ಗುಜರಾತ್ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆಯಲ್ಲಿ ಆಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರದ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು. ಅದಾಗಿ ಕೆಲವೇ ವಾರಗಳಲ್ಲಿ ಬಿಬಿಸಿಯ ದೆಹಲಿ ಮತ್ತು ಮುಂಬೈನ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯು ‘ಪರಿಶೀಲನೆ’ ನಡೆಸಿದೆ. ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿವಿರೋಧಿ ಪಕ್ಷಗಳ ಮುಖಂಡರು ಹಲವು ಬಾರಿ ಆರೋಪಿಸಿದ್ದಾರೆ. ಈ ಪಕ್ಷಗಳ ಹಲವು ಮುಖಂಡರಿಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐಯಿಂದ ಶೋಧನೆ ನಡೆದ ಹಲವು ಉದಾಹರಣೆಗಳು ಇವೆ. ಸಚಿವ ಸ್ಥಾನದಲ್ಲಿದ್ದವರೂ ಸೇರಿದಂತೆ ಹಲವರ ಬಂಧನವೂ ಆಗಿದೆ. ಮಾಧ್ಯಮ ಸಂಸ್ಥೆಗಳೂ ಈ ಶೋಧನೆಯಿಂದ ಹೊರತಾಗಿಲ್ಲ. ಅಂತಹ ಇತ್ತೀಚಿನ ಕೆಲವು ಪ್ರಕರಣಗಳು ಇಲ್ಲಿವೆ:

ದೈನಿಕ್ ಭಾಸ್ಕರ್ಗೆ ಐಟಿ ಬಿಸಿ

ಉತ್ತರ ಭಾರತದ ಪ್ರಮುಖ ವೃತ್ತ ಪತ್ರಿಕೆಗಳಲ್ಲಿ ದೈನಿಕ್ ಭಾಸ್ಕರ್ ಸಹ ಒಂದು. 12 ರಾಜ್ಯಗಳಲ್ಲಿ ಆವೃತ್ತಿ ತರುತ್ತಿರುವ ಈ ಪತ್ರಿಕೆ 65 ವರ್ಷಕ್ಕಿಂತ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿದೆ. ಸರ್ಕಾರದ ನೀತಿಗಳ ವಿರುದ್ಧದ ವರದಿಗಾರಿಕೆಗೆ ಈ ಪತ್ರಿಕೆ ಹೆಸರಾಗಿದೆ.

ಪರಿಶೀಲನೆ: ಆದಾಯ ತೆರಿಗೆ ಪಾವತಿಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪದಲ್ಲಿ ‘ದೈನಿಕ್ ಭಾಸ್ಕರ್’ ಪ್ರಧಾನ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗಳ ಮೇಲೆ 2021ರ ಜುಲೈ 12ರಂದು ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ದೇಶದ ಒಟ್ಟು ಆರು ರಾಜ್ಯಗಳಲ್ಲಿ ಏಕಕಾಲದಲ್ಲಿ ಪರಿಶೀಲನೆ ನಡೆದಿತ್ತು.

ಪರಿಶೀಲನೆಗೂ ಮುನ್ನ: ‘ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಗಂಗಾ ತಟದಲ್ಲಿ ಹೆಣಗಳನ್ನು ಮನಬಂದಂತೆ ವಿಲೇವಾರಿ ಮಾಡಲಾಗಿದೆ. ಸರ್ಕಾರವು ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಯತ್ನಿಸುತ್ತಿದೆ. ಆದರೆ, ಗಂಗೆ ತನ್ನ ಒಡಲಲ್ಲಿ ಇರುವ ಹೆಣಗಳನ್ನು ಹೊರಹಾಕುತ್ತಿದ್ದಾಳೆ’ ಎಂದು ದೈನಿಕ್ ಭಾಸ್ಕರ್ ಪತ್ರಿಕೆಯು 2021ರ ಜೂನ್ ಕೊನೆಯ ವಾರದಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.

ಸರ್ಕಾರದ ಕೋವಿಡ್ ನೀತಿ ವಿಫಲವಾಗಿದೆ ಎಂದು ವರದಿ ಪ್ರಕಟಿಸಿದ ಕಾರಣದಿಂದಲೇ ದೈನಿಕ್ ಭಾಸ್ಕರ್ ಮೇಲೆ ಐ.ಟಿ ಪರಿಶೀಲನೆ ನಡೆಸಲಾಗಿದೆ. ಈ ಮೂಲಕ ಪತ್ರಕರ್ತರನ್ನು ಸರ್ಕಾರವು ಬೆದರಿಸುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಮತ್ತು ಹಲವು ಪತ್ರಕರ್ತರು ಆರೋಪಿಸಿದ್ದರು.

ನ್ಯೂಸ್ಕ್ಲಿಕ್, ನ್ಯೂಸ್ಲಾಂಡ್ರಿ

ನ್ಯೂಸ್ಕ್ಲಿಕ್ ಮತ್ತು ನ್ಯೂಸ್ಲಾಂಡ್ರಿ ಎರಡೂ ಪ್ರತ್ಯೇಕ ಆನ್ಲೈನ್ ಸುದ್ದಿ ಪೋರ್ಟಲ್ಗಳು.

ಶೋಧನೆ: 2021ರ ಫೆಬ್ರುವರಿಯಲ್ಲಿ ಎರಡೂ ಸಂಸ್ಥೆಗಳ ಕಚೇರಿಗಳು, ಸಂಸ್ಥಾಪಕರ ಮನೆ ಮತ್ತು ಸಂಪಾದಕರ ಮನೆಗಳಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧನೆ ನಡೆಸಿದ್ದರು. ವಿದೇಶಿ ದೇಣಿಗೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ, ತೆರಿಗೆ ವಂಚಿಸಲಾಗಿದೆ ಎಂಬ ಆರೋಪದ ಅಡಿಯಲ್ಲಿ ಶೋಧನೆ ನಡೆಸಲಾಗಿತ್ತು.

ಶೋಧನೆಗೂ ಮುನ್ನ: ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ಸುದ್ದಿಗಳನ್ನು ಈ ಎರಡೂ ಪೋರ್ಟಲ್ಗಳು ನಿರಂತರವಾಗಿ ಪ್ರಕಟಿಸಿದ್ದವು.

ಸರ್ಕಾರದ ಕಾಯ್ದೆಗಳ ವಿರುದ್ಧ ನಡೆದ, ನಡೆಯುತ್ತಿರುವ ಪ್ರತಿಭಟನೆಯನ್ನು ವರದಿ ಮಾಡಿದ ಕಾರಣದಿಂದಲೇ ಈ ಸುದ್ದಿ ಪೋರ್ಟಲ್ಗಳ ಮೇಲೆ ಐ.ಟಿ ಶೋಧನೆ ನಡೆಸಲಾಗಿದೆ ಎಂದು ರೈತ ಸಂಘಟನೆಗಳು ಆರೋಪಿಸಿದ್ದವು.

ಭಾರತ್ ಸಮಾಚಾರ್ ಕಚೇರಿಯಲ್ಲಿ ಪರಿಶೀಲನೆ

ಉತ್ತರ ಪ್ರದೇಶದ ಪ್ರಮುಖ ಸುದ್ದಿವಾಹಿನಿಗಳಲ್ಲಿ ಭಾರತ್ ಸಮಾಚಾರ್ ಸಹ ಒಂದು. ಸರ್ಕಾರದ ನೀತಿಗಳ ಕಟುವಿಮರ್ಶೆಗೆ ಈ ವಾಹಿನಿಯ ಕೆಲವು ಕಾರ್ಯಕ್ರಮಗಳು ಹೆಸರುವಾಸಿ.

ಪರಿಶೀಲನೆ: ಆದಾಯ ತೆರಿಗೆ ಪಾವತಿಯಲ್ಲಿ ಮತ್ತು ಕಂಪನಿಗೆ ಸಂಬಂಧಿಸಿದ ಖರೀದಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ 2021ರ ಜುಲೈ 12ರಂದು ಭಾರತ್ ಸಮಾಚಾರ್ ವಾಹಿನಿಯ ಕೇಂದ್ರ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

ಪರಿಶೀಲನೆಗೂ ಮುನ್ನ: ‘ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಕಾರಣಕ್ಕೆ ಸಂಭವಿಸಿದ ಸಾವುಗಳ ಸಂಖ್ಯೆಯನ್ನು ಉತ್ತರ ಪ್ರದೇಶ ಸರ್ಕಾರ ಮುಚ್ಚಿಡುತ್ತಿದೆ. ಜತೆಗೆ ಆಮ್ಲಜನಕ ಪೂರೈಕೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಕಾರಣದಿಂದಲೇ ಹೆಚ್ಚಿನ ಸಾವುಗಳು ಸಂಭವಿಸಿವೆ’ ಎಂದು 2021ರ ಜೂನ್ ಮತ್ತು ಜುಲೈನಲ್ಲಿ ಭಾರತ್ ಸಮಾಚಾರ್ ಸರಣಿ ವರದಿಗಳನ್ನು ಪ್ರಸಾರ ಮಾಡಿತ್ತು.

ಉತ್ತರ ಪ್ರದೇಶ ಸರ್ಕಾರವು ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ವರದಿ ಮಾಡಿದ್ದರಿಂದಲೇ ಭಾರತ್ ಸಮಾಚಾರ್ ಮೇಲೆ ಐ.ಟಿ ಪರಿಶೀಲನೆ ನಡೆಸಲಾಗಿದೆ ಎಂದು ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಆರೋಪಿಸಿದ್ದವು.

‘ನೀವು ಎಷ್ಟು ಬೇಕಾದರೂ ದನಿ ಅಡಗಿಸಲು ಯತ್ನಿಸಿ, ನಾವೂ ಅಷ್ಟೇ ದೊಡ್ಡ ದನಿಯಲ್ಲಿ ಸತ್ಯ ಹೇಳುತ್ತೇವೆ. ನಾವು ಮೊದಲೂ ಹೆದರುತ್ತಿರಲಿಲ್ಲ, ಈಗಲೂ ಹೆದರುವುದಿಲ್ಲ. ಸತ್ಯದದೊಟ್ಟಿಗೆ ಮೊದಲೂ ನಿಂತಿದ್ದೆವು, ಮುಂದೆಯೂ ನಿಲ್ಲುತ್ತೇವೆ. ನೀವು ಏನುಬೇಕಾದರೂ ಮಾಡಿ, ನಾವು ಸತ್ಯವನ್ನೇ ಹೇಳುತ್ತೇವೆ’
ಎಂದು ಭಾರತ್ ಸಮಾಚಾರ್ ಟ್ವೀಟ್ ಮಾಡಿತ್ತು.

ಪಾತ್ರಾ ಚಾಳ್ ಮರು ಅಭಿವೃದ್ಧಿ ಪ್ರಕರಣ:

ಪಾತ್ರಾ ಚಾಳ್ (ವಸತಿ ಸಂಕೀರ್ಣ) ಯೋಜನೆಯಲ್ಲಿ ಅಕ್ರಮ ನಡೆದಿದೆ. ಹೌಸಿಂಗ್ ಡೆವಲಪ್ಮೆಂಟ್ ಇನ್ಫ್ರಾಸ್ಟ್ರಕ್ಚರ್ ಲಿ.ನ ಅಂಗಸಂಸ್ಥೆ ಗುರು ಅಶೀಶ್ ಕನ್ಸ್ಟ್ರಕ್ಷನ್ಸ್ ₹1,039 ಕೋಟಿ ಅಕ್ರಮವಾಗಿ ಸಂಗ್ರಹಿಸಿದೆ. ಈ ಹಣದಲ್ಲಿ ₹100 ಕೋಟಿಯನ್ನು ಪ್ರವೀಣ್ ರಾವುತ್ ಅವರು ಸಂಜಯ ರಾವುತ್ ಅವರಿಗೆ ನೀಡಿದ್ದಾರೆ ಎಂಬುದು ಇ.ಡಿಯ ಆರೋಪ.

ಬಂಧನ: ಸಂಜಯ ರಾವುತ್, ಅವರ ಹೆಂಡತಿ ವರ್ಷಾ ರಾವುತ್ ಮತ್ತು ನಿಕಟವರ್ತಿಗಳನ್ನು ಇ.ಡಿ ಸುದೀರ್ಘ ತನಿಖೆಗೆ ಒಳಪಡಿಸಿತು. ಸಂಜಯ ರಾವುತ್ ಅವರ ಮನೆಯಲ್ಲಿ 2022ರ ಆಗಸ್ಟ್ 1ರಂದು ಸುಮಾರು 10 ತಾಸು ಶೋಧನೆ ನಡೆಸಲಾಯಿತು. ಬಳಿಕ ಅವರನ್ನು ಬಂಧಿಸಲಾಯಿತು.

ಸಂಜಯ್ ವಾದವೇನು: ಶಿವಸೇನಾದ ಉದ್ಧವ್ ಠಾಕ್ರೆ ಬಣದಿಂದ ಹೊರಗೆ ಬರಬೇಕು ಎಂದು ಹಲವು ಬಾರಿ ತಮಗೆ ಹೇಳಲಾಗಿದೆ. ಆದರೆ, ಉದ್ಧವ್ ಬಣವನ್ನು ತೊರೆಯುವ ಪ್ರಶ್ನೆಯೇ ಇಲ್ಲ, ಶರಣಾಗುವುದಿಲ್ಲ ಎಂದು ಸಂಜಯ್ ಹೇಳಿದ್ದರು. ‘ಸಂಜಯ ರಾವುತ್ ಅವರನ್ನು ಬೆದರಿಸಲು ಬಿಜೆಪಿ ಯತ್ನಿಸುತ್ತಿದೆ. ಉದ್ಧವ್ ಅವರನ್ನೂ ಬೆದರಿಸುವುದನ್ನು ಮುಂದುವರಿಸಲಿದೆ. ಸಂಜಯ್ ಅವರನ್ನು ಸುಮ್ಮನಿರಿಸುವುದಕ್ಕಾಗಿ ಈ ಬಂಧನ ನಡೆದಿದೆ’ ಎಂದು ಸಂಜಯ ಅವರ ತಮ್ಮ ಸುನಿಲ್ ರಾವುತ್ ಹೇಳಿದ್ದರು.

ದ್ವೇಷ ಸಾಧನೆ ಎಂದ ಕೋರ್ಟ್: ಹಣ ಅಕ್ರಮ ವರ್ಗಾವಣೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರು ಇ.ಡಿ. ಕ್ರಮದ ವಿರುದ್ಧ ಹರಿಹಾಯ್ದಿದ್ದರು. ಪ್ರಕರಣದ ಮುಖ್ಯ ಆರೋಪಿಯನ್ನೇ ಬಂಧಿಸದೆ ಪ್ರವೀಣ್ ಮತ್ತು ಸಂಜಯ್ ಅವರನ್ನು ಏಕೆ ಬಂಧಿಸಲಾಗಿದೆ ಎಂದು ಪ್ರಶ್ನಿಸಿದ್ದರು. ಇದು ದ್ವೇಷ ಸಾಧನೆಯ ಕೃತ್ಯ, ಬಂಧನವೇ ಅಕ್ರಮ ಎಂದು ಹೇಳಿ ಸಂಜಯ್ ಅವರಿಗೆ ಜಾಮೀನು ನೀಡಿದ್ದರು. ಜಾಮೀನನ್ನು ತಡೆ ಹಿಡಿಯಬೇಕು ಎಂಬ ಇ.ಡಿ. ಕೋರಿಕೆಯನ್ನು ತಿರಸ್ಕರಿಸಿದ್ದರು. ಬಾಂಬೆ ಹೈಕೋರ್ಟ್ ಕೂಡ ಜಾಮೀನಿಗೆ ತಡೆ ನೀಡಲು ನಿರಾಕರಿಸಿತ್ತು. 2022ರ ನವೆಂಬರ್ 9ರಂದು ಜಾಮೀನು ಸಿಕ್ಕಿತು. ಅಲ್ಲಿಗೆ 100 ದಿನಗಳನ್ನು ಸಂಜಯ
ಜೈಲಿನಲ್ಲಿ ಕಳೆದಿದ್ದರು.

‘ಮತ್ತೆ ಬರುವರು ಮೂವರು ಅಳಿಯಂದಿರು’

ಹೂಡಿಕೆಯ ಆರೋಪ: ಆರ್ಜೆಡಿ ನಾಯಕ ಲಾಲು ಪ್ರಸಾದ್ ರೈಲ್ವೆ ಸಚಿವರಾಗಿದ್ದಾಗ ನೇಮಕಾತಿಯಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಲಾಲು ಅವರ ಮಗ ತೇಜಸ್ವಿ ಯಾದವ್ ಅವರು ಗುರುಗ್ರಾಮದಲ್ಲಿ ನಿರ್ಮಾಣ ಹಂತದ ಮಾಲ್ನಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಆರೋಪವೂ ಇತ್ತು. ಈ ಆರೋಪಗಳ ತನಿಖೆಗೆ ಮುಂದಾದ ಸಿಬಿಐ, ಬಿಹಾರದ ಪಟ್ನಾ ಸೇರಿದಂತೆ 24 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧನೆ ನಡೆಸಿತ್ತು.

ವಿಶ್ವಾಸಮತದ ಸಂದರ್ಭದಲ್ಲಿ ಶೋಧನೆ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿ ಸಖ್ಯ ತೊರೆದು ಆರ್ಜೆಡಿ ಬೆಂಬಲದೊಂದಿಗೆ ಕಳೆದ ವರ್ಷ ಸರ್ಕಾರ ರಚಿಸಿದ್ದರು. ಅವರು ಸದನದಲ್ಲಿ ವಿಶ್ವಾಸಮತ ಯಾಚಿಸುವ ಸಂದರ್ಭದಲ್ಲಿ ಈ ಶೋಧನೆ ನಡೆದಿದ್ದು ವಿಶೇಷ. ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಸಿಬಿಐ, ಇ.ಡಿ, ಹಾಗೂ ಐಟಿ ಸಂಸ್ಥೆಗಳನ್ನು ‘ಮೂವರು ಅಳಿಯಂದಿರು’ ಎಂದು ಆರ್ಜೆಡಿಯ ತೇಜಸ್ವಿ ಯಾದವ್ ಕರೆದಿದ್ದರು. ‘2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ‘ಮೂವರು ಅಳಿಯಂದಿರು’ ಮತ್ತೆ ಬಿಹಾರಕ್ಕೆ ಬರಲಿದ್ದಾರೆ. ಆದರೆ ಮಹಾಮೈತ್ರಿಕೂಟವನ್ನು ಒಡೆಯಲು ಬಿಜೆಪಿಯಿಂದ ಆಗುವುದಿಲ್ಲ’ ಎಂದು ಅವರು ಹೇಳಿದ್ದರು.

ಚುನಾವಣೆಗೂ ಮುನ್ನ ಬಂಗಾಳಕ್ಕೆ ಬಂದಿದ್ದ ಇ.ಡಿ., ಸಿಬಿಐ

ಅಕ್ರಮದ ಆರೋಪ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಈ ಹಿಂದಿನ ಟಿಎಂಸಿ ಸರ್ಕಾರದಲ್ಲಿದ್ದ ಹಲವರ ಮೇಲೆ ಅಕ್ರಮ ಗಣಿಗಾರಿಕೆಯ ಆರೋಪವಿದೆ. ನಾಲ್ಕು ಜಿಲ್ಲೆಗಳಲ್ಲಿ ಕಲ್ಲಿದ್ದಲು ಅಕ್ರಮ ಗಣಿಗಾರಿಕೆ ನಡೆದಿದ್ದು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ನೆರವಿನಿಂದ ಕಲ್ಲಿದ್ದಲನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಸಿಬಿಐ ಆರೋಪಿಸಿದ್ದವು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಪ್ರಕರಣ ದಾಖಲಿಸಿಕೊಂಡ ಇ.ಡಿ, ರಾಜ್ಯದ 45 ಕಡೆ ಶೋಧನೆ ನಡೆಸಿತ್ತು.

‘ರಾಜಕೀಯ ಪ್ರೇರಿತ’: ಟಿಎಂಸಿ ಪ್ರಮುಖ ನಾಯಕ ಹಾಗೂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಅಭಿಷೇಕ್ ಪತ್ನಿ ರುಜಿರಾ ಬ್ಯಾನರ್ಜಿ ಹಾಗೂ ಅವರ ತಂಗಿ ಮೇನಕಾ ಗಂಭೀರ್ ಅವರನ್ನು ತನಿಖಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸಿದವು. 2021ರಲ್ಲಿ ಪಶ್ಚಿಮ ಬಂಗಾಳ ಚುನಾವಣೆ ಘೋಷಣೆಗೂ ಮುನ್ನ ನಡೆದ ಈ ಘಟನೆಗಳು ರಾಜಕೀಯ ಪ್ರೇರಿತ ಎಂದು ಟಿಎಂಸಿ ಆರೋಪಿಸಿತು. ವಿಚಾರಣೆ ಬಳಿಕ ಪ್ರತಿಕ್ರಿಯಿಸಿದ್ದ ಅಭಿಷೇಕ್, ‘ಬಿಜೆಪಿಗೆ ಅಧಿಕಾರ ಹಿಡಿಯಲು ಸಾಧ್ಯವಾಗದ ರಾಜ್ಯಗಳಲ್ಲಿ ಇಂತಹ ದಾಳಿಗಳನ್ನು ನಡೆಸುತ್ತಿದೆ. ರಾಜಕೀಯವಾಗಿ ನನ್ನನ್ನು ಎದುರಿಸಲಾಗದ ಬಿಜೆಪಿ, ತನಿಖಾ ಸಂಸ್ಥೆಗಳನ್ನು ಕಳುಹಿಸಿದೆ’ ಎಂದು ಆರೋಪಿಸಿದ್ದರು.

‘ಬಿಜೆಪಿ ರಾಜ್ಯಗಳಲ್ಲಿ ಸತ್ಯ ಹರಿಶ್ಚಂದ್ರನ ವಂಶಸ್ಥರು ಇದ್ದಾರೆಯೇ?’

₹100 ಕೋಟಿ ಲಂಚದ ಆರೋಪ: ದೆಹಲಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಅಬಕಾರಿ ನೀತಿ ಹಗರಣವು ಬಿಜೆಪಿ ಹಾಗೂ ಎಎಪಿ ನಡುವಿನ ತಿಕ್ಕಾಟಕ್ಕೆ ಮತ್ತೊಂದು ಅಸ್ತ್ರವಾಗಿದೆ. ಇದರಲ್ಲಿ ಬಿಆರ್ಎಸ್ ಹೆಸರೂ ತಳಕು ಹಾಕಿಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಮಗಳು ಕವಿತಾ ಅವರು ಪ್ರಕರಣದ ಆರೋಪಿಗಳಾಗಿದ್ದಾರೆ. ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರು ಲಂಚ ಪಡೆದಿದ್ದಾರೆ ಎಂಬುದು ಸಿಬಿಐ ಆರೋಪ. ‘ಕವಿತಾ ಹಾಗೂ ಅವರ ಪತಿ ಶರತ್ ನಿಯಂತ್ರಣದಲ್ಲಿರುವ ಸೌತ್ ಗ್ರೂಪ್ ಕಂಪನಿಯು ಎಎಪಿ ನಾಯಕರಿಗೆ ₹100 ಕೋಟಿ ನೀಡಿದೆ’ ಎಂದೂ ಅದು ಆರೋಪಿಸಿದೆ.

ಎಎಪಿ ಜೊತೆಗೆ ಬಿಆರ್ಎಸ್: ತನಿಖೆಯ ಭಾಗವಾಗಿ, ಸಿಸೋಡಿಯಾ ಹಾಗೂ ಕವಿತಾ ಅವರನ್ನು ಸಿಬಿಐ ಕಳೆದ ವರ್ಷ ವಿಚಾರಣೆಗೆ ಒಳಪಡಿಸಿತ್ತು. ಕವಿತಾ ಅವರ ಲೆಕ್ಕಪರಿಶೋಧಕನನ್ನು ಬಂಧಿಸಿತ್ತು. ಸಿಸೋಡಿಯಾ ಅವರನ್ನು ಗುರಿಯಾಗಿಸಿ ಶೋಧನೆ ನಡೆಸಿತ್ತು. ‘ಲಾಕರ್ನಲ್ಲಿ ಪತ್ನಿ ಹಾಗೂ ಮಕ್ಕಳಿಗೆ ಸೇರಿದ ₹70,000 ಮೌಲ್ಯದ ಚಿನ್ನಾಭರಣ ಹೊರತು ಸಿಬಿಐಗೆ ಏನೂ ಸಿಗಲಿಲ್ಲ. ನನಗೆ ಕ್ಲೀನ್ಚಿಟ್ ಸಿಕ್ಕಿದೆ’ ಎಂದು ಸಿಸೋಡಿಯಾ ಹೇಳಿಕೊಂಡಿದ್ದರು. ಸಿಸೋಡಿಯಾ ಯಾವಾಗ ಬೇಕಾದರೂ ಬಂಧನಕ್ಕೆ ಒಳಗಾಗಬಹುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದರು. ‘ಪ್ರಧಾನಿ ಮೋದಿ ಅವರ ಒತ್ತಡದಲ್ಲಿ ಸಿಬಿಐ ಕೆಲಸ ಮಾಡುತ್ತಿದ್ದು, ಕೇಂದ್ರ ಸರ್ಕಾರವು ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದೆ’ ಎಂದು ಆರೋಪಿಸಿದ್ದರು. ಕೇಂದ್ರ ಸರ್ಕಾರವು, ತನಿಖಾ ಸಂಸ್ಥೆಗಳನ್ನು ಬಿಜೆಪಿಯೇತರ ಪಕ್ಷಗಳನ್ನು ಗುರಿಯಾಗಿಸಲು ಬಳಸಿಕೊಳ್ಳುತ್ತಿದೆ ಎಂದು ಬಿಆರ್ಎಸ್ ಸಹ ಆರೋಪಿಸಿತ್ತು. ‘ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಸತ್ಯ ಹರಿಶ್ಚಂದ್ರನ ವಂಶಸ್ಥರು ಇದ್ದಾರೆಯೇ’ ಎಂದು ಕಿಡಿಕಾರಿತ್ತು.

ಚುನಾವಣೆಗೂ ಮುನ್ನ...

l ತಮಿಳುನಾಡು ವಿಧಾನಸಭೆಗೆ ಮತದಾನ ನಡೆಯುವ ಕೆಲವು ದಿನಗಳ ಮುನ್ನ, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಪುತ್ರಿ ಸೆಂತಾಮರೈ ಅವರ ನಿವಾಸದಲ್ಲಿ ಇ.ಡಿ
ಶೋಧನೆ ನಡೆಸಿತ್ತು

l ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುಣಾವಣೆ ನಡೆಯುವ ಮುನ್ನ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ಶೋಧನೆ ನಡೆಸಿತ್ತು. ‘ಚುನಾವಣಾ ಹೋರಾಟಕ್ಕೆ ಆದಾಯ ತೆರಿಗೆ ಇಲಾಖೆಯೂ ಕೈಜೋಡಿಸಿದೆ’ ಎಂದು ಅಖಿಲೇಶ್ ಆರೋಪಿಸಿದ್ದರು.

l ಛತ್ತೀಸಗಡದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣದಲ್ಲಿ ಆಡಳಿತಾರೂಢ ಪಕ್ಷದ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳ ನಿವಾಸಗಳಲ್ಲಿ ಇ.ಡಿ. ಶೋಧನೆ ನಡೆಸಿತ್ತು. ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ಇ.ಡಿ ದಾಳಿಯನ್ನು ಖಂಡಿಸಿದ್ದರು

l ಗುಜರಾತ್ನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ನಲ್ಲಿ ಉಳಿಸಿಕೊಂಡ ಬಳಿಕ, ಕರ್ನಾಟಕದ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿ ಶೋಧನೆ ನಡೆಸಲಾಗಿತ್ತು

ಆಧಾರ: ಪಿಟಿಐ, ಆದಾಯ ತೆರಿಗೆ ಇಲಾಖೆ ಟ್ವೀಟ್ಗಳು ಮತ್ತು ಪತ್ರಿಕಾ ಪ್ರಕಟಣೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.