ಶ್ ... ಈ ಕಾಡಿಗೆ ಮೆಲ್ಲಗೆ ಬನ್ನಿ. ಇಲ್ಲಿ ನಿಸರ್ಗವನ್ನು ಐಸಿಯುನಲ್ಲಿ ಇಡಲಾಗಿದೆ. ಇಲ್ಲಿ ಗಿಡಮರಗಳ ಉಸಿರಾಟ, ನಾಡಿ ಮಿಡಿತ, ಟೆಂಪರೇಚರ್, ಬಿ.ಪಿ., ಇಸಿಜಿ, ಎಕ್ಸ್ರೇ, ಬ್ರೇನ್ ಸ್ಕ್ಯಾನಿಂಗ್ ಎಲ್ಲ ನಡೆಯುತ್ತಿದೆ. ಚಿಂತಿಸಬೇಡಿ. ನಿಸರ್ಗಕ್ಕೆ ಇಲ್ಲಿ ಅಂಥ ಅಪಾಯವೇನೂ ಬಂದಿಲ್ಲ. ಆರೋಗ್ಯ ಚೆನ್ನಾಗಿಯೇ ಇದೆ. ಆದರೂ ತಪಾಸಣೆ ನಡೆಯುತ್ತಿದೆ. ದೇಶದ ಬೇರೆ ಎಲ್ಲೂ ಕಾಣದಷ್ಟು ವೈವಿಧ್ಯಮಯ ಪ್ರಯೋಗ/ಪರೀಕ್ಷೆಗಳು ಏಕಕಾಲಕ್ಕೆ ಇಲ್ಲಿ ನಡೆಯುತ್ತಿವೆ. ಗೊತ್ತಿದೆ ತಾನೆ, ಬಿಸಿ ಪ್ರಳಯದ ಬಾಗಿಲಲ್ಲಿದ್ದೇವೆ. ಜೀವಲೋಕ ಹೈರಾಣಾಗುತ್ತಿದೆ. ನಮ್ಮನ್ನು ರಕ್ಷಿಸಬೇಕಾದ ಪ್ರಕೃತಿ ತಾನೇ ಸಂಕಷ್ಟಗಳನ್ನು ಎದುರಿಸುತ್ತಿದೆ. ಅದೇನೇನು ಸಂಕಟ, ನೋಡಬೇಕೇ? ಹುಷಾರಾಗಿ ಹೆಜ್ಜೆ ಇಡಿ. ನಿಮ್ಮ ಚಲನವಲನ ಆ ಎತ್ತರದ ಕ್ಯಾಮೆರಾದಲ್ಲಿ ದಾಖಲಾಗುತ್ತಿದೆ.

ಇದು ಗುಡ್ಡೇಕೋಟೆ ಕಾಡು. ಈ ಇಡೀ ಕಾನನವೇ ನಿಸರ್ಗ ವಿಜ್ಞಾನಿ ಬಾಲಚಂದ್ರ ಸಾಯಿಮನೆಯವರ ಪ್ರಯೋಗಶಾಲೆ. ಒಂದರ್ಥದಲ್ಲಿ ಡಯಾಗ್ನೋಸ್ಟಿಕ್ ಲ್ಯಾಬ್ ಅನ್ನಿ. ದೇಶ ವಿದೇಶಗಳ ವಿಜ್ಞಾನ ಸಂಸ್ಥೆಗಳಿಗೆಂದು ಇವರು ಇಲ್ಲಿ ಡೇಟಾ ಸಂಗ್ರಹ ಮಾಡುತ್ತಿದ್ದಾರೆ. ಉದಾಹರಣೆಗೆ ಮೊನ್ನೆ ಏಪ್ರಿಲ್‌ನಲ್ಲಿ ಜರ್ಮನಿಯಿಂದ ಒಂದಿಷ್ಟು ಎಲೆಕ್ಟ್ರಾನಿಕ್ ತಾಯತಗಳು ಬಂದಿವೆ. ಅವುಗಳನ್ನು ಇಲ್ಲಿನ ಧೂಪದ ಮರಕ್ಕೆ ಬಾಲಚಂದ್ರ (ಅವರನ್ನು ಬಾಲು ಅನ್ನೋಣ) ಜೋಡಿಸಿದ್ದಾರೆ. ಸೆಕೆ ಹೆಚ್ಚುತ್ತ ಹೋದರೆ ಈ ಮರ ಏನೇನು ಮಾಡುತ್ತದೆ ಎಂಬುದನ್ನು ಈ ಪುಟ್ಟ ಯಂತ್ರ ಅಳೆಯುತ್ತದೆ. ಬೆಳಿಗ್ಗೆ 11ರವರೆಗೆ ಮರ ಸುಮ್ಮನೆ ನಿಂತಿತ್ತು. ಬಿಸಿಲೇರುತ್ತ ತಾಪಮಾನ 33 ಡಿಗ್ರಿ ದಾಟಿದ ತಕ್ಷಣ ಆ ಮರ ನಿಂತಲ್ಲೇ ಬೆವರತೊಡಗಿದೆ. ಅಂದರೆ ಅದು ತನ್ನ ಎಲೆಗಳ ಮೂಲಕ ನೀರಾವಿಯನ್ನು ಹೊರಕ್ಕೆ ಸೂಸುತ್ತಿದೆ. ಮರ ತುಸು ತಂಪಾಗುತ್ತದೆ. ಸೆಕೆ ಹೆಚ್ಚಾದಷ್ಟೂ ಎಲೆಗಳ ಬೆವತ, ಅಂದರೆ ಭಾಷ್ಪ ವಿಸರ್ಜನೆ ಹೆಚ್ಚುತ್ತದೆ. ಹಾಗೆ ಬೆವರು ಸೂಸುತ್ತ ಮರ ತನ್ನ ಕೊಂಬೆರೆಂಬೆಗಳ ಉಷ್ಣತೆಯನ್ನು ತಗ್ಗಿಸಿ, ಒಂದೇ ಮಟ್ಟದಲ್ಲಿಟ್ಟುಕೊಳ್ಳುತ್ತದೆ.

ಈ ಕಾನನದ ಅನೇಕ ಮರಗಳಿಗೆ ಇಂಥದ್ದೇ ತಾಯತಗಳನ್ನು ಜೋಡಿಸಲಾಗಿದೆ. ಎಷ್ಟು ವಯಸ್ಸಿನ, ಎಷ್ಟೆತ್ತರದ, ಯಾವ ಜಾತಿಯ ಮರ ಅಲ್ಲಿನ ವಾತಾವರಣದ ಸೆಕೆಗೆ ಹೇಗೆ ಸ್ಪಂದಿಸುತ್ತದೆ ಎಂಬ ಮಾಹಿತಿಗಳೆಲ್ಲ ಬಾಲು ಅವರ ಕಂಪ್ಯೂಟರಿನಲ್ಲಿ ದಾಖಲಾಗುತ್ತವೆ. ಆ ಡೇಟಾ ಎಲ್ಲ ಪುಣೆಯ ಐಸೆರ್ ಸಂಸ್ಥೆಗೆ ಹೋಗುತ್ತದೆ. ಬ್ರಿಟನ್ನಿನ ಲೀಡ್ಸ್ ವಿಶ್ವವಿದ್ಯಾಲಯ ಈ ಅಧ್ಯಯನಕ್ಕೆ ಮಾರ್ಗದರ್ಶನ ಮಾಡುತ್ತಿದೆ. ಭಾರತದ ನೆಲದಲ್ಲಿ ಇದು ಹೊಸ ಪ್ರಯೋಗ.

ಪಶ್ಚಿಮಘಟ್ಟದ ಒಡಲಲ್ಲಿರುವ ಈ ಗುಡ್ಡೆಕೋಟೆ ಕಾನು ಶಿರಸಿಯ ಬಳಿಯ ಅಳಲೇಬೈಲ್ ಪಂಚಾಯ್ತಿಗೆ ಸೇರಿದೆ. ದಟ್ಟ ಗಿಡಮರ, ಗುಡ್ಡದ ಇಳಿಜಾರು, ಪಕ್ಕದಲ್ಲಿ ಹುಲ್ಲಿನ ಬೇಣ, ಕೆಳಕ್ಕೆ ಕಣಿವೆ. ಹಗಲೂ ರಾತ್ರಿ ಜೀವಿಗಳ ಕಲರವ. ಮಳೆಗಾಲದಲ್ಲಿ ಭಾರೀ ಮಳೆ, ಬೇಸಿಗೆಯಲ್ಲಿ ರಣ ಬಿಸಿಲು. ನೆಲ ಮಾತ್ರ ಬಿರುಬಿಸಿಲಲ್ಲೂ ತಂಪು. ಅಂತೂ ಪಶ್ಚಿಮಘಟ್ಟದ ಪಕ್ಕಾ ಪ್ರತಿನಿಧಿ ಈ ಗುಡ್ಡೆಕೋಟೆ. ಅದಕ್ಕೇ ಇದು ಜಾಗತಿಕ ಮಟ್ಟದ ಇಂಥ ಅನೇಕ ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಂಡಿದೆ. ಇಲ್ಲಿನ ಮರ-ಗಿಡ, ಮಣ್ಣು-ಕಲ್ಲು, ಕಣಿವೆ-ದಿಬ್ಬ, ಪ್ರಾಣಿ-ಪಕ್ಷಿ, ಕೀಟ, ಸರೀಸೃಪ ಎಲ್ಲವೂ ನಾನಾ ಬಗೆಯ ನಿಸರ್ಗ ಕಥನವನ್ನು ವಿಜ್ಞಾನ ಲೋಕಕ್ಕೆ ದಿನದಿನವೂ ರವಾನಿಸುತ್ತಿವೆ.

ಇಲ್ಲಿ ಏನೇನು ಪ್ರಯೋಗಗಳು ನಡೆಯುತ್ತಿವೆ ಎಂಬುದರ ಇನ್ನಷ್ಟು ಉದಾಹರಣೆ ಬೇಕೆ? ಮರಗಳು ಇಂಗಾಲದ ಡೈಆಕ್ಸೈಡನ್ನು ಹೀರಿಕೊಳ್ಳುತ್ತವೆ ಎಂಬುದು ನಮಗೆ ಗೊತ್ತಿದೆ. ಆದರೆ ಯಾವ ಮರ ಎಷ್ಟನ್ನು ಹೀರಿಕೊಳ್ಳುತ್ತದೆ? ಇಲ್ಲಿ ಆ ಪರೀಕ್ಷೆ ನಡೆಯುತ್ತಿದೆ. ಯಾವ ಮರ ಇಂಗಾಲವನ್ನು ಎಲ್ಲೆಲ್ಲಿಂದ ಹೇಗೆ ಹೀರಿಕೊಳ್ಳುತ್ತದೆ; ಎಷ್ಟನ್ನು ತಾನು ಇಟ್ಟುಕೊಂಡು ಇನ್ನೆಷ್ಟನ್ನು ತರಗೆಲೆ, ರೆಂಬೆ ತೊಗಟೆಗಳ ಮೂಲಕ ಮಣ್ಣಿಗೆ ಸೇರಿಸುತ್ತವೆ ಎಂಬುದನ್ನು ಅಳೆದು ನೋಡುವ ಸಲಕರಣೆ ಕೂಡ ಇಲ್ಲಿದೆ. ಬೆಂಗಳೂರಿನ ಎನ್‌ಸಿಬಿಎಸ್ ಸಂಸ್ಥೆಯ ಪರವಾಗಿ ಈ ಅಧ್ಯಯನ ಇಲ್ಲಿ ನಡೆಯುತ್ತಿದೆ. ಅಲ್ಲಲ್ಲಿ ಗುಡ್ಡದ ಮೇಲೆ, ಬೆಟ್ಟದ ಚೌಕದಲ್ಲಿ, ತಗ್ಗಿನ ಒದ್ದೆಗದ್ದೆಯಲ್ಲಿ ಒಂದೂವರೆ ಮೀಟರ್ ಆಳದಲ್ಲಿ ಥರ್ಮಾಮೀಟರ್‌ಗಳನ್ನು ಹೂತಿಡಲಾಗಿದೆ. ಋತುಮಾನ ಬದಲಾದ ಹಾಗೆ ಮಣ್ಣಿನ ತಾಪಮಾನ ಹೇಗೆ ಬದಲಾಗುತ್ತಿದೆ ಎಂಬುದರ ಡೇಟಾ ಇಲ್ಲಿ ನಿರಂತರ ಸಂಗ್ರಹವಾಗುತ್ತಿದೆ.

ಕಾಡಿನ ನಡುವಣ ಕಣಿವೆಯ ಕೊಳ್ಳದಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿವೆ. ದಟ್ಟ ಮಳೆ ಸುರಿಯುತ್ತಿದ್ದಾಗ ಇಲ್ಲಿ ನೀರು ಎಷ್ಟು ಪ್ರಮಾಣದಲ್ಲಿ ನೆಲಕ್ಕೆ ಇಂಗುತ್ತಿದೆ, ಎಷ್ಟು ಹೊತ್ತಿನ ನಂತರ ಹಳ್ಳದಲ್ಲಿ ನೀರು ಹರಿಯತೊಡಗುತ್ತದೆ, ಮಣ್ಣು ಎಷ್ಟು ಪ್ರಮಾಣದಲ್ಲಿ ಹಳ್ಳಕ್ಕೆ ಹೋಗುತ್ತದೆ ಇವೆಲ್ಲ ಡೇಟಾ ಇಲ್ಲಿ ಸಿಗುತ್ತವೆ. ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾದಾಗ ಅಥವಾ ಕಡಿಮೆ ಆದಾಗ ಬೆನ್ನುಮೂಳೆ ಇಲ್ಲದ ಯಾವ ಯಾವ ಜೀವಜಂತುಗಳ (ಬಸವನಹುಳು, ಇಂಬಳ, ಎರೆಹುಳ, ಜಲಜೇಡ, ಕಾಯಡಿಕೆ ಚೇಳು ಇಂಥ ಎಲ್ಲವುಗಳ) ಚಟುವಟಿಕೆ ಹೇಗೆ ಹೆಚ್ಚು ಕಮ್ಮಿ ಆಗುತ್ತದೆ ಅಥವಾ ಆಗುವುದಿಲ್ಲ ಎಂಬುದರ ಸಮೀಕ್ಷೆ ಇಲ್ಲಿ ನಡೆಯುತ್ತದೆ. ಮಳೆಗಾಲ, ಚಳಿಗಾಲಗಳಲ್ಲಿ ಈ ಕಾಡಿನ ಗೌಜುಗದ್ದಲ ಹೇಗೆ ಏರಿಳಿಯುತ್ತದೆ ಎಂಬ ಸಮೀಕ್ಷೆ ಕೂಡ ಇದೇ ಗುಡ್ಡೆಕೋಟೆಯ ಕಾಡಿನಲ್ಲಿ ನಡೆಯಲಿದೆ. ‘ಬಾವಲಿಗಳ ಬಗ್ಗೆ ಇಲ್ಲಿ ಅಧ್ಯಯನಕ್ಕೆ ಬರಬಹುದಾ?’ ಎಂದೊಬ್ಬ ಹಿರಿಯ ವಿಜ್ಞಾನಿ ಈಚೆಗೆ ಬಾಲು ಅವರ ಸಲಹೆಯನ್ನು ಕೇಳಿದ್ದಾರೆ. ಅಂತೂ ಇಲ್ಲಿ ಇನ್ನಷ್ಟು ಹೊಸ ಹೊಸ ಪ್ರಯೋಗಗಳು ಆರಂಭವಾಗಲಿವೆ.

ಎಲ್ಲಕ್ಕಿಂತ ವಿಶೇಷ ಏನೆಂದರೆ, ಇಲ್ಲಿನ ಗುಡ್ಡದ ಮೇಲಿನ ಟವರ್ ತುದಿಯಲ್ಲಿ ಒಂದು ಕ್ಯಾಮೆರಾ ಇದೆ. ಅದು ಇಡೀ ಕಾಡಿನ ನೆತ್ತಿಯ ಮೇಲೆ ಸತತ ಕಣ್ಣಿಟ್ಟಿದೆ. ವರ್ಷದುದ್ದಕ್ಕೂ ಎಲೆಗಳ ಬಣ್ಣ, ವಿಸ್ತೀರ್ಣ ಹೇಗೆ ಬದಲಾಗುತ್ತಿದೆ, ಭಾಷ್ಪ ಮತ್ತು ಪರಾಗ ವಿಸರ್ಜನೆಯ ಪ್ರಮಾಣ ಹೇಗೆ ಏರಿಳಿತವಾಗುತ್ತದೆ ಎಲ್ಲವನ್ನೂ ಅದು ದಾಖಲಿಸುತ್ತಿರುತ್ತದೆ. ಮೋಡಗಳ ಜೊತೆ ಕಾಡಿನ ಮರಗಳು ಹೇಗೆ ಸಂಭಾಷಣೆ ನಡೆಸುತ್ತವೆ ಎಂಬುದರ ಚಿತ್ರಣ ವಿಜ್ಞಾನಿಗಳಿಗೆ ಸಿಗುತ್ತಿದೆ.

ಇಂಥ ಹಲವಾರು ಪ್ರಯೋಗಗಳು ಗುಡ್ಡೆ ತೋಟದ ತಪ್ಪಲಲ್ಲಿ ಇರುವ ಇವರ ಖಾಸಗಿ ತೋಟದಲ್ಲೇ ನಡೆಯುತ್ತಿವೆ. ತೋಟಕ್ಕೆ ಬರುವ ಕಾಡು ಪ್ರಾಣಗಳನ್ನು ಗುರುತಿಸಲು ನಿಶಾಚರ ಜೀವಿಗಳ ಫೋಟೊ ತೆಗೆಯುವ ಸೌಲಭ್ಯವೂ ಇಲ್ಲಿದೆ. ಹವಾಮಾನ ಬದಲಾವಣೆ ಆಗುತ್ತಿದ್ದಂತೆ ಸಸ್ಯಗಳ ಎಲೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎನ್ನುವ ಬಗ್ಗೆಯೂ ಅಧ್ಯಯನಗಳು ನಡೆಯುತ್ತಿವೆ. ನಿಸರ್ಗಕ್ಕೆ ಒಂದನಿತೂ ಹಾನಿಯಾಗದಂತೆ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.

ಇವನ್ನೆಲ್ಲ ನಿಭಾಯಿಸುವ ಬಾಲು ವಿಜ್ಞಾನಿಯ ಥರಾ ಕಾಣುವುದೇ ಇಲ್ಲ. ಲುಂಗಿಯನ್ನು ಮೇಲಕ್ಕೆತ್ತಿ ಕಟ್ಟಿ, ಪಕ್ಕಾ ಮಲೆನಾಡಿನ ರೈತನಂತೆ ಕೈಯಲ್ಲಿ ಅದೆಂಥದೊ ಗ್ಯಾಜೆಟ್ ಹಿಡಿದು ನಿರಾಳವಾಗಿ ಓಡಾಡುತ್ತಿರುತ್ತಾರೆ. ಇವರು ಏಳು ದೇಶಗಳ ಎಂಟು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದವರು. ಸದ್ಯಕ್ಕೆ ಜರ್ಮನಿಯ ಕ್ರಿಸ್ಪ್‌ವಾಲ್ಡ್ ವಿ.ವಿ. ಮತ್ತು ಕಠ್ಮಂಡುವಿನ ತ್ರಿಭುವನ್ ವಿ.ವಿ.ಯಲ್ಲಿ ಸಂದರ್ಶಕ ಉಪನ್ಯಾಸಕರಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ತಮ್ಮದೇ ಊರಿನ ಶಾಲಾ ಮಕ್ಕಳಿಗೆ ಪಾಠ ಹೇಳುತ್ತಾರೆ. ದೇಶ ವಿದೇಶಗಳಿಂದ ಅಧ್ಯಯನಕ್ಕೆ ಬರುವ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ.

ಭೌತವಿಜ್ಞಾನದಲ್ಲಿ ಪದವಿ ಪಡೆದು ಮೈಸೂರಿನಲ್ಲಿ ಯಂತ್ರೋಪಕರಣ ಉತ್ಪಾದನೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಬಾಲು ಹೇಗೋ ಡಾ. ಉಲ್ಲಾಸ ಕಾರಂತರ ಸಲಹೆಯ ಮೇರೆಗೆ ಕಾಡಿಗೆ ಪ್ರವೇಶಿಸಿದರು. ವನ್ಯಮೃಗಗಳ ಚಲನವಲನಗಳ ಅಧ್ಯಯನಕ್ಕೆಂದು ಮರಗಳಿಗೆ ಕ್ಯಾಮೆರಾ ಟ್ರ್ಯಾಪಿಂಗ್ ಸಲಕರಣೆಯನ್ನು ಜೋಡಿಸಲು ಹೋದ ಬಾಲು ಈಗ ಭೂಮಿಗೆ ಬಂದ ಜ್ವರವನ್ನು ಅಳೆಯಲೆಂದು ಮರಗಳ ಇಸಿಜಿ ನೋಡುತ್ತಿದ್ದಾರೆ. ಅವರು ಸಂಗ್ರಹಿಸುತ್ತಿರುವ ಮಾಹಿತಿಗಳು ವಿಜ್ಞಾನಿಗಳ ಜಾಗತಿಕ ವೇದಿಕೆಯಲ್ಲಿ ಬಳಕೆಯಾಗುತ್ತಿವೆ.

(ಬಾಲಚಂದ್ರ ಸಾಯಿಮನೆ ಅವರಿಗೆ ಈ ದಿನ ಶಿರಸಿಯಲ್ಲಿ ‘ಪಾವನಾ ಪರಿಸರ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲಾಗುತ್ತಿದೆ. ಅವರು ಚೀನಾ ಮತ್ತು ಫಿಲಿಪ್ಪೀನ್ಸ್ ದೇಶಗಳ ಕೃಷಿ ಪರಿಸರ ಕುರಿತು ಬರೆದ ‘ಬಿಂಗ್‌ಲಾಂಗ್ ಮತ್ತು ಲಂಬನಾಗ್’ ಹೆಸರಿನ ಕೃತಿಯೂ ಬಿಡುಗಡೆ ಆಗುತ್ತಿದೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.