ಕೋವಿಡ್ ಸಾಂಕ್ರಾಮಿಕವು ಜಗತ್ತನ್ನೇ ಬದಲಿಸಿತು, ಮಕ್ಕಳನ್ನು ಕೂಡ. ಆಟ, ಪಾಠ, ನೋಟಗಳೆಲ್ಲವೂ ಬೇರೆಯೇ ಆದವು. ಅಂತರ್ಜಾಲ ಮತ್ತು ಮೊಬೈಲ್ನ ಲೋಕದೊಳಗೆ ಹೆಚ್ಚಿನ ಮಕ್ಕಳು ಬಂದಿಗಳಾಗಿದ್ದಾರೆ. ಬಯಲಿನ ವಿಸ್ತಾರದಿಂದ ತಪ್ಪಿಸಿಕೊಂಡಿದ್ದಾರೆ. ಮಕ್ಕಳಲ್ಲಿ ಮಗುತನವನ್ನು ಮತ್ತೆ ತರುವುದು ಹೇಗೆ ಎಂಬ ಯೋಚನೆಯನ್ನು ಮಕ್ಕಳ ದಿನದಂದು ಇಲ್ಲಿ ಹಂಚಿಕೊಳ್ಳಲಾಗಿದೆ. ಮುದ ನೀಡಬಲ್ಲ ಕೆಲವು ಕತೆಗಳೂ ಇಲ್ಲಿವೆ. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ

ಇದು ಮೊಬೈಲ್ ಯುಗ. ಎರಡು ವರ್ಷಗಳ ಕಾಲ ಕೊರೊನಾದಿಂದ ಇಡೀ ಲೋಕವೇ ಸಂಕಷ್ಟಕ್ಕೀಡಾದ ಕಾರಣ ಮೊಬೈಲ್ ಎಲ್ಲಾ ಕ್ಷೇತ್ರಗಳಲ್ಲೂ, ವರ್ಗಗಳಲ್ಲೂ ತನ್ನ ಪಾರಮ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಮಕ್ಕಳ ಜಗತ್ತನ್ನು ಸದ್ದಿಲ್ಲದೇ ಬದಲಾಯಿಸಿಬಿಟ್ಟಿದೆ. ಆನ್ಲೈನ್ ಪಾಠಕ್ಕೋಸ್ಕರ ಶಾಲೆಗಳ ಶಿಫಾರಸ್ಸಿನ ಮೇರೆಗೆ ಬಳಸಲು ಕೊಟ್ಟ ಮೊಬೈಲುಗಳನ್ನು ಈಗ ವಾಪಸ್ಸು ಪಡೆದುಕೊಳ್ಳಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಮಕ್ಕಳ ಅಪ್ಪ ಅಮ್ಮಂದಿರಿಗೆ. ಇದು ಹೇಗೆಂದರೆ ಕೊಟ್ಟ ವರವನ್ನೋ ಅಥವಾ ಶಾಪವನ್ನೋ ಮತ್ತೆ ಹಿಂಪಡೆದುಕೊಳ್ಳಲು ಸಾಧ್ಯವಾಗದಂತಹ ಸ್ಥಿತಿ. ಆದರೆ ಈ ಮೊಬೈಲನ್ನು ವರವನ್ನಾಗಿ ಮಾಡಿಕೊಂಡ ಮಕ್ಕಳು ನಿಜಕ್ಕೂ ಇಂದು ಉಳಿದೆಲ್ಲ ಮಕ್ಕಳಿಗಿಂತ ಬಹಳ ಮುಂದೆ ಮುಂದೆ ಸಾಗುತ್ತಿದ್ದರೆ; ಶಾಪವನ್ನಾಗಿ ಮಾಡಿಕೊಂಡ ಮಕ್ಕಳ ಬದುಕು ಹಿಮ್ಮುಖವಾಗಿ ಸಾಗುತ್ತಿದೆ.

15, 30 ಸೆಕೆಂಡುಗಳ ರೀಲು, ಶಾರ್ಟ್ಸ್ಗಳಿಗೆ ಅಂಟಿಕೊಂಡಿರುವ ಮಕ್ಕಳ ಮನಸ್ಸನ್ನು ವಿಷಯ ಕೇಂದ್ರಿತಗೊಳಿಸುವುದು ಅಥವಾ ‘ಸಹಜ ಸಾಮಾನ್ಯ ಜ್ಞಾನ’ದ ಕಡೆಗೆ ಹರಿಸುವುದು ಕೂಡ ಇಂದು ದುಸ್ಸಾಹಸವೇ ಆಗಿಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳನ್ನು ಮತ್ತೆ ಅವರ ‘ಸಹಜ ಸೃಜನಶೀಲ ಲೋಕ’ಕ್ಕೆ ಮರಳಿ ತರುವುದು ಹೇಗೆ? ಟಿ.ವಿಗಳಲ್ಲಿ, ಶಾಲೆಗಳಲ್ಲಿ ಈ ಕುರಿತು ಅನೇಕ ಸೆಮಿನಾರುಗಳು, ಗೋಷ್ಠಿಗಳು ನಡೆದು ಹೋಗಿವೆ. ಅಲ್ಲೆಲ್ಲಾ ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ಇದಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವ ಮನೋವೈದ್ಯರು, ಶಿಕ್ಷಣತಜ್ಞರು ಮೊದಲಾದವರು ಕೂಡ ಸ್ವತಃ ತಮ್ಮ ಮಕ್ಕಳನ್ನು ಈ ಮೊಬೈಲೆಂಬ ಬ್ರಹ್ಮರಾಕ್ಷಸನ ಕೈಯಿಂದ ಬಚಾವು ಮಾಡುವಲ್ಲಿ ಸೋತು ಸುಣ್ಣವಾಗಿದ್ದಾರೆ.

ಬಹುಶಃ ಈ ಮಾತುಗಳು ಹಳಹಳಿಕೆಯ ಮಾತುಗಳಂತೆ ಕೇಳಬಹುದು; ತಂತ್ರಜ್ಞಾನ ವಿರೋಧಿಯಂತೆಯೂ ಕಾಣಬಹುದು. ಆದರೆ ಮಕ್ಕಳ ದೃಷ್ಟಿಯಿಂದ ನೋಡಿದರೆ ಮಾತ್ರ ಈ ಮಾತುಗಳ ಆಳ ನಿಮಗೆ ತಿಳಿಯಬಲ್ಲದು. ಈ ಮೊಬೈಲು ಸೃಷ್ಟಿಸಿರುವ ಮಕ್ಕಳ ಲೋಕದ ದಾರುಣ ಫಲಿತಾಂಶವನ್ನು ನಾವು ಇನ್ನೇನು ಕೆಲವೇ ವರ್ಷಗಳಲ್ಲಿ ಕಾಣಲಿದ್ದೇವೆ. ಹಾಗಾದರೆ ಮಕ್ಕಳನ್ನು ಈ ಮೊಬೈಲೆಂಬ ಭ್ರಾಮಕ ಲೋಕದಿಂದ ಅವರ ಸಹಜ ಸೃಜನಶೀಲ ಲೋಕಕ್ಕೆ ಮರಳಲು ಇರುವ ಮಾರ್ಗಗಳು ಏನು ಎಂದು ನೀವು ಕೇಳಬಹುದು. ಮೊಬೈಲೆಂಬ ಅಂಗೈಯಗಲದ ಸಂಕುಚಿತ ಲೋಕದಲ್ಲೇ ಮುದುಡಿ, ಮುದುರಿಹೋಗಿರುವ ಮಕ್ಕಳ ಮನಸ್ಸನ್ನು ಅರಳಿಸಿ ಲೋಕಚರಿತವನ್ನಾಗಿಸಲು ರಂಗಭೂಮಿಗಿಂತ ಪರಿಣಾಮಕಾರಿ ಮಾಧ್ಯಮ ಮತ್ತೊಂದಿಲ್ಲ ಎಂದು ಹೇಳಬಲ್ಲೆ.

ರಂಗಭೂಮಿ ಎಂದರೆ ಬರೀ ನಾಟಕ ಆಡುವುದು ಎಂಬ ಬಹಳ ಸಾಮಾನ್ಯವಾದ ತಿಳಿವಳಿಕೆ ಇದೆ ಎಲ್ಲರಲ್ಲೂ. ಆದರೆ ನಾಟಕ ಆಡುವುದು ರಂಗಭೂಮಿಯ ಒಂದು ಭಾಗ ಮಾತ್ರ. ರಂಗಭೂಮಿಯಲ್ಲಿ ಎಲ್ಲಾ ಲಲಿತಕಲೆಗಳೂ ಸೇರಿಕೊಂಡಿವೆ. ಚಿತ್ರಕಲೆ, ವಿನ್ಯಾಸ, ಉಡುಗೆ ತೊಡುಗೆ, ಬಣ್ಣಗಳು, ಪರಸ್ಪರ ಬೆರೆಯುವುದು, ಆತ್ಮವಿಶ್ವಾಸದಿಂದ ಮಾತನಾಡುವುದು, ಕಥೆ ಹೇಳುವುದು, ಕೇಳುವುದು, ಸಂಗೀತ, ಹಾಡು, ನೃತ್ಯ, ಭಾಷೆ, ಸಂಸ್ಕೃತಿ, ಸಾಹಿತ್ಯ, ಸಿನಿಮಾ, ದೃಷ್ಟಿಕೋನ ಹೀಗೆ ಏನನ್ನೂ ನಿರೀಕ್ಷಿಸದೆ ಖಾಲಿಯಾಗಿ ಬರುವ ಮಗುವೊಂದು ತನ್ನ ಪಾತ್ರೆಗೆ ತಕ್ಕಂತೆ ಏನೆಲ್ಲವನ್ನೂ ತುಂಬಿಕೊಂಡು ಹೋಗಬಹುದಾದ ಅಕ್ಷಯಸಾಗರ ರಂಗಭೂಮಿ.

‘ಶಿಕ್ಷಣದಲ್ಲಿ ರಂಗಭೂಮಿ’ ಎಂಬ ಕುರಿತು ಅನೇಕ ಚರ್ಚೆಗಳು ನಡೆಯುತ್ತಲೇ ಇವೆ. ಸರ್ಕಾರಿ ಶಾಲೆಗಳಲ್ಲಿ ರಂಗಶಿಕ್ಷಕರನ್ನೂ ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಅವರಿಗೆಲ್ಲ ಸರ್ಕಾರ ಎಷ್ಟು ಸ್ವಾತಂತ್ರ್ಯ ಹಾಗೂ ಸ್ವಾಯತ್ತೆಯನ್ನು ನೀಡಿದೆ ಎಂದು ನೋಡಬೇಕಾಗುತ್ತದೆ. ಅನೇಕ ರಂಗಶಿಕ್ಷಕರು ರಂಗಶಿಕ್ಷಣದ ಜೊತೆಗೆ ಬೇರೆ ಬೇರೆ ವಿಷಯದ ಪಾಠಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯ ಇದೆ. ಇದು ಸಂಪೂರ್ಣವಾಗಿ ಅವರು ಕ್ರಿಯಾಶೀಲ ರಂಗಭೂಮಿಯಲ್ಲಿ ತೊಡಗಿಕೊಳ್ಳಲು ಅಡ್ಡಿಯಾಗಿದೆ. ಇದರಿಂದ ರಂಗಶಿಕ್ಷಕರನ್ನು ಕೂಡ ಮಕ್ಕಳು ಉಳಿದ ಬೇರೆ ಶಿಕ್ಷಕರಂತೆ ಕಂಡು ಅವರಿಂದ ರೋಸಿಹೋಗುವ ಸಂಭವವೇ ಹೆಚ್ಚು.

ಪೋಷಕರು ಸ್ವತಃ ತಮ್ಮ ಮಕ್ಕಳನ್ನು ಮೊಬೈಲ್ ಲೋಕದಿಂದ ಹೊರಗಿನ ಸುಂದರ ಲೋಕಕ್ಕೆ ಕರೆತರುವಲ್ಲಿ ಅನಿವಾರ್ಯವಾಗಿ ತಮ್ಮ ಪ್ರಯತ್ನವನ್ನು ಮಾಡಬೇಕಾದ ತುರ್ತು ಇಂದು ನಿರ್ಮಾಣವಾಗಿದೆ. ನಾವು ಏನನ್ನು ಮಾಡುತ್ತೇವೆಯೋ ಮಕ್ಕಳು ಸುಪ್ತವಾಗಿ ನಮ್ಮನ್ನು ಅನುಸರಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯವಾದರೂ ನಾವೇ ಇಂದು ಅವರಿಗಿಂತ ಹೆಚ್ಚು ಮೊಬೈಲಿನ ಗೀಳಿಗೆ ಅಂಟಿಕೊಂಡಿದ್ದೇವೆ; ಅದು ಬದುಕಿನ ಅನಿವಾರ್ಯತೆಯೇ ಆಗಿರಬಹುದು; ಆದರೆ ಮಕ್ಕಳ ಭವಿಷ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪೋಷಕರು ಇಂದು ಕಾರ್ಯಪ್ರವೃತ್ತರಾಗಬೇಕಿದೆ. ಮಕ್ಕಳು ನಿಯಮಿತವಾಗಿ ಮೊಬೈಲು ಬಳಸಲು ಸಾಧ್ಯವಾಗದ, ಆದರೆ ಅವರ ಮನಸ್ಸನ್ನು ಪರವಶಗೊಳಿಸಬಲ್ಲ ಕಲಾಪ್ರಕಾರಗಳ ಪ್ರದರ್ಶನಗಳಿಗೆ ಕರೆದುಕೊಂಡು ಹೋಗುವುದರ ಮೂಲಕ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಬಹುದು.

ನೃತ್ಯ, ಸಂಗೀತ, ಸಾಹಿತ್ಯ, ನಾಟಕ, ಚಿತ್ರಕಲಾ ಪ್ರದರ್ಶನ, ಹೀಗೆ ಹತ್ತು ಹಲವು ಪ್ರದರ್ಶನ ಕಲಾಪ್ರಕಾರಗಳಿಗೆ ಕನಿಷ್ಠ ವಾರದಲ್ಲಿ ಒಮ್ಮೆಯಾದರೂ ಅವರನ್ನು ಕರೆದುಕೊಂಡು ಹೋಗುವುದನ್ನು ರೂಢಿಸಿಕೊಳ್ಳಬಹುದು. ಹೀಗೆ ಕ್ರಮೇಣ ಮಗುವಿನ ಆಸಕ್ತಿಯನ್ನು ಗಮನಿಸಿ ಅದು ಸ್ವತಃ ಒಳಗೊಳ್ಳಬಹುದಾದ ಕಲಾಪ್ರಕಾರವನ್ನು ಕಲಿಯಲು ಪ್ರೋತ್ಸಾಹಿಸಬಹುದು. ಇದೆಲ್ಲವನ್ನೂ ಬಲವಂತವಾಗಿ ಮಾಡಿದರೂ ಮಕ್ಕಳು ಅದರ ಕುರಿತಾಗಿ ತಾತ್ಸಾರ, ಹೇವರಿಕೆಯ ಭಾವವನ್ನು ಬೆಳೆಸಿಕೊಂಡುಬಿಡುತ್ತಾರೆ. ಹಾಗಾಗದಂತೆ ನಾಜೂಕಾಗಿ ನೋಡಿಕೊಳ್ಳಬೇಕಾಗಿರುವುದು ಪೋಷಕರ ಜವಾಬ್ದಾರಿಯಾಗಿದೆ. ಮೊಬೈಲೆಂಬ ಮುಳ್ಳಿನ ಮೇಲೆ ಬಿದ್ದಿರುವ ನಮ್ಮ ಮಕ್ಕಳ ಮನಸ್ಸೆಂಬ ಕಸೂತಿ ಬಟ್ಟೆಯನ್ನು ಹರಿಯದಂತೆ ತೆಗೆದುಕೊಳ್ಳುವುದು ಇಂದು ಬಹಳ ಜರೂರಾದ ಕೆಲಸವಾಗಿದೆ. ಆ ದಿಸೆಯಲ್ಲಿ ರಂಗಭೂಮಿಯ ನೆರವು ಪಡೆದು ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ಮತ್ತೆ ಸಹಜ ಸೃಜನಶೀಲ ಪ್ರಕ್ರಿಯೆಯ ಕಡೆಗೆ ಹೊರಳುವಂತೆ ಮಾಡುವುದು ಹಿಂದಿಗಿಂತ ಇಂದು ಬಹಳ ಅಗತ್ಯದ ಕೆಲಸ ಎಂದು ಅನಿಸುತ್ತಿದೆ.

ಲೇಖಕ: ರಂಗಭೂಮಿ-ಸಿನಿಮಾ ನಿರ್ದೇಶಕ, ನಿರ್ಗುಣ ಅಭಿನಯ ಶಾಲೆ ಸ್ಥಾಪಕ.

ಮೀನು ಕೇಳಿದ ವಾರ್ತೆ

ಅದೊಂದು ಪುಟ್ಟ ಹಳ್ಳಿ. ಅಲ್ಲೊಂದು ಹೊಳೆ. ಅಲ್ಲಿ ಮೀನು, ಕಪ್ಪೆ, ಆಮೆಗಳೆಲ್ಲ ಸಂತೋಷದಿಂದ ಜೀವನ ಮಾಡಿಕೊಂಡಿದ್ದವು. ಮೀನುಗಳ ಸಂಸಾರವಂತೂ ತುಂಬ ದೊಡ್ಡದಾಗಿತ್ತು. ಮೀನಿನ ಸಂಸಾರದ ಬಗ್ಗೆ ಕಪ್ಪೆ ಮತ್ತು ಆಮೆಗಳಿಗೂ ಗೌರವವಿತ್ತು. ಮೀನುಗಳ ಮನೆಯಲ್ಲಿ ದೊಡ್ಡದೊಂದು ರೇಡಿಯೊ ಇದ್ದುದೇ ಅದಕ್ಕೆ ಕಾರಣವಾಗಿತ್ತು.

ಮೀನುಗಳ ಮನೆಯಲ್ಲಿ ಒಂದು ಹಿರಿಯ ಮೀನು ಇತ್ತು. ಅದರ ಮಾತನ್ನು ಕಪ್ಪೆ ಮತ್ತು ಆಮೆಯ ಕುಟುಂಬದವರೂ ಕೇಳುತ್ತಿದ್ದರು. ಆದರೆ, ರೇಡಿಯೊ ಕೇಳುವುದಕ್ಕೆ ಮಾತ್ರ ಯಾರೂ ಅದಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ. ಎಲ್ಲರಿಗೂ ಸಿನಿಮಾ ಹಾಡು ಕೇಳುವುದೆಂದರೆ ಪ್ರಾಣ. ಮರಿಮೀನು, ಮರಿಕಪ್ಪೆ, ಮರಿಆಮೆಗಳಂತೂ ರೇಡಿಯೊಗೆ ಅಂಟಿಕೊಂಡೇ ಇರುತ್ತಿದ್ದವು. ಹಾಗಾಗಿ ಹಿರಿಯ ಮೀನು ವಾರ್ತೆ ಕೇಳಲು ಆಗುತ್ತಿಲ್ಲವಲ್ಲ ಎಂದು ಕೊರಗುತ್ತಲೇ ಇರುತ್ತಿತ್ತು.

ಹಾಗೂ ಹೀಗೂ ಮಾಡಿ ಮಕ್ಕಳಿಂದ ರೇಡಿಯೊ ಪಡೆದುಕೊಳ್ಳುವ ಹೊತ್ತಿಗೆ ವಾರ್ತೆ ಮುಗಿದೇ ಹೋಗಿರುತ್ತಿತ್ತು. ಒಮ್ಮೊಮ್ಮೆ, ‘ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯಿತು’, ಎಂಬುದನ್ನು ಮಾತ್ರ ಕೇಳಿಸಿಕೊಂಡು ಅದು ನಿರಾಸೆ ಪಡುತ್ತಿತ್ತು.

ಆ ದಿನವೂ ಅದು ಮಕ್ಕಳಿಂದ ರೇಡಿಯೊ ತೆಗೆದುಕೊಳ್ಳುವ ಹೊತ್ತಿಗೆ ಸಾಕಷ್ಟು ಸಮಯವಾಗಿತ್ತು. ವಾರ್ತೆ ಕೇಳಲು ತಿರುಗಿಸಿತು. ಅದರ ಅದೃಷ್ಟಕ್ಕೆ, ‘ಕೊನೆಯಲ್ಲಿ ಮತ್ತೊಮ್ಮೆ ಮುಖ್ಯಾಂಶಗಳು’, ಎಂಬುದು ಕೇಳಿಸಿತು. ಇಷ್ಟಾದರೂ ಸಿಕ್ಕಿತಲ್ಲ ಎಂದು ಸಂತಸ ಪಟ್ಟಿತು. ಆದರೆ ವಾರ್ತೆ ಮಾತ್ರ ಸಂತಸ ತರುವಂತಿರಲಿಲ್ಲ.

‘ಹೊಳೆಗಳಿಗೆ ಔಷಧ ಹಾಕಿ ಮೀನುಗಳನ್ನೆಲ್ಲಾ ಹಿಡಿದುಕೊಂಡು ಹೋಗುವವರು ಬರುತ್ತಿದ್ದಾರೆ, ಬಹಳಷ್ಟು ಹೊಳೆಗಳಲ್ಲಿ ಮೀನುಗಳು ಪ್ರಾಣ ಕಳೆದುಕೊಂಡು ಅವರ ಪಾಲಾಗಿವೆ’, ಎಂಬ ಸುದ್ದಿ ಕೇಳಿ ಅದು ಆಘಾತಗೊಂಡಿತು. ವಿಷಯ ಇತರ ಮೀನುಗಳಿಗೂ ಗೊತ್ತಾಯಿತು. ಕಪ್ಪೆ, ಆಮೆಗಳಿಗೂ ಭಯವಾಯಿತು. ಏನೂ ತೋಚದಂತಾಗಿ ಕುಳಿತುಬಿಟ್ಟವು. ಎಂದಿನಂತೆ ಅಜ್ಜನಿಂದ ರೇಡಿಯೊ ಕಿತ್ತುಕೊಳ್ಳಲು ಯಾರೂ ಬರಲಿಲ್ಲ. ಮುಂದೇನು ಎಂಬ ಚಿಂತೆಯೇ ಎಲ್ಲರನ್ನೂ ಕಾಡತೊಡಗಿತು.

ಅದೇ ಸಮಯಕ್ಕೆ ಆ ಊರಿನ ಮುಖ್ಯಸ್ಥನ ಮಗಳು ನೀರಿಗಾಗಿ ಬಿಂದಿಗೆ ಹಿಡಿದು ಅಲ್ಲಿಗೆ ಬಂದಳು. ಹಿರಿಯ ಮೀನು ಮತ್ತು ಊರ ಮುಖ್ಯಸ್ಥ ಸ್ನೇಹಿತರಾಗಿದ್ದರು. ಮುಖ್ಯಸ್ಥನ ಮಗಳಿಗೆ, ‘ನಿನ್ನ ತಂದೆಗೆ ಇಲ್ಲಿಗೊಮ್ಮೆ ಬಂದು ಹೋಗುವಂತೆ ಹೇಳು’, ಎಂದು ಹೇಳಿ ಕಳುಹಿಸಿತು ಹಿರಿಯ ಮೀನು.

ಊರ ಮುಖ್ಯಸ್ಥ ಸ್ವಲ್ಪವೂ ತಡಮಾಡದೆ ಹೊಳೆಯತ್ತ ಹೊರಟ. ಆತ ಬಂದೊಡನೆಯೇ ಹಿರಿಯ ಮೀನು ಕರೆದು ಕೂರಿಸಿತು. ಒಳಗೆ ಯಾರನ್ನೋ ಕೂಗಿ ಕಾಫಿ ಮಾಡಲು ಹೇಳಿತು. ನಂತರ ತಾನು ವಾರ್ತೆಯಲ್ಲಿ ಕೇಳಿದ ವಿಷಯ ತಿಳಿಸಿತು. ‘ಅಯ್ಯೋ... ಹೌದೇ?’ ಎಂದು ಮುಖ್ಯಸ್ಥನೂ ಒಮ್ಮೆ ದಿಗಿಲುಪಟ್ಟನು. ಸ್ವಲ್ಪ ಯೋಚಿಸಿದ ನಂತರ, ‘ನೀವೇನೂ ಚಿಂತೆ ಮಾಡಬೇಡಿ. ನಿಮಗೇನೂ ತೊಂದರೆಯಾಗದ ಹಾಗೆ ನಾನು ವ್ಯವಸ್ಥೆ ಮಾಡುತ್ತೇನೆ’ ಎಂದನು.

ಎಲ್ಲರಿಗೂ ಹೋದ ಜೀವ ಬಂದಂತಾಯಿತು. ಕಾಫಿ ಕುಡಿದು ಮುಖ್ಯಸ್ಥ ಮನೆಯತ್ತ ಹೊರಟನು. ‘ನಿಶ್ಚಿಂತೆಯಿಂದ ಇರಿ’ ಎಂದು ಪುನಃ ಹೇಳಲು ಮರೆಯಲಿಲ್ಲ. ಅಜ್ಜ ಈ ವಾರ್ತೆ ಕೇಳದಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದು ಎಲ್ಲ ಕಿರಿ–ಮರಿ ಮೀನುಗಳಿಗೂ ಅನಿಸಿತು. ಎಲ್ಲರ ಮುಖ ನೋಡಿದರೆ, ತಮ್ಮ ತಪ್ಪನ್ನು ತಿದ್ದಿಕೊಳ್ಳಲು ತೀರ್ಮಾನಿಸಿದಂತೆ ಕಾಣಿಸುತ್ತಿತ್ತು.

ಕಥೆಗಾರ: ವೆಂಕಟರಮಣ ಗೌಡ
ಕಲೆ: ಶ್ರೀಕೃಷ್ಣ ಕೆದಿಲಾಯ, ಪ್ರಕಾಶನ: ಪ್ರಥಮ್ ಬುಕ್ಸ್

ಅರಸರಾಯರ ಹಲ್ಲುನೋವು

ಸಿಂಹ ಕಾಡಿನ ರಾಜನಾಗಿತ್ತು. ಅದರ ಅಬ್ಬರಕ್ಕೆ ಕಾಡಲ್ಲಿ ಎಲ್ಲರಿಗೂ ನಡುಕವೋ ನಡುಕ. ಎರಡು ದಿನಗಳಿಂದ ಸಿಂಹಕ್ಕೆ ಹಲ್ಲು ನೋವು ಜೋರಾಗಿತ್ತು. ‘ರಾಜರೇ, ನೋಯುತ್ತಿರುವ ಹಲ್ಲು ಕೀಳಿಸಿಬಿಡಿ’, ಎಂದಿತು ಡಾ.ಮಂಗ. ‘ಮೊದಲು ಆ ಕೆಲಸ ಮಾಡುವೆ’ ಎಂದಿತು ಸಿಂಹ. ಆದರೆ, ಸಿಂಹದ ಹಲ್ಲು ಕೀಳುವ ಧೈರ್ಯ ಯಾರಿಗೆ ಇದೆಯಪ್ಪ? ಎಲ್ಲರಿಗೂ ಸಿಂಹ ಎಂದರೆ ತುಂಬಾ ಭಯ! ‘ರಾಜರೇ, ನನ್ನ ಹಿಂಗಾಲುಗಳಿಂದ ಒಂದು ಸಲ ಒದೆಯುವೆ, ಆಗ ಹಲ್ಲು ಒಂದೇ ಸಲಕ್ಕೆ ಹೊರಗೆ ಹಾರಿ ಬಿಡುವುದು’ ಎಂದಿತು ದಡ್ಡ ಕತ್ತೆ. ‘ನಿನಗೆ ನನ್ನನ್ನೇ ಒದೆಯುವಷ್ಟು ಧೈರ್ಯ ಇದೆಯಾ’ ಎಂದು ಅಬ್ಬರಿಸಿತು ಸಿಂಹ. ಕತ್ತೆ ಬಾಲ ಮುದುರಿಕೊಂಡು ಪರಾರಿಯಾಯಿತು.

ಈಗ ಆನೆ, ಚಿರತೆ, ಕರಡಿ, ಜಿಂಕೆ ಎಲ್ಲರಿಗೂ ಚಿಂತೆ ಆಯಿತು. ಸಿಂಹದ ಬಾಯಿಗೆ ಕೈ ಹಾಕುವವರು ಯಾರು? ಎಂದು ಯೋಚಿಸಿದವು. ಮತ್ತೆರಡು ದಿನಗಳು ಕಳೆದವು. ಸಿಂಹಕ್ಕೆ ಹಲ್ಲು ನೋವು ತಡೆಯಲು ಆಗುತ್ತಿಲ್ಲ. ‘ನಾನು ಒಂದು ಸಲ ನೋಡಲಾ?’ ಎಂದು ಕೇಳಿತು ಇಲಿರಾಯ. ಅವರಿಬ್ಬರ ಸುತ್ತ ಯಾರೂ ಇಲ್ಲದೇ ಇರುವಾಗ. ‘ನೋಡಪ್ಪ’ ಎಂದ ಸಿಂಹ ಅಗಲವಾಗಿ ಬಾಯಿ ತೆರೆಯಿತು. ‘ಓ! ನಿಮ್ಮ ಹಲ್ಲುಗಳ ಸಂದುಗಳಲ್ಲಿ ಸಿಕ್ಕಾಪಟ್ಟೆ ಕೊಳೆ ಸೇರಿದೆ’ ಎಂದು ಬಾಯಿಯಲ್ಲಿ ಕಣ್ಣಾಡಿಸಿ ಹೇಳಿತು ಇಲಿ. ಅಷ್ಟೇ ಅಲ್ಲ, ತನ್ನ ಚೂಪಾದ ಹಲ್ಲುಗಳಿಂದ ಸಿಂಹದ ಹಲ್ಲುಗಳನ್ನೆಲ್ಲಾ ಉಜ್ಜಿ, ಉಜ್ಜಿ ಶುಚಿ ಮಾಡಿತು. ಸಿಂಹಕ್ಕೆ ಈಗ ಸ್ವಲ್ಪ ಹಾಯೆನಿಸಿತು.

‘ರಾಜ, ದಯಮಾಡಿ ದಿನಾ ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಉಜ್ಜಿ, ತೊಳೆಯಿರಿ. ಇಲ್ಲವಾದರೆ ಹಲ್ಲುಗಳೆಲ್ಲಾ ಕೊಳೆತು, ಬಾಯಿ ವಾಸನೆ ಬರುವುದು’ ಎಂದಿತು ಜಾಣ ಇಲಿ.

‘ಹೌದಪ್ಪ, ಇಲಿರಾಯ ಇನ್ನು ಮೇಲೆ ಹಾಗೆಯೇ ಮಾಡುವೆ. ಆದರೆ, ದಯಮಾಡಿ ಯಾರಿಗೂ ಈ ವಿಷಯ ಹೇಳಬೇಡ. ನೀನೇನಾದರೂ ಹೇಳಿದರೆ, ಅವರೆಲ್ಲ – ಛೆ, ಛೆ, ರಾಜನೇ ಹಲ್ಲು ಉಜ್ಜುವುದಿಲ್ಲ ಎನ್ನುತ್ತಾ ಗೇಲಿ ಮಾಡುವರು’ ಎಂದು ಸಿಂಹ ದಮ್ಮಯ್ಯ ಗುಟ್ಟೆ ಹಾಕಿತು. ‘ಆಯಿತು!’ ಎನ್ನುತ್ತಾ ಇಲಿರಾಯ ಹಲ್ಲು ಕಿರಿಯಿತು. ಸಿಂಹಕ್ಕೂ ನಗು ತಡೆಯಲು ಆಗಲಿಲ್ಲ.

ಕಥೆಗಾರ: ಸಂಜೀವ್ ಜೈಸ್ವಾಲ್ ‘ಸಂಜಯ್’
ಪ್ರಕಾಶನ: ಪ್ರಥಮ್ ಬುಕ್ಸ್
ಕಲೆ: ಅಜಿತ್ ನಾರಾಯಣ್
ಅನುವಾದ: ಈಶ್ವರ್ ದೈತೋಟ

ಕನ್ನಡ ಚಿತ್ರರಂಗದಲ್ಲಿ ಮಕ್ಕಳ ಚಿತ್ರಗಳು ಬರುವುದು ಅಪರೂಪ. ರಿಷಬ್ ಶೆಟ್ಟಿ ನಿರ್ದೇಶಿಸಿದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಸಿನಿಮಾ ಚಿತ್ರಮಂದಿರಗಳಲ್ಲಿಯೂ ದೊಡ್ಡ ಯಶಸ್ಸು ಗಳಿಸಿ ಮಕ್ಕಳ ಸಿನಿಮಾಗಳಿಗೂ ಒಂದು ಕಾಲ ಬಂದಿತೇನೊ ಎನ್ನುವ ಭಾವನೆ ಮೂಡಿಸಿತ್ತು. ಸತ್ಯಪ್ರಕಾಶ ನಿರ್ದೇಶನದ ‘ಒಂದೆಲ್ಲ ಎರಡಲ್ಲ’ ಕೂಡ ಚಿತ್ರಮಂದಿರಲ್ಲಿ ಬಿಡುಗಡೆಗೊಂಡು, ಉತ್ತಮ ವಿಮರ್ಶೆ ಪಡೆಯಿತು. ಆದರೆ, ಕೋವಿಡ್ ಬಳಿಕ ಚಿತ್ರಮಂದಿರಲ್ಲಿ ತೆರೆಕಂಡ ಮಕ್ಕಳ ಸಿನಿಮಾ ಇಲ್ಲವೇ ಇಲ್ಲ. ಚಲನಚಿತ್ರೋತ್ಸವಗಳನ್ನು ಗುರಿಯಾಗಿಸಿಕೊಂಡು ನಾಲ್ಕಾರು ಸಿನಿಮಾಗಳು ಬಂದಿವೆಯಾದರೂ, ಅವು ಸಾಮಾನ್ಯರ ನಡುವೆ ಸುದ್ದಿಯಾಗಿಲ್ಲ.

ರಕ್ಷಿತ್ ಶೆಟ್ಟಿ ನಿರ್ಮಿಸಿರುವ ‘ಮಿಥ್ಯ’ ಸಿನಿಮಾ ಚಿತ್ರೋತ್ಸವಗಳಲ್ಲಿ ಪ್ರಶಂಸೆ ಪಡೆದು, ಇತ್ತೀಚಿಗೆ ತುಸು ಸುದ್ದಿಯಲ್ಲಿದೆ. ಪುಟ್ಟ ಬಾಲಕನ ತಂದೆ-ತಾಯಿ ನಿಧನ ಹೊಂದುತ್ತಾರೆ. ಅವರ ನೆನಪುಗಳಿಂದ ಹೊರಬರಲಾರದ ಈ ಬಾಲಕ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ ಎಂಬ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಸುಮಂತ್ ಭಟ್ ನಿರ್ದೇಶಿಸಿದ್ದಾರೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಮತ್ತು ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್ ಶೆಟ್ಟಿ ‘ಮಿಥ್ಯ’ ಚಿತ್ರದಲ್ಲಿ ಮಿಥುನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ.

ಸುರೇಶ್ ಲಕ್ಕೂರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ದೇವರ ಕನಸು’ ಚಿತ್ರ ಇತ್ತೀಚೆಗಷ್ಟೇ ತೆರೆಕಂಡಿತ್ತು. ಮಾಸ್ಟರ್ ದೀಪಕ್, ಅಮೂಲ್ಯ, ಅಋಷಿ ವೇದಿಕ ಹಾಗೂ ಮಾಕ್ ಮಣಿ ಚಿತ್ರದ ಪ್ರಮುಖಪಾತ್ರಗಳಲ್ಲಿ ನಟಿಸಿದ್ದರು. ಜುಲೈ 21ರಂದು ತೆರೆ ಕಂಡ ಚಿತ್ರಕ್ಕೆ ಅಶ್ವಿನಿ ಪುನೀತ್ರಾಜ್ಕುಮಾರ್ ಸಾಥ್ ನೀಡಿದ್ದರು. ಜಯ್ ಕುಮಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಬರಗೂರು ರಾಮಚಂದ್ರಪ್ಪನವರ ‘ಚಿಣ್ಣರ ಚಂದ್ರ’ ಸಿದ್ಧಗೊಂಡು ಚಲನಚಿತ್ರೋತ್ಸವಗಳಿಗೆ ಹೊರಟಿರುವ ಮಕ್ಕಳ ಚಿತ್ರ.

ನಿರ್ದೇಶಕ ಯೋಗಿ ದೇವಗಂಗೆ ಅವರ ‘ಗಾಂಧಿ ಮತ್ತು ನೋಟು’ ಎಂಬ ಸಿನಿಮಾ ಕೂಡ ಹಿಂದಿನ ವರ್ಷ ತೆರೆಕಂಡಿತ್ತು. ಮಂಜು ಬಿ.ಎ, ಚಂದ್ರು, ಪದ್ಮನಾಭ್ ಈ ಚಿತ್ರವನ್ನು ನಿರ್ಮಿಸಿದ್ದರು. ಕನ್ನಡದ ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ 12 ವರ್ಷದ ಮಗಳು ದಿವಿಜಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.