ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಿದ್ದ ಬಿಕ್ಕಟ್ಟಿನಿಂದ ಈಗಷ್ಟೇ ಹೊರಬಂದು ಒಂದಿಷ್ಟು ಚೇತರಿಕೆ ಕಾಣುತ್ತಿರುವ ದೇಶದ ಜನರಿಗೆ ಔಷಧಗಳ ಬೆಲೆ ಏರಿಕೆ ಪ್ರಹಾರ ಶುರುವಾಗಿದೆ. ಅಗತ್ಯ ಔಷಧಗಳ ಬೆಲೆಯನ್ನು ಶೇ 12.12ರವರೆಗೆ ಏರಿಕೆ ಮಾಡಲು ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರ (ಎನ್ಪಿಪಿಎ) ಅವಕಾಶ ನೀಡಿದೆ. ಏಪ್ರಿಲ್ 1ರಿಂದ ಹೊಸ ದರನೀತಿ ಜಾರಿಯಾಗುತ್ತಿದೆ. ನೋವು ನಿವಾರಕ ಔಷಧಗಳು, ಆ್ಯಂಟಿಬಯಾಟಿಕ್ಸ್, ಸೋಂಕು ನಿವಾರಕಗಳು, ಹೃದ್ರೋಗದ ಔಷಧವೂ ಸೇರಿದಂತೆ ಸುಮಾರು 384 ಔಷಧಗಳ ದರ ಏರಿಕೆಯಾಗಬಹುದು. ದರ ಏರಿಕೆ ನಿರ್ಧಾರದಿಂದ ಮಧುಮೇಹ, ರಕ್ತದೊತ್ತಡ, ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಇನ್ನು ಮುಂದೆ ಔಷಧಕ್ಕಾಗಿ ಹೆಚ್ಚುವರಿ ಹಣವನ್ನು ತೆರಬೇಕಿದೆ.

2 ವರ್ಷದಲ್ಲಿ ಶೇ 22ರಷ್ಟು ದರ ಏರಿಕೆಗೆ ಅವಕಾಶ: ಅಗತ್ಯ ಔಷಧಗಳ ದರ ಏರಿಕೆ ಮಾಡಿದ್ದು ಇದೇ ಮೊದಲಲ್ಲ. ಔಷಧಗಳ ದರವನ್ನು ಪ್ರತೀ ವರ್ಷವೂ ಪರಿಷ್ಕರಿಸಲಾಗುತ್ತದೆ. ಕಳೆದ ವರ್ಷ ಶೇ 10.7ರವರೆಗೆ ಏರಿಕೆ ಮಾಡಲಾಗಿತ್ತು. ಈ ವರ್ಷ ಶೇ 12.12ರವರೆಗೆ ಹೆಚ್ಚಳಕ್ಕೆ ಅವಕಾಶ ಕೊಡಲಾಗಿದೆ. ಅಂದರೆ ಈ ಎರಡು ವರ್ಷಗಳ ಅವಧಿಯಲ್ಲಿ ಅಗತ್ಯ ಔಷಧಗಳ ದರದಲ್ಲಿ ಶೇ 22.8ರವರೆಗೆ ಏರಿಕೆಯಾಗಿದೆ. ಇದು ಈವರೆಗಿನ ದಾಖಲೆಯ ಏರಿಕೆಯ ಅವಕಾಶ ಎನ್ನಲಾಗಿದೆ.

ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರ (ಎನ್ಪಿಪಿಎ) ಔಷಧಗಳ ದರ ನಿಯಂತ್ರಿಸುವ ಕೆಲಸ ಮಾಡುತ್ತದೆ. ಜನರ ಜೀವಕ್ಕೆ ಅತೀ ಅಗತ್ಯ ಎನಿಸುವ ಔಷಧಗಳ ದರವನ್ನು ಪ್ರಾಧಿಕಾರವು ನಿಯಂತ್ರಿಸುತ್ತದೆ. ‘2013ರ ಔಷಧ ದರ ನಿಯಂತ್ರಣ ಆದೇಶ’ದಲ್ಲಿ ಈ ವಿಧಾನವನ್ನು ಸ್ಪಷ್ಟಪಡಿಸಲಾಗಿದೆ. ಅಗತ್ಯವಲ್ಲದ ಔಷಧಗಳ ದರ ನಿಯಂತ್ರಣವು ಈ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿಲ್ಲ. ಅಗತ್ಯವಲ್ಲದ ಔಷಧಗಳ ದರವು ಪ್ರತೀ ವರ್ಷ ಸುಮಾರು ಶೇ 10ರಷ್ಟು ಏರಿಕೆಯಾಗುತ್ತದೆ. ಅಚ್ಚರಿಯೆಂದರೆ, ಸತತ ಎರಡು ವರ್ಷಗಳಿಂದ, ಅಗತ್ಯವಲ್ಲದ ಔಷಧಗಳ ಬೆಲೆಗಿಂತಲೂ ಅಗತ್ಯ ಔಷಧಗಳ ಬೆಲೆ ಹೆಚ್ಚಳವಾಗಿ ದಾಖಲೆ ನಿರ್ಮಿಸಿವೆ.

ಡಬ್ಲ್ಯುಪಿಐ ಮಾನದಂಡ: ಒಂದು ವರ್ಷದಲ್ಲಿ ದರ ಏರಿಕೆ ಯಾವ ಪ್ರಮಾಣದಲ್ಲಿರಬೇಕು ಎಂದು ನಿರ್ಧರಿಸಲು ಮಾನದಂಡವೊಂದನ್ನು ಅನುಸರಿಸಲಾಗುತ್ತದೆ. ಸಗಟು ಬೆಲೆ ಸೂಚ್ಯಂಕದ (ಡಬ್ಲ್ಯುಪಿಐ) ಆಧಾರದಲ್ಲಿ ಅಗತ್ಯ ಔಷಧಗಳ ದರ ಏರಿಕೆಯ ಗರಿಷ್ಠ ಮಿತಿಯನ್ನು ನಿಗದಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನೀಡುವ ಸಗಟು ದರ ಸೂಚ್ಯಂಕವೇ ಔಷಧಗಳ ಬೆಲೆ ಏರಿಕೆ ಪ್ರಮಾಣದ ನಿರ್ಣಾಯಕ ಅಂಶ.

2022ರಲ್ಲಿ ಸಗಟು ದರ ಸೂಚ್ಯಂಕವು ಶೇ 12.12ರಷ್ಟು ಇದೆ ಎಂದಿರುವ ಪ್ರಾಧಿಕಾರವು, ಔಷಧಗಳ ದರ ಏರಿಕೆಯ ಗರಿಷ್ಠ ಮಿತಿ ಅದುವೇ ಎಂದು ಪ್ರಕಟಿಸಿದೆ. ಇದೇ ಮಾರ್ಚ್ 27ರಂದು ಹೊರಡಿಸಿರುವ ಸುತ್ತೋಲೆಯಲ್ಲಿ 2023–24ನೇ ಆರ್ಥಿಕ ವರ್ಷಕ್ಕೆ ಗರಿಷ್ಠ ದರದ ಏರಿಕೆಯನ್ನು ಪ್ರಸ್ತಾಪಿಸಿದೆ. ಬೆಲೆ ನಿಗದಿಯಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಹೇಳಲಾಗುತ್ತದೆಯಾದರೂ, ಪ್ರಾಧಿಕಾರವು ಏರಿಕೆ ದರ ನಿಗದಿಪಡಿಸಲು ಅನುಸರಿಸುವ ಮಾನದಂಡವು ಕೇಂದ್ರ ಸರ್ಕಾರದ ದತ್ತಾಂಶಗಳನ್ನೇ ಆಧರಿಸಿದೆ ಎಂಬುದು ಗಮನಿಸಬೇಕಾದ ಅಂಶ.

ಔಷಧ ಕಂಪನಿಗಳು ಶೇ 12.12ರವರೆಗೂ ಬೆಲೆ ಏರಿಕೆ ಮಾಡಲು ಅವಕಾಶವಿದೆ. ಆದರೆ, ಕಳೆದ ವರ್ಷ ಶೇ 10.7ರಷ್ಟು ಗರಿಷ್ಠ ಬೆಲೆ ಏರಿಕೆ ನಿಗದಿ ಮಾಡಿದಾಗ, ಕೆಲವು ಕಂಪನಿಗಳು ಶೇ 0.5ರಿಂದ ಶೇ 5ರವರೆಗೆ ಬೆಲೆ ಹೆಚ್ಚಿಸಿದ್ದವು. ಗರಿಷ್ಠ ಮಿತಿ ಇದ್ದ ಮಾತ್ರಕ್ಕೆ ಅಲ್ಲಿಯವರೆಗೆ ಹೆಚ್ಚಿಸಲು ಅವಕಾಶವಿದ್ದರೂ, ಕೆಲವು ಕಂಪನಿಗಳು ಹಾಗೆ ಮಾಡುವುದಿಲ್ಲ. ಮಾರುಕಟ್ಟೆಯ ಒತ್ತಡ, ಪ್ರತಿಸ್ಪರ್ಧಿ ಕಂಪನಿಗಳ ಸ್ಪರ್ಧೆ, ಮಾರುಕಟ್ಟೆಗೆ ಪೂರೈಕೆಯಾಗುವ ಸರಕಿನ ಪ್ರಮಾಣವನ್ನು ಆಧರಿಸಿ, ಕಂಪನಿಗಳು ದರ ನಿರ್ಧರಿಸುತ್ತವೆ. ಈ ವರ್ಷ ಇದೇ ಪರಿಪಾಟ ಮುಂದುವರಿಯುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಆದರೂ ಗರಿಷ್ಠ ಮಿತಿಯವರೆಗೂ ದರ ಹೆಚ್ಚಿಸಲು ಕಂಪನಿಗಳಿಗೆ ಅವಕಾಶವಂತೂ ಇದೆ.

ದುಬಾರಿಯಾಗಲಿರುವ ಔಷಧಗಳು

l ನೋವು ನಿವಾರಕಗಳಾದ ಡೈಕ್ಲೊಫಿನಿಕ್, ಐಬ್ರೂಫಿನ್, ಮೆಫೆನಮಿಕ್ ಆ್ಯಸಿಡ್, ಪ್ಯಾರಾಸಿಟಾಮಲ್, ಮಾರ್ಫಿನ್ ಇತ್ಯಾದಿ

l ಆ್ಯಂಟಿಬಯಾಟಿಕ್ಗಳಾದ ಅಮಾಕ್ಸಲಿನ್, ಆಂಪಿಸಿಲಿನ್, ಬೆನ್ಝೈಲ್ಪೆನ್ಸಿಲಿನ್, ಸೆಫಡ್ರೊಕ್ಸಿಲ್, ಸೆಫಝೋಲಿನ್ ಇತ್ಯಾದಿ

l ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ ಔಷಧಗಳು

l ಪಾರ್ಕಿನ್ಸನ್ ಮತ್ತು ಡಿಮೆನ್ಷಿಯಾ ಔಷಧಗಳು

l ಆ್ಯಂಟಿ ಕಾನ್ವಲೆಂಟ್ ಔಷಧಗಳು

l ಟಿಬಿ ಚಿಕಿತ್ಸೆಯಲ್ಲಿ ಬಳಸುವ ಅಮಿಕಾಸಿನ್ ಮೊದಲಾದ ಔಷಧಗಳು

l ಆ್ಯಂಟಿ ಫಂಗಲ್ ಔಷಧಗಳು

l ಆ್ಯಂಟಿ ವೈರಲ್ ಔಷಧ ಆಸಿಕ್ಲೊವಿರ್ ಹಾಗೂ ಇತರೆ

l ಮಲೇರಿಯಾ ಚಿಕಿತ್ಸೆಗೆ ಬಳಸುವ ಔಷಧಗಳು

l ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುವ ಔಷಧ

l ರಕ್ತಹೀನತೆ ಗುಣಪಡಿಸುವ ಔಷಧಗಳಾದ ಫೋಲಿಕ್ ಆ್ಯಸಿಡ್ ಹಾಗೂ ಇತರೆ

l ಹೃದ್ರೋಗಕ್ಕೆ ಸಂಬಂಧಿಸಿದ ಡಿಲಿಟಝೆಮ್, ಮೆಟೊಪ್ರೊಲಿಲ್ ಇತ್ಯಾದಿ

‘ಸರ್ಕಾರ ಮಾಡಬೇಕಾದದ್ದು ಸಾಕಷ್ಟಿದೆ’

ಭಾರತದಲ್ಲಿ ತಯಾರಿಸಲಾಗುವ ಅತ್ಯಗತ್ಯದ ಔಷಧಗಳಿಗೆ ಅಗತ್ಯವಿರುವ ಕಚ್ಚಾ ವಸ್ತುಗಳಿಗಾಗಿ (ಆ್ಯಕ್ಟಿವ್ ಫಾರ್ಮಾಸ್ಯುಟಿಕಲ್ ಇಂಗ್ರೀಡಿಯಂಟ್–ಎಪಿಐ) ವಿದೇಶಗಳನ್ನೇ ಅವಲಂಬಿಸಬೇಕಾಗಿದೆ. ಭಾರತಕ್ಕೆ ಪ್ರತಿ ವರ್ಷ ಆಮದಾಗುವ ಎಪಿಐಗಳಲ್ಲಿ ಚೀನಾದಿಂದ ಬರುವ ಎಪಿಐಗಳ ಪ್ರಮಾಣ ಶೇ 60ರಷ್ಟನ್ನು ದಾಟುತ್ತದೆ. ಆದರೆ, ದೇಶೀಯವಾಗಿ ಎಪಿಐಗಳ ತಯಾರಿಕೆಯಲ್ಲಿ ಪ್ರಗತಿ ಸಾಧಿಸದೇ ಇರುವುದೇ ವಿದೇಶಗಳ ಮೇಲಿನ ಅವಲಂಬನೆ ಮತ್ತು ವಿಪರೀತ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಭಾರತದಲ್ಲಿ ತಯಾರಿಸಲಾಗುವ ಔಷಧಗಳಿಗೆ 56 ಸ್ವರೂಪದ ಎಪಿಐಗಳ ಅಗತ್ಯವಿದೆ. ಇವುಗಳಲ್ಲಿ ಕೆಲವನ್ನು ಬಿಟ್ಟರೆ ಉಳಿದೆಲ್ಲವನ್ನೂ ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕದ ನಂತರದ ವರ್ಷಗಳಲ್ಲಿ ಎಪಿಐಗಳ ದರವನ್ನು ಚೀನಾ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. 2021–22ನೇ ಸಾಲಿನಲ್ಲಿ ಚೀನಾದಿಂದ ಆಮದು ಮಾಡಿಕೊಂಡ ಪ್ರತಿ ಟನ್ ಎಪಿಐಗೆ ಸರಾಸರಿ ₹6.56 ಲಕ್ಷ ಪಾವತಿಸಲಾಗಿತ್ತು. 2022–23ನೇ ಸಾಲಿನಲ್ಲಿ ಇದೇ ಬೆಲೆ ₹9.64 ಲಕ್ಷಕ್ಕೆ ಏರಿಕೆಯಾಗಿದೆ.

ಎಪಿಐಗಳಿಗಾಗಿ ಚೀನಾದ ಅವಲಂಬನೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ಅವು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರದೇ ಇರುವುದು, ವಿದೇಶಗಳ ಮೇಲಿನ ಅವಲಂಬನೆ ತಗ್ಗದೇ ಇರುವುದಕ್ಕೆ ಕಾರಣವಾಗಿದೆ. ಅತ್ಯಗತ್ಯದ 56 ಎಪಿಐಗಳಲ್ಲಿ 35 ಎಪಿಐಗಳನ್ನು ದೇಶೀಯವಾಗಿಯೇ ತಯಾರಿಸಲು ಕೇಂದ್ರ ಸರ್ಕಾರವು ಅನುಮತಿ ನೀಡಿತ್ತು. ಇದಕ್ಕಾಗಿ ಕೆಲವಾರು ನಿಯಮಗಳನ್ನು ಸಡಿಲ ಮಾಡಿತ್ತು. ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಎಪಿಐ ತಯಾರಿಕಾ ಘಟಕಗಳನ್ನು ಆರಂಭಿಸಲಾಗಿತ್ತು. ಆದರೆ, ಇಲ್ಲಿ ತಯಾರಿಸಲಾದ ಎಪಿಐಗಳ ದರವು, ಚೀನಾದಿಂದ ಆಮದು ಮಾಡಿಕೊಂಡ ಎಪಿಐಗಳ ದರಕ್ಕಿಂತ ದುಬಾರಿಯಾಗಿತ್ತು. ಇದರಿಂದಾಗಿ ಔಷಧ ತಯಾರಕರು ಆಮದು ಎಪಿಐಗಳನ್ನೇ ಖರೀದಿಸಿದರು. ಪರಿಣಾಮವಾಗಿ ದೇಶೀಯ ಎಪಿಐ ಘಟಕಗಳು ಮುಚ್ಚಿದವು. ಎಪಿಐಗಳ ತಯಾರಿಕೆಗೆ ಅಗತ್ಯವಿರುವ ಮೂಲವಸ್ತುಗಳನ್ನು ದೇಶೀಯವಾಗಿ ತಯಾರಿಸದೆ, ವಿದೇಶದಿಂದ ಆಮದು ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡಲಾಯಿತು. ಈ ಕಾರಣದಿಂದಲೇ ದೇಶೀಯವಾಗಿ ತಯಾರಿಸಲಾದ ಎಪಿಐಗಳ ದರ ದುಬಾರಿಯಾಯಿತು ಎಂದು ವಿಶ್ಲೇಷಿಸಲಾಗಿದೆ.

ಔಷಧಗಳ ದರವನ್ನು ನಿಯಂತ್ರಣದಲ್ಲಿ ಇಡಲು ಸರ್ಕಾರವು ಹಲವು ಹಂತಗಳಲ್ಲಿ ಕೆಲಸ ಮಾಡಬೇಕಿದೆ ಎಂಬುದು ತಜ್ಞರ ಅಭಿಪ್ರಾಯ. ಕಾರ್ಮಿಕರ ವೇತನ, ಕಚ್ಚಾವಸ್ತುಗಳ ಲಭ್ಯತೆ, ಮೂಲಸೌಕರ್ಯ ಮತ್ತು ಆರ್ಥಿಕ ನೆರವು, ಎಪಿಐಗಳ ಬೆಲೆಯನ್ನು ನಿರ್ಧರಿಸುವ ಅಂಶಗಳಾಗಿವೆ. ಚೀನಾಕ್ಕಿಂತ ಭಾರತದಲ್ಲಿ ಕಡಿಮೆ ವೇತನಕ್ಕೆ ಕಾರ್ಮಿಕರು ಲಭ್ಯವಿದ್ದಾರೆ. ಆದರೆ, ದೇಶೀಯ ಕಚ್ಚಾವಸ್ತುಗಳ ಪೂರೈಕೆ ಇಲ್ಲ. ಎಪಿಐಗಳ ತಯಾರಿಕೆಗೆ ಅಗತ್ಯವಿರುವ ಗುಣಮಟ್ಟದ ಸುಣ್ಣದ ಗಣಿಗಳು ಭಾರತದಲ್ಲಿ ಇಲ್ಲ. ಜತೆಗೆ, ಭಾರತದಲ್ಲಿನ ಪೆಟ್ರೊಕೆಮಿಕಲ್ಸ್ ಸಂಸ್ಕರಣ ಘಟಕಗಳು ಎಪಿಐ ತಯಾರಿಕೆಗೆ ಅಗತ್ಯವಾದ ರಾಸಾಯನಿಕ ವಸ್ತುಗಳನ್ನು ಸಂಸ್ಕರಿಸುವುದಿಲ್ಲ. ಈ ದಿಸೆಯಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಾಕ್ಸಿಸ್ ಗ್ಲೋಬಲ್ ಅಲಯನ್ಸ್ (ಪಿಜಿಎ) ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ.

ಇದಲ್ಲದೆ, ಭಾರತದಲ್ಲಿ ವಿದ್ಯುತ್ ಲಭ್ಯತೆ ಮತ್ತು ಪೂರೈಕೆಯಲ್ಲಿ ಸ್ಥಿರತೆ ಇಲ್ಲ. ಪೂರೈಕೆಯಲ್ಲಿನ ನಷ್ಟದ ಹೊರೆಯನ್ನು ಬಳಕೆದಾರರ ಮೇಲೆ ಹೇರಲಾಗುತ್ತದೆ. ಇದರಿಂದ ವಿದ್ಯುತ್ಗಾಗಿ ಎಪಿಐ ತಯಾರಕರು ಹೆಚ್ಚು ಹಣ ವ್ಯಯ ಮಾಡಬೇಕಾಗುತ್ತದೆ. ಈ ಎಲ್ಲಾ ಅಡೆತಡೆಗಳನ್ನು ಮೊದಲು ನಿವಾರಿಸಬೇಕು. ಆನಂತರ ಎಪಿಐಗಳನ್ನು ದೇಶೀಯವಾಗಿ ತಯಾರಿಸಲು ಒತ್ತು ನೀಡಬೇಕು. ಆಗ ಮಾತ್ರ ದೇಶೀಯವಾಗಿ ಕಡಿಮೆ ವೆಚ್ಚದಲ್ಲಿ ಎಪಿಐ ತಯಾರಿಸಲು ಸಾಧ್ಯವಾಗುತ್ತದೆ ಎಂದು ವರದಿ ಹೇಳಿದೆ.

ಹಲವು ತೆರಿಗೆಗಳ ಹೊರೆ

ಆಮದು ಎಪಿಐಗಳ ದರ ಏರಿಕೆಯಾಗಲು ಸರ್ಕಾರದ ತೆರಿಗೆ ನೀತಿಯೂ ಒಂದು ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಬಹುತೇಕ ಎಪಿಐಗಳ ಮೇಲೆ ಶೇ7.5ರಷ್ಟು ಆಮದು ಸುಂಕ ವಿಧಿಸಲಾಗುತ್ತಿದೆ. ಜೀವರಕ್ಷಕ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುವ ಕೆಲವು ಎಪಿಐಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ. ಕೆಲವು ಎಪಿಐಗಳ ಮೇಲೆ ಶೇ 10ರಷ್ಟು ಆಮದು ಸುಂಕ ವಿಧಿಸಲಾಗುತ್ತಿದೆ.

ಆಮದು ಸುಂಕ ಹೊರತುಪಡಿಸಿ, ಗರಿಷ್ಠ ಶೇ 18ರಷ್ಟು ಜಿಎಸ್ಟಿಯನ್ನು ಎಪಿಐಗಳ ಮೇಲೆ ವಿಧಿಸಲಾಗುತ್ತಿದೆ. ಕೆಲವು ಎಪಿಐಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಿದ್ದರೆ, ಕೆಲವಕ್ಕೆ ಶೇ 5ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಜಿಎಸ್ಟಿ ಜಾರಿಗೂ ಮುನ್ನ ಶೇ 12.5ರಷ್ಟು ಮೌಲ್ಯವರ್ಧಿತ ತೆರಿಗೆ ವಿಧಿಸಲಾಗುತ್ತಿತ್ತು. ಜಿಎಸ್ಟಿ ಜಾರಿ ನಂತರ ಅದನ್ನು ಶೇ 18ರವರೆಗೂ ಏರಿಕೆ ಮಾಡಲಾಯಿತು. ಇದರಿಂದ ಎಪಿಐಗಳ ಮೇಲೆ ತೆರಿಗೆಯ ಹೊರೆ ಹೆಚ್ಚಳವಾಯಿತು. ಆಮದು ಎಪಿಐಗಳ ಮೇಲೆ ಶೇ 10ರಷ್ಟು ಸರ್ಚಾರ್ಜ್ ಸಹ ವಿಧಿಸಲಾಗುತ್ತಿದೆ. 2022ರ ಆಗಸ್ಟ್ನಲ್ಲಿ ಕೆಲವು ಆಮದು ಎಪಿಐಗಳ ಮೇಲೆ ಶೇ 10ರಷ್ಟು ‘ಆ್ಯಂಟಿ ಡಂಪಿಂಗ್ ಡ್ಯೂಟಿ’ ವಿಧಿಸಲಾಗುತ್ತಿದೆ. ದೇಶೀಯವಾಗಿ ಲಭ್ಯವಿದ್ದರೂ, ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳಲು ಸಾಧ್ಯವಿರುವ ಎಪಿಐಗಳ ಆಮದನ್ನು ಕಡಿಮೆ ಮಾಡಲು ಈ ಸ್ವರೂಪದ ತೆರಿಗೆ ವಿಧಿಸಲಾಗುತ್ತದೆ. ಈಗ ಈ ತೆರಿಗೆ ಸಹ ಜಾರಿಯಲ್ಲಿರುವ ಕಾರಣ, ಆಮದು ಎಪಿಐಗಳ ಬೆಲೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಪರಿಣಾಮವಾಗಿ ಔಷಧಗಳ ಬೆಲೆಯಲ್ಲೂ ಏರಿಕೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.