–ಕಾವ್ಯಾ ಶಾಸ್ತ್ರಿ, ನಟಿ, ಬಿಗ್‌ಬಾಸ್ 4ನೇ ಆವೃತ್ತಿಯ ಸ್ಪರ್ಧಿ
ಈಗಿನ ಯಾವುದೇ ರಿಯಾಲಿಟಿ ಶೋ ಇರಲಿ, ಅದು ಕಥೆಯೊಂದನ್ನು ಹುಡುಕುತ್ತದೆ. ಸ್ಪರ್ಧಿಯ ಅಸಹಾಯಕತೆಯನ್ನೇ ಬಂಡವಾಳವಾಗಿಸಿಕೊಳ್ಳುತ್ತದೆ. ಅಪ್ಪಟ ಪ್ರತಿಭೆ ಬೆಳಕಿಗೆ ಬರುವುದು ಇತ್ತೀಚೆಗೆ ಕಡಿಮೆಯಾಗುತ್ತಿದೆ. ಒಂದು ಉತ್ಪನ್ನ ಮಾರಾಟ ಮಾಡಬೇಕೆಂದರೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಉತ್ಪಾದಿಸುವುದು ಅನಿವಾರ್ಯ. ಅದೇ ರೀತಿ ವೀಕ್ಷಕ ವಲಯ ಬಯಸೋದನ್ನೇ ಶೋಗಳು ನೀಡುತ್ತಿವೆ. ಪರಿಣಾಮ ಕಂಟೆಂಟ್ ಕಡಿಮೆ; ಮಸಾಲ ಜಾಸ್ತಿ ಆಗುತ್ತಿದೆ. ಮೊದಲು ನಾವು ನಮ್ಮ ಜವಾಬ್ದಾರಿಯನ್ನು ಮೆರೆಯಬೇಕು. ಯಾವುದನ್ನು ಮಕ್ಕಳ ಜತೆ ಕೂತು ನೋಡುತ್ತಿದ್ದೇವೆ, ಅದು ಮಕ್ಕಳ ಮೇಲೆ ಬೀರುವ ಪರಿಣಾಮ ಏನು? ಅನ್ನುವುದರ ಅರಿವಿರಬೇಕು. ಈ ಕಾರಣಕ್ಕೇ ಈಚೆಗೆ ‘ಮಕ್ಕಳೊಂದಿಗೆ ಬಿಗ್ ಬಾಸ್ ನೋಡಬೇಡಿ’ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ವಯಸ್ಸಿನ ಮಿತಿ ಎನ್ನುವುದು ಪ್ರತಿ ಶೋಗೂ ಇರುತ್ತದೆ. ಟಿ.ವಿ.ಗಳಲ್ಲಿ ಹಾಗಲ್ಲ. ಯಾರು ಬೇಕಾದರೂ ನೋಡಬಹುದು. ಹಾಗಾಗಿ, ಪೋಷಕರಾದ ನಾವು ಮಕ್ಕಳ ಬೆಳವಣಿಗೆಗೆ, ನನ್ನ ಮನೆಯ ಸ್ವಾಸ್ಥ್ಯಕ್ಕೆ ಯಾವುದು ಮುಖ್ಯ, ಯಾವುದು ಅಲ್ಲ ಎನ್ನುವುದನ್ನು ನಿರ್ಧರಿಸಬೇಕು. ಈಗೀಗ ‘ಎನಿ ಪಬ್ಲಿಸಿಟಿ ಈಸ್ ಗುಡ್ ಪಬ್ಲಿಸಿಟಿ’ ಎನ್ನುವ ಭಾವನೆ ಅನೇಕರಲ್ಲಿ ಅವಿತಿದೆ. ಸಕಾರಾತ್ಮಕ ಅಂಶಗಳಿಂದಲೇ ಪ್ರಚಾರ ಸಿಗಬೇಕೆಂದೇನೂ ಇಲ್ಲ. ಒಟ್ಟಿನಲ್ಲಿ ಪ್ರಚಾರ ಸಿಕ್ಕರೆ ಸಾಕು ಎನ್ನುವ ಭಾವ ಬಹುತೇಕರದ್ದು. ಈ ಕಾರಣಕ್ಕೇ ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್ ಪದ ಬಳಕೆ, ಪರಸ್ಪರ ಬೈದುಕೊಳ್ಳುವುದು, ಹೊಡೆದಾಡಿಕೊಳ್ಳುವುದು ಹೆಚ್ಚಾಗುತ್ತಿದೆ.–ಕಾವ್ಯಾ ಶಾಸ್ತ್ರಿ, ನಟಿ, ಬಿಗ್‌ಬಾಸ್ 4ನೇ ಆವೃತ್ತಿಯ ಸ್ಪರ್ಧಿ
ವಿಜಯ್ ರಾಘವೇಂದ್ರ
ಟಿ.ವಿ ಶೋ, ಒಟಿಟಿಯಲ್ಲಿನ ವೆಬ್ ಸರಣಿಗಳಿಗೆ ಸೆನ್ಸಾರ್ ಇಲ್ಲ. ಆದರೆ ಸಿನಿಮಾಗಳಿಗೆ ಮಾತ್ರ ಸೆನ್ಸಾರ್ ಇದೆ. ಹಲವು ವಿಷಯ– ವಸ್ತುಗಳನ್ನು ತೋರಿಸದಿರುವುದರ ನಡುವೆ ನಾವು ಸಿನಿಮಾ ಮಾಡಬೇಕು. ಟಿ.ವಿ. ಶೋಗಳಿಗೆ ಇದಾವುದರ ಕಟ್ಟುಪಾಡು ಇಲ್ಲ. ಕಟ್ಟುಪಾಡುಗಳು ಇರುವುದರಿಂದಲೇ ಸಿನಿಮಾಗಳು ಮೌಲ್ಯಗಳನ್ನು ಉಳಿಸಿಕೊಂಡಿವೆ. ಬದಲಾವಣೆ ಎಲ್ಲ ಕ್ಷೇತ್ರಗಳಲ್ಲೂ ಆಗುತ್ತಿದೆ. ಈಗಿನ ವೀಕ್ಷಕ ಬಯಸಿದ್ದನ್ನು ಟಿ.ವಿ. ಶೋಗಳು ನೀಡುತ್ತಿವೆ. ನೋಡುಗರಾದ ನಾವು ನಮ್ಮ ಪ್ರಜ್ಞೆ ಮರೆಯಬಾರದು. ಇಂಥದ್ದು ಬೇಕು, ಬೇಡ ಎನ್ನುವುದು ಆಯಾ ವ್ಯಕ್ತಿಯ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಆ ಮನಃಸ್ಥಿತಿ ಬಯಸೋದನ್ನೇ ಪುಟ್ಟ ಪರದೆ ತೋರಿಸುತ್ತದೆ ಅಷ್ಟೇ. ನಾನು ಸ್ಪರ್ಧಿಸಿದ ‘ಬಿಗ್ ಬಾಸ್’ ಮೊದಲ ಸರಣಿಗೂ ಈಗಿನದ್ದಕ್ಕೂ ಬಹಳ ವ್ಯತ್ಯಾಸವಿದೆ. ಹಾಗೆಯೇ ಆಗಿನ ವೀಕ್ಷಕ ವಲಯಕ್ಕೂ ಈಗಿನದ್ದಕ್ಕೂ ತುಂಬಾ ಭಿನ್ನತೆ ಇದೆ. ಮನೋರಂಜನೆ ಈಗ ದೊಡ್ಡ ಪರದೆಯಿಂದ ಅಂಗೈಗೆ ಬಂದು ಕುಳಿತಿದೆ. ಆ ಅಂಗೈ ಈಗ ಕಂಟೆಟ್ ಕ್ರಿಯೇಟ್ ಮಾಡುತ್ತದೆ. ಅದರಲ್ಲಿ ಉತ್ತಮ ಅಂಶಗಳೂ ಇವೆ. ಕೆಟ್ಟ ಅಂಶಗಳು ಇರುತ್ತವೆ. ಯಾವುದನ್ನು ಆಯ್ದುಕೊಳ್ಳಬೇಕು ಎಂದು ನಾವು ನಿರ್ಧರಿಸಬೇಕು. ಇರೋದನ್ನು ಇದ್ದ ಹಾಗೇ ಹೇಳುವ ಮನಃಸ್ಥಿತಿ ಎಷ್ಟು ಬೇಗ ಶುರುವಾಗುತ್ತೋ ಅಷ್ಟು ಬೇಗ ಎಲ್ಲರೂ ಸುಧಾರಿಸುತ್ತಾರೆ.–ವಿಜಯ್ ರಾಘವೇಂದ್ರ, ನಟ, ರಿಯಾಲಿಟಿ ಶೋ ತೀರ್ಪುಗಾರ
ಮಂಜುನಾಥ್ ಎಲ್. ಬಡಿಗೇರ್
ಜನರ ಭಾವನೆಗಳನ್ನು ರಿಯಾಲಿಟಿ ಶೋಗಳು ಬಂಡವಾಳವನ್ನಾಗಿಸಿಕೊಂಡಿವೆ. ಸೋತ ಸ್ಪರ್ಧಿಗಳು ಖಿನ್ನತೆಗೆ ಒಳಗಾಗುವುದು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಮ್ಮ ಎದುರಿಗಿವೆ. ಇದರ ಬೆನ್ನಲ್ಲೇ ಶೋಗಳಲ್ಲಿ ಎಲೆಮರೆ ಕಾಯಿಯಂತಿದ್ದ ಸ್ಪರ್ಧಿಗಳಿಗೆ ದೊಡ್ಡ ವೇದಿಕೆಯನ್ನೂ ಒದಗಿಸುತ್ತಿವೆ, ಅವರ ಬದುಕಿಗೆ ದಾರಿ ತೋರಿಸುತ್ತಿವೆ ಎನ್ನುವುದೂ ಸತ್ಯ. ಇಂತಹದ್ದರ ನಡುವೆ ಇದನ್ನು ಬಿಡಬೇಕೋ, ಬೇಡವೋ ಎನ್ನುವ ಜಿಜ್ಞಾಸೆ ಶುರುವಾಗುತ್ತದೆ. ಈಗ ಪ್ರತಿಭೆಗಿಂತ ಪ್ರಚಾರ ಮುಖ್ಯ. ಆ ಪ್ರಚಾರಕ್ಕೆ ಎಲ್ಲರೂ ಹಪಹಪಿಸುತ್ತಿದ್ದಾರೆ. ಮಾಡಿದ್ದು ಸಣ್ಣದೇ ಆದರೂ ಪ್ರಚಾರ ದೊಡ್ಡದಾಗಿ ಕೊಡುತ್ತಾರೆ. ಸಮಾಜದ ಎಲ್ಲ ಬಗೆಯ, ಎಲ್ಲ ವಯೋಮಾನದ ವೀಕ್ಷಕರನ್ನೂ ಸೆಳೆಯುವ ಅನಿವಾರ್ಯ ಟಿ.ವಿ. ಶೋಗಳದ್ದು. ಹಾಡಿನ ರಿಯಾಲಿಟಿ ಶೋನಲ್ಲಿ ಈಗ ಸ್ಪರ್ಧಿಯ ಹಿನ್ನೆಲೆ ಮುಖ್ಯವಾದರೂ ಅಳಿವಿನ ಅಂಚಿನಲ್ಲಿರುವ ಜೋಗಿ ಪದಗಳು, ಗೀಗಿ ಪದಗಳಿಗೂ ಇಲ್ಲಿ ವೇದಿಕೆ ಒದಗಿಸಲಾಗುತ್ತಿದೆ. ಮರೆಯಾಗುತ್ತಿರುವ ಜನಪದ ಕಲೆಯನ್ನು ಯುವ ಮನಸಿಗೆ ದಾಟಿಸುವ ಕಾರ್ಯವೂ ಇಲ್ಲಿ ನಡೆಯುತ್ತಿದೆ. ಇಂಥವು ಸಮಾಧಾನದ ಸಂಗತಿಗಳು. ‘ಡ್ರಾಮಾ ಜೂನಿಯರ್ಸ್’ ರಿಯಾಲಿಟಿ ಶೋ ಶುರುವಾದ ಬಳಿಕ ನಾಟಕ ತರಬೇತಿಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ‘ನಾಟಕ’ದಲ್ಲೂ ಭವಿಷ್ಯವಿದೆ ಎನ್ನುವುದು ಪೋಷಕರ ಅರಿವಿಗೆ ಬಂದಿದೆ. ಇದು ಸಹ ಆಶಾದಾಯಕ ಬೆಳವಣಿಗೆ.–ಮಂಜುನಾಥ್ ಎಲ್. ಬಡಿಗೇರ್, ರಂಗಕರ್ಮಿ, ‘ಡ್ರಾಮಾ ಜೂನಿಯರ್ಸ್’ ರಿಯಾಲಿಟಿ ಶೋ ಸ್ಪರ್ಧಿಗಳಿಗೆ ರಂಗ ತರಬೇತಿ ನೀಡುವವರು
ಪ್ರಶಾಂತ್ ನಾಯಕ್
ಜನರ ಅಭಿರುಚಿಗೆ ಕನೆಕ್ಟ್ ಆದಾಗ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ. ಅದೇ ರೀತಿ 10ನೇ ಆವೃತ್ತಿ ‘ಹ್ಯಾಪಿ ಬಿಗ್ ಬಾಸ್’ ಎನ್ನುವ ಥೀಮ್ ಅನ್ನು ಜನ ಸ್ವೀಕರಿಸಿದ್ದಾರೆ. ಈ ಬಾರಿ ಸೆಲೆಬ್ರಿಟಿಗಳಿಗಿಂತ ಭಿನ್ನ ವ್ಯಕ್ತಿತ್ವ ಹೊಂದಿರುವ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದು ಕೂಡ ದೊಡ್ಡ ಯಶಸ್ಸಿಗೆ ಕಾರಣವಾಗಿದೆ. ‘ಹುಲಿ ಉಗುರು’ ಧರಿಸುವುದು ತಪ್ಪು ಎಂಬ ಜಾಗೃತಿಯನ್ನು ಈ ಬಾರಿಯ ‘ಬಿಗ್ ಬಾಸ್’ ಮನೆ ಮೂಡಿಸಿದೆ.-ಪ್ರಶಾಂತ್ ನಾಯಕ್, ಬಿಸಿನೆಸ್ ಹೆಡ್ ಕಲರ್ಸ್ ಕನ್ನಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.