ವ್ಯಾಖ್ಯಾನ ಬದಲಾಯಿಸಬೇಕು ಎಂಬ ಆಗ್ರಹ
₹40 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ದರದ ಮನೆಗಳು ‘ಕೈಗೆಟಕುವ ದರ’ದ ಮನೆಗಳು ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ. ಹಣದುಬ್ಬರದಲ್ಲಿ ಏರಿಕೆ ಹಾಗೂ ಜನರ ವರಮಾನ ಏರಿಕೆಯ ಕಾರಣವನ್ನುಉಲ್ಲೇಖಿಸಿ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್ ಕಂಪನಿಯ ಸಿಒಒ ಮಲ್ಲಣ್ಣ ಸಾಸಲು ಅವರು ಕೈಗೆಟಕುವ ದರದ ಮನೆ ಎಂಬ ವ್ಯಾಖ್ಯಾನದಲ್ಲಿ ಬದಲಾವಣೆ ತರಬೇಕು ಎಂದು ಒತ್ತಾಯಿಸಿದ್ದರು. ‘ಮನೆ ಖರೀದಿಸಲು ಬಯಸುವವರು 2–ಬಿಎಚ್‌ಕೆ ಮನೆಗಳನ್ನು ಹೆಚ್ಚಾಗಿ ಬಯಸುತ್ತಾರೆ. ಆದರೆ 2–ಬಿಎಚ್‌ಕೆ ಮನೆಗಳನ್ನು ಕೈಗೆಟಕುವ ದರದಲ್ಲಿ (ಅಂದರೆ ₹40 ಲಕ್ಷಕ್ಕಿಂತ ಕಡಿಮೆ ಬೆಲೆಗೆ) ಕಟ್ಟಲು ಈಗಿನ ಪರಿಸ್ಥಿತಿಯಲ್ಲಿ ಆಗುತ್ತಿಲ್ಲ. ಮನೆ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳ ಬೆಲೆಯು ಶೇ 9ರಿಂದ ಶೇ 11ರಷ್ಟು ಹೆಚ್ಚಾಗಿದೆ. ವೆಚ್ಚ ಹೆಚ್ಚಳವನ್ನು ಗಮನದಲ್ಲಿ ಇರಿಸಿಕೊಂಡು ಕೈಗೆಟಕುವ ದರದ ಮನೆಯ ವ್ಯಾಖ್ಯಾನವನ್ನು ಬದಲಿಸಬೇಕಾಗಿದೆ. ಹಣದುಬ್ಬರ ಹೆಚ್ಚಳವನ್ನು ಪರಿಗಣಿಸಿ ₹60 ಲಕ್ಷ ಅಥವಾ ₹65 ಲಕ್ಷದವರೆಗಿನ ಬೆಲೆಯ ಮನೆಗಳನ್ನೆಲ್ಲ ಕೈಗೆಟಕುವ ದರದ ಮನೆಗಳು ಎಂಬ ವ್ಯಾಖ್ಯಾನದ ಅಡಿ ತರಬೇಕು’ ಎಂಬುದು ಮಲ್ಲಣ್ಣ ಅವರು ಪ್ರತಿಪಾದನೆ.