ಮಂಗಳೂರು: ಕೋಸ್ಟಲ್ವುಡ್ನಲ್ಲಿ ಈತನಕ ಬಿಡುಗಡೆಯಾದ 120 ಚಿತ್ರಗಳಲ್ಲಿ ಶತ ದಿನಗಳ ಪ್ರದರ್ಶನ ಕಂಡಿದ್ದು 13 ಸಿನಿಮಾಗಳು ಮಾತ್ರ. ಸುಮಾರು 40 ಸಿನಿಮಾಗಳು ಐವತ್ತು ದಿನಗಳ ಪ್ರದರ್ಶನ ಕಂಡಿವೆ. ಇನ್ನುಳಿದ ಶೇ 50ರಷ್ಟು ಸಿನಿಮಾಗಳು ಎರಡ್ಮೂರು ವಾರದಲ್ಲೇ ಥಿಯೇಟರ್ನಿಂದ ಜಾರಿ ಹೋಗಿವೆ. ಹೀಗಾಗಿ, ತುಳು ಸಿನಿಮಾಗಳಿಗೆ ಬಂಡವಾಳ ಹಾಕಿ ಲಾಭ ಪಡೆದವರಿಗಿಂತ ಕೈಸುಟ್ಟುಕೊಂಡವರೇ ಜಾಸ್ತಿ.

ಬಹುತೇಕ ನಿರ್ಮಾಪಕರು ಭಾಷೆಯ ಮೇಲಿನ ಅಭಿಮಾನದಿಂದ, ಸಾಲಸೋಲ ಮಾಡಿ ಸಿನಿಮಾಕ್ಕೆ ಲಕ್ಷ ಲಕ್ಷ ಸುರಿದಿದ್ದಾರೆ. ಹಾಕಿದ ಬಂಡವಾಳವೇ ವಾಪಸ್ ಬರದಿದ್ದಾಗ ಒಂದೇ ಸಿನಿಮಾದಿಂದ ದೂರ ಸರಿದವರು ಹಲವರು. ಆದರೂ ಗುಣಮಟ್ಟದ ಮತ್ತು ಮನರಂಜನೆಯ ಚಿತ್ರಗಳನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ ಎನ್ನುವುದಕ್ಕೆ ಕಳೆದ ಒಂದು ದಶಕದಲ್ಲಿ 10 ಚಿತ್ರಗಳು ಶತ ಸಂಭ್ರಮ ಕಂಡಿರುವುದೇ ಸಾಕ್ಷಿ.

1973ರಲ್ಲಿ ಬಿಡುಗಡೆಗೊಂಡ ‘ಕೋಟಿ ಚೆನ್ನಯ’ (ಕಪ್ಪು ಬಿಳುಪು) ತುಳು ಚಿತ್ರರಂಗದಲ್ಲಿ ಮೊದಲು ಶತ ಸಂಭ್ರಮ ಕಂಡ ಚಿತ್ರವಾಗಿದೆ. ಈ ಸಿನಿಮಾ ಜ್ಯೋತಿ ಚಿತ್ರಮಂದಿರದಲ್ಲಿ 100 ದಿನಗಳ ಪ್ರದರ್ಶನ ಕಂಡಿದೆ. ವಿಶುಕುಮಾರ್ ತಮ್ಮದೇ ‘ಕೋಟಿ ಚನ್ನಯ’ ನಾಟಕವನ್ನು ಸಿನಿಮಾ ಮಾಡಿದ್ದರು. ಇದರಲ್ಲಿ ನಾಲ್ಕು ಹಾಡುಗಳಿದ್ದು, ಡಾ. ವಿವೇಕ್ ರೈ ರಚನೆಯ ‘ಎಕ್ಕಸಕ’ ಹಾಡು ಈಗಲೂ ಜನಪ್ರಿಯವಾಗಿದೆ. ನಂತರದ 20 ವರ್ಷಗಳಲ್ಲಿ ಯಾವುದೇ ಚಿತ್ರ ಶತ ದಿನಗಳ ಪ್ರದರ್ಶನ ಕಂಡಿಲ್ಲ.

1993ರಲ್ಲಿ ಬಿಡುಗಡೆಯಾದ ರಿಚರ್ಡ್ ಕ್ಯಾಸ್ಟಲಿನೊ ನಿರ್ದೇಶನದ ‘ಬಂಗಾರ್ ಪಟ್ಲೇರ್’, ತುಳುವಿನಲ್ಲಿ ಶತ ಸಂಭ್ರಮವನ್ನು ಕಂಡ ಎರಡನೇ ಚಿತ್ರವಾಗಿದೆ. ಇದು ಕೂಡ ಜ್ಯೋತಿ ಚಿತ್ರಮಂದಿರದಲ್ಲಿ ದಾಖಲೆಯ ಪ್ರದರ್ಶನ ಕಂಡಿತು. ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಪ್ರಥಮ ಸಿನಿಮಾಸ್ಕೋಪ್ ತುಳು ಚಿತ್ರ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಕೆ.ನಾರಾಯಣ ಶೆಟ್ಟಿ ಅವರ ‘ಸತ್ಯಬತ್ತಲೆ’ ನಾಟಕವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ.

‘ಒರಿಯರ್ದೊರಿ ಅಸಲ್’ (2011) ತುಳು ಚಿತ್ರರಂಗಕ್ಕೆ ಹೊಸ ದಿಕ್ಕನ್ನು ನೀಡಿದ ಸಿನಿಮಾ. ರಂಗಭೂಮಿಯಲ್ಲಿ ಭಾರಿ ಸದ್ದು ಮಾಡಿದ, ವಿಜಯಕುಮಾರ್ ಕೊಡಿಯಾಲ್ಬೈಲ್ ಅವರ ‘ಒರಿಯರ್ದೊರಿ ಅಸಲ್’ ನಾಟಕವನ್ನು ಹ.ಸೂ. ರಾಜಶೇಖರ್ ಬೆಳ್ಳಿತೆರೆಗೆ ತಂದಿದ್ದರು. ಹಾಸ್ಯಪ್ರಜ್ಞೆಯ ಸಿನಿಮಾದತ್ತ ತುಳು ಪ್ರೇಕ್ಷಕರನ್ನು ಸೆಳೆಯಬಹುದು ಎಂಬುದನ್ನು ಈ ಚಿತ್ರ ನಿರೂಪಿಸಿತು. ಜ್ಯೋತಿ ಚಿತ್ರಮಂದಿರದಲ್ಲಿ ಭರ್ಜರಿ 175 ದಿನಗಳ ಪ್ರದರ್ಶನ ಕಂಡಿತು.

ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶನದ ‘ಚಾಲಿಪೋಲಿಲು’ (2014) ಕೋಸ್ಟಲ್ವುಡ್ನಲ್ಲಿಯೇ ಅತಿ ಹೆಚ್ಚು (511 ದಿನ) ಪ್ರದರ್ಶನ ಕಂಡ ಸಿನಿಮಾ. ಒಂಟಿ ಪರದೆಯ ಚಿತ್ರಮಂದಿರದಿಂದ ಮಲ್ಪಿಪ್ಲೆಕ್ಸ್ನತ್ತ ಪ್ರೇಕ್ಷಕರನ್ನು ಸೆಳೆಯುವಲ್ಲಿ ಈ ಚಿತ್ರ ಯಶಸ್ವಿಯಾಯಿತು. ಕರಾವಳಿಯ 5 ಚಿತ್ರಮಂದಿರಗಳಲ್ಲಿ 75 ದಿನ, 3 ಚಿತ್ರಮಂದಿರಗಳಲ್ಲಿ 100 ದಿನ ಪ್ರದರ್ಶನ ಕಂಡ ದಾಖಲೆ ಇದೆ.

ದೇವದಾಸ್ ಕಾಪಿಕಾಡ್ ನಿರ್ದೇಶನದ ‘ಚಂಡಿಕೋರಿ’ (2015) ಮಂಗಳೂರಿನ ಪ್ರಭಾತ್ ಚಿತ್ರಮಂದಿರಲ್ಲಿ 200 ದಿನಗಳ ಪ್ರದರ್ಶನ ಕಂಡಿದೆ. ಇದರಲ್ಲಿ ನಿರ್ದೇಶಕರ ಪುತ್ರ ಅರ್ಜುನ್ ಕಾಪಿಕಾಡ್ ಅಭಿನಯ, ಪ್ರೇಕ್ಷಕರ ಮನಗೆದ್ದಿತು. ಇನ್ನು ಕೆ. ಸೂರಜ್ ಶೆಟ್ಟಿ ನಿರ್ದೇಶನದ ‘ಪಿಲಿಬೈಲ್ ಯಮುನಕ್ಕ’ (2016) 168 ದಿನಗಳ ಪ್ರದರ್ಶನ ಕಂಡಿವೆ.

ಪ್ರವೀಣ್ ತೊಕ್ಕೊಟ್ಟು ನಿರ್ದೇಶನದ ‘ಕಡಲಮಗೆ’ (2006), ಸುಹಾನ್ ಪ್ರಸಾದ್ ಮತ್ತು ವಿಸ್ಮಯ ವಿನಾಯಕ್ ನಿರ್ದೇಶನದ ‘ರಂಗ್’ (2014), ವಿಜಯಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ ‘ಮದಿಮೆ’ (2014), ಕೆ. ಸೂರಜ್ ಶೆಟ್ಟಿ ನಿರ್ದೇಶನದ ‘ಎಕ್ಕಸಕ’ (2015), ಹ.ಸೂ. ರಾಜಶೇಖರ್ ನಿರ್ದೇಶನದ ‘ಒರಿಯನ್ ತೂಂಡ ಒರಿಯಾಗಾಪುಜಿ’ (2015), ನಾಗ ವೆಂಕಟೇಶ್ ನಿರ್ದೇಶನದ ‘ಪವಿತ್ರ’ (2016) ಸಿನಿಮಾಗಳು ಶತ ದಿನಗಳ ಪ್ರದರ್ಶನದ ದಾಖಲೆ ಹೊಂದಿವೆ.

2019ರಲ್ಲಿ ತೆರೆಗೆ ಬಂದ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಕದ್ರಿ ನಿರ್ದೇಶನದ ‘ಗಿರಿಗಿಟ್’ ತುಳು ಸಿನಿಮಾದ ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಏಳು ಚಿತ್ರಮಂದಿರಗಳಲ್ಲಿ ಶತ ದಿನಗಳ ಪ್ರದರ್ಶನ ಕಂಡಿದೆ. ಮಂಗಳೂರಿನ ಬಿಗ್ ಸಿನಿಮಾಸ್ನಲ್ಲಿ 150 ದಿನ ಯಶಸ್ವಿಯಾಗಿ ಓಡಿತ್ತು. ದೇಶದ ವಿವಿಧ ನಗರಗಳಲ್ಲಿ ಮತ್ತು 15ಕ್ಕೂ ಅಧಿಕ ದೇಶಗಳಲ್ಲಿ ಚಿತ್ರ ಪ್ರದರ್ಶನಗೊಂಡು ಪ್ರೇಕ್ಷಕರ ಮನಗೆದ್ದಿತ್ತು. ಈ ಚಿತ್ರವು ತುಳು ಚಿತ್ರರಂಗವನ್ನು ಒಂದು ಹಂತ ಮುಂದಕ್ಕೆ ಕೊಂಡೊಯ್ದಿತು. ಆದರೆ, ನಂತರ ಕೋವಿಡ್ ಮಾಹಾಮಾರಿ ಎಲ್ಲವನ್ನೂ ಕೊಚ್ಚಿಕೊಂಡು ಹೋಯಿತು.

‘ವರವೂ ಆಯಿತು, ಶಾಪವೂ ಆಯಿತು’
‘ಹಾಸ್ಯದ ಹೊನಲಿನೊಂದಿಗೆ ಬಂದ ‘ಒರಿಯರ್ದೊರಿ ಅಸಲ್’ ಸಿನಿಮಾ ತುಳು ಚಿತ್ರರಂಗಕ್ಕೆ ವರವೂ ಆಯಿತು, ಶಾಪವೂ ಆಯಿತು. ಗಂಭೀರ ಕಥೆಯೊಂದಿಗೆ ಬರುತ್ತಿದ್ದ ತುಳು ಸಿನಿಮಾದಲ್ಲಿ ಪರಿವರ್ತನೆಯ ಗಾಳಿ ಬೀಸಿತು. ಅಲ್ಲಿಯ ತನಕ ಆಮಗತಿಯಲ್ಲಿ ಸಾಗುತ್ತಿದ್ದ ಚಿತ್ರರಂಗ ವೇಗ ಪಡೆಯುತು. ಆದರೆ, ಸಾಲುಸಾಲು ಸಿನಿಮಾಗಳು ಹಾಸ್ಯ ವಸ್ತುವಿನಲ್ಲೇ ಬಂದ ಕಾರಣ ಕೆಲವು ಮಾತ್ರ ಗೆದ್ದವು, ಹಲವು ಸೋತವು’ ಎನ್ನುತ್ತಾರೆ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್.

‘ಅನಾರೋಗ್ಯಕರ ಪೈಪೋಟಿ’
ಕಳೆದ ದಶಕದಲ್ಲಿ ಗೆದ್ದಿರುವ ಬಹುತೇಕ ತುಳು ಸಿನಿಮಾಗಳಲ್ಲಿ ಹಾಸ್ಯವೇ ಪ್ರಧಾನ ವಸ್ತುವಾಗಿದೆ. ಗುಣಮಟ್ಟದ ಸಿನಿಮಾಗಳನ್ನು ಪ್ರೇಕ್ಷಕರು ಕೈಹಿಡಿದಿದ್ದಾರೆ. ಕೆಲ ಕಲಾತ್ಮಕ ಚಿತ್ರಗಳು ಉತ್ತಮವಾಗಿ ಮೂಡಿಬಂದರೂ ಪ್ರೇಕ್ಷಕರನ್ನು ತಲುಪುವಲ್ಲಿ ಸೋತಿವೆ. ತುಳು ಚಿತ್ರರಂಗದಲ್ಲಿರುವ ಅನಾರೋಗ್ಯಕರ ಪೈಪೋಟಿಯಿಂದಾಗಿ ಹಲವು ಉತ್ತಮ ಸಿನಿಮಾಗಳು ಸೋತಿರುವ ಉದಾಹರಣೆಗಳಿವೆ’ ಎಂದು ಹೇಳುತ್ತಾರೆ ನಿರ್ದೇಶಕ ದೇವದಾಸ್ ಕಾಪಿಕಾಡ್.

(ಪ್ರತಿಕ್ರಿಯಿಸಿ–9513322936, editormng@prajavani.co.in)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.