆ ಸ್ಪರ್ಧಿಸಿದ ಇತರ ಎಲ್ಲ ಚುನಾವಣೆಗಳಲ್ಲೂ ಸೋತಿರುವ ಲಕ್ಷ್ಮಣ ಅವರನ್ನು ಗುರಿ ತಲುಪಿಸುವ ಸವಾಲು ಮುಂದಿದ್ದರೂ, ಇದುವರೆಗೆ ಎಐಸಿಸಿ ಮಟ್ಟದ ಯಾವ ನಾಯಕರೂ ಪ್ರಚಾರಕ್ಕೆ ಬಂದಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಬಂದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಹಳೆ ಮೈಸೂರು ಭಾಗದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಪಕ್ಕದಲ್ಲೇ ಕೂರಿಸಿಕೊಂಡು ಅಲೆ ಎಬ್ಬಿಸಿ ಹೋಗಿದ್ದಾರೆ.

ಇದೇ ಕ್ಷೇತ್ರದಲ್ಲಿ ನಾಲ್ಕು ಬಾರಿ ಕಾಂಗ್ರೆಸ್ನಿಂದ ಸಂಸದರಾಗಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್–ಪ್ರಮೋದಾದೇವಿಯವರ ದತ್ತು ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಅಭ್ಯರ್ಥಿ. ಪಕ್ಷಕ್ಕೆ ಹ್ಯಾಟ್ರಿಕ್ ಗೆಲುವು ತಂದುಕೊಟ್ಟು ದಾಖಲೆ ನಿರ್ಮಿಸುವರೇ ಅಥವಾ ಶ್ರೀಕಂಠದತ್ತರು ಒಮ್ಮೆ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಫಲಿತಾಂಶವೇ ಮರುಕಳಿಸುವುದೇ ಎಂಬ ಕುತೂಹಲವೂ ಇದೆ.

47 ವರ್ಷಗಳ ಬಳಿಕ ಒಕ್ಕಲಿಗರೊಬ್ಬರಿಗೆ ಅವಕಾಶ ನೀಡಿರುವ ಕಾಂಗ್ರೆಸ್, ಅದೇ ಹೆಚ್ಚುಗಾರಿಕೆ ಎಂದು ಎದೆಯುಬ್ಬಿಸಿದೆ. ಕ್ಷೇತ್ರದಲ್ಲಿ ಹೆಚ್ಚಿರುವ ಸಮುದಾಯದ ಮತಗಳು ಗೆಲ್ಲಿಸಬಹುದೆಂಬುದು ಲೆಕ್ಕಾಚಾರ. ‘ಸಂಸದ ಪ್ರತಾಪ ಸಿಂಹ ಗೆಲ್ಲುವ ಅವಕಾಶಗಳಿದ್ದರೂ, ಟಿಕೆಟ್ ನಿರಾಕರಿಸಿ, ಬಿಜೆಪಿಯು ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದೆ’ ಎನ್ನುತ್ತಲೇ ಕಾಂಗ್ರೆಸ್ ಸಮುದಾಯದ ಸಭೆಗಳನ್ನು ಏರ್ಪಡಿಸುತ್ತಿದೆ. ಕೊಡಗಿನಲ್ಲೂ ಇಂಥದ್ದೇ ಅಸಮಾಧಾನವಿದೆ.

‘ರಾಜವಂಶಸ್ಥ ಕೈಗೆ ಸಿಗುತ್ತಾರೆಯೇ ಎಂಬ ಅನುಮಾನವೇ ಬೇಡ. ಅರಮನೆ, ಎ.ಸಿ ಕೊಠಡಿ ಬಿಟ್ಟು ಎಲ್ಲಿಗಾದರೂ ಬರಬಲ್ಲೆ. ನೀವೂ ಅರಮನೆಗೆ ಬರಬಹುದು. ಜನರ ಕಷ್ಟ ಆಲಿಸಬಲ್ಲೆ. ನಾಲ್ವಡಿ ರಾಜಪ್ರಭುತ್ವದ ತೇರೆಳೆದರು. ನಾನು ಭಕ್ತರೊಂದಿಗೆ ಚಾಮುಂಡಿ ತೇರು ಎಳೆಯುತ್ತಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಭಾರತಾಂಬೆಯ ತೇರು ಎಳೆಯಲು ಅವಕಾಶ ಕೊಡಿ’ ಎಂದು ಯದುವೀರ್ ಕೋರಿಕೆ ಮಂಡಿಸುತ್ತಿದ್ದಾರೆ. ಬಿಸಿಲ ಕಾವಿಗೆ ಅವರ ಮುಖದ ಹೊಳಪು ಕಡಿಮೆಯಾಗಿದೆ.

ಈ ನಡುವೆ, ‘ಬಿಜೆಪಿಯ ಕೆಲವು ವಿಐಪಿ ಮುಖಂಡರಿಗೆ ಬಿಟ್ಟರೆ ಅವರು ನೇರವಾಗಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇನ್ನು ಜನಸಾಮಾನ್ಯರಿಗೆ ಹೇಗೆ ಸಿಗುತ್ತಾರೆ’ ಎಂಬ ಸಂಕಟ, ಪ್ರಶ್ನೆಯೂ ಕಾರ್ಯಕರ್ತರಲ್ಲಿ ಹಾಗೂ ಕೊಡಗಿನ ಸ್ಥಳೀಯ ಮುಖಂಡರಲ್ಲಿದೆ.

‘ಮೋದಿ ಅಲೆ’, ಜೆಡಿಎಸ್ ಜೊತೆಗಿನ ಮೈತ್ರಿ ಬಲ, ರಾಜವಂಶಸ್ಥರ ಕುರಿತ ಜನರ ಗೌರವವನ್ನು ನೆಚ್ಚಿಕೊಂಡ ಬಿಜೆಪಿ, ಗ್ಯಾರಂಟಿ ಯೋಜನೆಗಳನ್ನು ನೆಚ್ಚಿಕೊಂಡ ಕಾಂಗ್ರೆಸ್, ಕ್ಷೇತ್ರದ ಸಮಸ್ಯೆಗಳ ನಿವಾರಣೆಗೆ ಮತ್ತು ಅಭಿವೃದ್ಧಿಗೆ ತಮ್ಮ ನೀಲನಕ್ಷೆ ಏನು ಎಂಬುದನ್ನು ಸರಿಯಾಗಿ ಬಿಡಿಸಿ ಹೇಳುತ್ತಿಲ್ಲ. ‘ನಿಮ್ಮಿಂದ ಕ್ಷೇತ್ರಕ್ಕೆ ಆಗುವ ಪ್ರಯೋಜನಗಳೇನು’ ಎಂದು ನಿಲ್ಲಿಸಿ ಗಟ್ಟಿಯಾಗಿ ಕೇಳುವ ಮತದಾರರೂ ಕಾಣಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.