ಕ್ಷೇತ್ರ ಮರುವಿಂಗಡಣೆ: ಬದಲಾಗುವುದೇ ರಾಜಕೀಯ ಸಮೀಕರಣ?
ವಿಶೇಷ ಸ್ಥಾನಮಾನ ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿನ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಸರ್ಕಾರ ಆಯೋಗ ರಚಿಸಿತ್ತು. ರಂಜನಾ ಪ್ರಕಾಶ್ ದೇಸಾಯಿ ಅಧ್ಯಕ್ಷತೆಯ ಆಯೋಗವು 2020ರ ಮಾರ್ಚ್‌ನಲ್ಲಿ ತನ್ನ ಕೆಲಸ ಆರಂಭಿಸಿತ್ತು. ಜನಸಂಖ್ಯೆಯ ಆಧಾರದಲ್ಲಿ (2011ರ ಜನಗಣತಿ) ಕ್ಷೇತ್ರಗಳನ್ನು ಮರುವಿಂಗಡಿಸಿ 2022ರ ಮೇ 5ರಂದು ಅಂತಿಮ ವರದಿಯನ್ನು ಸಲ್ಲಿಸಿತ್ತು. ಅಲ್ಲಿಯವರೆಗೂ 107 ಇದ್ದ (ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮೀಸಲಿಟ್ಟಿರುವ 24 ಕ್ಷೇತ್ರಗಳೂ ಸೇರಿ) ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಕ್ಷೇತ್ರಮರುವಿಂಗಡಣೆಯ ನಂತರ 114ಕ್ಕೆ ಏರಿವೆ. ಹಿಂದೆ ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರಗಳಿರಲಿಲ್ಲ. ಈಗ ಒಂಬತ್ತು ಕ್ಷೇತ್ರಗಳು ಮೀಸಲಾಗಿವೆ. ಪರಿಶಿಷ್ಟ ಜಾತಿಯವರಿಗೆ ಏಳು ಕ್ಷೇತ್ರಗಳನ್ನು ಮೀಸಲಿಡಲಾಗಿದೆ. ಹಿಂದೆ ಆರು ಮೀಸಲು ಕ್ಷೇತ್ರಗಳಿದ್ದವು. ಕ್ಷೇತ್ರಮರುವಿಂಗಣೆ ಪ್ರಕ್ರಿಯೆಯು ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿನ ರಾಜಕೀಯ ಪಕ್ಷಗಳಿಗೆ ಸಮಾಧಾನ ತಂದಿಲ್ಲ. ಈಗ ನಡೆದಿರುವ ಮರುವಿಂಗಡಣೆಯಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂಬುದು ಅವುಗಳ ಆರೋಪ. ಕ್ಷೇತ್ರಮರುವಿಂಗಡಣಾ ಆಯೋಗದ ಕರಡು ವರದಿಯನ್ನು ಈ ಪಕ್ಷಗಳು ತಿರಸ್ಕರಿಸಿದ್ದವು. ಅಂತಿಮ ವರದಿ ಸಲ್ಲಿಸುವುದಕ್ಕೂ ಮೊದಲು ಆಯೋಗ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿಪ್ರಾಯ ಸಂಗ್ರಹಿಸಲು ಆಯೋಜಿಸಿದ್ದ ಕಾರ್ಯಕ್ರಮಗಳನ್ನು ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಬಹಿಷ್ಕರಿಸಿದ್ದವು. ಈ ಕಾರ್ಯಕ್ರಮಗಳಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದ್ದರು ಎಂಬ ಆರೋಪವೂ ಕೇಳಿಬಂದಿತ್ತು. ಅಲ್ಲಿನ ರಾಜಕೀಯ ಪಕ್ಷಗಳ ಆರೋಪಕ್ಕೆ ಪೂರಕ ಎಂಬಂತೆ, ಬಿಜೆಪಿ ಪ್ರಾಬಲ್ಯ ಇರುವ ಜಮ್ಮು ಭಾಗದಲ್ಲೇ ಆರು ಕ್ಷೇತ್ರಗಳು ಹೆಚ್ಚಾಗಿವೆ. ಬಿಜೆಪಿಗೆ ಹೆಚ್ಚು ಬೆಂಬಲ ಇಲ್ಲದ ಕಾಶ್ಮೀರ ಭಾಗದಲ್ಲಿ ಕ್ಷೇತ್ರ ಮರುವಿಂಗಡಣೆಯ ನಂತರ ಒಂದು ಕ್ಷೇತ್ರ ಮಾತ್ರ ಜಾಸ್ತಿಯಾಗಿದೆ. ಬಿಜೆಪಿ ಗೆದ್ದಿದ್ದ ಕ್ಷೇತ್ರಗಳನ್ನೇ ವಿಭಜಿಸಿ ಹೊಸ ಕ್ಷೇತ್ರಗಳನ್ನು ರಚಿಸಲಾಗಿದೆ. ವಿರೋಧ ಪಕ್ಷಗಳ ಪ್ರಾಬಲ್ಯವಿರುವ ಕಡೆಗಳಲ್ಲಿ ಕೆಲವು ಕ್ಷೇತ್ರಗಳನ್ನು ರದ್ದು ಮಾಡಲಾಗಿದೆ ಇಲ್ಲವೇ ಆ ಕ್ಷೇತ್ರಗಳನ್ನು ಬೇರೆ ಕ್ಷೇತ್ರಗಳ ಜತೆಗೆ ವಿಲೀನ ಮಾಡಲಾಗಿದೆ. ಇದಲ್ಲದೇ ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟಿರುವ ಒಂಬತ್ತು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳು ಬಿಜೆಪಿ ಪ್ರಾಬಲ್ಯವಿರುವ ಜಿಲ್ಲೆಗಳಿಗೆ ಸೇರಿವೆ.