ಕಾರ್ಡಿಯೊ/ಜಿಮ್‌ಗಳಲ್ಲಿ ಅಬ್ಬರದ ಸಂಗೀತ ಬಳಸುತ್ತಿದ್ದರೂ ಅಪಾಯ
ಕಾರ್ಡಿಯೊ ಮತ್ತು ಜಿಮ್‌ಗಳಲ್ಲಿ ಅಬ್ಬರದ ಸಂಗೀತ ಬಳಕೆಯಲ್ಲಿದೆ. ಬ್ರಿಟನ್ ಮತ್ತು ಜರ್ಮನಿಯಲ್ಲಿ ಅಧ್ಯಯನಕ್ಕೆ ಒಳಪಡಿಸಿದ ಜಿಮ್ ಸೆಂಟರ್‌ಗಳಲ್ಲಿ 100 ಡೆಸಿಬಲ್‌ಗಿಂತಲೂ ಹೆಚ್ಚಿನ ಮಟ್ಟದ ಸಂಗೀತವನ್ನು ಕೇಳಿಸಲಾಗುತ್ತಿತ್ತು. ಕಾರ್ಡಿಯೊ ಮತ್ತು ವ್ಯಾಯಾಮದಲ್ಲಿ ಭಾಗಿಯಾದವರಲ್ಲಿ ಉತ್ಸಾಹ ತುಂಬಲು ಅಬ್ಬರದ ಸಂಗೀತ ಬಳಸಲಾಗುತ್ತದೆ ಎಂದು ಜಿಮ್ ತರಬೇತುದಾರರು ಹೇಳಿದ್ದರು. ಅಂತಹ ವಾತಾವರಣದಲ್ಲಿ ಕಾರ್ಡಿಯೊ ಮತ್ತು ವ್ಯಾಯಾಮ ಮಾಡುತ್ತಿದ್ದ 500 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ ಹಲವರು ಹೃದಯಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರ ಮಿದಳಿನ ಅಮಿಗ್ಡಲಾ //ಅಗತ್ಯವಾಗಿ// ಹೆಚ್ಚು ಸಕ್ರಿಯವಾಗಿತ್ತು ಎಂಬುದನ್ನು ಪಿಇಟಿ ಸ್ಕ್ಯಾನ್ ಮೂಲಕ ಪತ್ತೆ ಮಾಡಲಾಗಿತ್ತು. ಅಬ್ಬರದ ಸಂಗೀತವು ರಕ್ತದ ಒತ್ತಡವನ್ನು ಹೆಚ್ಚಿಸುತ್ತಿದ್ದುದಲ್ಲದೇ ವ್ಯಾಯಾಮದಿಂದ ಅವರ ರಕ್ತದೊತ್ತಡ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗುತ್ತಿತ್ತು ಎಂಬುದನ್ನು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಭಾರತದಲ್ಲೂ ಕಾರ್ಡಿಯೊ ಮತ್ತು ಜಿಮ್‌ಗಳಲ್ಲಿ ಅಬ್ಬರದ ಸಂಗೀತ ಹಾಕುವ ಪರಿಪಾಟವಿದೆ. ಕನ್ನಡದ ಹಲವು ನಟರೂ ಸೇರಿ ಭಾರತದ ಹಲವು ಗಣ್ಯರು ಜಿಮ್‌ನಲ್ಲಿಯೇ ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟ ಹಲವು ನಿದರ್ಶನಗಳಿವೆ. ಇನ್ನು ಅಬ್ಬರದ ಸಂಗೀತ ಕಾರ್ಯಕ್ರಮಗಳ ವೇಳೆ ವೇದಿಕೆಯಲ್ಲೇ ಗಾಯಕರು ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟ ಸಂಖ್ಯೆಯೂ ಕಡಿಮೆಯಿಲ್ಲ. ಗುಜರಾತ್‌ನಲ್ಲಿ ಅಬ್ಬರದ ಸಂಗೀತದ ಗಾರ್ಬಾ ನೃತ್ಯದ ವೇಳೆ 15 ವರ್ಷದ ಬಾಲಕ ಸೇರಿ ಹಲವರು ಮೃತಪಟ್ಟ ಬಳಿಕ ವ್ಯಾಯಾಮ ಮತ್ತು ಸಂಗೀತ ಕಾರ್ಯಕ್ರಮಗಳಲ್ಲಿ ಗಣ್ಯರು ಮೃತಪಟ್ಟ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.