ದೇವರಾಜ ಅರಸು

(ಆ.20, 1915– ಜೂ.06, 1982)

ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿಯ ಬೀಜ ಬಿತ್ತಿ, ಅದರ ಫಸಲನ್ನು ತಳ ಸಮುದಾಯದವರಿಗೆ ತಲುಪಿಸಿದ ಕೀರ್ತಿವಂತ ಡಿ. ದೇವರಾಜ ಅರಸು. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯ ‘ಅರಸು’ ನಾಡಿನ ಹಿಂದುಳಿದವರು, ದಲಿತರ ಪಾಲಿಗೆ ನಿಜವಾದ ‘ಅರಸ’. ನಾಡಿಗೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ ಹೆಗ್ಗಳಿಕೆಯೂ ಇವರದ್ದು. ಅಲ್ಲಿಯವರೆಗೂ ಹೆಸರನ್ನೇ ಕೇಳದಿದ್ದ ಅಲಕ್ಷಿತ ಸಮುದಾಯಗಳಲ್ಲಿನ ನಾಯಕತ್ವ ಗುಣ ಹೊಂದಿದವರನ್ನು ಗುರುತಿಸಿ, ಅವರನ್ನು ರಾಜಕಾರಣದ ಮುನ್ನೆಲೆಗೆ ತಂದವರು. ಪ್ರಬಲ ಜಾತಿಗಳವರೇ ಮೆರೆದಾಡುತ್ತಿದ್ದ ರಾಜಕೀಯ ಆಡುಂಬೊಲದಲ್ಲಿ ಅವಕಾಶ ವಂಚಿತರನ್ನು ಕರೆತಂದು, ಕರ್ನಾಟಕದ ಮಟ್ಟಿಗೆ ದೊಡ್ಡ ಮಟ್ಟದ ಸುಧಾರಣೆಗೆ ಕಾರಣರಾದವರು.

‘ಉಳುವವನೇ ಹೊಲದೊಡೆಯ’ ಆಶಯದ ಭೂಸುಧಾರಣೆ ಕಾಯ್ದೆ, ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಲು ಲಕ್ಷ್ಮಣ ಜಿ. ಹಾವನೂರು ಆಯೋಗ ರಚನೆ ಮತ್ತು ಅದರ ಶಿಫಾರಸುಗಳ ಅನುಷ್ಠಾನ, ಜೀತ ಪದ್ಧತಿ ನಿಷೇಧದಂತಹ ದಿಟ್ಟ ಕ್ರಮಗಳನ್ನು ಕೈಗೊಂಡು ಆದರ್ಶ ರಾಜಕಾರಣ ಹೇಗಿರಬೇಕೆಂದು ತೋರಿಸಿಕೊಟ್ಟವರು. ಹಿಂದುಳಿದವರು, ದಲಿತರು ಇಂದು ತಲೆ ಎತ್ತಿ ನಡೆಯುತ್ತಿದ್ದರೆ ಅದು ಅರಸರ ದೂರದೃಷ್ಟಿಯ ಫಲ.

ಗಂಗೂಬಾಯಿ ಹಾನಗಲ್

(ಮಾರ್ಚ್ 5, 1913 - ಜುಲೈ 21, 2009)

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಕಲಾವಿದೆಯಾಗಿದ್ದ ವಿದುಷಿ ಗಂಗೂಬಾಯಿ ಹಾನಗಲ್ (ಗಂಗಜ್ಜಿ) ಅವರು ಉತ್ತರ ಭಾರತ ಹಾಗೂ ಕರ್ನಾಟಕದ ನಡುವೆ ಸಂಗೀತ ಸೇತುವೆಯಂತಿದ್ದರು. ಮಹಿಳೆಯರು ಹಾಡಲು, ನೃತ್ಯ ಮಾಡಲು ಮುಜುಗರ ಪಡುತ್ತಿದ್ದ ಕಾಲದಲ್ಲಿ ಗಂಗಜ್ಜಿ ಕನ್ನಡತಿಯಾಗಿ ರೈಲಿನಲ್ಲಿ ಹಲವು ರಾಜ್ಯಗಳ ಪ್ರವಾಸ ಮಾಡುತ್ತಿದ್ದರು; ವಿದೇಶಗಳಲ್ಲೂ ಅವರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಿಂದಿ, ಮರಾಠಿ, ಉರ್ದು ಹಾಡುಗಳನ್ನು ಹಾಡುತ್ತಿದ್ದರೂ ಅವರು ಕನ್ನಡವನ್ನೇ ಉಸಿರಾಡುತ್ತಿದ್ದರು. ಎಲ್ಲೇ ಹೋದರೂ ಕನ್ನಡದ ಜನ ಅಭಿಮಾನದಿಂದ ಅವರನ್ನು ಸತ್ಕರಿಸುತ್ತಿದ್ದರು.

1924ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 39ನೇ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿ ಅವರ ಮುಂದೆ ‘ಉದಯವಾಗಲಿ ನಮ್ಮ ಚಲುವ ಕನ್ನಡನಾಡು’ ಗೀತೆಗೆ ಜೀವತುಂಬಿ ಹಾಡಿದ್ದ ಬಾಲಕಿ ಗಂಗೂಬಾಯಿ, ಅಲ್ಲಿ ಸೇರಿದ್ದವರನ್ನು ಬೆರಗುಗೊಳಿಸಿದ್ದರು.

ಸಾಹಿತ್ಯವನ್ನೇ ಬಿತ್ತಿ ಬೆಳೆಯುವ ಧಾರವಾಡ ನೆಲದಲ್ಲಿ ಇದ್ದ ಕಾರಣಕ್ಕೆ ಗಂಗಜ್ಜಿ ಸಾಹಿತ್ಯ ಸಾಂಗತ್ಯವನ್ನು ಬೆಳೆಸಿಕೊಂಡಿದ್ದರು. ರೈಲಿನಲ್ಲಿ ಪ್ರಯಾಣಿಸುವಾಗಲೂ ಅವರೊಂದಿಗೆ ಕನ್ನಡ ಪುಸ್ತಕಗಳಿರುತ್ತಿದ್ದವು. ಪಾಟೀಲ ಪುಟ್ಟಪ್ಪ ಅವರ ಜೊತೆಗೂಡಿ ಸಾಹಿತ್ಯ ಸಂಬಂಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು; ಅವರೊಂದಿಗೆ ಗೋಕಾಕ್ ಚಳವಳಿಯಲ್ಲೂ ಪಾಲ್ಗೊಂಡಿದ್ದರು. ಬದುಕಿರುವವರೆಗೂ ಕನ್ನಡಕ್ಕಾಗಿ ತುಡಿದವರು ಗಂಗಜ್ಜಿ.

ಅಜೀಂ ಪ್ರೇಮ್ಜಿ

(ಜನನ: ಜುಲೈ 24, 1945)

ವಿಶ್ವದ ಸಾಫ್ಟ್ವೇರ್ ಉದ್ಯಮ ಕ್ಷೇತ್ರದ ನಕಾಶೆಯಲ್ಲಿ ಎದ್ದುಕಾಣುವ ಭಾರತದ ಪ್ರಮುಖ ಹೆಸರುಗಳಲ್ಲಿ ಅಜೀಂ ಪ್ರೇಮ್ಜಿ ಅವರದ್ದೂ ಒಂದು. ವಿಪ್ರೊ ಲಿಮಿಟೆಡ್ ಅಧ್ಯಕ್ಷರಾಗಿ ಅವರು ನಾಲ್ಕು ದಶಕಗಳಲ್ಲಿ ಮೂಡಿಸಿರುವ ಛಾಪಿನಲ್ಲಿ ಮಾನವೀಯ ಮೌಲ್ಯಗಳ ಕಥನಗಳು ಮಿಳಿತಗೊಂಡಿವೆ. ಅಜೀಂ ಪ್ರೇಮ್ಜಿ ಫೌಂಡೇಷನ್ ಎಂಬ ಲಾಭರಹಿತ ಸಂಸ್ಥೆ ಸಮಾಜಕ್ಕೆ ದೊಡ್ಡ ಕಾಣಿಕೆ ಸಲ್ಲಿಸಿದೆ.

ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಪದವಿ ಕಲಿಯುತ್ತಿದ್ದಾಗ (1966) ಅಜೀಂ ಅವರ ತಂದೆ ಹಾಶಿಮ್ ಪ್ರೇಮ್ಜಿ ತೀರಿಕೊಂಡರು. ಅವರು ನಡೆಸುತ್ತಿದ್ದ ‘ವೆಸ್ಟರ್ನ್ ಇಂಡಿಯನ್ ವೆಜಿಟೆಬಲ್ ಪ್ರಾಡಕ್ಟ್ಸ್ ಲಿಮಿಟೆಡ್’ ಹೊಣೆಯನ್ನು ಆಗ ಅಜೀಂ ವಹಿಸಿಕೊಂಡರು. 1977ರಲ್ಲಿಯೇ ತಮ್ಮ ಕಂಪನಿಗೆ ‘ವಿಪ್ರೊ’ ಎಂದು ಮರುನಾಮಕರಣ ಮಾಡಿದರು. ವಿದೇಶಿ ಮಾರುಕಟ್ಟೆಯಲ್ಲಿ ಸಾಫ್ಟ್ವೇರ್ ಸೇವೆ ಒದಗಿಸಿ, ಕಂಪನಿಯನ್ನು ವಿಸ್ತರಿಸಿದರು. ಸೋಪು, ಬಲ್ಬ್ ಮತ್ತಿತರ ಉತ್ಪನ್ನಗಳ ತಯಾರಿಕೆಯಲ್ಲಿಯೂ ತೊಡಗಿಸಿಕೊಂಡರು.

2001ರಲ್ಲಿ ಅಜೀಂ ಪ್ರೇಮ್ಜಿ ಫೌಂಡೇಷನ್ ಸ್ಥಾಪಿತವಾಯಿತು. ದೇಶದ ಏಳು ರಾಜ್ಯಗಳ 3.5 ಲಕ್ಷಕ್ಕೂ ಹೆಚ್ಚಿನ ಪ್ರಾಥಮಿಕ ಶಾಲೆಗಳಲ್ಲಿ ಈ ಫೌಂಡೇಷನ್ ತಂತ್ರಜ್ಞಾನ ಆಧರಿತ ಶಿಕ್ಷಣವನ್ನು ಉಚಿತವಾಗಿ ಒದಗಿಸಲು ಸಹಾಯಹಸ್ತ ಚಾಚಿದೆ. ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಕೂಡ ಸ್ಥಾಪಿತವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಘನತೆವೆತ್ತ ಸಂಸ್ಥೆಯಾಗಿ ಗುರುತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.