ಶೇ 11.28ರಷ್ಟು ಬಹು ಆಯಾಮದ ಬಡವರು
ಈ ಸಂಕ್ಷಿಪ್ತ ವರದಿಯನ್ನು ಬಿಡುಗಡೆ ಮಾಡಿದ ನಂತರ ಕೆಲವು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದ ನೀತಿ ಆಯೋಗದ ಅಧಿಕಾರಿಯೊಬ್ಬರು, ‘ಈ ದತ್ತಾಂಶಗಳನ್ನು ಗಮನಿಸಿದರೆ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇದೆ’ ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಆದರೆ ಇದೇ ನೀತಿ ಆಯೋಗವು ಬಿಡುಗಡೆ ಮಾಡಿರುವ ವಿವಿಧ ವರದಿಗಳ ಪ್ರಕಾರ ದೇಶದಲ್ಲಿನ ಬಡವರ ಪ್ರಮಾಣವು ಶೇ 5ಕ್ಕಿಂತ ಹೆಚ್ಚೇ ಇದೆ. 2022–23ರ ಬಹು ಆಯಾಮದ ಬಡತನ ವರದಿಯ ಪ್ರಕಾರ ದೇಶದಲ್ಲಿನ ಬಹು ಆಯಾಮದ ಬಡವರ ಪ್ರಮಾಣ ಶೇ 11.28ರಷ್ಟು. ಭಾನುವಾರ ಬಿಡುಗಡೆಯಾದ ವರದಿಯಲ್ಲಿ ಯಾವ ಭಾಗದಲ್ಲೂ ‘ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ 5ಕ್ಕಿಂತ ಕಡಿಮೆ’ ಎಂದು ಉಲ್ಲೇಖಿಸಿಲ್ಲ.