ಕಲ್ಪೆಟ್ಟ (ವಯನಾಡ್): ‘ರಾಹುಲ್ ಗಾಂಧಿ ಅಷ್ಟು ದೂರದ ಅಮೇಠಿಯಿಂದ ನಮ್ಮ ವಯನಾಡಿಗೆ ಬಂದು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಸಲ ಅವರಿಗೊಂದು ಅವಕಾಶ ಏಕೆ ಕೊಡಬಾರದು?’– ಸುಲ್ತಾನ್ ಬತ್ತೇರಿಯಲ್ಲಿ ಮಾತಿಗೆ ಸಿಕ್ಕ ಸ್ಟೇಶನರಿ ಅಂಗಡಿಯ ಮಾಲಕಿ 50ರ ಹರೆಯದ ಅನ್ನಮ್ಮ ಮುಗ್ಧತೆಯಿಂದ ಮರುಪ್ರಶ್ನೆ ಹಾಕಿದರು.

ವಯನಾಡ್ ಜಿಲ್ಲೆಯುದ್ದಕ್ಕೂ ಓಡಾಡಿದಾಗ ಬಹಳಷ್ಟು ಕಡೆ ಕೇಳಿಬಂದ ಪ್ರಶ್ನೆ ಇದೇ. ಹೌದು, ವಯನಾಡಿನಲ್ಲಿ ರಾಹುಲ್ ಪರ ಅಲೆಯೊಂದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಕೃಷಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಗೃಹಿಣಿಯರು ಎಲ್ಲರ ನಡುವೆಯೂ ರಾಹುಲ್ ಕುರಿತ ಮೃದುಭಾವನೆ ಗಾಳಿಯಲ್ಲಿ ತೇಲಾಡುತ್ತಿದೆ. ಈ ಮೃದುಭಾವನೆ ಸಾರಾಸಗಟಾಗಿ ಮತವಾಗಿ ಪರಿವರ್ತನೆಯಾಗುತ್ತದೆಯೆ? ಸುಲಭವಾಗಿ ಹೇಳಲಾಗದು. ಏಕೆಂದರೆ ವಯನಾಡ್ ಲೋಕಸಭಾ ಕ್ಷೇತ್ರದ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಎಲ್ಡಿಎಫ್ (ಅವರಲ್ಲಿ ಒಬ್ಬರು ಬೆಂಬಲಿತ ಸ್ವತಂತ್ರ) ಶಾಸಕರಿದ್ದಾರೆ. ಉಳಿದ ಮೂರು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶಾಸಕರು. ಸಂಖ್ಯಾಶಾಸ್ತ್ರ ನೋಡಿದರೆ, ಕಾಂಗ್ರೆಸ್ ಮೈತ್ರಿಕೂಟ ಗೆಲ್ಲುವುದು ಸುಲಭವಲ್ಲ. ಆದರೆ ಚುನಾವಣೆ ಎಂದರೆ ಸಂಖ್ಯಾಶಾಸ್ತ್ರ ಮಾತ್ರ ಅಲ್ಲವಲ್ಲ!

ಕೇರಳದ ಜಿಲ್ಲೆಗಳಲ್ಲೇ ಹೆಚ್ಚು ಹಿಂದುಳಿದಿರುವ ಜಿಲ್ಲೆ ವಯನಾಡ್. 1ರಿಂದ 5 ಎಕರೆಯಷ್ಟು ಕೃಷಿ ಭೂಮಿಯಿರುವ ತೋಟದ ಬೆಳೆಗಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ವಯನಾಡ್ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು, ಕೊಯಿಕ್ಕೋಡ್ ಜಿಲ್ಲೆಯ ಒಂದು ಮತ್ತು ಮಲಪ್ಪುರಂ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ವಯನಾಡ್ ಲೋಕಸಭಾ ಕ್ಷೇತ್ರ, ರಾಹುಲ್ ಗಾಂಧಿಯ ಸ್ಪರ್ಧೆಯಿಂದಾಗಿ ಇಡೀ ದೇಶದ ಗಮನ ಸೆಳೆದಿದೆ.

ಕಾಂಗ್ರೆಸ್ ನೇತೃತ್ವದ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಮತ್ತು ಸಿಪಿಎಂ ನೇತೃತ್ವದ ಎಲ್ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್) ಇಲ್ಲಿ ನೇರ ಹಣಾಹಣಿ ನಡೆಸಿವೆ. ಎಲ್ಡಿಎಫ್ನ ಅಂಗಪಕ್ಷ ಸಿಪಿಐನ ಪಿ.ಪಿ.ಸುನೀರ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎಯಿಂದ ಬಿಡಿಜೆಎಸ್(ಭಾರತ ಧರ್ಮ ಜನ ಸೇನಾ) ಪಕ್ಷದ ತುಷಾರ್ ವೆಳ್ಳಾಪಳ್ಳಿ ಕಣದಲ್ಲಿದ್ದಾರೆ. ಈಳವ ಸಮುದಾಯದ ಬೆಂಬಲ ಈ ಪಕ್ಷಕ್ಕಿದೆ ಎನ್ನುವುದು ಬಿಜೆಪಿ ನಾಯಕರಿಗೆ ಸಣ್ಣ ಆಸೆ ಹುಟ್ಟಿಸಿದೆ. ಅವರು ಶಬರಿಮಲೆಯ ಮಂತ್ರವನ್ನು ಜೋರಾಗಿ ಜಪಿಸುತ್ತಿದ್ದಾರೆ.

ವಯನಾಡ್ನಲ್ಲಿ ರಾಹುಲ್ ಗಾಂಧಿಗೆ ಅತಿದೊಡ್ಡ ಬಲ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನದ್ದು. ಹಳ್ಳಿಗಾಡಿನಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರ ದೊಡ್ಡ ದಂಡೇ ರಾಹುಲ್ ಪರವಾಗಿ ಪ್ರಚಾರ ಮಾಡುತ್ತಿದೆ. ಎರ್ನಾಡ್ ಮತ್ತು ವಂಡೂರ್ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಬಾಹುಳ್ಯ ಇರುವುದು ಕಾಂಗ್ರೆಸ್ನ ವಿಜಯದ ವಿಶ್ವಾಸವನ್ನು ಹೆಚ್ಚಿಸಿದೆ. ಈ ಎರಡು ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ ಶಾಸಕ ಇರುವ ಸುಲ್ತಾನ್ ಬತ್ತೇರಿಯಲ್ಲಿ ರಾಹುಲ್ ಗಾಂಧಿಗೆ ಅತ್ಯಧಿಕ ಲೀಡ್ ಒದಗಿಸುವ ಮೂಲಕ ಜಯಭೇರಿ ಬಾರಿಸಬಹುದು ಎನ್ನುವುದು ಯುಡಿಎಫ್ ಲೆಕ್ಕಾಚಾರ.

ಕುತೂಹಲಕರ ಅಂಶವೆಂದರೆ, ವಯನಾಡ್ನಲ್ಲಿ ಜಾತಿ– ಮತ– ಧರ್ಮಗಳ ಲೆಕ್ಕಾಚಾರ ಗೌಣ. ಯಾವುದೇ ಪಕ್ಷದ ತಳಮಟ್ಟದ ಕಾರ್ಯಕರ್ತನನ್ನು ಮಾತನಾಡಿಸಿದರೂ ಕ್ಷೇತ್ರದ ಅಭಿವೃದ್ಧಿಗೆ, ಆರ್ಥಿಕತೆಗೆ ಸಂಬಂಧಿಸಿದ ಮಾತುಗಳೇ ಕೇಳಿಸುತ್ತವೆ. ಶಬರಿಮಲೆಯ ವಿವಾದದ ಬಗ್ಗೆ ಕೇಳಿದರೆ, ‘ಇಲ್ಲಿ ಅದರ ಪ್ರಭಾವ ಇಲ್ಲ’ ಎನ್ನುತ್ತಾರೆ. ಸಿಪಿಐ ಅಭ್ಯರ್ಥಿ ಪಿ.ಪಿ.ಸುನೀರ್ ಮುಸ್ಲಿಂ. ‘ಅವರು ಮುಸ್ಲಿಂ ಎಂದು ಪಕ್ಷ ಟಿಕೆಟ್ ಕೊಟ್ಟಿಲ್ಲ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ಸಾಕಷ್ಟು ದುಡಿದಿದ್ದಾರೆ. ಸೀನಿಯಾರಿಟಿ ಮೇಲೆ ಟಿಕೆಟ್ ಸಿಕ್ಕಿದೆ’ ಎನ್ನುತ್ತಾರೆ ಅಡ್ವೊಕೇಟ್ ಟಿ.ಕೆ. ಬೆನ್ನಿ. ಇವರು ಸಿಪಿಐ ಲೋಕಲ್ ಕಮಿಟಿ ಮೆಂಬರ್. ಮುಸ್ಲಿಂ ಬಾಹುಳ್ಯದಎರ್ನಾಡ್ ಮತ್ತು ವಂಡೂರ್ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಲೀಗ್ನ ವೋಟ್ ಬ್ಯಾಂಕನ್ನು ಈ ಮೂಲಕ ಒಡೆಯುವ ವಿಶ್ವಾಸವನ್ನೂ ಸಿಪಿಎಂ ನಾಯಕರೊಬ್ಬರು ಪಿಸುಮಾತಿನಲ್ಲಿ ವ್ಯಕ್ತಪಡಿಸಿದರು.

ಆದರೆ ಅಭ್ಯರ್ಥಿಯ ಧರ್ಮ ಇಲ್ಲಿ ಮತದಾರರಿಗೆ ಮುಖ್ಯವಾಗಿಲ್ಲ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಮೊದಲ ಬಾರಿ ಮತದಾನ ಮಾಡುವ ರೋಮಾಂಚನದಲ್ಲಿರುವ ಸುಲ್ತಾನ್ಬತ್ತೇರಿಯ ವಿಷ್ಣು ಹುಟ್ಟಿನಿಂದ ಬ್ರಾಹ್ಮಣ. ‘ನಮ್ಮ ಮನೆಯಲ್ಲಿ ಹಿಂದಿನಿಂದಲೂ ಸಿಪಿಎಂ. ನಾನೂ ಸುನೀರ್ಗೇ ಮತಹಾಕಲು ನಿರ್ಧರಿಸಿದ್ದೇನೆ’ ಎನ್ನುತ್ತಾರೆ. 50 ದಾಟಿರುವ ಟ್ಯಾಕ್ಸಿ ಡ್ರೈವರ್ ಚಾರ್ಲಿ ಶಶಿ, ‘ನಾನು ಕಟ್ಟಾ ಸಿಪಿಐ. ಆದರೆ ನನ್ನ ಮೂವರು ಮಕ್ಕಳು ಈ ಸಲ ರಾಹುಲ್ಗೆ ವೋಟ್ ಹಾಕ್ತೀವಿ ಅನ್ನುತ್ತಿದ್ದಾರೆ’ ಎಂದರು. ಕಂಬಳಕ್ಕಾಡ್ನಲ್ಲಿ ಮಾತಿಗೆ ಸಿಕ್ಕಿದ ಮಧ್ಯವಯಸ್ಕ ಲತೀಫ್, ‘ಕಾಂಗ್ರೆಸ್ ರಾಜಕೀಯ ನೋಡಿ ಸಾಕಾಗಿದೆ. ಈ ಸಲ ಕಾಂಗ್ರೆಸ್– ಮುಸ್ಲಿಂ ಲೀಗ್ ಮೈತ್ರಿಕೂಟ ಗೆಲ್ಲುವುದಿಲ್ಲ’ ಎಂದರು.

‘ರಾಹುಲ್ ಗೆದ್ದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗುತ್ತದೆಂದು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ಆದರೆ ದಕ್ಷಿಣ ಭಾರತದ ಬಗ್ಗೆ ಗಾಂಧಿ ಕುಟುಂಬದ್ದು ಯಾವತ್ತೂ ನಿರ್ಲಕ್ಷ್ಯವೇ. ಇಂದಿರಾ ಗಾಂಧಿ ಕರ್ನಾಟಕದ ಚಿಕ್ಕಮಗಳೂರಲ್ಲಿ ಗೆದ್ದು ಹೋದ ಬಳಿಕ ರಾಜೀನಾಮೆ ನೀಡಿದರು. ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಗೆದ್ದರೂ ರಾಜೀನಾಮೆ ನೀಡಿದರು. ಇಬ್ಬರೂ ಉತ್ತರಪ್ರದೇಶದ ತಮ್ಮ ಸ್ಥಾನಗಳನ್ನು ಉಳಿಸಿಕೊಂಡರು. ಈಗ ರಾಹುಲ್ ಗಾಂಧಿಯೂ ಅದನ್ನೇ ಮಾಡುತ್ತಾರೆ. ಅಮೇಠಿ ಮತ್ತು ಇಲ್ಲಿ ಗೆದ್ದರೆ ಅಮೇಠಿಯನ್ನೇ ಉಳಿಸಿಕೊಳ್ಳುತ್ತಾರೆ’ ಎನ್ನುವುದು ಎಡಪಕ್ಷಗಳ ನಾಯಕರ ಪ್ರಚಾರ.

ಸಿಪಿಎಂನ ತಳಮಟ್ಟದ ಕಾರ್ಯಕರ್ತರು ಹಳ್ಳಿಹಳ್ಳಿಗಳಲ್ಲಿ ಈ ವಾದವನ್ನು ಪ್ರಚಾರ ಮಾಡುತ್ತಿದ್ದಾರೆ. ಹಾಗೆಂದೇ ಏಪ್ರಿಲ್ 17ರಂದು ವಯನಾಡಿಗೆ ಎರಡನೇ ಭೇಟಿ ನೀಡಿದ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, ‘ನಾನಿಲ್ಲಿ 2–3 ತಿಂಗಳ ಅತಿಥಿಯಾಗಿ ಬಂದಿಲ್ಲ. ಈ ಕ್ಷೇತ್ರದ ಜೊತೆಗೆ ಶಾಶ್ವತ ಸಂಬಂಧ ಸ್ಥಾಪಿಸಲು ಬಂದಿದ್ದೇನೆ’ ಎಂದು ಒತ್ತಿ ಹೇಳಿದರು. ಅವತ್ತು ಸುಲ್ತಾನ್ಬತ್ತೇರಿಯ ಕಾಲೇಜ್ ಮೈದಾನದಲ್ಲಿ ರಾಹುಲ್ ಅವರನ್ನು ನೋಡಲು ಸೇರಿದ್ದ ಸುಮಾರು 25 ಸಾವಿರ ಮಂದಿ ಈ ಡೈಲಾಗ್ಗೆ ದೀರ್ಘ ಕರತಾಡನ ಮಾಡಿದರು. ‘ನಾನು ದೂರದ ಮಾನಂದವಾಡಿಯಿಂದ ರಾಹುಲ್ನನ್ನು ನೋಡಲು ಬಂದೆ. ಆತ ಗೆಲ್ಲಬೇಕು’ ಎಂದವರು ಇಳಿವಯಸ್ಸಿನ ಸ್ವರ್ಣವಲ್ಲಿ.

ಕಳೆದ ವರ್ಷ ಕೇರಳದಲ್ಲಿ ಬಂದ ಮಹಾಮಳೆಗೆ ಬಹುತೇಕ ಮುಳುಗಡೆ ಆಗಿದ್ದ ವಳ್ಳಿಯೂರುಕಾವುನಲ್ಲಿರುವ ಅಮ್ಮನ ದೇವಸ್ಥಾನ ಬಹಳ ಪ್ರಸಿದ್ಧ. ಅಲ್ಲಿ ಮಾತಿಗೆ ಸಿಕ್ಕಿದ ಆದಿವಾಸಿಯೊಬ್ಬರ ಪ್ರಕಾರ, ‘ಈ ಸಲ ರಾಹುಲ್ ಗೆಲ್ಲುವುದು ನಿಶ್ಚಿತ.’ ಆದರೆ 1991ರಲ್ಲಿ ದಿವಂಗತ ರಾಜೀವ್ ಗಾಂಧಿಯವರ ಚಿತಾಭಸ್ಮ ವಿಸರ್ಜಿಸಿದ ಪಾಪನಾಶಿನಿ ನದಿ ತೀರದ ಗಿರಿಜನ ಹಾಡಿಯಲ್ಲಿ ಡಿವೈಎಫ್ಐ ಪರ ಭಿತ್ತಿಪತ್ರಗಳು ಎದ್ದುಕಾಣಿಸುತ್ತಿವೆ. ಮಾನಂದವಾಡಿ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಆದಿವಾಸಿಗಳು ಮತ್ತು ತೋಟದ ಕಾರ್ಮಿಕರಲ್ಲಿ ಹೆಚ್ಚಿನವರು ಎಡಪಕ್ಷದ ಬೆಂಬಲಿಗರು. ‘ಕಳೆದ (2014) ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದದ್ದು ಕೇವಲ 20,870 ಮತಗಳಿಂದ. ಈ ಸಲ ಎಲ್ಡಿಎಫ್ ಗೆಲ್ಲುತ್ತದೆ ನೋಡಿ’ ಎಂದವರು ಮಾನಂದವಾಡಿಯಲ್ಲಿ ಸಿಕ್ಕ ಜೆ.ಎಲ್.ಚಾಕೊ.

ರಾಹುಲ್ ನಿಂತದ್ದು ಅಲ್ಲವಾಗಿದ್ದಲ್ಲಿ ಈ ಸಲ ಎಡಪಕ್ಷದ ವಿಜಯ ಖಚಿತವಾಗಿತ್ತು ಎನ್ನುವುದನ್ನು ಸ್ಥಳೀಯ ಎಲ್ಡಿಎಫ್ ನಾಯಕರೂ ಒಪ್ಪುತ್ತಾರೆ.ಅದಕ್ಕೆ ತಕ್ಕಂತೆ ಎರಡು ಸಲದ ಭೇಟಿಯಲ್ಲೂ ರಾಹುಲ್, ರಾಜ್ಯದಲ್ಲಿರುವ ಎಡಪಕ್ಷದ ಸರ್ಕಾರದ ವಿರುದ್ಧ ಯಾವ ವಾಗ್ದಾಳಿಯನ್ನೂ ನಡೆಸಿಲ್ಲ. ಅವರದ್ದೇನಿದ್ದರೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ. ಸುಲ್ತಾನ್ಬತ್ತೇರಿಯಲ್ಲಿ ಸಿಕ್ಕ ಎಐಸಿಸಿ ವೀಕ್ಷಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್, ‘ಮಹಿಳೆಯರು ಮತ್ತು ಯುವಜನರ ಮತ ಹೆಚ್ಚಾಗಿ ರಾಹುಲ್ ಗಾಂಧಿಗೆ ಸಿಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಹುಲ್ ನಾಮಪತ್ರ ಸಲ್ಲಿಸಲು ಬಂದಾಗ ಮಹಿಳೆಯರು ಮತ್ತು ಯುವಕರುದೊಡ್ಡ ಸಂಖ್ಯೆಯಲ್ಲಿ ಸೇರಿದ್ದೂ ನಿಜ. ಕ್ಷೇತ್ರದಲ್ಲಿರುವ ಒಟ್ಟು 13,57,819 ಮತದಾರರಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಂತ 11 ಸಾವಿರ ಹೆಚ್ಚೇ ಇದೆ. ‘ದಿಸ್ ಟೈಮ್ ವೈನಾಟ್ ರಾಹುಲ್?’ ಎನ್ನುವ ಪ್ರಶ್ನೆಗೆ ಮಹಿಳೆಯರ ಉತ್ತರ ಏನಿರಬಹುದು? ಏಪ್ರಿಲ್ 23ರಂದು ನಡೆಯುವ ಮತದಾನ ಈ ಒಗಟನ್ನು ಬಿಡಿಸಲಿದೆ.

ರೈಲಿಲ್ಲ, ದೊಡ್ಡಾಸ್ಪತ್ರೆಯಿಲ್ಲ..!
‘ವಯನಾಡ್ ಜಿಲ್ಲೆ ತುಂಬ ಹಿಂದುಳಿದಿದೆ ಸಾರ್. ಎಮರ್ಜೆನ್ಸಿ ಕೇಸ್ ಬಂದರೆ ರೋಗಿಯನ್ನು ನೂರು ಕಿ.ಮೀ. ದೂರದ ಕೋಯಿಕ್ಕೋಡ್ಗೇ ಹೊತ್ತೊಯ್ಯಬೇಕು. ಒಂದು ಒಳ್ಳೆಯ ಮೆಡಿಕಲ್ ಕಾಲೇಜಿಲ್ಲ. ರಾಹುಲ್ ಗೆದ್ದು ಪ್ರಧಾನಿಯೂ ಆದರೆ ಜಿಲ್ಲೆ ಮುಂದುವರಿಯಬಹುದು’ ಎಂದವರು ಮಧ್ಯಮ ಹಿಡುವಳಿಯ ಕೃಷಿಕ ಪಿ.ಪಿ. ವರ್ಗೀಸ್.

ನಂಜನಗೂಡು– ಸುಲ್ತಾನ್ಬತ್ತೇರಿ–ನಿಲಂಬೂರು ರೈಲು ಮಾರ್ಗದ ಸರ್ವೇಗೆ ಕೇರಳದಲ್ಲಿ ಯುಡಿಎಫ್ ಸರ್ಕಾರ ಇದ್ದಾಗ ದುಡ್ಡು ಇಟ್ಟಿತ್ತು. ಎಲ್ಡಿಎಫ್ ಸರ್ಕಾರ ಬಂದ ಮೇಲೆ ಆ ರೈಲು ಮಾರ್ಗವನ್ನು ಕೊಡಗು– ತಲಶ್ಶೇರಿ– ಮಾನಂದವಾಡಿಗೆ ಬದಲಾಯಿಸಲು ಯತ್ನಿಸಿದ್ದಾರೆ. ಬತ್ತೇರಿ ಬಹುದೊಡ್ಡ ಪ್ರವಾಸಿ ಕೇಂದ್ರ. ಇಲ್ಲಿಗೆ ರೈಲು ಮಾರ್ಗ ಆಗಲೇಬೇಕು’ ಎನ್ನುವುದು ಅವರ ವಾದ.

‘ರಾಹುಲ್ ಅಮೇಠಿಯಲ್ಲೂ ನಿಂತಿದ್ದಾರೆ. ಗೆದ್ದರೆ ವಯನಾಡನ್ನುಕೈಬಿಡುವುದಿಲ್ಲವೇ?’ ಎಂದು ಪ್ರಶ್ನಿಸಿದರೆ, ‘ಎರಡೂ ಕಡೆ ಗೆಲ್ಲುತ್ತಾರೆ. ಬಳಿಕ ಅಮೇಠಿಯನ್ನು ಸೋದರಿ ಪ್ರಿಯಾಂಕಾ ಸ್ಪರ್ಧೆಗೆ ಬಿಟ್ಟುಕೊಡುತ್ತಾರೆ. ನೋಡಿ ಬೇಕಿದ್ದರೆ...!’ ಎಂದು ನಕ್ಕರು ವರ್ಗೀಸ್.

ಬೆಳೆಗಾರರನ್ನು ಕಾಡುತ್ತಿರುವ ಆತಂಕ
ಕರಿಮೆಣಸು, ಕಾಫಿ, ರಬ್ಬರ್, ತೆಂಗು, ಅಡಕೆ ಬೆಳೆಯುತ್ತಿರುವ ವಯನಾಡ್ನ ಬಹುತೇಕ ಬೆಳೆಗಾರರೂ ಕೃಷಿ ಬಿಕ್ಕಟ್ಟಿನ ಬಗ್ಗೆ ಆತಂಕದಿಂದ ಮಾತನಾಡುತ್ತಾರೆ. ಹೆಚ್ಚಿನವರು 1ರಿಂದ 5 ಎಕರೆವರೆಗಿನ ತೋಟ ಹೊಂದಿರುವವರು. ಕೇಂದ್ರ ಸರ್ಕಾರದ ಆಮದು– ರಫ್ತು ನೀತಿಯಿಂದ ಬೆಳೆಗಾರರು ದಿಕ್ಕೆಟ್ಟಿದ್ದಾರೆ. ಕಲ್ಪೆಟ್ಟದಲ್ಲಿ ಸಿಕ್ಕ ಶಾಜಿ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಆರ್ಥಿಕ ಉದಾರೀಕರಣ ಜಾರಿಗೆ ತಂದ ಕಾಂಗ್ರೆಸ್ ಇದಕ್ಕೆಲ್ಲ ಕಾರಣ. ಇತ್ತೀಚೆಗೆ ನರೇಂದ್ರ ಮೋದಿ ಸರ್ಕಾರ ತಂದ ನೋಟ್ ಬ್ಯಾನ್ನಿಂದ ಸಣ್ಣ ವ್ಯಾಪಾರಿಗಳೆಲ್ಲ ನೆಲ ಕಚ್ಚಿದರು. ಕಳೆದ ವರ್ಷದ ಮಹಾಮಳೆ, ಅಡಿಕೆಗೆ ಬಂದ ಕೊಳೆರೋಗ, ನಿಪ್ಪೊ ವೈರಸ್ ಕಾಟ, ವಿಯೆಟ್ನಾಂನಿಂದ ಬರುವ ಕಾಳುಮೆಣಸು, ವಿದೇಶಗಳಿಂದ ಬರುತ್ತಿರುವ ಸಿಂಥೆಟಿಕ್ ರಬ್ಬರ್, ಕೈಗಾರಿಕೆಗಳ ಪರವಾಗಿರುವ ಕೇಂದ್ರ ಸರ್ಕಾರದ ಆಮದು ನೀತಿ... ಹೀಗೆ ಎಲ್ಲವೂ ನಮ್ಮನ್ನು ಸಂಕಟಕ್ಕೆ ದೂಡಿದೆ’ ಎಂದು ಇಲ್ಲಿನ ರೈತರು ಅಳಲುತೋಡಿಕೊಳ್ಳುತ್ತಾರೆ.

ಪಾಪನಾಶಿನಿ ನಂಟು
ವಯನಾಡ್ ಜೊತೆ ರಾಹುಲ್ ಗಾಂಧಿ ಭಾವನಾತ್ಮಕ ಸಂಬಂಧವನ್ನೂ ಹೊಂದಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ.

1991ರಲ್ಲಿ ಶ್ರೀಪೆರಂಬದೂರಿನಲ್ಲಿ ಎಲ್ಟಿಟಿಇ ಆತ್ಮಾಹುತಿ ದಾಳಿಗೆ ಬಲಿಯಾದ ರಾಜೀವ್ ಗಾಂಧಿಯವರ ಚಿತಾಭಸ್ಮವನ್ನು ಇದೇ ಕ್ಷೇತ್ರದ ತಿರುನೆಲ್ಲಿಯ ಪಾಪನಾಶಿನಿ ನದಿಯಲ್ಲಿ ವಿಸರ್ಜನೆ ಮಾಡಲಾಗಿತ್ತು. ಕಳೆದ ವಾರ ತಿರುನೆಲ್ಲಿಯ ಪುರಾತನ ಮಹಾವಿಷ್ಣು ದೇವಾಲಯಕ್ಕೆ ಭೇಟಿ ಕೊಟ್ಟ ರಾಹುಲ್, ಪಾಪನಾಶಿನಿ ನದಿಯಲ್ಲಿ ತಂದೆಯ ಸದ್ಗತಿಗಾಗಿ ಪ್ರಾರ್ಥನೆ ಸಲ್ಲಿಸಿದರು.

‘ಇದೆಲ್ಲ ನಾಟಕ. ತಂದೆಯ ಚಿತಾಭಸ್ಮ ವಿಸರ್ಜನೆಯ ನೆನಪು ಇದ್ದಿದ್ದರೆ ಹೀಗೆ 28 ವರ್ಷಗಳ ಬಳಿಕ ರಾಹುಲ್ ಇಲ್ಲಿಗೆ ಬರುತ್ತಿರಲಿಲ್ಲ. ಇದರಿಂದ ಮತದಾರರನ್ನು ಸೆಳೆಯುವುದು ಸಾಧ್ಯವಿಲ್ಲ’ ಎನ್ನುವುದು ಎಡಪಕ್ಷ ನಾಯಕರ ವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.