ನವೀನಕೃಷ್ಣ

ನಟ ಶ್ರೀನಿವಾಸಮೂರ್ತಿ ಅವರಿಗೀಗ 75ರ ಹರೆಯ! ಹುಟ್ಟುಹಬ್ಬದ ಸಂಭ್ರಮದಲ್ಲೇ ಸತತವಾಗಿ ಎರಡು ನಾಟಕಗಳಲ್ಲಿ ಅಭಿನಯಿಸಿದ್ದು ಅವರ ಜೀವನೋತ್ಸಾಹಕ್ಕೆ ಹಿಡಿದ ಕನ್ನಡಿ. ಅವರ ಮಗ ನವೀನ್ಕೃಷ್ಣ ತಂದೆಯ ವ್ಯಕ್ತಿಚಿತ್ರವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಸಂಜೆ ಮೂಡಣದ ಕಾಮನ ಬಿಲ್ಲಿನಂತೆ ಕಣ್ಣು ತುಂಬುತ್ತದೆ ಅಪ್ಪನ ನೆನಪು. ನಾನು ಒಂದನೇ ತರಗತಿಯಲ್ಲಿದ್ದಾಗ ಅವರ ನಾಟಕ ನೋಡಿದ್ದು ಮಸುಕಾಗಿ ನೆನಪಿದೆ. ಅವರ ರಂಗತಂಡ ಬೇರೆ ಬೇರೆ ಊರುಗಳಿಗೂ ಹೋಗಿ ನಾಟಕ ಆಡುತ್ತಿತ್ತು. ಅದರ ಸಂಭಾವನೆಯೇ ನಮಗೆ ಆಧಾರವಾಗಿತ್ತು. ‘ಸದಾರಮೆ’ಯನ್ನು ಸಿಕ್ಕಾಪಟ್ಟೆ ಸಾರಿ ಆಡಿದ್ದಾರೆ.

ಏನು ಅದೃಷ್ಟವೋ ಏನೋ ನಾನೂ ‘ಸದಾರಮೆ’ಗೆ ಮೊದಲು ಬಣ್ಣ ಹಚ್ಚಿದೆ. ಅಪ್ಪನ ಜೊತೆ ರಂಗವನ್ನು ಹಂಚಿಕೊಂಡೆ. ಅದು ತೀರ ಆಕಸ್ಮಿಕ. ಬೆಂಗಳೂರಿನ ವಿ.ವಿ. ಪುರಂನಲ್ಲಿ ಗಣೇಶೋತ್ಸವಕ್ಕೋ ಅಥವಾ ರಾಜ್ಯೋತ್ಸವಕ್ಕೂ ಆ ನಾಟಕ ಆಡುತ್ತಿದ್ದರು. ನಾನು ಅದನ್ನು ನೋಡಲು ಹೋಗಿದ್ದೆ. ಪಾತ್ರಧಾರಿಯೊಬ್ಬರು ಹುಷಾರಿಲ್ಲದೆ ಬರಲಿಲ್ಲ. ಅದು ಸದಾರಮೆ ಗಂಡನ ಪಾತ್ರ. ನಾಟಕ ಶುರುವಾಗುವ ಹೊತ್ತಿಗೆ ಅಪ್ಪ, ನನ್ನನ್ನು ಕರೆದು ನೀನೇ ಮಾಡು ಅಂದರು. ನನಗೆ ಏನೂ ಗೊತ್ತಿಲ್ಲ ಅಂದೆ. ಬಣ್ಣ ಹಚ್ಚಿಕೊಂಡು ರಂಗಕ್ಕೆ ಬಾ. ಉಳಿದದ್ದೆಲ್ಲ ಸದಾರಮೆ ನೋಡಿಕೊಳ್ಳುತ್ತಾಳೆ ಎಂದರು. ನಾಲ್ಕಾರು ಡೈಲಾಗ್ ಕಲಿತು ಅಪ್ಪ ಹೇಳಿದಂತೆ ಮಾಡಿದೆ. ಪ್ರದರ್ಶನ ಚೆನ್ನಾಗಿಯೇ ಆಯಿತು.

ಅಪ್ಪ ಅಭಿನಯಿಸುತ್ತಿದ್ದ ‘ವೈಶಂಪಾಯನ ಸರೋವರ’, ‘ಬೇಡರ ಕಣ್ಣಪ್ಪ’ ಅದ್ಭುತ ನಾಟಕಗಳು. ‘ವೈಶಂಪಾಯನ ಸರೋವರ’ದಲ್ಲಿ ಅಪ್ಪನೇ ದುರ್ಯೋಧನ. ಅವರ ಪಾತ್ರ ಅಮೋಘವಾಗಿತ್ತು ಎಂದು ಈಗಲೂ ಅನಿಸುತ್ತದೆ.

ಮುಂಗೋಪಿ ಅಪ್ಪ ಕಂಡರೆ ಭಯ

ಅಪ್ಪನದು ಸಿಡುಕಿನ ಸ್ವಭಾವ. ಈಗಲೂ ಹಾಗೆಯೇ ಇದ್ದಾರೆ. ಮೊದಲೆಲ್ಲ ಮಾತನಾಡಿಸಲೂ ಭಯ ಆಗ್ತಿತ್ತು. ವಾರದಲ್ಲಿ ಒಂದು ದಿನ ನಮ್ಮನ್ನೆಲ್ಲ ಹೋಟೆಲ್ಗೆ ತಪ್ಪದೇ ಕರೆದುಕೊಂಡು ಹೋಗುತ್ತಿದ್ದರು. ನನಗೆ ಆಗ ಚೈನೀಸ್ ತಿನಿಸು ತುಂಬ ಇಷ್ಟ. ಬೇಕಾಗಿದ್ದನ್ನು ಬೇಕಾದಷ್ಟು ತಿನ್ನಬಹುದಿತ್ತು. ಒಮ್ಮೆ ಯಾವುದೋ ಸಿನಿಮಾ ಚಿತ್ರೀಕರಣಕ್ಕೆ ಆಫ್ರಿಕಾಕ್ಕೆ ಹೋಗಿದ್ದರು. ದೊಡ್ಡ ಸೂಟ್ಕೇಸ್ ತುಂಬ ಚಾಕೊಲೇಟ್ ತಂದಿದ್ದರು. ಆಗ ಚಾಕೊಲೇಟ್–ಬಿಸ್ಕೇಟ್ ತುಂಬ ಇಷ್ಟಪಡುತ್ತಿದ್ದೆ. ಯಾವತ್ತೂ ಅದಕ್ಕೆ ಕಡಿಮೆ ಮಾಡಲಿಲ್ಲ. ಓದಿನ ವಿಷಯದಲ್ಲಿ ಮಾತ್ರ ರಾಜಿ ಇರಲಿಲ್ಲ. ನಮ್ಮನ್ನು ಬಿಗಿಯಾಗಿ ಇಟ್ಟಿದ್ದರು. ಹಟ ಮಾಡಿದರೆ ಚೆನ್ನಾಗಿ ಒದೆಯುತ್ತಿದ್ದರು.

75ರ ಪ್ರಾಯದಲ್ಲೂ ಅಪ್ಪನಿಗೆ ರಂಗ ಪ್ರೇಮ ಸ್ವಲ್ಪವೂ ಉಡುಗಿಲ್ಲ. ‘ಸದಾರಮೆ’, ‘ತರಕಾರಿ ಚೆನ್ನಿ’ ನಾಟಕವನ್ನು ಈಚೆಗೆ ಆಡಿದರು. ನನಗೂ ಒಂದು ಪಾತ್ರವನ್ನು ಮಾಡಲು ಆಗುತ್ತಾ ಎಂದು ಕೇಳಿದರು. ಸಮಯ ಇಲ್ಲದ ಕಾರಣಕ್ಕೆ ಮಾಡಲಿಲ್ಲ. ತಾಲೀಮು ಇಲ್ಲದೆ ಅಭಿನಯಿಸಲು ಸಾಧ್ಯ ಇರಲಿಲ್ಲ. ಅಪ್ಪ ಒಂದೆರಡು ತಿಂಗಳಿನಿಂದ ತಾಲೀಮು ಮಾಡುತ್ತಲೇ ಇದ್ದರು.

ಬದನೆಕಾಯಿ ಎಣ್ಣೆಗಾಯಿಯಲ್ಲಿ ಎತ್ತಿದ ಕೈ

ನಾನು ನೋಡಿದಾಗಿನಿಂದಲೂ ಅಪ್ಪನ ದಿನಚರಿ ಬದಲಾಗಿಲ್ಲ. ಇವತ್ತೇನೂ ಕೆಲಸ ಇಲ್ಲ ಎಂದು ತಡವಾಗಿ ಎದ್ದಿದ್ದನ್ನು ಯಾವತ್ತೂ ಕಂಡಿಲ್ಲ. ನಿತ್ಯ ಬೆಳಿಗ್ಗೆ 6 ಗಂಟೆಗೇ ಏಳುತ್ತಾರೆ. ಸಮಯದ ಶಿಸ್ತನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ವಾಕ್ ಮುಗಿಸಿ ಸ್ನಾನದ ನಂತರ ಪೂಜೆ. ಪೂಜೆ ಮತ್ತು ಧ್ಯಾನಕ್ಕೆ ಒಂದು ಗಂಟೆ ಬೇಕು. ತಿಂಡಿ ಮುಗಿಸಿ ತಮ್ಮ ರೂಮಿಗೆ ಹೋಗಿ ಪುಸ್ತಕ ಹಿಡಿದರೆ ಮಧ್ಯಾಹ್ನದ ತನಕ ಏಳುವುದಿಲ್ಲ. ಮಧ್ಯಾಹ್ನ ಊಟ ಮಾಡಿ ಸ್ವಲ್ಪ ಹೊತ್ತು ವಿಶ್ರಮಿಸುತ್ತಾರೆ. ಹೊತ್ತು ಇಳಿಯುತ್ತಿದ್ದಂತೆ ಕಾಫಿ ಕುಡಿದು ಮತ್ತೆ ಓದಲು ಕುಳಿತರೆ ರಾತ್ರಿ ಊಟಕ್ಕೇ ಏಳುವುದು. ನಂತರ ಸಣ್ಣ ವಾಕ್ ಮಾಡಿ ಮಲಗುತ್ತಾರೆ.

ಮೊದಲೆಲ್ಲ ಮಾಂಸಾಹಾರವನ್ನು ತುಂಬ ಇಷ್ಟಪಡುತ್ತಿದ್ದರು. ಈಗ ಅಗಿಯುವುದು ಕಷ್ಟ ಅಂತ ತಿನ್ನುವುದಿಲ್ಲ. ಅಮ್ಮ (ಪುಷ್ಪಾ) ತುಂಬ ಚೆನ್ನಾಗಿ ಅಡುಗೆ ಮಾಡುತ್ತಾರೆ. ಅವರ ಕೈ ರುಚಿಯನ್ನು ಚಪ್ಪರಿಸಿ ಸವಿಯುತ್ತಾರೆ. ಅಮ್ಮನ ಮಸಾಲೆ ದೋಸೆ ತುಂಬ ಫೇಮಸ್. ಸಿನಿಮಾ ರಂಗದಲ್ಲಿಯೂ ಅದರ ಸುವಾಸನೆ ಹಬ್ಬಿದೆ. ಅನೇಕರು ಅಮ್ಮನ ದೋಸೆ ಸವಿಯಲು ಬರುತ್ತಿದ್ದರು. ಊಟೋಪಚಾರದಲ್ಲಿ ಯಾವುದನ್ನೂ ಅಪ್ಪ ನಿರಾಕರಿಸುತ್ತಿರಲಿಲ್ಲ.

ಅಡುಗೆ ಮಾಡುವುದರಲ್ಲಿ ಅಪ್ಪ ಕಡಿಮೆ ಇಲ್ಲ. ಬದನೆಕಾಯಿ ಎಣ್ಣೆಗಾಯಿ ಮಾಡಿದರೆ ಒಂದು ಚಪಾತಿ ಹೆಚ್ಚು ತಿನ್ನಿಸುತ್ತದೆ. ವಿವಿಧ ತರಕಾರಿ ಹಾಕಿ ಸಾರು ಮಾಡುತ್ತಾರೆ. ಅಮ್ಮ ಮಾಡಿದ ಸಾಂಬಾರ್ ಪುಡಿಯನ್ನೇ ಹಾಕಿದರೂ ಅಮ್ಮನ ಸಾರಿಗಿಂತ ಬೇರೆಯದೇ ರುಚಿಯನ್ನು ಕೊಡುತ್ತಿದ್ದರು.

‘ಹೀರೊ ಆಗಿ ಪ್ರವೇಶ ಮಾಡಬೇಕಿತ್ತು’

ಚಿಕ್ಕವನಿದ್ದಾಗಲೇ ನಾನೂ ಡಾನ್ಸ್ ಕಲಿಯುತ್ತಿದ್ದೆ. ಅದೆಲ್ಲ ಅಪ್ಪನ ಪ್ರೋತ್ಸಾಹದ ಕುರುಹು. ಸಂಗೀತಕ್ಕೂ ಸೇರಿಸಿದರು. ನಾನೇನಾದಾರೂ ಸಿನಿಮಾ ಕ್ಷೇತ್ರಕ್ಕೆ ಬರ್ತೀನಿ ಅಂದರೆ, ಎಲ್ಲ ತಯಾರಿ ಮಾಡಿಕೊಂಡು ಬಾ ಎನ್ನುತ್ತಿದ್ದರು. ಅವರು ನಾನು ಓದಿ ಒಳ್ಳೆಯ ಉದ್ಯೋಗಕ್ಕೆ ಹೋಗಬೇಕು ಎಂದು ಆಸೆಪಟ್ಟಿದ್ದರು. ನಾನು ಸಂಗೀತ–ಭರತನಾಟ್ಯವನ್ನು ಅರ್ಧಕ್ಕೆ ಬಿಟ್ಟೆ. ಪಿಯುಸಿಯಲ್ಲಿ ಒಂದು ವಿಷಯದಲ್ಲಿ ಫೇಲ್ ಆಗಿದ್ದೆ. ಆ ಬಿಡುವಿನಲ್ಲಿ ‘ಚಂದಮಾಮ ಚಕ್ಕುಲಿಮಾಮ’ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಮನೆಯಲ್ಲಿ ಯಾರಿಗೂ ತಿಳಿಸದೆ ನಟಿಸಿದೆ. ಮೊದಲ ಕಂತಿನಲ್ಲಿ ನೋಡಿದಾಗ ಒಂದು ಮಾತು ಹೇಳಿದರು. ಅದು ಈಗಲೂ ನಿಜ ಎಂದೇ ಅನ್ನಿಸುತ್ತದೆ.

‘ಯಾವಾಗ ಮಾಡಿದೆ; ಇದನ್ನು ಯಾಕೆ ಮಾಡಿದೆ? ಚೆನ್ನಾಗಿಯೇ ಮಾಡಿದ್ದೀಯಾ. ಆದರೆ ಹೀರೊ ಆಗಿ ನಿನ್ನನ್ನು ಪ್ರವೇಶ ಮಾಡಿಸಬೇಕು ಎಂದುಕೊಂಡಿದ್ದೆ. ನಿನ್ನ ಭವಿಷ್ಯದ ವೃತ್ತಿಜೀವನಕ್ಕೆ ಇದರಿಂದ ತೊಂದರೆ ಆಗುತ್ತದೆ’ ಎಂದಿದ್ದರು. ಆಗದು ತಲೆಗೆ ಹೋಗಿರಲಿಲ್ಲ.

ನಿರೂಪಣೆ: ರಾಘವೇಂದ್ರ ಕೆ. ತೊಗರ್ಸಿ

ಪ್ರಶಂಸಿಸುವುದರಲ್ಲಿ ಮುಂದು

ಅಪ್ಪ ಜನಿಸಿದ್ದು ಚಿಕ್ಕಬಳ್ಳಾಪುರ ಸಮೀಪದ ಜಡಲತಿಮ್ಮನಹಳ್ಳಿಯಲ್ಲಿ. ಬಾಲ್ಯದಿಂದಲೂ ಅವರಿಗೆ ನಾಟಕದ ಗೀಳು. ಅವರ ನಾಟಕ ನೋಡಿ ನಿರ್ದೇಶಕ ಸಿದ್ದಲಿಂಗಯ್ಯನವರು ‘ಹೇಮಾವತಿ’ ಸಿನಿಮಾದಲ್ಲಿ ಅವಕಾಶ ನೀಡಿದರು. ಅದೇ ಅವರ ಮೊದಲ ಸಿನಿಮಾ. ಯಾವುದೇ ಸಿನಿಮಾ–ನಾಟಕ ನೋಡಿದರೂ ಮನೋಜ್ಞವಾಗಿ ನಟಿಸಿದವರನ್ನು ಮುಕ್ತವಾಗಿ ಪ್ರಶಂಸಿಸುತ್ತಾರೆ. ಅವರಿಗೆ ಫೋನ್ ಮಾಡಿ ಮೆಚ್ಚುಗೆ ಸೂಚಿಸುತ್ತಾರೆ. ನನ್ನ ತಂದೆ ಮನೆ–ತೆರೆಯಲ್ಲೂ ಹೀರೊ. ಕಲೆಯನ್ನು ಪೂಜನೀಯ ಭಾವದಿಂದ ಪ್ರೀತಿಸುವ ಅವರು ಅದರ ಅಮೃತವನ್ನು ನನಗೂ ಧಾರೆ ಎರೆದಿದ್ದಾರೆ. ತಮ್ಮ ಕಲಾ ಜೀವನಕ್ಕೆ 50 ವರ್ಷ. ಅವರಿಗೀಗ 75ರ ಪ್ರಾಯ. ವೃತ್ತಿ ಬದುಕಿನಷ್ಟೇ ವೈಯಕ್ತಿಕ ಬದುಕಿನಲ್ಲೂ ಸೊಗಸನ್ನು ತುಂಬಿದ್ದಾರೆ. 75ನೇ ಹುಟ್ಟುಹಬ್ಬ ರಂಗಭೂಮಿಯಲ್ಲೇ ನರವೇರಬೇಕು ಎನ್ನುವ ಅವರ ಅದಮ್ಯ ಅಭಿಲಾಷೆಯಂತೆ ಎರಡು ನಾಟಕಗಳನ್ನು ಆಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.