ಹಿಂದೊಮ್ಮೆ ನಟನೆಯಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದೇಕೆ?
ಇದಕ್ಕೆ ಪ್ರಮುಖ ಕಾರಣ ನಿಮಗೆಲ್ಲರಿಗೂ ಗೊತ್ತು. ನಾನು ಮಾನಸಿಕವಾಗಿ ಕುಗ್ಗಿಹೋಗಿದ್ದೆ. ರಾಯನ್‌ನ ಜನ್ಮ ನನ್ನ ಬದುಕಿಗೆ ಹೊಸ ತಿರುವು ನೀಡಿತು. ನನ್ನ ಆದ್ಯತೆ ಆತನೇ ಆದ. ಆತನ ಆರೈಕೆಯಲ್ಲೇ ದಿನ ಕಳೆದೆ. ಮತ್ತೆ ಸಿನಿಮಾ ಕ್ಷೇತ್ರಕ್ಕೆ ಮರಳಬೇಕು ಎನ್ನುವ ಯಾವುದೇ ಯೋಜನೆ ನನಗೆ ಇರಲಿಲ್ಲ. ಚಿರು(ಚಿರಂಜೀವಿ ಸರ್ಜಾ) ಈ ಚಿತ್ರ ಆರಂಭವಾಗಲು ಕಾರಣ. ಅವರಿಗೆ ಪ್ರಜ್ವಲ್ ಹಾಗೂ ಪನ್ನಗ ಭರಣ(ಪನ್ನ) ಅವರ ಜೊತೆ ಸೇರಿ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ಆಸೆಯಿತ್ತು. ಪನ್ನ ಈ ಚಿತ್ರದ ಕಥೆಯನ್ನು ಹೇಳಲು ನಿರ್ದೇಶಕರನ್ನೇ ಮನೆಗೆ ಕಳುಹಿಸಿದ್ದರು. ವಿಶಾಲ್ ಆತ್ರೇಯ ಕಥೆ ಹೇಳುತ್ತಿದ್ದರೆ, ನಾನು ಆ ಪಾತ್ರದಲ್ಲಿ ಮುಳುಗಿದ್ದೆ. ‘ಈ ಕಥೆ ಚೆನ್ನಾಗಿದೆ’ ಎಂದು ಪನ್ನನಿಗೆ ಹೇಳಿದಾಗ, ‘ಇದೇ ಏಕೆ ನಿನ್ನ ಮರುಪ್ರವೇಶಕ್ಕೆ ವೇದಿಕೆಯಾಗಬಾರದು?’ ಎಂದು ಪನ್ನ ಕೇಳಿದ್ದರು. ಇಲ್ಲಿಂದ ‘ತತ್ಸಮ ತದ್ಭವ’ ಆರಂಭವಾಯಿತು.
ಅಮ್ಮನಾದ ಬಳಿಕ ಆದ ದೈಹಿಕ, ಮಾನಸಿಕ ಬದಲಾವಣೆ ಬೀರಿದ ಪರಿಣಾಮ?
ಹೌದು, ಈ ಬದಲಾವಣೆ ಹಲವು ಪರಿಣಾಮ ಬೀರಿದೆ. ನಾನು ಬಾಣಂತಿಯಾಗಿದ್ದಾಗ ಸಲಹೆಗಳ ಮಹಾಪೂರವೇ ಬರುತ್ತಿತ್ತು. ಇದು ಒಂದು ರೀತಿಯ ಹಿಂಸೆಯಂತೆ ಅನಿಸುತ್ತಿತ್ತು. ಆದರೆ ಆ ಸಂದರ್ಭದಲ್ಲಿ ನನ್ನ ಗುರಿ ಸ್ಪಷ್ಟವಾಗಿತ್ತು. ಅಮ್ಮನಾಗಿ ಮಗನಿಗೆ ಹೆಚ್ಚಿನ ಸಮಯವನ್ನು ನೀಡಬೇಕಿತ್ತು. ನಟಿಯರು ಅಮ್ಮನಾದ ಬಳಿಕ ಮತ್ತೆ ಮೊದಲಿನಂತೆ ಆಗಲು ಕಸರತ್ತು ಆರಂಭಿಸುತ್ತಾರೆ. ಆದರೆ ನಾನು ಸಿನಿಮಾಗೆ ಮರಳುವ ಯೋಚನೆಯಲ್ಲೇ ಇರಲಿಲ್ಲ. ರಾಯನ್‌ನ ಹೆಜ್ಜೆಗಳು ನನಗೆ ಮುಖ್ಯವಾಗಿದ್ದವು. ಹೀಗಾಗಿ ಬೇರೆ ಯಾವುದರ ಬಗ್ಗೆ ನನಗೆ ಗಮನ ಇರಲಿಲ್ಲ. ಸ್ನೇಹಿತರ ಬೆಂಬಲ ಮತ್ತೆ ನನ್ನನ್ನು ಬೆಳ್ಳಿತೆರೆಗೆ ಕರೆತಂದಿದೆ.
ಸಿನಿಮಾ ವಿಚಾರದಲ್ಲಿ ಚಿರು ಅವರ ಬೆಂಬಲ ನೆನಪಿಸಿಕೊಂಡರೆ...
ಇಬ್ಬರಿಗೂ ಸಿನಿಮಾ ಎಂದರೆ ಬಹಳ ಪ್ರೀತಿ. ಸಿನಿಮಾ ವಿಚಾರದಲ್ಲಿ ಚಿರು ಹಾಗೂ ನಾನು ಪರಸ್ಪರ ಸಲಹೆ ಪಡೆದುಕೊಳ್ಳುತ್ತಿದ್ದೆವು. ಆದರೆ ಸಿನಿಮಾ ಮಾಡುವ ನಿರ್ಧಾರ ವೈಯಕ್ತಿಕವಾಗಿತ್ತು. ನಾನು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತೇನೆ ಎಂದಾಗ ಚಿರು ಅವರ ಆಲೋಚನೆಯೇ ಬೇರೆ ಇತ್ತು. ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡು ಎಂದು ಚಿರು ಪ್ರೇರೇಪಿಸುತ್ತಿದ್ದರು.
‘ತತ್ಸಮ ತದ್ಭವ’ ಸಿನಿಮಾ ಬಗ್ಗೆ...
ಇದು ಕ್ರೈಮ್ ಥ್ರಿಲ್ಲರ್ ಚಿತ್ರ. ಆದರೆ ಮಾಮೂಲಿ ಕ್ರೈಮ್ ಥ್ರಿಲ್ಲರ್‌ಗಳಿಗಿಂತ ವಿಭಿನ್ನ. ಇದು ಸುಮ್ಮನೆ ಕುಳಿತು ನೋಡುವ ಸಿನಿಮಾ ಅಲ್ಲ. ಇಲ್ಲಿ ಪ್ರೇಕ್ಷಕರ ಯೋಚನೆಗೂ ಕೆಲಸವಿದೆ. ಪ್ರೇಕ್ಷಕರೂ ಒಂದು ಪಾತ್ರವಾಗಿ ಸಿನಿಮಾದೊಳಗೆ ಇರುತ್ತಾರೆ. ನನ್ನ ಪಾತ್ರದ ಹೆಸರು ‘ಅರಿಕಾ’. ಸಿನಿಮಾ ನೋಡಿಯೇ ಈ ಪಾತ್ರದ ಬರವಣಿಗೆಯನ್ನು ಅನುಭವಿಸಬೇಕು. ನನ್ನ ವೃತ್ತಿ ಜೀವನದಲ್ಲಿ ಈ ಮಾದರಿಯ ಪಾತ್ರವನ್ನು ಮಾಡಿರಲಿಲ್ಲ. ಇತ್ತೀಚಿನ ಸಿನಿಮಾ, ವೆಬ್ ಸರಣಿಗಳಲ್ಲಿ ಸ್ತ್ರೀ ಪಾತ್ರಗಳ ಬರವಣಿಗೆ ಗಟ್ಟಿಯಾಗಿದ್ದು, ಇದೊಂದು ಸಕಾರಾತ್ಮಕ ಬೆಳವಣಿಗೆ.
ಮೇಘನಾ ಮುಂದಿನ ಹೆಜ್ಜೆಗಳು..
2009ರಲ್ಲಿ ನಾನು ಮಲಯಾಳಂ ಇಂಡಸ್ಟ್ರಿ ಪ್ರವೇಶಿಸಿದೆ. ಕನ್ನಡ ಆಗಲಿ, ಮಲಯಾಳಂ ಆಗಲಿ ಹೆಚ್ಚು ಸಿನಿಮಾ ಮಾಡುವ ನಿರ್ಧಾರವನ್ನು ಈಗ ಮಾಡಿದ್ದೇನೆ. ಇಡೀ ಕುಟುಂಬ ನಟನೆಯಲ್ಲಿ ಇರುವಾಗ, ಸಿನಿಮಾ ಕನಸು ಮತ್ತೆ ಹುಟ್ಟಿಕೊಳ್ಳಲು ಇದೂ ಪ್ರೇರಣೆಯಾಗಿದೆ. ಶ್ರೀನಗರ ಕಿಟ್ಟಿ ಅವರೊಂದಿಗೆ ಒಂದು ಸಿನಿಮಾ ಮಾಡುತ್ತಿದ್ದು, ‘ಅಮರ್ಥ’ ಎಂಬ ಶೀರ್ಷಿಕೆ ಅದಕ್ಕಿದೆ. ಇದರ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.