ಭಾರತದ ಸರ್ಕಾರಿ ಸ್ವಾಮ್ಯದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೌರ ವಿದ್ಯುತ್ ಪೂರೈಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಅಮೆರಿಕದ ಬ್ಯಾಂಕ್ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಅದಾನಿ ಸಮೂಹದ ಅದಾನಿ ಗ್ರೀನ್ ಎನರ್ಜಿ ಲಿ. 2021–2024ರ ಮಧ್ಯೆ 300 ಕೋಟಿ ಡಾಲರ್ಗೂ (₹25 ಸಾವಿರ ಕೋಟಿಗೂ) ಹೆಚ್ಚು ಬಂಡವಾಳ ಸಂಗ್ರಹಿಸಲಾಗಿದ್ದು, ಇದರಲ್ಲಿ 25 ಕೋಟಿ ಡಾಲರ್ (₹2,100 ಕೋಟಿ) ಮೊತ್ತವನ್ನು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಅಥವಾ ನೀಡುವ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅಮೆರಿಕದ ಬ್ರೂಕ್ಲಿನ್ನಲ್ಲಿರುವ ನ್ಯೂಯಾರ್ಕ್ನ ಪೂರ್ವ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ಅವರ ಅಣ್ಣನ ಮಗ ಸಾಗರ್ ಅದಾನಿ ಹಾಗೂ ಇತರ ಆರು ಜನರ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಹೊರಿಸಲಾಗಿದೆ. ಪ್ರಕರಣದ ತನಿಖೆಗೆ ಅಡ್ಡಿಪಡಿಸಲಾಗಿದೆ ಎಂದೂ ದೂರಲಾಗಿದೆ. ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರ ಬಂಧನಕ್ಕೆ ವಾರಂಟ್ ಕೂಡ ಹೊರಡಿಸಲಾಗಿದೆ.

ಅದಾನಿ ಸಮೂಹ, ಅದರ ಭಾಗವಾಗಿರುವ ಗ್ರೀನ್ ಎನರ್ಜಿ ಕಂಪನಿ, ಅಮೆರಿಕದ ಷೇರುಪೇಟೆಯಲ್ಲಿ ನೋಂದಾಯಿಸಿದ್ದ ಭಾರತ ಮೂಲದ ಅಜ್ಯೂರ್ ಪವರ್ ಗ್ಲೋಬಲ್ ಲಿಮಿಟೆಡ್, ಈ ಕಂಪನಿಯ ದೊಡ್ಡ ಷೇರು ಪಾಲುದಾರನಾಗಿರುವ ಕೆನಡಾದ ಹೂಡಿಕೆದಾರ ಸಂಸ್ಥೆ ಈ ಪ್ರಕರಣದಲ್ಲಿ ಭಾಗಿಯಾಗಿವೆ ಎಂದು ಗ್ರ್ಯಾಂಡ್ ಜ್ಯೂರಿ ಹೇಳಿದೆ. ಈ ಯೋಜನೆಯನ್ನು ಅದು ‘ಭ್ರಷ್ಟ ಸೌರ ವಿದ್ಯುತ್ ಯೋಜನೆ’ ಎಂದು ಕರೆದಿದೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿರುವ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ

ಆರೋಪ ಪಟ್ಟಿಯಲ್ಲಿನ ಪ್ರಮುಖ ಅಂಶಗಳು

* ಸೌರ ವಿದ್ಯುತ್ ಪೂರೈಕೆ ಒಪ್ಪಂದದಿಂದ ಅದಾನಿ ಗ್ರೀನ್ ಎನರ್ಜಿ ಕಂಪನಿಗೆ 20 ವರ್ಷಗಳಲ್ಲಿ ₹16,800 ಕೋಟಿ (200 ಕೋಟಿ ಡಾಲರ್) ಲಾಭವಾಗಲಿದೆ ಎಂದು ಅಂದಾಜಿಸಲಾಗಿತ್ತು

* ಭಾರತೀಯ ಸೌರ ಶಕ್ತಿ ನಿಗಮವು 12 ಗಿಗಾ ವಾಟ್ ಸೌರ ಶಕ್ತಿಯನ್ನು ಖಾಸಗಿ ಕಂಪನಿಗಳಿಂದ ಖರೀದಿಸಿ, ರಾಜ್ಯಗಳಿಗೆ ಮಾರಾಟ ಮಾಡುವ ಯೋಜನೆ ಮಾಡಿಕೊಂಡಿತ್ತು. ಆದರೆ, ಖಾಸಗಿ ಕಂಪನಿಗಳು ಪ್ರತಿ ಯೂನಿಟ್ಗೆ ಹೆಚ್ಚಿನ ದರ ಪ್ರಸ್ತಾಪಿಸಿದ್ದರಿಂದ ಯಾವ ರಾಜ್ಯವೂ ಇದರ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಹೀಗಾಗಿ, ಖಾಸಗಿ ಕಂಪನಿಗಳೊಂದಿಗೆ ಖರೀದಿ ಒಪ್ಪಂದಕ್ಕೆ ನಿಗಮ ಮನಸ್ಸು ಮಾಡಲಿಲ್ಲ.

* 2020ರ ಹೊತ್ತಿಗೆ ಗೌತಮ್ ಅದಾನಿ, ಸಾಗರ್ ಅದಾನಿ, ವಿನೀತ್ ಜೈನ್, ರಂಜಿತ್ ಗುಪ್ತಾ ಹಾಗೂ ಎರಡನೇ ಪಿತೂರಿದಾರ ಸೇರಿ ರಾಜ್ಯಗಳ ವಿದ್ಯುತ್ ಸರಬರಾಜು ಕಂಪನಿಗಳು ಸೌರಶಕ್ತಿ ನಿಗಮದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಸರ್ಕಾರಿ ಅಧಿಕಾರಿಗಳಿಗೆ ಲಂಚದ ಆಮಿಷ ಒಡ್ಡುವ ಯೋಜನೆಯನ್ನು ರೂಪಿಸಿದರು. ಲಂಚದ ಒಟ್ಟು ಮೊತ್ತದಲ್ಲಿ ಸ್ವಲ್ಪ ಭಾಗವನ್ನು ಅಜ್ಯೂರ್ ಪವರ್ ಕಂಪನಿ ನೀಡಲು ಒಪ್ಪಿಕೊಂಡಿತು

* ಗೌತಮ್ ಅದಾನಿ ಸೇರಿದಂತೆ ಇತರ ಆರೋಪಿಗಳು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಒಟ್ಟು ₹2,029 ಕೋಟಿ ಲಂಚ ನೀಡುವ ಆಮಿಷ ಒಡ್ಡಿದ್ದರು

* ಲಂಚದ ಆಮಿಷ ಒಡ್ಡಿದ ನಂತರ ಒಡಿಶಾ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಛತ್ತೀಸಗಡ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ವಿದ್ಯುತ್ ಖರೀದಿಗಾಗಿ ಭಾರತೀಯ ಸೌರಶಕ್ತಿ ನಿಗಮದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದವು

* ಆಂಧ್ರ ಪ್ರದೇಶದ ವಿದ್ಯುತ್ ಸರಬರಾಜು ಕಂಪನಿಗಳೊಂದಿಗೆ 7000 ಮೆಗಾ ವಾಟ್ ಸೌರ ವಿದ್ಯುತ್ ಪೂರೈಕೆ ಒಪ್ಪಂದವನ್ನು ಕುದುರಿಸುವುದಕ್ಕಾಗಿ ಗೌತಮ್ ಅದಾನಿ ಅವರು ಮೂರು ಬಾರಿ (2021 ಆಗಸ್ಟ್ 7, ಸೆ.12 ಮತ್ತು ನ.20) ಖುದ್ದಾಗಿ ಆಂಧ್ರ ಪ್ರದೇಶದ ವಿದ್ಯುತ್ ಸರಬರಾಜು ಕಂಪನಿಗೆ ಸಂಬಂಧಿಸಿದ ಉನ್ನತ ಅಧಿಕಾರಿಯನ್ನು ಭೇಟಿ ಮಾಡಿದ್ದರು. ₹1,750 ಕೋಟಿಯನ್ನು ಲಂಚವಾಗಿ ನೀಡುವ ಭರವಸೆ ನೀಡಲಾಗಿತ್ತು

* ರಾಜ್ಯಗಳೊಂದಿಗೆ ಒಪ್ಪಂದ ಮಾಡಿಕೊಂಡ ಕಾರಣದಿಂದ ನಿಗಮವು ಅದಾನಿ ಗ್ರೀನ್ ಎನರ್ಜಿ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಅಮೆರಿಕದ ಅಜ್ಯೂರ್ ಪವರ್ ಕಂಪನಿಯೊಂದಿಗೆ ಖರೀದಿ ಒಪ್ಪಂದಕ್ಕೆ ಮುಂದಾಗಿತ್ತು. 2021ರ ಅಕ್ಟೋಬರ್ ಮತ್ತು 2022ರ ಫೆಬ್ರುವರಿ ನಡುವೆ ವಿದ್ಯುತ್ ಖರೀದಿ ಒಪ್ಪಂದ ನಡೆದಿತ್ತು

* ಆಂಧ್ರ ಪ್ರದೇಶವು ಸೌರಶಕ್ತಿ ನಿಗಮದೊಂದಿಗೆ 2021ರ ಡಿ.1ರಂದು 7000 ಮೆಗಾ ವಾಟ್ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಂಡಿತ್ತು

* ಛತ್ತೀಸಗಡ, ತಮಿಳುನಾಡು, ಒಡಿಶಾ ಮತ್ತು ಜಮ್ಮು ಕಾಶ್ಮೀರಕ್ಕೆ ಒಟ್ಟಾಗಿ 650 ಮೆಗಾ ವಾಟ್ ಮತ್ತು ಆಂಧ್ರಪ್ರದೇಶಕ್ಕೆ 2.3 ಗಿಗಾವಾಟ್ನಷ್ಟು ವಿದ್ಯುತ್ ಪೂರೈಸುವುದಕ್ಕಾಗಿ ಸೌರಶಕ್ತಿ ನಿಗಮ ಮತ್ತು ಅಜ್ಯೂರ್ ಪವರ್ ಕಂಪನಿಯೊಂದಿಗೆ ವಿದ್ಯುತ್ ಖರೀದಿ ಒಪ್ಪಂದ ನಡೆದಿತ್ತು. ಅದೇ ರೀತಿ ಅದಾನಿ ಗ್ರೀನ್ ಎನರ್ಜಿ ಮತ್ತು ಅದರ ಅಂಗ ಸಂಸ್ಥೆಗಳೂ ನಿಗಮದೊಂದಿಗೆ ಈ ರಾಜ್ಯಗಳಿಗೆ ವಿದ್ಯುತ್ ಪೂರೈಸುವ ಸಂಬಂಧ ಪ್ರತ್ಯೇಕ ಒಪ್ಪಂದ ಮಾಡಿಕೊಂಡಿದ್ದವು

* ಅಧಿಕಾರಿಗಳಿಗೆ ಭರವಸೆ ನೀಡಿದ್ದ ಲಂಚದ ವಿವರಗಳ ಮೇಲ್ವಿಚಾರಣೆ ನಡೆಸಲು ಸಾಗರ್ ಅದಾನಿ ಅವರು ತಮ್ಮ ಮೊಬೈಲ್ ಅನ್ನು ಬಳಸಿದ್ದರು

* 2023ರ ಮಾರ್ಚ್ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್ ಅದಾನಿ ಅವರ ಮೊಬೈಲ್ ಅನ್ನು ಎಫ್ಬಿಐ ಅಧಿಕಾರಿಗಳು ಜಪ್ತಿ ಮಾಡಿದ್ದರು. ವಿನೀತ್ ಜೈನ್ ಅವರು ಲಂಚದ ವಿವರಗಳುಳ್ಳ ದಾಖಲೆಯ ಫೋಟೊ ತೆಗೆಯಲು ತಮ್ಮ ಮೊಬೈಲ್ ಬಳಸಿದ್ದರು. ಲಂಚದ ವಿವರಗಳನ್ನು ವಿಶ್ಲೇಷಣೆಗೆ ಒಳಪಡಿಸಲು ರೂಪೇಶ್ ಅಗರ್ವಾಲ್ ಅವರು ಪವರ್ಪಾಯಿಂಟ್, ಎಕ್ಸೆಲ್ ದಾಖಲೆ ಸಿದ್ಧಪಡಿಸಿ ಹಂಚಿದ್ದರು

* ತನಿಖೆ ಆರಂಭವಾಗಿರುವುದು ತಿಳಿಯುತ್ತಿದ್ದಂತೆಯೇ ಸಿರಿಲ್ ಕ್ಯಾಬೆನ್ಸ್, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ, ರೂಪೇಶ್ ಅಗರ್ವಾಲ್ ಅವರು ತನಿಖೆಗೆ ಅಡ್ಡಿಪಡಿಸಿದ್ದರು

₹25 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಸಂಗ್ರಹ

ವಿವಿಧ ರಾಜ್ಯಗಳಿಗೆ ಸೌರವಿದ್ಯುತ್ ಪೂರೈಸುವುದಕ್ಕಾಗಿ ದೇಶದ ವಿವಿಧ ಕಡೆಗಳಲ್ಲಿ ಸೌರ ಘಟಕಗಳನ್ನು ನಿರ್ಮಾಣ ಮಾಡುವುದಕ್ಕಾಗಿ ಅದಾನಿ ಗ್ರೀನ್ ಎನರ್ಜಿಯು ಅಮೆರಿಕದಲ್ಲಿ ಬಂಡವಾಳ ಸಂಗ್ರಹ ಮಾಡಲು ಮುಂದಾಗಿತ್ತು.

2020ರಿಂದ 2024ರ ಅವಧಿಯಲ್ಲಿ ಒಟ್ಟಾರೆಯಾಗಿ ₹25 ಸಾವಿರ ಕೋಟಿಗೂ ಹೆಚ್ಚು (300 ಕೋಟಿ ಡಾಲರ್) ಬಂಡವಾಳವನ್ನು ಗುಂಪು ಸಾಲವಾಗಿ (ಸಿಂಡಿಕೇಟ್ ಲೋನ್), 144ಎ ಬಾಂಡ್ ವಿತರಣೆಯ ಮೂಲಕ ಅದು ಸಂಗ್ರಹಿಸಿದೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

2021ರಲ್ಲಿ ಅಮೆರಿಕದ ವಿವಿಧ ಕಂಪನಿಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ₹11,340 ಕೋಟಿಯನ್ನು (135 ಕೋಟಿ ಡಾಲರ್) ಸಾಲದ ರೂಪದಲ್ಲಿ ಸಂಗ್ರಹಿಸಿತ್ತು. ಅದೇ ವರ್ಷ 144ಎ ಬಾಂಡ್ ಮೂಲಕ 75 ಕೋಟಿ ಡಾಲರ್ ಸಂಗ್ರಹಿಸುವ ಗುರಿ ಹೊಂದಿತ್ತು. ಅಂತಿಮವಾಗಿ ನಾಲ್ಕನೇ ಒಂದರಷ್ಟು ₹1,571 ಕೋಟಿ (18.7 ಕೋಟಿ ಡಾಲರ್) ಸಂಗ್ರಹಿಸಲು ಯಶಸ್ವಿಯಾಗಿತ್ತು.

2023ರ ವರ್ಷಾಂತ್ಯದಲ್ಲಿ ಗುಂಪು ಸಾಲವಾಗಿ ಮತ್ತೆ ₹11,424 ಕೋಟಿ (136 ಕೋಟಿ ಡಾಲರ್) ಸಂಗ್ರಹಿಸಿತ್ತು. ಅದೇ ವರ್ಷ ಬಾಂಡ್ ಮೂಲಕ 75 ಕೋಟಿ ಡಾಲರ್ ಸಂಗ್ರಹಿಸುವ ಗುರಿ ಹೊಂದಿತ್ತಾದರೂ, ಆಗಲೂ ₹1,571 ಕೋಟಿ (18.7 ಕೋಟಿ ಡಾಲರ್) ಸಂಗ್ರಹವಾಗಿತ್ತಷ್ಟೆ ಎಂದು ಹೇಳಿದೆ.

ವಾರಂಟ್: ಮುಂದೇನು?

ಇಂಧನದಿಂದ ಬಂದರಿನವರೆಗೆ 20ಕ್ಕೂ ಹೆಚ್ಚು ಉದ್ದಿಮೆಗಳನ್ನು ನಡೆಸುತ್ತಿರುವ 62 ವರ್ಷದ ಗೌತಮ್ ಅದಾನಿ, ತಮ್ಮ ಜೀವನದಲ್ಲಿ ಹಲವು ಬಾರಿ ಸಂಕಷ್ಟ ಎದುರಿಸಿದ್ದಾರೆ. 1998ರ ಜನವರಿಯಲ್ಲಿ ಅವರನ್ನು ಹಣಕ್ಕಾಗಿ ಅಪಹರಿಸಲಾಗಿತ್ತು. 2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ, ಹೋಟೆಲ್ ಒಳಗೆ ಅದಾನಿಯೂ ಇದ್ದರು. ಎರಡೂ ಸಂದರ್ಭಗಳಲ್ಲಿ ಅದಾನಿ ಸುರಕ್ಷಿತವಾಗಿ ಪಾರಾಗಿದ್ದರು.

ಆದರೆ, ಈ ಬಾರಿ ಅವರ ವಿರುದ್ಧ ಕೇಳಿಬಂದಿರುವ ಆರೋಪ ಸಣ್ಣದೇನಲ್ಲ. ವಿದೇಶಿ ನ್ಯಾಯಾಲಯದಿಂದ ಭಾರತದ ದೊಡ್ಡ ಉದ್ಯಮಿಯೊಬ್ಬರ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವುದು ಇದೇ ಮೊದಲು. ಜಾಗತಿಕ ಮಟ್ಟದಲ್ಲಿ ಉದ್ಯಮ ವಿಸ್ತರಣೆಯ ಅವರ ಕನಸಿಗೆ ಇದರಿಂದ ತಕ್ಷಣಕ್ಕಂತೂ ಪೆಟ್ಟು ಬೀಳುವ ಸಾಧ್ಯತೆ ಇದೆ. ವಿಚಾರಣೆಯ ಭಯದಿಂದ ಅವರು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಪ್ರಯಾಣ ಬೆಳೆಸುವುದು ಕಷ್ಟವಾಗಬಹುದು. ವ್ಯಾವಹಾರಿಕ ಲಾಭ–ನಷ್ಟ ಒಂದೆಡೆ ಇದ್ದರೆ, ಮೂರೂವರೆ ದಶಕದಲ್ಲಿ ಅವರು ಗಳಿಸಿದ್ದ ಹೆಸರಿಗೆ, ವಿಶ್ವಾಸಾರ್ಹತೆಗೆ ಕಂಟಕ ಎದುರಾಗಿದೆ. ತಾವು ಈ ಪ್ರಕರಣದಲ್ಲಿ ತಪ್ಪಿತಸ್ಥರಲ್ಲ ಎಂದು ಸಾಬೀತುಪಡಿಸುವ ಸವಾಲು ಅವರ ಮುಂದಿದೆ. ಈ ದಿಸೆಯಲ್ಲಿ ಸಾಧ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಪರಿಶೀಲಿಸುತ್ತಿರುವುದಾಗಿ ಅದಾನಿ ಸಮೂಹ ತಿಳಿಸಿದೆ.

ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯದಿಂದ ಅಧಿಕೃತ ಲಿಖಿತ ಆರೋಪ ಪ್ರಕಟವಾಗಿದೆ. ಅದಾನಿ ಮತ್ತಿತರರ ಬಂಧನಕ್ಕೆ ಅಮೆರಿಕ ನ್ಯಾಯಾಲಯ ವಾರಂಟ್ ಹೊರಡಿಸಿರುವುದರಿಂದ, ಅದರ ಜಾರಿಗಾಗಿ ಭಾರತೀಯ ರಾಯಭಾರ ಕಚೇರಿಯ ಮೂಲಕ ಕೇಂದ್ರ ಸರ್ಕಾರವನ್ನು ಸಂಪರ್ಕಿಸಬೇಕಾಗುತ್ತದೆ. ಆರೋಪಗಳನ್ನು ರದ್ದುಪಡಿಸಲು ಅದಾನಿ ಸಮೂಹ ಮನವಿ ಮಾಡಬಹುದಾಗಿದೆ. ಒಂದು ವೇಳೆ ಪ್ರಕರಣ ಮುಂದುವರಿದರೆ, ಅಮೆರಿಕದ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ, ಸಾಕ್ಷ್ಯಾಧಾರ ಸಹಿತ ಗ್ರ್ಯಾಂಡ್ ಜ್ಯೂರಿಗೆ (ನ್ಯಾಯಾಧೀಶರ ಸಮಿತಿ) ವರದಿ ಸಲ್ಲಿಸುತ್ತಾರೆ. ನ್ಯಾಯಾಧೀಶರು ಆರೋಪ ನಿಗದಿ ಪಡಿಸುವುದಲ್ಲದೇ, ಆರೋಪಿಗಳಿಗೆ ಜಾಮೀನು ನೀಡಬೇಕೋ ಬೇಡವೋ ಎನ್ನುವುದನ್ನು ತೀರ್ಮಾನಿಸುತ್ತಾರೆ. ಆರೋಪಿಗಳ ತಪ್ಪೊಪ್ಪಿಗೆ ಅಥವಾ ತಪ್ಪು ನಿರಾಕರಣೆ ಆಧಾರದ ಮೇಲೆ ನ್ಯಾಯಾಲಯವು ವಿಚಾರಣಾ ಪ್ರಕ್ರಿಯೆ ನಡೆಸುತ್ತದೆ.

ಯಾರು ಈ ಸಾಗರ್ ಅದಾನಿ?

ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು 2015ರಲ್ಲಿ ಅದಾನಿ ಸಮೂಹ ಸೇರಿದವರು ಸಾಗರ್ ಅದಾನಿ. ಅವರು ಮೊದಲು ಯೋಜನಾ ವಿಭಾಗದಲ್ಲಿ ಕೆಲಸ ಮಾಡಿದರು. ಅದಾನಿ ಗ್ರೀನ್ ಎನರ್ಜಿಯ ಭಾಗವಾಗಿ ಸೌರ ಮತ್ತು ಪವನ ಶಕ್ತಿ ವಿಭಾಗವನ್ನು ಕಟ್ಟಿದ್ದೇ ಸಾಗರ್ ಅದಾನಿ. ವಿಭಾಗವನ್ನು ಕಟ್ಟುವ ಕೆಲಸದ ಜತೆಗೆ ಅದರ ಕಾರ್ಯನಿರ್ವಗಣೆ ಮತ್ತು ಹಣಕಾಸು ವ್ಯವಹಾರಗಳ ಉಸ್ತುವಾರಿಯನ್ನೂ ಹೊತ್ತಿದ್ದಾರೆ. ಸಾಗರ್, ಅದಾನಿ ಗ್ರೀನ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

ಹಿಂಡನ್ಬರ್ಗ್ ಸಂಚಲನ

ಗೌತಮ್ ಅದಾನಿ ಸಮೂಹದ ಬಗ್ಗೆ ವಿದೇಶಿ ಸಂಸ್ಥೆಯಿಂದ ಈ ಹಿಂದೆಯೂ ಆರೋಪಗಳು ಕೇಳಿಬಂದಿದ್ದವು. ಅಮೆರಿಕದ ಶಾರ್ಟ್ ಸೆಲ್ಲಿಂಗ್ ಹೂಡಿಕೆ ಮತ್ತು ಸಂಶೋಧನಾ ಸಂಸ್ಥೆ ‘ಹಿಂಡನ್ಬರ್ಗ್ ರಿಸರ್ಚ್’ 2023ರ ಜನವರಿಯಲ್ಲಿ ಆರೋಪ ಮಾಡಿತ್ತು. ಷೇರುಪೇಟೆಯ ವಾಸ್ತವಿಕ ಬೆಲೆಗಿಂತ ಕೃತಕವಾಗಿ ಏರಿಸಲಾದ ಬೆಲೆಯಲ್ಲಿ ಅದಾನಿ ಷೇರುಗಳು ಮಾರಾಟವಾಗುತ್ತಿದೆ ಎಂದು ಅದು ಆರೋಪಿಸಿತ್ತು. ಜತೆಗೆ ಅದಾನಿ ಸಮೂಹಕ್ಕೆ ಸೇರಿದ ನೋಂದಾಯಿತ ಷೇರು ಕಂಪನಿಗಳ ಸಾಲದ ಪ್ರಮಾಣವು ಗಣನೀಯ ಪ್ರಮಾಣದಲ್ಲಿದ್ದು ಸಮೂಹದ ಹಣಕಾಸು ಸ್ಥಿತಿ ಅಪಾಯಕಾರಿ ಮಟ್ಟದಲ್ಲಿದೆ ಎಂದೂ ಹೇಳಿತ್ತು. ಹಿಂಡನ್ಬರ್ಗ್ ಸಂಸ್ಥೆಯು ಅದಾನಿ ಸಮೂಹದ ಮೇಲೆ ಮಾಡಿದ್ದ ಆರೋಪ ಮತ್ತು ಅದು ದೇಶದ ಷೇರುಪೇಟೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ತನಿಖೆ ನಡೆಸಲು ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಂ.ಸಪ್ರೆ ನೇತೃತ್ವದ ಆರು ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ಗೆ ವರದಿ ಸಲ್ಲಿಸಿತ್ತು. ‘ಅದಾನಿ ಸಮೂಹವು ಷೇರುಗಳ ಮೌಲ್ಯವನ್ನು ಕೃತಕವಾಗಿ ಏರಿಳಿತ ಮಾಡಿಲ್ಲ. ಈ ವಿದ್ಯಮಾನಕ್ಕೆ ಸಂಬಂಧಿಸಿ ಸೆಬಿಯಿಂದ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ’ ಎಂದು ಸಮಿತಿ ವರದಿ ನೀಡಿತ್ತು. 2024ರ ಆಗಸ್ಟ್ನಲ್ಲಿ ಹಿಂಡನ್ಬರ್ಗ್ ರಿಸರ್ಚ್ ಅದಾನಿ ಸಮೂಹವನ್ನು ಮತ್ತೊಮ್ಮೆ ಕಟಕಟೆಯಲ್ಲಿ ನಿಲ್ಲಿಸಿತ್ತು. ‘ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಗಂಡ ಧವಲ್ ಬುಚ್ ಪಾಲುದಾರಿಕೆ ಇದೆ. ಅದಾನಿ ಅವರು ಮಾರಿಷಸ್ ಮತ್ತು ಇತರ ದೇಶಗಳಲ್ಲಿ ಹೊಂದಿರುವ ಶೆಲ್ ಕಂಪನಿಗಳ ಬಗ್ಗೆ ತನಿಖೆ ನಡೆಸಲು ಸೆಬಿ ಆಸಕ್ತಿ ತೋರದಿರುವುದು ಆಶ್ಚರ್ಯಕರವಾಗಿದೆ’ ಎಂದು ಹಿಂಡನ್ಬರ್ಗ್ ಆರೋಪಿಸಿತ್ತು.

ಆರೋಪಕ್ಕೆ ಆಂಧ್ರದ ನಂಟು

ಅದಾನಿ ಸಮೂಹದ ವಿರುದ್ಧ ಅಮೆರಿಕದಲ್ಲಿ ಮಾಡಿರುವ ಆರೋಪಗಳಿಗೆ ಸಂಬಂಧಿಸಿದ ವಿವಾದದ ಕೇಂದ್ರಬಿಂದುವಿನಂತೆ ಇರುವುದು ಆಂಧ್ರಪ್ರದೇಶ ಸರ್ಕಾರವು ಭಾರತೀಯ ಸೌರಶಕ್ತಿ ನಿಗಮದಿಂದ (ಎಸ್ಇಸಿಐ) ಮಾಡಿದ ವಿದ್ಯುತ್ ಖರೀದಿ.

ಆಂಧ್ರಪ್ರದೇಶದ ವಿದ್ಯುತ್ ಸರಬರಾಜು ಕಂಪನಿಗಳು (ಡಿಸ್ಕಾಂ) 2021ರ ನವೆಂಬರ್ನಲ್ಲಿ, 7000 ಮೆಗಾ ವಾಟ್ ಸೌರವಿದ್ಯುತ್ ಖರೀದಿಗೆ ಎಸ್ಇಸಿಐ ಜೊತೆ ಒಪ್ಪಂದ ಮಾಡಿಕೊಂಡವು. ಆಗ ವೈಎಸ್ಆರ್ಸಿಪಿ ನೇತೃತ್ವದ ಸರ್ಕಾರ ಆಂಧ್ರಪ್ರದೇಶದಲ್ಲಿತ್ತು.

ಉದ್ಯಮಿ ಗೌತಮ್ ಅದಾನಿ ಅವರು ಆಂಧ್ರಪ್ರದೇಶದ ಹಿರಿಯ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿ, ಡಿಸ್ಕಾಂಗಳು ಎಸ್ಇಸಿಐನಿಂದ ವಿದ್ಯುತ್ ಖರೀದಿಗೆ ನೆರವಾಗಲು ಅವರಿಗೆ ₹1,750 ಕೋಟಿ ಲಂಚದ ಆಮಿಷ ಒಡ್ಡಿದ್ದರು ಎಂದು ಆರೋಪಿಸಲಾಗಿದೆ.

‘ಈ ಅಧಿಕಾರಿಯು ಭಾರತದ ಪ್ರಜೆ. ಸರಿಸುಮಾರು 2019ರ ಮೇ ತಿಂಗಳಿನಿಂದ 2024ರ ಜೂನ್ವರೆಗೆ ಇವರು ಆಂಧ್ರಪ್ರದೇಶದಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅದಾನಿ ಅವರು ಇವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದರು’ ಎಂದು ಅಮೆರಿಕದ ಕೋರ್ಟ್ನಲ್ಲಿ ಸಲ್ಲಿಸಿರುವ ಆರೋಪದಲ್ಲಿ ಹೇಳಲಾಗಿದೆ.

ಆರೋಪಿಗಳು ಯಾರ್ಯಾರು?

1. ಗೌತಮ್ ಅದಾನಿ: ಅದಾನಿ ಸಮೂಹದ ಸಂಸ್ಥಾಪಕ

2. ಸಾಗರ್ ಆರ್.ಅದಾನಿ: ಅದಾನಿ ಗ್ರೀನ್ ಎನರ್ಜಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ

3. ವಿನೀತ್ ಜೈನ್: 2020ರ ಜುಲೈನಿಂದ ಮೇ 2023ರವರೆಗೆ ಅದಾನಿ ಗ್ರೀನ್ ಎನರ್ಜಿಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ. ಪ್ರಸ್ತುತ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ

4.ರಂಜಿತ್ ಗುಪ್ತಾ: 2019ರ ಜುಲೈನಿಂದ 2022ರ ಏಪ್ರಿಲ್ವರೆಗೆ ಅಮೆರಿಕದ ಅಜ್ಯೂರ್ ಪವರ್ ಕಂಪನಿಯ ಸಿಇಒ ಮತ್ತು ಭಾರತದಲ್ಲಿರುವ ಅದರ ಅಂಗಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು

5. ಸಿರಿಲ್ ಕ್ಯಾಬೆನ್ಸ್: ಆಸ್ಟ್ರೇಲಿಯ ಮತ್ತು ಫ್ರಾನ್ಸ್ ಪೌರತ್ವ ಹೊಂದಿರುವ ಇವರು ಸಿಂಗಪುರ ವಾಸಿ. ಕೆನಡಾದ ಹೂಡಿಕೆ ಸಂಸ್ಥೆಗೆ ಸಂಬಂಧಿಸಿದ ಕಂಪನಿಯೊಂದರಲ್ಲಿ 2016ರ ಫೆಬ್ರುವರಿಯಿಂದ 2023ರ ಅಕ್ಟೋಬರ್ವರೆಗೆ ಉದ್ಯೋಗಿಯಾಗಿದ್ದರು. 2017ರಿಂದ ಅಕ್ಟೋಬರ್ 2023ರವರೆಗೆ ಅಜ್ಯೂರ್ ಪವರ್ ಹಾಗೂ ಅದರ ಭಾರತದ ಅಂಗ ಸಂಸ್ಥೆಯ ಕಾರ್ಯನಿರ್ವಾಹಕೇತರ ನಿರ್ದೇಶಕ ಆಗಿದ್ದರು

6. ಸೌರಭ್ ಅಗರ್ವಾಲ್: ಕೆನಡಾದ ಹೂಡಿಕೆ ಸಂಸ್ಥೆಗೆ ಸಂಬಂಧಿಸಿದ ಕಂಪನಿಯೊಂದರಲ್ಲಿ 2017ರ ಮೇನಿಂದ 2023ರ ಜುಲೈ ಅವಧಿಯಲ್ಲಿ ಉದ್ಯೋಗಿದ್ದರು. ಸಿರಿಲ್ ಕ್ಯಾಬೆನ್ಸ್ ಅವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದರು

7. ದೀಪಕ್ ಮಲ್ಹೋತ್ರಾ: ಕೆನಡಾದ ಹೂಡಿಕೆ ಸಂಸ್ಥೆಗೆ ಸಂಬಂಧಿಸಿದ ಕಂಪನಿಯೊಂದರಲ್ಲಿ 2018ರ ಸೆಪ್ಟೆಂಬರ್ನಿಂದ 2023ರ ಅಕ್ಟೋಬರ್ವರೆಗೆ ಉದ್ಯೋಗಿಯಾಗಿದ್ದರು. 2019ರ ನೆವಂಬರ್ನಿಂದ 2023ರ ಅಕ್ಟೋಬರ್ವರೆಗೆ ಅಜ್ಯೂರ್ ಪವರ್ ಮತ್ತು ಅದರ ಅಂಗ ಸಂಸ್ಥೆಯ ಕಾರ್ಯನಿರ್ವಾಹಕೇತರ ನಿರ್ದೇಶಕ ಆಗಿದ್ದರು

8. ರೂಪೇಶ್ ಅಗರ್ವಾಲ್: ಅಜ್ಯೂರ್ ಪವರ್ ಮತ್ತು ಅದರ ಅಂಗಸಂಸ್ಥೆಯ ಕನ್ಸಲ್ಟೆಂಟ್ ಆಗಿ 2022ರ ವರ್ಷಾರಂಭದಿಂದ ಜುಲೈವರೆಗೆ ಕೆಲಸ ಮಾಡಿದ್ದರು. 2022ರ ಜುಲೈ ಮತ್ತು ಆಗಸ್ಟ್ನಲ್ಲಿ ಅಜ್ಯೂರ್ ಪವರ್ನ ಮುಖ್ಯ ಕಾರ್ಯತಂತ್ರ ಮತ್ತು ವಾಣಿಜ್ಯ ಅಧಿಕಾರಿಯಾಗಿದ್ದರು. 2022ರ ಆಗಸ್ಟ್ನಿಂದ 2023ರ ಜುಲೈವರೆಗೆ ಕಂಪನಿಯ ಪ್ರಭಾರ ಸಿಇಒ ಆಗಿದ್ದರು

* ಎಂಟು ಆರೋಪಿಗಳೊಂದಿಗೆ ಅಜ್ಯೂರ್ ಪವರ್ ಕಂಪನಿಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಇನ್ನಿಬ್ಬರನ್ನು ಸಹ ಪಿತೂರಿಗಾರರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ

* ಆಂಧ್ರಪ್ರದೇಶದ ಉನ್ನತ ಮಟ್ಟದ ಅಧಿಕಾರಿಯೊಬ್ಬರನ್ನು ವಿದೇಶಿ ಅಧಿಕಾರಿ ಎಂದು ಪ್ರಸ್ತಾಪಿಸಲಾಗಿದೆ

* ಕೇಂದ್ರ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಧೀನದಲ್ಲಿ ಬರುವ ಭಾರತೀಯ ಸೌರ ಶಕ್ತಿ ನಿಗಮವನ್ನು (ದಿ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ–ಎಸ್ಇಸಿಐ) ಮತ್ತು ಅದರ ಅಧಿಕಾರಿಗಳ ಬಗ್ಗೆಯೂ ಆರೋಪ ಪಟ್ಟಿಯಲ್ಲಿ ಉಲ್ಲೇಖ ಇದೆ. ಈ ನಿಗಮವು ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿ ಮಾಡುತ್ತದೆ. ಅದನ್ನು ರಾಜ್ಯಗಳ ವಿದ್ಯುತ್ ಪೂರೈಸುವ ನಿಗಮ/ಕಂಪನಿಗಳಿಗೆ ಮಾರಾಟ ಮಾಡುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.