ಕರ್ನಾಟಕದ ವಿಧಾನಮಂಡಲದಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮೆರಾಗಳಿಗೆ ಹಿಂದಿನ ಬಿಜೆಪಿ ಸರ್ಕಾರ ನಿಷೇಧ ಹೇರಿತ್ತು. ನೂತನ ಸರ್ಕಾರ ಬಂದಾಗ, ಈ ನಿಷೇಧವನ್ನು ತೆರವು ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ನಿಷೇಧವನ್ನೇ ಮುಂದುವರಿಸಲಾಗುತ್ತದೆ ಎಂದು ಸ್ಪೀಕರ್ ಹೇಳಿದ್ದಾರೆ. ಸರ್ಕಾರವೂ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ.

ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳ ವಿಧಾನಸಭೆ ಮತ್ತು ವಿಧಾನಮಂಡಲದ ಕಲಾಪಗಳಲ್ಲಿ ವಿದ್ಯುನ್ಮಾನ ಮಾಧ್ಯಮಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಕೋವಿಡ್ ಅವಧಿಯಲ್ಲಿ ಪತ್ರಕರ್ತರಿಗೆ ವಿಧಾನಭವನ ಪ್ರವೇಶವನ್ನು, ವಿಧಾನಭವನ ಆವರಣದಲ್ಲಿನ ಓಡಾಟವನ್ನು ನಿಷೇಧಿಸಲಾಗಿತ್ತು. ಆದರೆ, ಕೋವಿಡ್ ತೀವ್ರತೆ ತಗ್ಗಿದ ನಂತರವೂ ಈ ನಿಯಮವನ್ನು ಕೆಲವು ರಾಜ್ಯಗಳಲ್ಲಿ ಮುಂದುವರಿಸಲಾಗಿದೆ.

ವಿದ್ಯುನ್ಮಾನ ಮಾಧ್ಯಮಗಳನ್ನು ನಿಷೇಧ ಮಾಡುವುದು ಒಂದು ಕ್ರಮವಾದರೆ, ಮತ್ತೆ ಕೆಲವು ರಾಜ್ಯಗಳಲ್ಲಿ ಮಾಧ್ಯಮದವರಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ವಿಧಾನಭವನಗಳ ಆವರಣಗಳಲ್ಲಿ ಪತ್ರಕರ್ತರ ಓಡಾಟಕ್ಕೆ ಕೆಲವು ಕಠಿಣ ನಿರ್ಬಂಧಗಳನ್ನು ಕೆಲವು ರಾಜ್ಯಗಳಲ್ಲಿ ಹಾಕಲಾಗಿದೆ. ಪತ್ರಕರ್ತರಿಗೆ ಗುರುತಿನ ಚೀಟಿಗಳು ಇದ್ದರೂ ಹಲವು ನಿರ್ಬಂಧಗಳನ್ನು ಹೇರುವ ಮೂಲಕ ಅವರ ಓಡಾಟವನ್ನು, ವರದಿಗಳಿಗಾಗಿ ಮಾಹಿತಿ ಕಲೆ ಹಾಕುವುದನ್ನು ನಿಯಂತ್ರಿಸಲಾಗುತ್ತಿದೆ.

ಹೀಗೆ ಪತ್ರಕರ್ತರಿಗಾಗಿಯೇ ಹಲವು ನಿಯಮಗಳನ್ನು ರೂಪಿಸುವ ಮೂಲಕ ಸುದ್ದಿಗಳ ಮೇಲೆ ನಿಯಂತ್ರಣ ಸಾಧಿಸುವ ಸರ್ಕಾರದ ಕ್ರಮದ ಕುರಿತು ಪತ್ರಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಗಳನ್ನು ಮಾಡಿದ್ದಾರೆ. ಅಂತಾದರೂ ನಿಯಮಗಳು ಹಾಗೆಯೇ ಇವೆ. ಈ ಎಲ್ಲ ಬೆಳವಣಿಗೆಗಳಲ್ಲಿ ಗಮನಿಸಬೇಕಾದ ಒಂದಂಶವಿದೆ. ಪತ್ರಕರ್ತರ ಮೇಲೆ ನಿಯಂತ್ರಣ ಹೇರುವ ಸಂಬಂಧ ರಾಜಕೀಯ ಪಕ್ಷಗಳಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ! ಪಕ್ಷ ಭೇದ ಮರೆತು ಈ ಸಂಬಂಧ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿವೆ. ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಸರ್ಕಾರದ ಈ ನಡೆಯನ್ನು ವಿರೋಧಿಸಿದರೂ, ಅಧಿಕಾರಕ್ಕೆ ಬಂದಾಗ ಎಲ್ಲಾ ಪಕ್ಷಗಳೂ ಇಂತಹ ಕ್ರಮಗಳನ್ನು ಮುಂದುವರಿಸಿವೆ.

ಲೋಕಸಭೆ, ರಾಜ್ಯಸಭೆಯೂ ಮತ್ತು ಹಲವು ರಾಜ್ಯಗಳಲ್ಲಿ ಕಲಾಪಗಳನ್ನು ವೆಬ್‌ಕಾಸ್ಟ್ ಮಾಡುವ ವ್ಯವಸ್ಥೆ ಇದೆ. ಹೀಗೆ ವೆಬ್‌ಕಾಸ್ಟ್ ಮಾಡಿದ ವಿಡಿಯೊವನ್ನು ವಾಹಿನಿಗಳು ಪಡೆದುಕೊಳ್ಳಬೇಕಾಗುತ್ತದೆ. ಸಂಸತ್ತಿಗೆ ಅದರದ್ದೇ ವಾಹಿನಿಯೂ ಇದೆ. ಹೀಗೆ ತನ್ನದೇ ವಾಹಿನಿಯ ಮೂಲಕ ಅಥವಾ ವೆಬ್‌ಕಾಸ್ಟ್ ಮಾಡುವ ಮೂಲಕ ತನಗೆ ಏನು ಬೇಕೊ ಅದನ್ನು ಮಾತ್ರ ಜನರಿಗೆ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ವಿರೋಧ ಪಕ್ಷಗಳ ಮಾತುಗಳನ್ನು, ಪ್ರತಿಭಟನೆಗಳನ್ನು ತೋರಿಸದೆ ಸರ್ಕಾರದ ಪರವಾದುದನ್ನೇ ತೋರಿಸಲಾಗುತ್ತದೆ ಎನ್ನುವ ಗಂಭೀರ ಆರೋಪವೂ ಇದೆ. ಕರ್ನಾಟಕ, ದೆಹಲಿ, ಬಿಹಾರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ವೆಬ್‌ಕಾಸ್ಟ್ ವ್ಯವಸ್ಥೆ ಜಾರಿಯಲ್ಲಿದೆ.

ನಮ್ಮಿಂದ ಆಯ್ಕೆಯಾದ ಪ್ರತಿನಿಧಿಗಳು ನಮ್ಮ ಕುರಿತು, ನಮ್ಮ ಕಷ್ಟ–ಸುಖಗಳ ಕುರಿತು ಏನು ಮಾತನಾಡುತ್ತಾರೆ, ಎಷ್ಟು ಮಾತನಾಡುತ್ತಿದ್ದಾರೆ ಎಂದು ತಿಳಿಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ನೇರಪ್ರಸಾರ ನಿರ್ಬಂಧಿಸುವ ಮೂಲಕ ನಾಗರಿಕನ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಈ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸಲಾಗುತ್ತಿದೆ ಎನ್ನುವುದು ಒಂದು ವಾದ. ವಿದ್ಯುನ್ಮಾನ ಮಾಧ್ಯಮದ ಅತಿಯಾದ ‘ಪತ್ರಿಕೋದ್ಯಮ’ ಚಟುವಟಿಕೆಗಳ ಕಾರಣದಿಂದ ರಾಜಕಾರಣಿಗಳು ಸುದ್ದಿ ವಾಹಿನಿಗಳ ವರದಿಗಾರರನ್ನು ದೂರ ಇಡಲು ಬಯಸುತ್ತಾರೆ ಎನ್ನುವ ವಾದವೂ ಇದೆ.

ನಿಷೇಧ: ಸ್ಪೀಕರ್ ವಿವೇಚನಾಧಿಕಾರ

ವಿಧಾನಮಂಡಲದೊಳಗೆ ಸ್ಪೀಕರ್ ಅವರದ್ದೇ ಪರಮಾಧಿಕಾರ. ಇಲ್ಲಿನ ವಿದ್ಯಮಾನಗಳು ನ್ಯಾಯಾಲಯಗಳ ಕಾರ್ಯವ್ಯಾಪ್ತಿಗೂ ಬರುವುದಿಲ್ಲ. ಸುಗಮ ಕಲಾಪ ನಡೆಯಲು ಸ್ಪೀಕರ್ ಯಾವುದೇ ನಿರ್ಧಾರವನ್ನೂ ತೆಗೆದುಕೊಳ್ಳಬಹುದು. ಕಲಾಪ ನಡೆಯುವ ವೇಳೆ ವಿಧಾನಸಭೆಯಲ್ಲಿ ಯಾರು ಇರಬೇಕು, ಯಾರು ಇರಬಾರದು ಎಂಬುದರ ಕುರಿತೂ ಸ್ಪೀಕರ್ ಅವರ ತೀರ್ಮಾನವೇ ಅಂತಿಮ. ಹೀಗೆ ವಿದ್ಯುನ್ಮಾನ ಮಾಧ್ಯಮದ ಪ್ರವೇಶ, ವಿಧಾನಭವನಗಳ ಆವರಣಗಳಲ್ಲಿ ಪತ್ರಕರ್ತರಿಗೆ ಹೇರುವ ನಿಷೇಧ, ನಿಯಂತ್ರಣಗಳೆಲ್ಲವೂ ಸ್ಪೀಕರ್ ಅವರ ತೀರ್ಮಾನವೇ ಆಗಿರುತ್ತದೆ. ತಮ್ಮ ವಿವೇಚನಾಧಿಕಾರವನ್ನು ಬಳಸಿ ಸ್ಪೀಕರ್ ಅವರು ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಸಂಸತ್ತು ಪ್ರವೇಶಕ್ಕೆ ಲಾಟರಿ ಪದ್ಧತಿ!

ಕೋವಿಡ್ ಕಾರಣ ನೀಡಿ 2020ರಲ್ಲಿ ಸಂಸತ್ತು ಪ್ರವೇಶಕ್ಕೆ ಪತ್ರಕರ್ತರಿಗೆ ನಿಷೇಧ ಹೇರಲಾಯಿತು. 2021ರಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆಗೆ ಸಂಸತ್ತು ಪ್ರವೇಶಕ್ಕೆ ಲಾಟರಿ ಪದ್ಧತಿಯನ್ನು ಸಂಸತ್ತಿನಲ್ಲಿ ಅಳವಡಿಸಲಾಗಿದೆ. ಈ ಪದ್ಧತಿಯು ಇಂದಿಗೂ ಜಾರಿಯಲ್ಲಿದೆ. ಈ ಪದ್ಧತಿ ಜಾರಿಯಾದಾಗಿನಿಂದಲೂ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಭಾರತೀಯ ಸಂಪಾದಕರ ಕೂಟ ಸೇರಿದಂತೆ ಹಲವು ಉನ್ನತ ಸಂಸ್ಥೆಗಳು ಲೋಕಸಭಾ ಸ್ಪೀಕರ್ ಅವರಿಗೆ ಮನವಿ ಪತ್ರ ಬರೆಯುತ್ತಲೇ ಇದ್ದಾರೆ. ಈ ಸಂಬಂಧ ಪತ್ರಕರ್ತರು ಪ್ರತಿಭಟನೆಯನ್ನೂ ಮಾಡಿದ್ದಾರೆ. ವಿರೋಧ ಪಕ್ಷಗಳು ಕೂಡ ಪತ್ರಕರ್ತರಿಗೆ ಹಾಕಿರುವ ನಿರ್ಬಂಧಗಳನ್ನು ತೆಗೆದು ಹಾಕುವಂತೆ ಒತ್ತಾಯಿಸುತ್ತ ಬಂದಿವೆ. ಅಂತಾದರೂ, ಈ ಪದ್ಧತಿಯನ್ನು ಇದುವರೆಗೂ ಮುಂದುವರಿಸಲಾಗಿದೆ.

ನೂತನ ಸಂಸತ್ತು ಭವನದ ಉದ್ಘಾಟನೆಗೂ ಮೂರು ದಿನ ಮೊದಲು ಅಂದರೆ, 2023ರ ಮೇ 25ರಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾವು ಸಂಸತ್ತು ಪ್ರವೇಶಕ್ಕೆ ಪತ್ರಕರ್ತರಿಗೆ ಇರುವ ನಿರ್ಬಂಧ ತೆಗೆದು ಹಾಕುವಂತೆ ಕೋರಿ ಲೋಸಕಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಹಲವು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿ ಪತ್ರ ಬರೆದಿದೆ. ಪತ್ರದ ಕೆಲವು ಅಂಶಗಳು ಇಂತಿವೆ.

* ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ಎನಿಸಿರುವ ದೇಶದಲ್ಲಿ, ಜನರಿಗೆ ಸುಲಭವಾಗಿ ದೊರಕಬೇಕಿರುವ ಸುದ್ದಿಗಳು ತಲುಪದಂತೆ ಮಾಡಿರುವ ಈ ನಿಬಂಧನೆಗೆ ಯಾವುದೇ ಗಟ್ಟಿಯಾದ ಕಾರಣವಿಲ್ಲ. ಮಾಧ್ಯಮವನ್ನು ನಿಯಂತ್ರಿಸುವ, ಮಾಧ್ಯಮ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಕಾರ್ಯಸೂಚಿಗಳ ಭಾಗವಾಗಿ ಈ ನಿರ್ಬಂಧಗಳನ್ನು ಹೇರಲಾಗಿದೆ ಎಂದು ನಾವು ತೀವ್ರವಾಗಿ ಭಾವಿಸುತ್ತೇವೆ

* ವಿಶ್ವಸಂಸ್ಥೆಯೇ ಕೋವಿಡ್ ಅನ್ನು ‘ಜಾಗತಿಕ ಆರೋಗ್ಯ ತುರ್ತು’ ಅಲ್ಲ ಎಂದಿರುವಾಗ, ಕೋವಿಡ್ ಸಂಬಂಧ ಇರುವ ಎಲ್ಲ ನಿರ್ಬಂಧವನ್ನು ಸಡಿಲ ಮಾಡಿರುವಾಗ ಪತ್ರಕರ್ತರಿಗೆ ಮಾತ್ರವೇ ಕೋವಿಡ್ ಕಾರಣ ನೀಡಿ ಸಂಸತ್ತು ಪ್ರವೇಶವನ್ನು ನಿರ್ಬಂಧಿಸುವುದು ವಿಷಾದನೀಯ

* ಲಾಟರಿ ಪದ್ಧತಿ ಮೂಲಕ ಪತ್ರಕರ್ತರಿಗೆ ಸಂಸತ್ತು ಪ್ರವೇಶ ನೀಡಲಾಗುತ್ತಿದೆ. ಈ ರೀತಿ ಕೆಲವೇ ಪತ್ರಕರ್ತರನ್ನು ಆಯ್ಕೆ ಮಾಡಿ ಪ್ರವೇಶ ನೀಡುವುದು ನಿರಂಕುಶ ಮತ್ತು ಅನ್ಯಾಯ. ಜೊತೆಗೆ ಇದು ಸುದ್ದಿಯ ಸಮಾನ ಲಭ್ಯತೆಯ ತತ್ವವನ್ನು ನಿರಾಕರಿಸುತ್ತದೆ

* ಕಲಾಪಗಳನ್ನು ವರದಿ ಮಾಡುವ ಮಾಧ್ಯಮದ ಹಕ್ಕನ್ನು ಈ ನಿರ್ಬಂಧವು ಕಸಿದುಕೊಳ್ಳುವುದಲ್ಲದೆ, ಸರ್ಕಾರ, ಮಾಧ್ಯಮ ಹಾಗೂ ಸಂಸದರ ಮಧ್ಯದ ಸಂಪರ್ಕವನ್ನು ಕಡಿದು ಹಾಕುತ್ತದೆ. ಇದು ಯೋಚನೆಯ ಪ್ರಜಾಸತ್ತಾತ್ಮಕ ವಿನಿಮಯಕ್ಕೆ, ಸಾರ್ವಜನಿಕ ಸಂವಾದಕ್ಕೆ ಧಕ್ಕೆ ಉಂಟುಮಾಡುತ್ತದೆ. ಇದರಿಂದಾಗಿ ಸಂಸದೀಯ ವ್ಯವಸ್ಥೆಯ ಪಾರದರ್ಶಕತೆಗೆ ತೆರೆ ಬೀಳುತ್ತದಲ್ಲದೆ, ಹೊಣೆಗಾರಿಕೆಯಿಂದ ನುಣುಚಿಕೊಂಡಂತಾಗುತ್ತದೆ.

ಎಲ್ಲೆಲ್ಲಿ ನಿರ್ಬಂಧ...

ಕೇರಳ: ಕೇರಳದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಕಲಾಪವನ್ನು ಚಿತ್ರೀಕರಿಸಲು ನಿಯಂತ್ರಣ ಹೇರಲಾಗಿದೆ. ಈ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಕಡೇಪಕ್ಷ ಪ್ರಶ್ನೋತ್ತರ ವೇಳೆಯಲ್ಲಾದರೂ ವಿದ್ಯುನ್ಮಾನ ಮಾಧ್ಯಮಕ್ಕೆ ಕಲಾಪ ಚಿತ್ರೀಕರಣಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಪಡಿಸಿವೆ

ತೆಲಂಗಾಣ: ವಿಧಾನಭವನದ ಆವರಣದಲ್ಲಿ ಪತ್ರಕರ್ತರ ಓಡಾಟಕ್ಕೆ ಕಠಿಣ ನಿರ್ವಂಧವಿದೆ. ವಿಧಾನಸಭಾ ಕಾರ್ಯಾಲಯಗಳಿಗೆ ಮಾಧ್ಯಮದವರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಸಚಿವರ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಮೂಲಕ ಪತ್ರಕರ್ತರು ಮಾಹಿತಿ ಪಡೆದುಕೊಳ್ಳಬಹುದು

ಆಂಧ್ರ ಪ್ರದೇಶ: ಕಲಾಪದ ನೇರ ಪ್ರಸಾರವನ್ನು ನಿರ್ಬಂಧಿಸಲಾಗಿದೆ. ವಿಧಾನಭವನದ ಆವರಣದಲ್ಲಿ ಪತ್ರಕರ್ತರ ಓಡಾಟಕ್ಕೂ ನಿಯಂತ್ರಣ ಹೇರಲಾಗಿದೆ

ರಾಜಸ್ಥಾನ: ವಿಧಾನಭವನದ ಆವರಣದಲ್ಲಿ ಪತ್ರಕರ್ತರ ಓಡಾಟಕ್ಕೆ ಕಠಿಣ ನಿರ್ಬಂಧವಿದೆ. ಸಚಿವರನ್ನು, ವಿರೋಧ ಪಕ್ಷದ ನಾಯಕರನ್ನು ಹೀಗೆ ಯಾರನ್ನೂ ಪತ್ರಕರ್ತರು ಭೇಟಿ ಮಾಡಲಾಗದು. ಪ್ರೆಸ್ ಗ್ಯಾಲರಿ ಹಾಗೂ ಮಾಧ್ಯಮ ಕೊಠಡಿಗೆ ಓಡಾಡುವುದಕ್ಕೆ ಮಾತ್ರ ಅವಕಾಶವಿದೆ

ತಮಿಳುನಾಡು: ಬೇರೆ ರಾಜ್ಯಗಳಲ್ಲಿ ಕನಿಷ್ಠ ಪಕ್ಷ ಅಧಿವೇಶದ ನೇರಪ್ರಸಾರವನ್ನು ಬೇರೆ ಮಾಧ್ಯಮದ ಮೂಲಕವಾದರೂ ಪ್ರಚಾರ ಮಾಡಲಾಗುತ್ತದೆ. ಆದರೆ, ತಮಿಳುನಾಡಿನಲ್ಲಿ ಅಧಿವೇಶನದ ನೇರಪ್ರಸಾರ ಎನ್ನುವ ಪರಿಕಲ್ಪನೆಯೇ ಇಲ್ಲ. ಈ ಬಗ್ಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ದಾವೆ ಕೂಡ ಇದ್ದು, ಅದರ ವಿಚಾರಣೆಯೂ ನಡೆಯುತ್ತಿದೆ. ಡಿಎಂಕೆ ಪಕ್ಷವು ಈ ಬಾರಿಯ ತನ್ನ ಚುನಾವಣಾ ಪ್ರಚಾರದಲ್ಲಿ ಅಧಿವೇಶನದ ನೇರಪ್ರಸಾರ ಮಾಡುವುದಾಗಿ ಭರವಸೆಯನ್ನೂ ನೀಡಿತ್ತು. ಆದರೂ, ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಬೆಳವಣಿಗೆ ಆಗಿಲ್ಲ. ಮಾಧ್ಯಮಗಳಿಗೆ ಯಾವುದಾರೂ ಅಧಿವೇಶನದಲ್ಲಿ ನಡೆದ ವಿವಾದದ ವಿಡಿಯೊ ಬೇಕು ಎಂದಾದರೆ, ಸರ್ಕಾರಕ್ಕೆ ಮನವಿ ಮಾಡಬೇಕು. ಸರ್ಕಾರವು ತನಗೆ ಸರಿ ಅನ್ನಿಸಿದ ವಿಡಿಯೊವನ್ನು ನೀಡುತ್ತದೆ.

ಕರ್ನಾಟಕ

2019ರಲ್ಲಿ ರಾಜ್ಯ ವಿಧಾನಸಭೆಯೊಳಗೆ ಖಾಸಗಿ ಸುದ್ದಿವಾಹಿನಿಗಳ ಕ್ಯಾಮೆರಾಗಳಿಗೆ ನಿರ್ಬಂಧ ವಿಧಿಸಲಾಯಿತು. ಈ ಕುರಿತು ಮಾಧ್ಯಮ ಮತ್ತು ರಾಜಕೀಯ ಪಕ್ಷಗಳ ನಾಯಕರಿಂದ ಆಕ್ಷೇಪ ವ್ಯಕ್ತವಾದರೂ ಅಂದಿನ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ನಿಲುವು ಬದಲಿಸಲಿಲ್ಲ.

ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಕಾಗೇರಿಯವರನ್ನು ಭೇಟಿ ಮಾಡಿ, ಅಹವಾಲು ಸಲ್ಲಿಸಿದರು. ಅವರಿಂದ ಸಕಾರಾತ್ಮಕ ಭರವಸೆ ಬರಲಿಲ್ಲ. ಸಭಾಧ್ಯಕ್ಷರ ನಿಲುವನ್ನು ಟೀಕಿಸಿದ್ದ ಎಚ್.ಡಿ.ರೇವಣ್ಣ, ಶಿವಲಿಂಗೇಗೌಡ, ‘ವಿಧಾನಸಭೆಯಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡವಳಿಕೆ’ ಎಂದು ಹೇಳಿದ್ದರು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ‘ನಮ್ಮ ಸರ್ಕಾರ ಮಾಧ್ಯಮ ಸ್ವಾತಂತ್ರ್ಯ ನಿರ್ಬಂಧಿಸು ವುದಿಲ್ಲ. ಸಭಾಧ್ಯಕ್ಷರು ತಮ್ಮ ಕ್ರಮವನ್ನು ಪುನರ್ ಪರಿಶೀಲಿಸಬೇಕು’ ಎಂದು ಟ್ವೀಟ್ ಮಾಡಿದ್ದರು. ಆ ಬಳಿಕ ಅದನ್ನು ಅಳಿಸಿ ಹಾಕಿದ್ದೂ ಚರ್ಚೆಗೆ ಕಾರಣವಾಯಿತು.

ಲೋಕಸಭೆ, ರಾಜ್ಯಸಭೆ ಮಾದರಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಸರಿಸುತ್ತಿರುವ ಮಾದರಿಯನ್ನೇ ಇಲ್ಲಿ ಅನುಸರಿಸಲಾಗಿದೆ. ಅಲ್ಲಿಯೂ ಖಾಸಗಿ ವಾಹಿನಿಗಳ ಕ್ಯಾಮೆರಾಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಮಾಧ್ಯಮಗಳಿಗೆ ಕಡಿವಾಣ ಹಾಕುವ ಪ್ರಶ್ನೆಯೇ ಇಲ್ಲ. ಸದನದ ಎಲ್ಲ ಮಾಹಿತಿಗಳೂ ಮಾಧ್ಯಮಗಳಿಗೆ ಸಿಗುತ್ತದೆ. ಯಾವುದನ್ನೂ ಮುಚ್ಚಿಡುವುದಿಲ್ಲ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದರು. ಖಾಸಗಿ ಸುದ್ದಿವಾಹಿನಿಗಳ ಕ್ಯಾಮೆರಾಗಳಿಗೆ ಕಡಿವಾಣ ವಿಧಿಸುವ ಚರ್ಚೆ ಅನೇಕ ವರ್ಷಗಳಿಂದ ನಡೆದಿತ್ತು. ಪ್ರಾಯೋಗಿಕವಾಗಿ ಮೂರು ದಿನ ಮಾತ್ರ ಮಾಡಿ ನೋಡುತ್ತೇವೆ. ಈ ನಿರ್ಧಾರವನ್ನು ಮುಂದುವರಿಸಬೇಕೆ ಅಥವಾ ಕೈಬಿಡಬೇಕೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡೋಣ ಎಂದು ಅವರು ಹೇಳಿದ್ದರು. ಆ ಬಳಿಕ ನಿರ್ಬಂಧ ಮುಂದುವರಿಯಿತು. ಖಾಸಗಿಯಾಗಿ ಮಾತನಾಡುವ ಸಂದರ್ಭದಲ್ಲಿ ತಮ್ಮ ಈ ನಿರ್ಣಯಕ್ಕೆ ಎಲ್ಲ ಪಕ್ಷಗಳ ಸದಸ್ಯರ ಬೆಂಬಲ ಇದೆ ಎಂದು ಕಾಗೇರಿ ಹೇಳಿದ್ದರು.

ಆಧಾರ: ಪಿಟಿಐ, ಪಿಐಬಿ, ಪ್ರೆಸ್ ಕ್ಲಬ್ ಆಫ್ ಇಂಡಿಯಾ ಪ್ರಕಟಣೆ, ಬಾರ್ ಅಂಡ್ ಬೆಂಚ್ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.