ಸಿನಿಮಾಟೊಗ್ರಫಿ ಕಾಯ್ದೆ 1952ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ರೂಪಿಸಿರುವ ಕರಡು ಮಸೂದೆಯಲ್ಲಿ, ಸೆನ್ಸಾರ್ ಮಂಡಳಿ ಹಾಗೂ ಸಿನಿಮಾ ರಂಗದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುವ ನಿಯಮಗಳಿವೆ ಎನ್ನುವ ವಾದ ಬಲವಾಗಿ ಕೇಳಿ ಬರುತ್ತಿದೆ. ಮಸೂದೆಯಲ್ಲಿ ಹೊಸದಾಗಿ ಸೇರಿಸಲಾಗಿರುವ ಅಂಶಗಳು ಯಾವುವು? ಅವುಗಳಿಂದ ಆಗುವ ದೂರಗಾಮಿ ಪರಿಣಾಮಗಳೇನು? ಈ ಚರ್ಚೆಯೊಳಗೆ ಒಂದು ಇಣುಕು ನೋಟ

ಸೆನ್ಸಾರ್ ಮಂಡಳಿ ಪ್ರಮಾಣಿಕರಿಸಿದ ಚಲನಚಿತ್ರವನ್ನು (ಏನಾದರೂ ಆಕ್ಷೇಪಗಳು ಬಂದಲ್ಲಿ) ಮರುಪರಿಶೀಲಿಸುವಂತೆ ಆದೇಶಿಸುವ ಅಧಿಕಾರವನ್ನು ಕೇಂದ್ರ ಸರ್ಕಾರವೇ ನೇರವಾಗಿ ಹೊಂದುವ ಹೊಸ ನಿಯಮದ ಕರಡು ಇತ್ತೀಚೆಗೆ ಬಿಡುಗಡೆ ಆಗಿದೆ. ಜುಲೈ 2ರ ಒಳಗೆ ಈ ಸಂಬಂಧಿಸಿ ಚಿತ್ರೋದ್ಯಮ ಹಾಗೂ ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿದೆ. ಸಿದ್ಧಪಡಿಸಲಾದ ಕರಡಿನ ಬಗ್ಗೆ ಚಿತ್ರೋದ್ಯಮದಲ್ಲಿ ಪರ ವಿರೋಧ ಚರ್ಚೆಗಳು ಶುರುವಾಗಿವೆ. ಬಹುಪಾಲು ಸಿನಿಮಂದಿ ಈ ಆದೇಶದ ಸಮಂಜಸತೆಯನ್ನೇ ಪ್ರಶ್ನಿಸಿ ಕೇಂದ್ರ ಸರ್ಕಾರಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಲು ಸಿದ್ಧತೆ ನಡೆಸಿದ್ದಾರೆ.

ಇಷ್ಟಕ್ಕೂ ಕರಡಿನಲ್ಲಿ ಏನಿದೆ?

ಸದ್ಯಕ್ಕಿರುವ ನಿಯಮ ಪ್ರಕಾರ (ಸಿನಿಮಾಟೋಗ್ರಫಿ ಕಾಯ್ದೆ 1952 ಸೆಕ್ಷನ್ 5ಬಿ(1)) ಚಿತ್ರವೊಂದು ಒಮ್ಮೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಿತಗೊಂಡರೆ ಅದನ್ನು ಬದಲಾಯಿಸಲು ಸರ್ಕಾರಕ್ಕೆ ಯಾವುದೇ ಹಕ್ಕು ಇಲ್ಲ. ಸುಪ್ರೀಂ ಕೋರ್ಟ್ ಕೂಡಾ ಇದನ್ನೇ ಸಮರ್ಥಿಸಿದೆ. ಹಾಗಾಗಿ ನಿರ್ದಿಷ್ಟವಾದ ಸಿನಿಮಾದ ವಿರುದ್ಧ ದೂರು ಬಂದರೂ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ತನಗೆ ಯಾವುದೇ ನೇರ ಅಧಿಕಾರ ಇಲ್ಲ ಎಂಬುದು ಕೇಂದ್ರ ಸರ್ಕಾರದ ಅಳಲು.

5ಬಿ(1) ಹೇಳುವುದು ಹೀಗೆ: ಚಲನಚಿತ್ರ ಅಥವಾ ಅದರ ಯಾವುದೇ ಭಾಗವು ಸಂವಿಧಾನದ ಪರಿಚ್ಛೇದ 19 ಪ್ರಕಾರ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಿದ್ದಲ್ಲಿ, ವಿದೇಶದೊಡನೆ ಸ್ನೇಹ– ಸಂಬಂಧ ಕದಡುವಂತಿದ್ದರೆ, ಕಾನೂನು ಸುವ್ಯವಸ್ಥೆ, ಸಭ್ಯತೆ, ನೈತಿಕತೆಗೆ ಭಂಗ ತರುವಂತದ್ದಾಗಿದ್ದರೆ ನ್ಯಾಯಾಲಯವನ್ನು ನಿಂದಿಸುವಂತಿದ್ದರೆ ಅಥವಾ ಯಾವುದೇ ಅಪರಾಧ ಕೃತ್ಯವನ್ನು ಪ್ರಚೋದಿಸುವಂತಿದ್ದರೆ ಅಂಥ ಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಪ್ರಮಾಣೀಕರಿಸಲಾಗುವುದಿಲ್ಲ ಎನ್ನುತ್ತದೆ. ಸದ್ಯದ ಸೆನ್ಸಾರ್ ಮಂಡಳಿಯು ಪಾಲಿಸುವುದು ಇದೇ ನಿಯಮವನ್ನು.

ಈಗ ಉದ್ದೇಶಿತ ತಿದ್ದುಪಡಿ ಮಸೂದೆಯ ಕರಡಿನಲ್ಲಿ ಮೇಲಿರುವ ನಿಯಮಕ್ಕೆ ಒಂದಿಷ್ಟು ಹೊಸ ಅಂಶಗಳನ್ನು ಸೇರಿಸಲಾಗಿದೆ.

ಇದೇ ಕಾಯ್ದೆಯ ಸೆಕ್ಷನ್ 6ರ ಉಪ ಸೆಕ್ಷನ್ –1 ರಲ್ಲಿ ಹೊಸ ಸಾಲುಗಳನ್ನು ಸೇರಿಸಲಾಗಿದೆ. ಅದೇನೆಂದರೆ, ‘ಪ್ರದರ್ಶನಕ್ಕಾಗಿ ಪ್ರಮಾಣಿತಗೊಂಡ ಚಿತ್ರದ ವಿರುದ್ಧ ಯಾವುದಾದರೂ ದೂರು ಬಂದರೆ (5ಬಿ(1) ನಿಯಮದ ಉಲ್ಲಂಘಿಸಿದ್ದು ಸಂಬಂಧಿಸಿ) ಕೇಂದ್ರ ಸರ್ಕಾರವು ಈ ಚಿತ್ರವನ್ನು ಮರುಪರಿಶೀಲಿಸುವಂತೆ ಕೋರಿ ಸೆನ್ಸಾರ್ ಮಂಡಳಿ ಅಧ್ಯಕ್ಷರಿಗೆ ನಿರ್ದೇಶನ ನೀಡಬಹುದು.

ಚಿತ್ರ ಬಿಡುಗಡೆ ಆದ ನಂತರ ಅದರ ವಸ್ತುವಿನ ಮೇಲೆ ಹಿತಾಸಕ್ತಿ ಗುಂಪುಗಳು ಪರ–ವಿರೋಧ ಅಭಿಪ್ರಾಯ ವ್ಯಕ್ತಪಡಿಸುವುದು, ಕೆಲವು ಭಾಗಗಳನ್ನು ಕತ್ತರಿಸಲು ಆಗ್ರಹಿಸುವುದು, ಕೆಲವೊಮ್ಮೆ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವುದು ನಡೆದೇ ಇದೆ. ಇದನ್ನೆಲ್ಲಾ ಗಮನಿಸಿ ‘ಸೂಪರ್ ಸೆನ್ಸಾರ್’ ವ್ಯವಸ್ಥೆಯೊಂದನ್ನು ತರಲು ಮುಂದಾಗಿದೆ. ಈ ನಿಯಮ ಪ್ರಕಾರ ಚಿತ್ರವೊಂದರ ಮೇಲೆ ಯಾವುದೇ ದೂರು ಅಥವಾ ಆಕ್ಷೇಪವನ್ನು ಬಂದಲ್ಲಿ ಆ ಚಿತ್ರದ ಬಿಡುಗಡೆ ತಡೆಯುವ ಪ್ರದರ್ಶನವನ್ನು ಕೇಂದ್ರ ಸರ್ಕಾರವೇ ಪರಿಣಾಮಕಾರಿಯಾಗಿ ನಿಷೇಧಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

ಈ ನಿಯಮ ಪ್ರಕಾರ ಕೇಂದ್ರ ಸರ್ಕಾರವು ತನಗೆ ಬೇಕಾದಂತೆ ಚಿತ್ರದ ವಸ್ತು/ ಸನ್ನಿವೇಶವನ್ನು ಕತ್ತರಿಸುವ ಅಧಿಕಾರವನ್ನು ಹೊಂದಿರಲಿದೆ. ಇದು ಮುಂದೆ ಈ ಕ್ಷೇತ್ರದ ವೃತ್ತಿಪರರಿಗಿಂತ ರಾಜಕೀಯ ವ್ಯವಸ್ಥೆಯ ಪ್ರವೇಶಕ್ಕೆ ಬಾಗಿಲು ತೆರೆದಂತಾಗಲಿದೆ ಎಂಬುದು ಸಿನಿರಂಗದವರ ಅಳಲು. ನಿರ್ದೇಶಕನ ಪರಿಕಲ್ಪನೆಯನ್ನು ಅಭಿವ್ಯಕ್ತಿಯನ್ನು ಪೂರ್ಣ ನಿರೂಪಿಸಲು ಹೊಸ ಕಾಯ್ದೆ ಅಡ್ಡಿ ಆಗಬಹುದು ಎಂಬುದು ಈ ಕ್ಷೇತ್ರದವರ ಅಳಲು.

ಹಾಗೆಂದು ಒಳ್ಳೆಯ ಅಂಶಗಳು ಇಲ್ಲವೆಂದೇನಲ್ಲ. ಪೈರಸಿ ವಿರುದ್ಧ ತೀವ್ರ ಸಮರ ಸಾರಿದೆ. ಚಿತ್ರದ ನಕಲು ಮಾಡಿದ ಆರೋಪ ಸಾಬೀತಾದರೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಒಂದು ಸಿನಿಮಾದ ಪ್ರಮಾಣೀಕರಣದ ಅವಧಿ 10 ವರ್ಷಗಳವರೆಗೆ ಎಂದು ನಿಗದಿ ಮಾಡಲಾಗಿದೆ. ಮರುಬಿಡುಗಡೆ ಮಾಡಬೇಕಾದರೆ ಮತ್ತೆ ಸೆನ್ಸಾರ್ ಮಾಡಬೇಕು. ಚಿತ್ರವು ಎಲ್ಲ ‘ಅಗ್ನಿ ಪರೀಕ್ಷೆ’ಗಳನ್ನು ದಾಟಿ ಬರುವುದರಿಂದ ಮುಂದೆ ಪ್ರದರ್ಶನದ ವೇಳೆ ಯಾವುದೇ ಅಡ್ಡಿ ವ್ಯಕ್ತವಾಗದು ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಪ್ರಮಾಣ ಪತ್ರದ ವರ್ಗೀಕರಣ: ಸದ್ಯ ಯು, ಎ ಅಥವಾ ಯು/ಎ (ಅನಿರ್ಬಂಧಿತ– ವಯಸ್ಕರು ಮಾತ್ರ ನೋಡಬಹುದಾದ) ಎಂಬ ವರ್ಗೀಕೃತ ಪ್ರಮಾಣ ಪತ್ರ ಸಿಗುತ್ತಿತ್ತು. ಮುಂದೆ ವೀಕ್ಷಕರ ವಯೋಮಾನಕ್ಕನುಗುಣವಾಗಿ, ಯು / ಎ, 7+, ಯು / ಎ 13+ ಮತ್ತು ಯು / ಎ 16+ ವರ್ಗೀಕರಿಸಿ ಪ್ರಮಾಣಪತ್ರ ನೀಡಲಾಗುವುದು ಎಂದು ಕಾಯ್ದೆ ಹೇಳಿದೆ.

ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚಿಸಿ ಪ್ರತಿಕ್ರಿಯೆ ಸಲ್ಲಿಸುತ್ತೇವೆ ಎಂದು ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್ ತಿಳಿಸಿದರು.

ಒಳಿತು– ಕೆಡುಕಿನ ನಡುವೆ

ಪೈರಸಿಗೆ ಶಿಕ್ಷೆ 1952ರ ಕಾಯ್ದೆಯಲ್ಲಿ ಇರಲಿಲ್ಲ. ಈಗಿನ ಕರಡಿನಲ್ಲಿ ಇದೆ. 10 ವರ್ಷಕ್ಕೊಮ್ಮೆ ಚಿತ್ರದ ಮರು ಪ್ರಮಾಣೀಕರಣ ಅನ್ನುವುದನ್ನು ತರುವುದರಿಂದ ನಿರ್ಮಾಪಕರಿಗೆ ಮತ್ತೊಂದಿಷ್ಟು ರಾಯಧನ ಸಿಗುತ್ತದೆ. ನಿರ್ಮಾಪಕ ಬದುಕುತ್ತಾನೆ. ವಿಡಿಯೊ ಮಾಫಿಯಾವನ್ನು ತಡೆಗಟ್ಟಬಹುದು. ಈ ದೃಷ್ಟಿಯಲ್ಲಿ ಈ ಕಾಯ್ದೆ ಒಳ್ಳೆಯದೇ.

ಇನ್ನು ಸಿನಿಮಾ ಪ್ರಮಾಣೀಕರಣ ವರ್ಗೀಕರವನ್ನು (ಯು/ಎ/ 16+... ಇತ್ಯಾದಿ) ಇದನ್ನು ಸದ್ಯದ ಡಿಜಿಟಲ್ ವೀಕ್ಷಣಾ ವ್ಯವಸ್ಥೆಯಲ್ಲಿ ಹೇಗೆ ನಿಯಂತ್ರಿಸುತ್ತೀರಿ? ಗ್ಯಾಜೆಟ್‌ಗಳಲ್ಲಿ ನೋಡುವವರ ವಯಸ್ಸನ್ನು ಹೇಗೆ ಗುರುತಿಸಿ ನಿಯಂತ್ರಿಸುತ್ತೀರಿ?

ಒಂದು ಕಥಾ ವಸ್ತುವಲ್ಲಿ ಇರುವ ಸತ್ಯಾಂಶವನ್ನು ಸ್ವೀಕರಿಸಲು ಸರ್ಕಾರಕ್ಕೆ ಭಯ ಏಕೆ? ಅಭಿವ್ಯಕ್ತಿ ಸ್ವಾತಂತ್ರ್ಯ ನಿಯಂತ್ರಿಸುವ ಯಾವ ಪ್ರಯತ್ನಗಳೂ ಪ್ರಪಂಚದಲ್ಲಿ ಯಶಸ್ವಿ ಆಗಿಲ್ಲ.

-ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ, ನಿರ್ದೇಶಕ

ಭ್ರಷ್ಟಾಚಾರಕ್ಕೆ ದಾರಿಯಾಗಬಹುದು

ಶಿಸ್ತುಬದ್ಧವಾಗಿರುವ ಸೆನ್ಸಾರ್ ಮಂಡಳಿ ಮೇಲೆ ಇನ್ನೊಂದು ಹಿಡಿತ ತರುವ ಉದ್ದೇಶ ಏನು? ಚಿತ್ರದ ಶೂಟಿಂಗ್ ಸಹಿತ ನಿರ್ಮಾಣ ಹಂತದಲ್ಲೇ ನಿಯಮಗಳ ಕಾರಣದಿಂದ ಸಾಕಷ್ಟು ಹೆದರಿಕೊಂಡು ಸ್ವಯಂ ಸೆನ್ಸಾರ್ ಹಾಕಿಕೊಂಡು ಕೆಲಸ ಮಾಡುತ್ತೇವೆ. ಇಷ್ಟೆಲ್ಲಾ ನಿಯಮ ಪಾಲಿಸಿಯೂ ಇನ್ನೊಂದು ವ್ಯವಸ್ಥೆ ಬೇಕಾಗಿಲ್ಲ. ಇದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ. ನಿರ್ಮಾಪಕರು, ನಿರ್ದೇಶಕರನ್ನು ಇನ್ನಷ್ಟು ಹೈರಾಣಾಗಿಸುವ ವ್ಯವಸ್ಥೆ ಇದು. ಸಿನಿಮಾವನ್ನು ಪ್ರೀತಿಸುವ ಯಾರೂ ಕೂಡಾ ಇಂಥ ನಿಯಮ ತರಲು ಸಾಧ್ಯವಿಲ್ಲ. ನಾನು ಇದನ್ನು ವಿರೋಧಿಸುತ್ತೇನೆ.

-ಜಯಮಾಲಾ, ನಟಿ, ನಿರ್ಮಾಪಕಿ

ಆಳುವವರ ವಿರುದ್ಧದ ಧ್ವನಿ ಹತ್ತಿಕ್ಕುವ ಹುನ್ನಾರ

ದೇಶದ ಸಾರ್ವಭೌಮತೆ, ಭದ್ರತೆ ಸಂಬಂಧಿಸಿ ತೊಂದರೆ ಆಗುವ ಅಥವಾ ಅನಗತ್ಯ ವಿಷಯಗಳಿದ್ದರೆ ಅದನ್ನು ನಿರ್ಬಂಧಿಸುವ ಅವಕಾಶ ಈಗಲೇ ಇದೆ. ಬೇಕಿದ್ದರೆ ಹೊಸ ವಿಷಯಗಳನ್ನು ಆ ನಿಯಮಗಳಿಗೇ ಸೇರಿಸಬಹುದು. ಸೆನ್ಸಾರ್ ಮಂಡಳಿಯ ಕೆಲಸವನ್ನು ಸಮ್ಮಿಶ್ರ ಸರ್ಕಾರ ಮಾಡಬಾರದು. ಆಳುವ ಸರ್ಕಾರದ ವಿರುದ್ಧ ಯಾವುದೇ ಧ್ವನಿ ಬರಬಾರದು ಎಂಬುದು ಇಲ್ಲಿನ ಹುನ್ನಾರ ಅಷ್ಟೆ. ಇದು ಸಂವಿಧಾನ ವಿರೋಧಿ. ಸರ್ಕಾರದ ಆದೇಶವನ್ನು ಪ್ರಶ್ನಿಸಬಾರದು ಎಂದು ಮಾಡಿದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇಲ್ಲ. ಕೇಂದ್ರ ಸರ್ಕಾರ ನಿರಂತರವಾಗಿ ನಡೆಸುತ್ತಿರುವ ಕೇಂದ್ರೀಕರಣ ನೀತಿಯ ಫಲ ಇದು.

-ಬರಗೂರು ರಾಮಚಂದ್ರಪ್ಪ, ಚಿತ್ರ ನಿರ್ದೇಶಕ

ಅಭಿವ್ಯಕ್ತಿ ಇತಿಮಿತಿಯೊಳಗಿರಲಿ

ಹೊಸ ಕರಡಿನ ಪ್ರಕಾರ ಇಲ್ಲಿ ಕೋರ್ಟ್ ಕೈಯಾಡಿಸುವ ಬದಲು ಸರ್ಕಾರ ಕೈ ಆಡಿಸುತ್ತದೆ. ಯಾವುದೇ ನಿರ್ದೇಶಕ ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿಮಿತಿಯೊಳಗೆ ಮಾಡಬೇಕಾದದ್ದು ಅವನ ಕರ್ತವ್ಯ. ಇತ್ತೀಚೆಗೆ ಅಭಿವ್ಯಕ್ತಿ ಅಂದುಕೊಂಡಿದ್ದನ್ನು ಕೆಲವರು ಸ್ವೇಚ್ಛೆ ಎಂದು ಬಳಸಿಕೊಳ್ಳುತ್ತಿದ್ದಾರೆ. ಡಿಜಿಟಲ್ ವೇದಿಕೆಗಳು ಬಂದ ಮೇಲೆ ಹೊಸ ಚಿಂತನೆ, ಹೊಸ ಸ್ವಯಂ ಶಿಸ್ತಿನ ಕ್ರಮಗಳು ಬರಬೇಕು. ದೃಶ್ಯ ಮಾಧ್ಯಮದ ಶಿಸ್ತುಬದ್ಧ ಕ್ರಮಕ್ಕೆ ಬೇರೆಯೇ ವ್ಯಾಖ್ಯಾನ ಬೇಕು. ಈಗ ಸಿನಿಮಾಟೋಗ್ರಫಿ ಅನ್ನುವುದೇ ಸರಿಯಲ್ಲ. ಎಲ್ಲಿದೆ ಸಿನಿಮಾ ಹೇಳಿ? ಈಗ ಸಿನಿಮಾ ಅನ್ನುವುದು ಡಿಜಿಟಲ್ ದೃಶ್ಯ ಆಗಿಬಿಟ್ಟಿದೆ. ಅದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಡಿಜಿಟಲ್ ಸೆನ್ಸಾರಿಂಗ್ ಆಗಬೇಕು (ಟಿವಿ, ಒಟಿಟಿ ಸೇರಿ). ಡಿಜಿಟಲ್ ದೃಶ್ಯ ಸಾಕ್ಷರತೆಗೆ ತಕ್ಕ ಕಾನೂನು ಚೌಕಟ್ಟು ರೂಪಿಸಬೇಕು.

– ಟಿ.ಎಸ್.ನಾಗಾಭರಣ, ಚಿತ್ರ ನಿರ್ದೇಶಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಬಿಜೆಪಿಯ ಸಾರ್ವಭೌಮತ್ವಕ್ಕೆ ಧಕ್ಕೆ

ಇದು ಮೇಲ್ನೋಟಕ್ಕೆ ಅಪಾಯಕಾರಿ. ಚಿತ್ರದ ಕಂಟೆಂಟ್ ದೇಶದ ಸಾರ್ವಭೌಮತ್ವ ಐಕ್ಯತೆಗೆ ಧಕ್ಕೆ ತರುವಂತಹದ್ದು ಅಲ್ಲ, ಇದು ಬಿಜೆಪಿಯ ‘ಸಾರ್ವಭೌಮತ್ವ ಮತ್ತು ಐಕ್ಯತೆ’ಗೆ ಧಕ್ಕೆ ತರುವ ಕಂಟೆಂಟ್ ಆಗಿದ್ದರೆ... ಎಂದು ತಿದ್ದಿಕೊಂಡರೆ ಈ ಹೊಸ ಕರಡನ್ನು ಒಪ್ಪಿಕೊಳ್ಳಬಹುದು. ಯಾವ ಕಲಾಕಾರನ ಅಭಿವ್ಯಕ್ತಿಯೂ ಸದಾ ದೇಶದ ಸಾರ್ವಭೌಮತೆ, ಐಕ್ಯತೆಗೆ ಅಡ್ಡಿ ಮಾಡಲು ಸಾಧ್ಯವಿಲ್ಲ.

ಯಾವಾಗ ತಮ್ಮ ಅಸ್ತಿತ್ವಕ್ಕೆ ಅಡ್ಡಿ ಬರುತ್ತದೆ ಎಂದು ಗೊತ್ತಾದರೆ ಅವರು ಇಂಥದ್ದನ್ನು (ದೇಶ, ರಾಷ್ಟ್ರೀಯತೆ... ಇತ್ಯಾದಿ) ಬಳಸುತ್ತಾರೆ. ಸಣ್ಣ ಸಿನಿಮಾ ಮಾಡುವವರನ್ನು ಕ್ಷುಲ್ಲಕ ಕಾರಣಕ್ಕಾಗಿ ಆಕ್ಷೇಪಿಸುತ್ತಾರೆ. ಹೀಗೆ ಚಿತ್ರದ ಮೇಲೆ ಆಕ್ಷೇಪಗಳನ್ನು ಸೃಷ್ಟಿ ಮಾಡಿಸಲೂಬಹುದು. ಇದು ಈಗ ನೆಲಕ್ಕೆ ಬಿದ್ದವನ ಮೇಲೆ ಗುದ್ದು ಹಾಕುವ ಕೆಲಸ. ಸಿನಿಮಾ ಕ್ಷೇತ್ರ ಬಿದ್ದುಬಿಟ್ಟಿದೆ. ಅದರ ಮೇಲೆ ಗುದ್ದು ಹಾಕುತ್ತಿದ್ದಾರೆ. ಬಿಜೆಪಿ ಈ ಕ್ಷೇತ್ರವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದೆ.

-ಡಾ.ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ, ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.