ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ಕಲಾವಿದೆಯರ ಮೇಲೆ ಲೈಂಗಿಕ ದೌರ್ಜನ್ಯ | ವರದಿಯ ಗಂಭೀರ ಪರಿಗಣನೆ: ವಿಜಯನ್

Published : 20 ಆಗಸ್ಟ್ 2024, 13:23 IST
Last Updated : 20 ಆಗಸ್ಟ್ 2024, 13:23 IST
ಫಾಲೋ ಮಾಡಿ
Comments

ತಿರುವನಂತಪುರ: ಮಾಲಿವುಡ್‌ನಲ್ಲಿ ಸಿನಿಮಾ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತಾಗಿ ನ್ಯಾಯಮಂಡಳಿಯ ಸ್ಥಾಪನೆ ಮತ್ತು ಸಮಗ್ರ ಚಲನಚಿತ್ರ ಕಾಯ್ದೆ ರಚನೆ ಸೇರಿದಂತೆ ಜಸ್ಟೀಸ್ ಹೇಮಾ ನೇತೃತ್ವದ ಸಮಿತಿ ಮಾಡಿರುವ ವಿವಿಧ ಶಿಫಾರಸುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಮಲಯಾಳ ಚಿತ್ರರಂಗದಲ್ಲಿ ಕಲಾವಿದೆಯರ ವಿರುದ್ಧದ ಹಲವಾರು ಅಪರಾಧಗಳಿಗೆ ಸಂಬಂಧಿಸಿದಂತೆ ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿರುವ ವಿಷಯಗಳ ಬಗ್ಗೆ ಈಗಾಗಲೇ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತಿರುವ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ ಎಂದೂ ಸ್ಪಷ್ಟಪಡಿಸಿದ್ದಾರೆ.

ವರದಿ ಸ್ವೀಕರಿಸಿ 4 ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಕುರಿತಂತೆ ವಿಪಕ್ಷಗಳಿಂದ ಭಾರಿ ಟೀಕೆ ಕೇಳಿಬಂದ ಹಿನ್ನೆಲೆಯಲ್ಲಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

ಸಂತ್ರಸ್ತರ ನೆರವಿಗೆ ಧಾವಿಸುವ ಬದಲು ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರ್ಕಾರ ಆಪಾದಿತರ ಪರ ನಿಂತಿದೆ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರೋಪಿಸಿತ್ತು.

ಅಪರಾಧ ನಡೆದಿರುವ ಕುರಿತಂತೆ ಮಾಹಿತಿ ಸಿಕ್ಕರೂ ಸಹ ಸರ್ಕಾರ ಯಾವುದೇ ಕಾನೂನು ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಟೀಕಿಸಿತ್ತು.

ಈ ಆರೋಪಗಳನ್ನು ತಳ್ಳಿ ಹಾಕಿರುವ ವಿಜಯನ್, ಸಂತ್ರಸ್ತರಿಗೆ ಸರ್ಕಾರದ ಬೆಂಬಲವಿದೆಯೇ ಹೊರತು ಆಪಾದಿತರಿಗಲ್ಲ ಎಂದು ಖಚಿತಪಡಿಸಿದರು.

ಮಲಯಾಳ ಚಿತ್ರರಂಗದಲ್ಲಿ ಸಿನಿಮಾ ಕಲಾವಿದೆಯರ ಮೇಲಿನ ಲೈಂಗಿಕ ಕಿರುಕುಳ, ಶೋಷಣೆ ಮತ್ತು ಅವರ ಜೊತೆಗಿನ ಅಸಭ್ಯ ನಡವಳಿಕೆ ಕುರಿತಾದ ಬಹು ನಿರೀಕ್ಷಿತ ವರದಿಯು ಸೋಮವಾರ ಬಿಡುಗಡೆ ಆಗಿತ್ತು. ಒಂದು ಕ್ರಿಮಿನಲ್‌ಗಳ ಗುಂಪು ಉದ್ಯಮವನ್ನು ನಿಯಂತ್ರಿಸುತ್ತಿದ್ದು, ತಮಗೆ ಸಹಕರಿಸದ ಕಲಾವಿದೆಯರನ್ನು ಹೊರ ಹಾಕಿದೆ ಎಂದೂ ಉಲ್ಲೇಖಿಸಲಾಗಿತ್ತು.

2017ರಲ್ಲಿ ನಟ ದಿಲೀಪ್ ಹೆಸರು ಕೇಳಿಬಂದಿದ್ದ ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಬಳಿಕ ಮಲಯಾಳಿ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಮತ್ತು ಲಿಂಗ ಅಸಮಾನತೆ ಕುರಿತ ಅಧ್ಯಯನಕ್ಕೆ ರಾಜ್ಯ ಸರ್ಕಾರ ಸಮಿತಿ ರಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT