ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡವನ್ನು (ಸಿಇಆರ್‌ಟಿ ಇನ್) ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಡುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಈ ಹಿಂದೆ ಯುಪಿಎ ಸರ್ಕಾರ ಕೂಡ ಕೆಲವು ಸಂಸ್ಥೆಗಳನ್ನು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಡುವ ಕೆಲಸ ಮಾಡಿತ್ತು. ಭಾರತದಲ್ಲಿ ಜನರ ಖಾಸಗಿ ಮಾಹಿತಿಗಳು ಸೋರಿಕೆಯಾಗುತ್ತಿರುವ, ವಿರೋಧ ಪಕ್ಷಗಳ ನಾಯಕರ ಮೊಬೈಲ್‌ಗಳಲ್ಲಿ ಕುತಂತ್ರಾಂಶವನ್ನು ಅಳವಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಈ ಹೊತ್ತಿನಲ್ಲಿ ಸೈಬರ್ ಭದ್ರತೆಯ ನೋಡಲ್ ಸಂಸ್ಥೆಯಾದ ಸಿಇಆರ್‌ಟಿ ಇನ್ ಅನ್ನು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ

ವಿರೋಧ ಪಕ್ಷಗಳ ನಾಯಕರ ಫೋನ್‌ಗಳನ್ನು ಇಣುಕಿ ನೋಡುವ ಪ್ರಕರಣಗಳು ಒಂದಾದಮೇಲೊಂದು ನಡೆಯುತ್ತಲೇ ಇವೆ. ವಿರೋಧ ಪಕ್ಷಗಳ ನಾಯಕರ ಖಾಸಗಿ ಮಾಹಿತಿ ಪಡೆದುಕೊಳ್ಳುವ ಸಲುವಾಗಿ ಅವರ ಮೊಬೈಲ್‌ಗಳಲ್ಲಿ ಕೇಂದ್ರ ಸರ್ಕಾರವೇ ಖುದ್ದು ಕುತಂತ್ರಾಂಶಗಳನ್ನು ಅಳವಡಿಸುತ್ತಿದೆ ಎನ್ನುವುದು ವಿರೋಧ ಪಕ್ಷಗಳ ಗಂಭೀರ ಆರೋಪ. ಆ್ಯಪಲ್ ಕಂಪನಿ ನೀಡಿದ ‘ಎಚ್ಚರಿಕೆ ಸಂದೇಶ’ದಂಥ ಪ್ರಕರಣ ಇದಕ್ಕೆ ಉದಾಹರಣೆಯಾಗಿದೆ. ಮೊದಲು ಪೆಗಾಸಸ್ ಕುತಂತ್ರಾಂಶವನ್ನು ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಹಲವು ಮಂದಿಯ ವ್ಯಾಟ್ಸ್‌ಆ್ಯಪ್‌ಗಳಲ್ಲಿ ಅಳವಡಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ನವೆಂಬರ್ ಮೊದಲ ವಾರದಲ್ಲಿ ಇಂಥದ್ದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿತ್ತು. ಆ್ಯಪಲ್ ಕಂಪನಿಯು ವಿರೋಧ ಪಕ್ಷಗಳ ಹಲವು ನಾಯಕರಿಗೆ ಎಚ್ಚರಿಕೆ ಸಂದೇಶವೊಂದನ್ನು ಕಳುಹಿಸಿತ್ತು. ‘ಸರ್ಕಾರಿ ಪ್ರಚೋದಿತ ದಾಳಿ’ಯೊಂದು ನಿಮ್ಮ ಮೇಲೆ ನಡೆಯುತ್ತಿದೆ ಎಂದು ಅದು ಹೇಳಿತ್ತು. ಪ್ರಜಾಪ್ರಭುತ್ವ ದೇಶವೊಂದಕ್ಕೆ ಹೆಚ್ಚು ಮಾರಕವಾಗುವ ಪ್ರಕರಣಗಳು ಎಂದೇ ಇವನ್ನು ವಿಶ್ಲೇಷಿಸಲಾಗುತ್ತಿದೆ.

ಜನರ ದತ್ತಾಂಶ ಸೋರಿಕೆ ಸೇರಿದಂತೆ, ಪೆಗಾಸಸ್ ಹಾಗೂ ಆ್ಯಪಲ್‌ನ ‘ಎಚ್ಚರಿಕೆ ಸಂದೇಶ’ದ ಪ್ರಕರಣಗಳ ತನಿಖೆಯನ್ನು ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡ (ಸಿಇಆರ್‌ಟಿ ಇನ್) ನಡೆಸುತ್ತಿದೆ. ಇಂಥ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರವು ಸಿಇಆರ್‌ಟಿ ಇನ್ ಅನ್ನು ಮಾಹಿತಿ ಹಕ್ಕು ಕಾಯ್ದೆಯಿಂದ (ಆರ್‌ಟಿಐ) ಹೊರಗಿಟ್ಟು ಅಧಿಸೂಚನೆ ಹೊರಡಿಸಿದೆ. ಇದು ಅಪಾಯಕಾರಿ ಬೆಳವಣಿಗೆ ಎನ್ನುವುದು ಆರ್‌ಟಿಐ ಕಾರ್ಯಕರ್ತರ, ಸೈಬರ್ ಅಪರಾಧ ತಡೆಗಟ್ಟುವಲ್ಲಿ ತೊಡಗಿಸಿಕೊಂಡಿರುವ ಸಂಘ–ಸಂಸ್ಥೆಗಳ ಆರೋಪವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಆರ್‌ಟಿಐಗೆ ತಿದ್ದುಪಡಿಗಳನ್ನು ತಂದು ಕೆಲವು ಸಂಸ್ಥೆಗಳನ್ನು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಈ ಪ್ರವೃತಿಯನ್ನು ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಕೂಡ ಮಾಡಿತ್ತು. ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯ, ಸಿಬಿಐ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಯುಪಿಎ ಸರ್ಕಾರವು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಟ್ಟಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಈ ಪ್ರವೃತ್ತಿಯನ್ನು ಮುಂದುವರಿಸಿದೆ. 2016ರಲ್ಲಿ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಅನ್ನು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಈಗ ಸಿಇಆರ್‌ಟಿ ಇನ್ ಅನ್ನು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಡಲು ಅಧಿಸೂಚನೆ ಹೊರಡಿಸಿದೆ.

ಏನಿದು ಸಿಇಆರ್‌ಟಿ ಇನ್?

ಗಣಕಯಂತ್ರದ ಭದ್ರತೆ ಕುರಿತು ರಾಷ್ಟ್ರೀಯ ನೋಡಲ್ ಸಂಸ್ಥೆ ಇದು. 2004ರ ಜನವರಿಯಿಂದ ಇದು ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಸೈಬರ್ ಅಪರಾಧಗಳ ಕುರಿತು ಎಚ್ಚರಿಕೆ ನೀಡುವುದು, ಸೂಕ್ತ ಮಾರ್ಗಸೂಚಿ, ಸಲಹೆಗಳನ್ನು ನೀಡುವುದು, ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವುದು ಸೇರಿದಂತೆ ಸೈಬರ್ ಅಪರಾಧಗಳ ಕುರಿತು ತನಿಖೆ ನಡೆಸುವುದು ಇದರ ಕೆಲಸವಾಗಿದೆ.

ನಡೆದಿದ್ದು ಏನು?

‘ಸಿಇಆರ್‌ಟಿ ಇನ್ ಅನ್ನು ಮಾಹಿತಿ ಹಕ್ಕು ಕಾಯ್ದೆಯ ಎರಡನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ಪರಾಮರ್ಶೆ ನಡೆಸಲಾಗುತ್ತಿದೆ’ ಎಂದು ಐಟಿ ಸಚಿವಾಲಯದ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅವರು ಇದೇ ಮಾರ್ಚ್‌ನಲ್ಲಿ ರಾಜ್ಯಸಭೆಗೆ ಮಾಹಿತಿ ನೀಡಿದ್ದರು. ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಿಇಆರ್‌ಟಿ ಇನ್ ಅನ್ನು ನಿರ್ವಹಿಸುತ್ತದೆ. ಸಿಬ್ಬಂದಿ ಹಾಗೂ ತರಬೇತಿ ಸಚಿವಾಲಯವು ಆರ್‌ಟಿಐ ಅನ್ನು ನಿರ್ವಹಿಸುತ್ತದೆ. ಸಿಇಆರ್‌ಟಿ ಇನ್ ಅನ್ನು ಆರ್‌ಟಿಐ ಕಾಯ್ದೆಯಿಂದ ಹೊರಗಿಡುವ ಕುರಿತು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಿಬ್ಬಂದಿ ಹಾಗೂ ತರಬೇತಿ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅಂತೆಯೇ, ನವೆಂಬರ್ 24ರಂದು ಕೇಂದ್ರ ಸರ್ಕಾರವು ಸಿಇಆರ್‌ಟಿ ಇನ್ ಅನ್ನು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಟ್ಟು ಅಧಿಸೂಚನೆ ಹೊರಡಿಸಿದೆ.

ಆರ್‌ಟಿಐ ಕಾಯ್ದೆ ಏನು ಹೇಳುತ್ತದೆ?

ಗುಪ್ತಚರ ಹಾಗೂ ಭದ್ರತಾ ಸಂಸ್ಥೆಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಈ ಬಗ್ಗೆ ಕಾಯ್ದೆಯ ಸೆಕ್ಷನ್ 24 ಚರ್ಚಿಸುತ್ತದೆ. 2005ರಲ್ಲಿ ಕಾಯ್ದೆ ರೂಪುಗೊಂಡ ಸಮಯದಲ್ಲಿ ಒಟ್ಟು 18 ಇಂಥ ಸಂಸ್ಥೆಗಳನ್ನು ಪಟ್ಟಿ ಮಾಡಲಾಗಿತ್ತು. ಈಗ ಈ ಪಟ್ಟಿಯಲ್ಲಿ ಒಟ್ಟು 26 ಸಂಸ್ಥೆಗಳು ಸೇರ್ಪಡೆಯಾಗಿವೆ. ಸಿಇಆರ್‌ಟಿ ಇನ್ ಈ ಪಟ್ಟಿಯ 27ನೇ ಸಂಸ್ಥೆಯಾಗಲಿದೆ.

‘ಈ ಸೆಕ್ಷನ್ ಅಡಿಯಲ್ಲಿ ಬರುವ ಎರಡನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಲಾಗಿರುವ ಕೇಂದ್ರ ಸರ್ಕಾರದ ಸಂಸ್ಥೆಗಳು ಗುಪ್ತಚರ ಹಾಗೂ ಭದ್ರತಾ ಸಂಸ್ಥೆಗಳಾಗಿರುತ್ತವೆ. ಈ ಸಂಸ್ಥೆಗಳು ಆರ್‌ಟಿಐ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಸಂಸ್ಥೆಗಳು ಸರ್ಕಾರಕ್ಕೆ ನೀಡಿದ ಮಾಹಿತಿಯನ್ನು ಆರ್‌ಟಿಐ ಅಡಿಯಲ್ಲಿ ಸಾರ್ವಜನಿಕರು ಕೇಳುವಂತಿಲ್ಲ’ ಎಂದು ಮಾಹಿತಿ ಹಕ್ಕು ಕಾಯ್ದೆಯ 24ನೇ ಸೆಕ್ಷನ್ ವಿವರಿಸುತ್ತದೆ. ‘ಎರಡನೇ ಪರಿಚ್ಛೇದದಿಂದ ಯಾವುದೇ ಸಂಸ್ಥೆಯನ್ನು ಹೊರಗಿಡಲು ಅಥವಾ ಸೇರಿಸಲು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಬೇಕು. ಜೊತೆಗೆ, ಈ ಅಧಿಸೂಚನೆಯನ್ನು ಸಂಸತ್ತಿನ ಮುಂದಿಡಬೇಕು’ ಎಂದೂ ಈ ಸೆಕ್ಷನ್ ವಿವರಿಸುತ್ತದೆ. ಆದ್ದರಿಂದ, ಸಿಟಿಆರ್‌ಟಿ ಅನ್ನು ಕಾಯ್ದೆಯಿಂದ ಹೊರಗಿಟ್ಟಿರುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರವು ಸಂಸತ್ತಿನ ಮುಂದಿಡಬೇಕಾಗುತ್ತದೆ.

ಭಾರತದಲ್ಲಿ ಸೈಬರ್ ಅಪರಾಧ

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಸೈಬರ್ ಸಂಬಂಧಿತ ದಾಳಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ. ಹಲವು ಸಂಸ್ಥೆಗಳು ಈ ಬಗ್ಗೆ ಮಾಹಿತಿ ನೀಡಿವೆ. ಇಂಟರ್‌ನೆಟ್ ಫ್ರೀಡಂ ಫೌಂಡೇಷನ್ ಪ್ರಕಾರ, 2004ರಿಂದ ಈಚೆಗೆ ಒಟ್ಟು 29.20 ಕೋಟಿ ದತ್ತಾಂಶ ಸೋರಿಕೆ ಪ್ರಕರಣಗಳು ನಡೆದಿವೆ. ಅಂದರೆ, ಒಂದು ಲಕ್ಷ ಜನರಿಗೆ 9,904 ಪ್ರಕರಣಗಳು ವರದಿಯಾಗಿವೆ. 2018ರಿಂದ 2022ರವರೆಗೆ ಜಗತ್ತಿನಾದ್ಯಂತ ಸುಮಾರು 5 ಕೋಟಿ ಜನರ ದತ್ತಾಂಶಗಳು ಸೋರಿಕೆಯಾಗಿವೆ. ಇದರಲ್ಲಿ ಭಾರತದ 6 ಲಕ್ಷ ಜನರು ಇದ್ದಾರೆ. ಒಬ್ಬ ವ್ಯಕ್ತಿಯ ಮಾಹಿತಿಗೆ ₹450ರಂತೆ ಬಾಟ್ ಮಾರುಕಟ್ಟೆಯಲ್ಲಿ ಬಿಕರಿಯಾಗಿವೆ. ಇವು ವೈಯಕ್ತಿಕ ನೆಲೆಗಳಲ್ಲಿ ಆಗುತ್ತಿರುವ ದತ್ತಾಂಶ ಸೋರಿಕೆಯ ವರದಿಗಳು. ಭಾರತ ಸರ್ಕಾರದ ವೆಬ್‌ಸೈಟ್‌ಗಳಿಂದಲೂ ಜನರ ಖಾಸಗಿ ಮಾಹಿತಿಗಳು ಸೋರಿಕೆಯಾಗುತ್ತಿವೆ. 2023ರ ಮೊದಲ ಆರು ತಿಂಗಳಲ್ಲಿ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಸುಮಾರು 36 ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. ಈ ಮಾಹಿತಿಯನ್ನು ಕೇಂದ್ರ ಸರ್ಕಾರವೇ ಸಂಸತ್ತಿಗೆ ನೀಡಿದೆ.

* 2018ರಲ್ಲಿ ಆಧಾರ್ ಕಾರ್ಡ್‌ನ ಮಾಹಿತಿಗಳು ಸೋರಿಕೆಯಾಗಿದ್ದವು. ಸುಮಾರು ಒಂದು ಕೋಟಿ ಭಾರತೀಯರ ಖಾಸಗಿ ಮಾಹಿತಿಗಳು ಸೋರಿಕೆಯಾಗಿದ್ದವು. ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು

* ದೆಹಲಿಯ ಏಮ್ಸ್‌ನ ಸರ್ವರ್ ಅನ್ನು 2022ರಲ್ಲಿ ಹ್ಯಾಕ್ ಮಾಡಲಾಗಿತ್ತು. ಹಲವು ದಿನಗಳ ವರೆಗೆ ಆಸ್ಪತ್ರೆಯ ಇಂಟರ್‌ನೆಟ್ ಸೇವೆಯು ಸ್ಥಗಿತಗೊಂಡಿತ್ತು. ಈ ಬಗ್ಗೆ ಸಿಇಆರ್‌ಟಿ ಇನ್ ತನಿಖೆ ನಡೆಸುತ್ತಿದೆ.
ವ್ಯಕ್ತಿಯೊಬ್ಬರನ್ನು ಈ ಸಂಬಂಧ ಬಂಧಿಸಲಾಗಿದೆ

* 2022ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ವೆಬ್‌ಸೈಟ್ ಅನ್ನು
ಕೇವಲ 24 ತಾಸುಗಳಲ್ಲಿ 6 ಸಾವಿರ ಬಾರಿ ಹ್ಯಾಕ್ ಮಾಡಲು ಯತ್ನಿಸಿದ್ದರು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು

* 2023ರ ಜೂನ್ ಹೊತ್ತಿಗೆ ಕೋವಿನ್ ಪೂರ್ಟಲ್‌ನಲ್ಲಿದ್ದ ಕೋಟ್ಯಂತರ ಭಾರತೀಯರ ಖಾಸಗಿ ಮಾಹಿತಿಗಳು ಸೋರಿಕೆಯಾಗಿದ್ದವು. ಈ ಬಗ್ಗೆ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಗಿತ್ತು

ಖಾಸಗೀತನಕ್ಕೆ ಧಕ್ಕೆ ಆಗುವ ಅಪಾಯಗಳು

ಭಾರತದಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗ ತೊಡಗಿದಂತೆ ಸಿಇಆರ್‌ಟಿ ಇನ್ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. 2022ರಲ್ಲಿ ಈ ಸಂಸ್ಥೆ ನೀಡಿದ ಮಾರ್ಗಸೂಚಿಗಳಲ್ಲಿ ಜನರ ಖಾಸಗಿತನಕ್ಕೆ ಧಕ್ಕೆ ಬರುವ ಅಪಾಯವಿದೆ ಎಂದು ಇಂಟರ್‌ನೆಟ್ ಫ್ರೀಡಂ ಫೌಂಡೇಷನ್ ಆರೋಪಿಸಿತ್ತು. ಈ ಬಗ್ಗೆ ಅದು ದೆಹಲಿ ಹೈಕೋರ್ಟ್ ಮೆಟ್ಟಿಲನ್ನೂ ಏರಿತ್ತು.

‘ವರ್ಚುವಲ್ ಪ್ರೈವೆಟ್ ಸರ್ವೀಸಸ್ (ವಿಪಿಎಸ್), ಕ್ಲೌಡ್ ಸರ್ವಿಸ್ ಹಾಗೂ ವರ್ಚುವಲ್ ಪ್ರೈವೆಟ್ ನೆಟ್‌ವರ್ಕ್ಸ್ (ವಿಪಿಎನ್) ಕಂಪನಿಗಳಿಗೆ ಸಿಇಆರ್‌ಟಿ ಇನ್ ಕೆಲವು ಮಾರ್ಗಸೂಚಿಗಳನ್ನು ನೀಡಿತ್ತು. ‘ಈ ಕಂಪನಿಗಳ ಬಳಕೆದಾರರ ಪೂರ್ತಿ ಮಾಹಿತಿಗಳನ್ನು ಸಿಇಆರ್‌ಟಿ ಇನ್ ಕೇಳಿದಾಗ ಅದಕ್ಕೆ ನೀಡಬೇಕು. ಒಂದೊಮ್ಮೆ ಬಳಕೆದಾರರು ಈ ಕಂಪನಿಗಳ ಸೇವೆಯನ್ನು ಪಡೆದುಕೊಳ್ಳುವುದನ್ನು ನಿಲ್ಲಿಸಿದರೂ ಈ ಕಂಪನಿಗಳು ಅಂಥ ಬಳಕೆದಾರರ ಮಾಹಿತಿಗಳನ್ನು 180 ದಿನಗಳ ವರೆಗೆ ತಮ್ಮ ಬಳಿಯೇ ಇಟ್ಟುಕೊಳ್ಳಬೇಕು’ ಎನ್ನುವುದು ಮಾರ್ಗಸೂಚಿಯಲ್ಲಿದ್ದ ಅಂಶಗಳು. ಈ ಮಾಹಿತಿಗಳನ್ನು ಯಾವುದಕ್ಕಾಗಿ ಬಳಸಿಕೊಳ್ಳಲಾಗುತ್ತದೆ, ಯಾರಿಗೆ ನೀಡುತ್ತದೆ ಎಂಬುದನ್ನು ತನ್ನ ಮಾರ್ಗಸೂಚಿಯಲ್ಲಿ ಸಿಇಆರ್‌ಟಿ ಇನ್ ಹೇಳಿರಲಿಲ್ಲ. ಇದನ್ನು ಪಾಲಿಸಲಿಲ್ಲವಾದರೆ, ಒಂದು ವರ್ಷದ ವರೆಗೆ ಶಿಕ್ಷೆ ವಿಧಿಸಬಹುದಿತ್ತು. ಈ ಕಾರಣದಿಂದ ಹಲವು ವಿಪಿಎನ್ ಕಂಪನಿಗಳು ಭಾರತವನ್ನು ಬಿಟ್ಟು ಹೋಗಿವೆ’ ಎಂದು ಫೌಂಡೇಷನ್ ಹೇಳಿದೆ.

‘ಇನ್ನೊಂದು ಮುಖ್ಯ ವಿಷಯವೂ ಇದೆ. ಕೇಂದ್ರ ಸರ್ಕಾರವು ಡಿಜಿಟಲ್ ಖಾಸಗಿ ದತ್ತಾಂಶ ರಕ್ಷಣೆ ಕಾಯ್ದೆ, 2023 ಅನ್ನು ಜಾರಿಗೆ ತಂದಿದೆ. ಈ ಕಾಯ್ದೆಯ 15 (ಸಿ) ಸೆಕ್ಷನ್, ದತ್ತಾಂಶಗಳನ್ನು ಸರ್ಕಾರಕ್ಕೆ ನೀಡುವ ಕುರಿತು ಜನರ ಕರ್ತವ್ಯವನ್ನು ವಿವರಿಸುತ್ತದೆ. ಸರ್ಕಾರವೊಂದು ಬಯಸಿದರೆ, ಜನರು ಸರ್ಕಾರಕ್ಕೆ ತನ್ನ ಮಾಹಿತಿಗಳನ್ನು ನೀಡಲೇಬೇಕು. ಸರ್ಕಾರವು ಈ ಮಾಹಿತಿಗಳನ್ನು ರಕ್ಷಿಸುತ್ತದೆ ಎಂದಷ್ಟೇ ಹೇಳುತ್ತದೆ ಹೊರತು, ಈ ಮಾಹಿತಿಗಳನ್ನು ಸರ್ಕಾರ ಹೇಗೆ ಬಳಸಿಕೊಳ್ಳುತ್ತದೆ ಅಥವಾ ಸರ್ಕಾರಕ್ಕೆ ಇಂಥ ಕೆಲವು ಮಾಹಿತಿಗಳು ಯಾಕಾಗಿ ಬೇಕು ಎನ್ನುವುದನ್ನು ಕಾಯ್ದೆಯಲ್ಲಿ ವಿವರಿಸಲಾಗಿಲ್ಲ. ಈ ಎಲ್ಲಾ ಕಾರಣಗಳಿಂದ ಸಿಇಆರ್‌ಟಿ ಇನ್ ಅನ್ನು ಆರ್‌ಟಿಐನಿಂದ ಹೊರಗಿಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ’ ಎಂದೂ ಅದು ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.