ಚಿಂತಕರ ಚಾವಡಿ ‘ಸೆಂಟರ್ ಫಾರ್ ಪಾಲಿಸಿ ರಿಸರ್ಚ್–ಸಿಪಿಆರ್’ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿ ನೀಡಿದ್ದ ಪರವಾನಗಿಯನ್ನು ಕಳೆದ ವಾರದಲ್ಲಿ ಕೇಂದ್ರ ಸರ್ಕಾರ ರದ್ದು ಮಾಡಿದೆ. ಕಳೆದ 50 ವರ್ಷಗಳಿಂದ ದೇಶದಲ್ಲಿ ಈ ಸ್ವಯಂಸೇವಾ ಸಂಸ್ಥೆ ಕೆಲಸ ಮಾಡುತ್ತಿತ್ತು. ‘ವಿದೇಶಗಳಿಂದ ಪಡೆದ ದೇಣಿಗೆಯನ್ನು ದುರುಪಯೋಗ ಪಡಿಸಿಕೊಂಡಿದ್ದೀರಿ. ಅಭಿವೃದ್ಧಿ ಯೋಜನೆಗಳ ವಿರುದ್ಧ ಕಾನೂನು ಹೋರಾಟ ನಡೆಸುವುದು, ಆ ಮೂಲಕ ದೇಶದ ಆರ್ಥಿಕತೆಗೆ ಹೊಡೆತ ಕೊಡುವ ಉದ್ದೇಶವಿದೆ, ಪ್ರತಿಭಟನೆಗಳಿಗೆ ದೇಣಿಗೆ ನೀಡುತ್ತಿದ್ದೀರಿ ಎನ್ನುವ ಕಾರಣ ನೀಡಿ ಸಿಪಿಆರ್ ಪರವಾನಗಿಯನ್ನು ರದ್ದು ಮಾಡಲಾಗಿದೆ’ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಸರ್ಕಾರಗಳ ನೀತಿಗಳಲ್ಲಿನ ವೈಫಲ್ಯಗಳನ್ನು ತನ್ನ ವರದಿ ಮೂಲಕ ಸಿಪಿಆರ್ ಎತ್ತಿ ತೋರಿಸುತ್ತಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೈ.ವಿ.ಚಂದ್ರಚೂಡ್, ಹಿರಿಯ ಪತ್ರಕರ್ತ ಬಿ.ಜಿ. ವರ್ಗೀಸ್ ಸೇರಿದಂತೆ ಹಲವು ಗಣ್ಯರು ಈ ಸಂಸ್ಥೆಯ ಸದಸ್ಯರಾಗಿದ್ದರು. ‘ನಿಮ್ಮ ಸಂಶೋಧನಾ ವರದಿಗಳನ್ನು ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೀರಿ ಎನ್ನುವ ಕಾರಣಕ್ಕೂ ನಿಮ್ಮ ಪರವಾನಗಿಯನ್ನು ರದ್ದು ಮಾಡಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ’ ಎಂದು ಸಿಪಿಆರ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಯಾವುದೇ ವಿಚಾರಧಾರೆಯ ಸರ್ಕಾರವು ಕೇಂದ್ರ ಸರ್ಕಾರದಲ್ಲಿ ಆಡಳಿತ ನಡೆಸಿದಾಗಲೂ, ನೂರಾರು ಸಂಖ್ಯೆಯಲ್ಲಿ ಸ್ವಯಂಸೇವಾ ಸಂಸ್ಥೆಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ, ಸ್ವಯಂಸೇವಾ ಸಂಸ್ಥೆಗಳ ಪರವಾನಗಿಯನ್ನು ರದ್ದು ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಈ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಸ್ವಯಂಸೇವಾ ಸಂಸ್ಥೆಗಳು ವಿದೇಶಗಳಿಂದ ದೇಣಿಗೆ ಪಡೆದುಕೊಳ್ಳುವ ಹಾಗೂ ಆ ದೇಣಿಗೆಗಳನ್ನು ಹೇಗೆಲ್ಲಾ ಬಳಸಿಕೊಳ್ಳಬೇಕು ಎಂಬುದರ ಮೇಲೆ ಹೆಚ್ಚು ಹೆಚ್ಚು ನಿರ್ಬಂಧ ಹೇರಲಾಗುತ್ತಿದೆ.

ದೇಣಿಗೆ ಸಂಗ್ರಹ ಹಾಗೂ ವಿನಿಯೋಗದಲ್ಲಿ ಅಕ್ರಮ: ಕೇಂದ್ರ ಗೃಹ ಸಚಿವಾಲಯವು 2019ರಿಂದಲೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಪರಿಶೋಧನೆ ನಡೆಸುತ್ತಿದೆ. ಈ ವೇಳೆ ದೊರೆತ ಸಾಕ್ಷ್ಯಗಳು ಹಾಗೂ ಅಧಿಕಾರಿಗಳು ಸಲ್ಲಿಸಿದ ವರದಿಗಳ ಆಧಾರದಲ್ಲಿ ಸ್ವಯಂಸೇವಾ ಸಂಸ್ಥೆಗಳ ಪರವಾನಗಿಗಳನ್ನು ರದ್ದು ಮಾಡಲಾಗುತ್ತಿದೆ. ಚೀನಾದಿಂದ ದೇಣಿಗೆ ಸಂಗ್ರಹಿಸುತ್ತಿವೆ ಎನ್ನುವ ಕಾರಣಕ್ಕೆ ಕೆಲವು ಸಂಸ್ಥೆಗಳ ಪರವಾನಗಿ ರದ್ದಾಗಿವೆ. ಕಾಯ್ದೆಯಲ್ಲಿ ಹೇಳಿರುವಂತೆ ದೇಣಿಗೆಯ ವಿನಿಯೋಗ ನಡೆಯುತ್ತಿಲ್ಲ ಎನ್ನುವ ಕಾರಣಕ್ಕೆ ಕೆಲವು ಸಂಸ್ಥೆಗಳ ಪರವಾನಗಿಯನ್ನು ರದ್ದು ಮಾಡಲಾಗಿವೆ.

ಕೇಂದ್ರದ ಹಗೆತನದ ವರ್ತನೆ–ಆರೋಪ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಬೆಳಕಿಗೆ ತರುವ ವರದಿಗಳನ್ನು ಸಿದ್ಧಪಡಿಸಿದ, ಆರ್‌ಟಿಐ ಮೂಲಕ ಮಾಹಿತಿ ಪಡೆದುಕೊಳ್ಳಲು ಯತ್ನಿಸಿದ, ಧಾರ್ಮಿಕ ಕಾರಣಗಳಿಗಾಗಿ ಕೆಲವು ಧಾರ್ಮಿಕ ಸ್ವಯಂಸೇವಾ ಸಂಸ್ಥೆಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ ಎಂಬಂಥ ಆರೋಪಗಳನ್ನು ಮಾಡಲಾಗಿದೆ.

ಹಲವು ಪ್ರಮುಖ ಸ್ವಯಂಸೇವಾ ಸಂಸ್ಥೆಗಳ ಪರವಾನಗಿಯನ್ನು ರದ್ದು ಮಾಡಿರುವುದನ್ನು ತೀವ್ರವಾಗಿ ವಿರೋಧಿಸಿ, ‘ಕಾನ್‌ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್’ ಎನ್ನುವ ಸ್ವಯಂಸೇವಾ ಸಂಸ್ಥೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಹಿರಂಗ ಪತ್ರವನ್ನು ಬರೆದಿತ್ತು. ‘ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಮುಂದಿಟ್ಟುಕೊಂಡು ಸ್ವಯಂಸೇವಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಕಿರುಕುಳ ನೀಡುತ್ತಿದೆ’ ಎಂದು ಪತ್ರದಲ್ಲಿ ಆರೋಪಿಸಲಾಗಿತ್ತು.

ವಿದೇಶಿ ದೇಣಿಗೆ ಪರವಾನಗಿ ರದ್ದಾದ ಕೆಲವು ಪ್ರಮುಖ ಸಂಸ್ಥೆಗಳ ಕುರಿತ ವಿವರ ಇಲ್ಲಿವೆ.

ಆಕ್ಸ್‌ಫಾಮ್ ಇಂಡಿಯಾ: ಸಂಪತ್ತಿನ ಅಸಮಾನ ಹಂಚಿಕೆ, ಶಿಕ್ಷಣ, ಯುವ ಸಬಲೀಕರಣ ಸೇರಿ ಹಲವು ಪ್ರಮುಖ ವಿಷಯಗಳ ಕುರಿತು ವರದಿಗಳನ್ನು ಸಿದ್ಧಪಡಿಸಿತ್ತು. ಇವುಗಳಲ್ಲಿ ಹಲವು ವರದಿಗಳು ಕೇಂದ್ರ ಸರ್ಕಾರದ ವಿರುದ್ಧ ಇದ್ದವು. ಕೋವಿಡ್ ಸಮಯದಲ್ಲಿ ದೇಶದಲ್ಲಿ ಮಾನವೀಯ ನೆರವು ಕಾರ್ಯವನ್ನು ಸಂಸ್ಥೆ ನಡೆಸಿತ್ತು.

ಅಮ್ನೆಸ್ಟಿ ಇಂಟರ್‌ನ್ಯಾಷನಲ್: ಮಾನವಹಕ್ಕುಗಳ ರಕ್ಷಣೆ ಸಂಬಂಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವ ಸಂಸ್ಥೆ ಇದಾಗಿದೆ. ಈ ಸಂಸ್ಥೆಯ ಭಾರತದ ಶಾಖೆಯನ್ನು ಸರ್ಕಾರವು ಮುಚ್ಚಿಸಿತು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. ‘ಹಾಲ್ಟ್ ದಿ ಹೇಟ್’ ಎನ್ನುವ ಅಭಿಯಾನವನ್ನು ಆರಂಭಿಸಿ, ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ದ್ವೇಷಪೂರಿತ ಹಲ್ಲೆಗಳನ್ನು ದಾಖಲಿಸುತ್ತಿತ್ತು.

ಗ್ರೀನ್‌ಪೀಸ್ ಇಂಡಿಯಾ: ‘ಗೌತಮ್ ಅದಾನಿ ಅವರ ಕಲ್ಲಿದ್ದಲು ಗಣಿಗಾರಿಕೆ ಕಂಪನಿ ಹಾಗೂ ಕೋಲ್ ಇಂಡಿಯಾ ಎನ್ನುವ ಕಂಪನಿಗಳ ವಿರುದ್ಧ ಹಲವು ವರದಿಗಳನ್ನು ಗ್ರೀನ್‌ಪೀಸ್ ಸಂಸ್ಥೆ ಸಿದ್ಧಪಡಿಸಿತ್ತು. ಇದರಿಂದ ಈ ಸಂಸ್ಥೆಯು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು’ ಎಂದು ಬಿಬಿಸಿ ವರದಿ ಮಾಡಿತ್ತು.

ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್: ಈ ಅಂತರರಾಷ್ಟ್ರೀಯ ಸಂಸ್ಥೆಯು ಮಾನವಹಕ್ಕುಗಳ ಸಂಬಂಧ ಕೆಲಸ ಮಾಡುತ್ತಿತ್ತು. ಆರ್‌ಟಿಐ ಮೂಲಕ ಹಲವು ಮಾಹಿತಿಗಳನ್ನು ಕಲೆಹಾಕಿ ವರದಿಗಳನ್ನು ಸಿದ್ಧಪಡಿಸುತ್ತಿತ್ತು. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 20 ಲಕ್ಷ ಅನರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ₹1.36 ಕೋಟಿ ಹಣವನ್ನು ನೀಡಿದೆ ಎನ್ನುವ ಮಾಹಿತಿಯನ್ನು ಸಂಸ್ಥೆ ಬಹಿರಂಗಪಡಿಸಿತ್ತು. ಈ ಮಾಹಿತಿಯನ್ನು ಸಂಸ್ಥೆಯು ಆರ್‌ಟಿಐ ಮೂಲಕ ಕೇಂದ್ರ ಸರ್ಕಾರದಿಂದಲೇ ಪಡೆದುಕೊಂಡಿತ್ತು.

ಚೀನಾದಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎನ್ನುವ ಆರೋಪದ ಮೇಲೆ ‘ರಾಜೀವ್ ಗಾಂಧಿ ಫೌಂಡೇಷನ್’ ಹಾಗೂ ‘ರಾಜೀವ್ ಗಾಂಧಿ ಚಾರಿಟೆಬಲ್ ಟ್ರಸ್ಟ್’ ಸ್ವಯಂಸೇವಾ ಸಂಸ್ಥೆಯ ಪರವಾನಗಿಯನ್ನು ರದ್ದು ಮಾಡಲಾಗಿದೆ.

ಬಿಗಿ ನಿಯಮ

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಕೇಂದ್ರ ಸರ್ಕಾರವು ಹಲವು ಬಾರಿ ಬಿಗಿಗೊಳಿಸಿದೆ. ಕಾಯ್ದೆಯನ್ನು ಅತಿಹೆಚ್ಚು ಕಠಿಣಗೊಳಿಸಿದ್ದು 2020ರಲ್ಲಿ. 2022ರಲ್ಲಿ ಜಾರಿಗೆ ತಂದ ತಿದ್ದುಪಡಿಯಲ್ಲಿ ಕಾಯ್ದೆಗೆ ಗಣನೀಯ ಬದಲಾವಣೆಗಳನ್ನು ಮಾಡಲಾಗಿತ್ತು. ಅವುಗಳಲ್ಲಿ ಅತ್ಯಂತ ಪ್ರಮುಖವಾದುದು ‘ಆಡಳಿತ ವೆಚ್ಚ’ದ್ದು.

ಈ ಹಿಂದೆ ಇದ್ದ ಕಾಯ್ದೆಯ ಪ್ರಕಾರ ಯಾವುದೇ ಸ್ವಯಂಸೇವಾ ಸಂಸ್ಥೆಯು ಪಡೆದುಕೊಂಡ ವಿದೇಶಿ ದೇಣಿಗೆಯಲ್ಲಿ ಗರಿಷ್ಠ ಶೇ 50ರಷ್ಟು ಮೊತ್ತವನ್ನು ಆಡಳಿತ ವೆಚ್ಚ ಎಂದು ಬಳಸಿಕೊಳ್ಳಬಹುದಿತ್ತು. 2020ರಲ್ಲಿ ಜಾರಿಗೆ ತಂದ ತಿದ್ದುಪಡಿಯಲ್ಲಿ ಈ ಸ್ವರೂಪದ ಬಳಕೆಯ ಪ್ರಮಾಣಕ್ಕೆ ಭಾರಿ ಮಿತಿ ಹೇರಲಾಯಿತು. ವಿದೇಶಿ ದೇಣಿಗೆಯಲ್ಲಿ ಆಡಳಿತ ವೆಚ್ಚದ ಗರಿಷ್ಠ ಪ್ರಮಾಣವನ್ನು ಶೇ 20ಕ್ಕೆ ಇಳಿಸಲಾಯಿತು. ಈ ಹಿಂದೆ ಆಡಳಿತ ವೆಚ್ಚವಾಗಿ ವಿದೇಶಿ ದೇಣಿಗೆಯಲ್ಲಿ ಹೆಚ್ಚು ಪ್ರಮಾಣವನ್ನು ಬಳಸುತ್ತಿದ್ದ ಸ್ವಯಂಸೇವಾ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಈ ಮಿತಿಯು ಭಾರಿ ತೊಡಕಾಯಿತು. ಈ ಮಿತಿಯನ್ನು ಮೀರಿದ ಸ್ವಯಂಸೇವಾ ಸಂಸ್ಥೆಗಳ ವಿದೇಶಿ ದೇಣಿಗೆ ಪರವಾನಗಿಯನ್ನು ಕೇಂದ್ರ ಸರ್ಕಾರವು ರದ್ದು ಮಾಡಿತು. ಇಲ್ಲವೇ ಅವುಗಳ ಪರವಾನಗಿಯನ್ನು ವಿವಿಧ ಕಾರಣಗಳೊಡ್ಡಿ, ನವೀಕರಿಸದೇ ಇದ್ದುದ್ದರಿಂದ ಅವು ನಿಷ್ಕ್ರಿಯವಾದವು.

ಇದಲ್ಲದೇ, ಯಾವ ಉದ್ದೇಶಕ್ಕೆ ಎಂದು ದೇಣಿಗೆ ಪಡೆಯಲಾಗಿರುತ್ತದೆಯೋ ಅದೇ ಉದ್ದೇಶಕ್ಕೆ ದೇಣಿಗೆಯನ್ನು ಬಳಸಬೇಕು ಎಂಬುದು 2020ರಲ್ಲಿ ಜಾರಿಗೆ ತಂದ ಮತ್ತೊಂದು ಕಠಿಣ ನಿಯಮ. ಉದಾಹರಣೆಗೆ ನೆರೆ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲೆಂದು ಸ್ವಯಂಸೇವಾ ಸಂಸ್ಥೆಯೊಂದು ದೇಣಿಗೆ ಪಡೆದುಕೊಂಡಿದೆ. ಆ ದೇಣಿಗೆಯನ್ನು ಸಂಪೂರ್ಣವಾಗಿ ನೆರೆ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲೇ ಬಳಸಬೇಕು. ಅದನ್ನು ನೆರೆ ಸಂತ್ರಸ್ತರಿಗೆ ಉದ್ಯೋಗಾವಕಾಶ ಕಲ್ಪಿಸಲು ಅಥವಾ ಸ್ವಯಂಉದ್ಯೋಗ ಕಲ್ಪಿಸಲು ಬಳಸುವಂತಿಲ್ಲ. ಈ ಸ್ವರೂಪದ ಬಳಕೆಗಳನ್ನೂ ನೂತನ ನಿಯಮವು ಉಲ್ಲಂಘನೆ ಎಂದೇ ಪರಿಗಣಿಸುತ್ತದೆ.

ಒಂದು ಸ್ವಯಂಸೇವಾ ಸಂಸ್ಥೆಯು ಪಡೆದುಕೊಂಡ ವಿದೇಶಿ ದೇಣಿಗೆಯನ್ನು ಬೇರೊಂದು ಸ್ವಯಂಸೇವಾ ಸಂಸ್ಥೆಯೊಂದಿಗೆ ಹಂಚಿಕೊಳ್ಳಬಾರದು ಎಂಬುದು 2020ರಲ್ಲಿ ಜಾರಿಗೆ ತರಲಾದ ಕಠಿಣ ನಿಯಮಗಳಲ್ಲಿ ಒಂದು. ಅಂದರೆ ಎರಡು ಸ್ವಯಂಸೇವಾ ಸಂಸ್ಥೆಗಳು ಯಾವುದೋ ಒಂದು ಕಾರ್ಯಕ್ರಮಕ್ಕಾಗಿ ಒಟ್ಟಿಗೇ ದುಡಿಯುತ್ತಿದ್ದರೆ, ಅವು ಆ ಕಾರ್ಯಕ್ರಮದ ವೆಚ್ಚವನ್ನು ಪರಸ್ಪರ ಹಂಚಿಕೊಳ್ಳುವಂತಿಲ್ಲ. ಸಾಮಾನ್ಯವಾಗಿ ದೊಡ್ಡ ಸ್ವಯಂಸೇವಾ ಸಂಸ್ಥೆಯೊಂದು, ಹಲವು ಸಣ್ಣ ಸ್ವಯಂಸೇವಾ ಸಂಸ್ಥೆಗಳೊಟ್ಟಿಗೆ ಸಾಮಾಜಿಕ ಕಾರ್ಯ ನಡೆಸುತ್ತಿರುತ್ತದೆ. ಆದರೆ ಕಠಿಣ ನಿಯಮದ ಕಾರಣ ಆ ಸಣ್ಣ ಸಂಸ್ಥೆಗಳಿಗೆ ದೊಡ್ಡ ಸಂಸ್ಥೆಯು ವಿದೇಶಿ ದೇಣಿಗೆಯನ್ನು ನೀಡಲು ಅವಕಾಶವಿಲ್ಲ.

ದಕ್ಷಿಣ ಭಾರತದ ಎನ್‌ಜಿಒಗಳಿಗೇ ಕುತ್ತು

ದೇಶದಲ್ಲಿ ಈವರೆಗೆ 51,287 ಸ್ವಯಂಸೇವಾ ಸಂಸ್ಥೆಗಳು ವಿದೇಶಿ ದೇಣಿಗೆ ಪರವಾನಗಿ ಪಡೆದುಕೊಂಡಿದ್ದವು. ಆದರೆ ಈಗ ಅವುಗಳಲ್ಲಿ ಪರವಾನಗಿ ಚಾಲ್ತಿಯಲ್ಲಿರುವುದು 17,008 ಸ್ವಯಂಸೇವಾ ಸಂಸ್ಥೆಗಳದ್ದು ಮಾತ್ರ. ಉಳಿದ 34,279 ಸ್ವಯಂಸೇವಾ ಸಂಸ್ಥೆಗಳ ಪರವಾನಗಿಗಳನ್ನು ಕೇಂದ್ರ ಸರ್ಕಾರವೇ ರದ್ದುಪಡಿಸಿದೆ. ಇಲ್ಲವೇ ಕೇಂದ್ರ ಸರ್ಕಾರವೇವು ನವೀಕರಣ ಮಾಡದೇ ಇದ್ದ ಕಾರಣಕ್ಕೆ ಅಂತಹ ಪರವಾನಗಿಗಳು ಸ್ವಯಂಚಾಲಿತವಾಗಿ ರದ್ದಾಗಿವೆ.

ಹೀಗೆ ಕೇಂದ್ರ ಸರ್ಕಾರವೇ ಪರವಾನಗಿ ರದ್ದುಪಡಿಸಿದ ಸ್ವಯಂಸೇವಾ ಸಂಸ್ಥೆಗಳಲ್ಲಿ ಹೆಚ್ಚಿನವು ದಕ್ಷಿಣ ಭಾರತದ ರಾಜ್ಯಗಳದ್ದೇ ಆಗಿವೆ. ದಕ್ಷಿಣದ ನಾಲ್ಕು ರಾಜ್ಯಗಳಿಂದ ಒಟ್ಟು 8,139 ಸಂಸ್ಥೆಗಳ ವಿದೇಶಿ ದೇಣಿಗೆ ಪರವಾನಗಿಯನ್ನು ಕೇಂದ್ರ ಸರ್ಕಾರವು ರದ್ದುಪಡಿಸಿದೆ. ಹೀಗೆ ಪರವಾನಗಿ ಕಳೆದುಕೊಂಡ ಒಟ್ಟು ಸಂಸ್ಥೆಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸಂಸ್ಥೆಗಳ ಪ್ರಮಾಣ ಶೇ 40ರಷ್ಟು. ದೇಶದ ಬೇರೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಅತಿಹೆಚ್ಚು ಸ್ವಯಂಸೇವಾ ಸಂಸ್ಥೆಗಳ ಪರವಾನಗಿ ರದ್ದಾಗಿದ್ದು ತಮಿಳುನಾಡಿನಲ್ಲಿ.

ನವೀಕರಣ ಆಗದೇ ಇದ್ದ ಕಾರಣಕ್ಕೆ ಪರವಾನಗಿ ಕಳೆದುಕೊಂಡ ಒಟ್ಟು 13,583 ಸ್ವಯಂಸೇವಾ ಸಂಸ್ಥೆಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಸಂಸ್ಥೆಗಳ ಪ್ರಮಾಣ ಶೇ 36ರಷ್ಟು. ಇದೇ ಅವಧಿಯಲ್ಲಿ ಪಶ್ಚಿಮ ಬಂಗಾಳದ 1,717 ಸ್ವಯಂಸೇವಾ ಸಂಸ್ಥೆಗಳ ಪರವಾನಗಿಯನ್ನು ಕೇಂದ್ರ ಸರ್ಕಾರವು ರದ್ದುಪಡಿಸಿದ್ದರೆ, 1,405 ಸಂಸ್ಥೆಗಳ ಪರವಾನಗಿಯನ್ನು ನವೀಕರಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.