ಗದಗ: ರೈತರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ಬೆಳೆ ವಿಮೆ ಪರಿಹಾರಕ್ಕೆ ಕನ್ನ ಹಾಕುತ್ತಿದ್ದಾರೆ. ಪಾರದರ್ಶಕ ವ್ಯವಸ್ಥೆ ಇದ್ದರೂ ಕೆಲವು ಚಾಲಾಕಿಗಳು ಸರ್ಕಾರ ನೀಡಿದ್ದ ಮುಕ್ತ ಅವಕಾಶವನ್ನೇ ಮೋಸದ ಅಸ್ತ್ರವನ್ನಾಗಿಸಿಕೊಂಡು ದೊಡ್ಡ ಮಟ್ಟದಲ್ಲಿ ವಂಚನೆ ಎಸಗುತ್ತಿದ್ದಾರೆ.

ಅಕ್ರಮ ತಡೆಯಲು ಕೃಷಿ ಇಲಾಖೆ ಅಧಿಕಾರಿಗಳು ಹಿಡಿಯುವ ಜರಡಿಯ ಸೂಕ್ಷ್ಮ ರಂಧ್ರಗಳಿಂದಲೂ ನುಸುಳುವ ಮಧ್ಯವರ್ತಿಗಳು, ಪರಿಹಾರದ ಹಣವನ್ನು ಲಪಟಾಯಿಸುತ್ತಿದ್ದಾರೆ. ಯಾರದ್ದೋ ಜಮೀನಿನ ಬೆಳೆಗೆ ವಿಮೆ ತುಂಬಿ, ತಮ್ಮ ಬ್ಯಾಂಕ್ ಖಾತೆಗೆ ಹಣ ಇಳಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಏನನ್ನೂ ಬೆಳೆಯದ ಹೊಲದಲ್ಲಿ ಬೆಳೆ ಬೆಳೆದಿರುವುದಾಗಿ ದಾಖಲೆ ಸೃಷ್ಟಿಸಿ ವಿಮೆ ಪಡೆದ ಪ್ರಕರಣಗಳೂ ನಡೆದಿವೆ.

2020–21ನೇ ಸಾಲಿನಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಹಿಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯಡಿ, ಮುಂಡರಗಿ ತಾಲ್ಲೂಕಿನ (ಗದಗ ಜಿಲ್ಲೆ) ಡೋಣಿ ಗ್ರಾಮದ ಬಸವೇಶ್ವರ ನಂದಿವೇರಿ ಮಠದ ಮಾಲೀಕತ್ವದಲ್ಲಿರುವ ಸರ್ವೆ ನಂಬರ್ 150/ಎ/2ನ 14.51 ಹೆಕ್ಟೇರ್ ಜಮೀನಿಗೆ ನಿಜಲಿಂಗಪ್ಪ ಕೆ.ಆಲೂರ ಎಂಬುವರು ಬೆಳೆ ವಿಮೆ ಮಾಡಿಸಿದ್ದರು. ಪರಿಹಾರ ರೂಪದಲ್ಲಿ ತನ್ನ ಬ್ಯಾಂಕ್ ಖಾತೆಗೆ ₹5,42,115 ಜಮಾ ಮಾಡಿಸಿಕೊಂಡಿರುವ ಆರೋಪದಡಿ ಇವರ ಮೇಲೆ ಪ್ರಕರಣ ದಾಖಲಾಗಿದೆ. ಇಲ್ಲಿ ನಿಜಲಿಂಗಪ್ಪ ಜಮೀನಿನ ಮಾಲೀಕನಲ್ಲ. ಆದರೂ, 20 ನವೆಂಬರ್ 2020ರಂದು ಸಿಎಸ್ಸಿ ಸೆಂಟರ್ನಲ್ಲಿ ನಂದಿವೇರಿ ಮಠದ ಜಮೀನಿನ ಉತಾರ (ಪಹಣಿ) ಹಾಗೂ ತನ್ನ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ಪುಸ್ತಕ ಹಾಗೂ ಆಧಾರ್ ಕಾರ್ಡ್ ನೀಡಿ ಬೆಳೆ ವಿಮೆ ನೋಂದಾಯಿಸಿ ಕೊಂಡು, ಹಣ ಪಡೆದುಕೊಂಡಿದ್ದರು.

‘ಜಮೀನಿನ ಮಾಲೀಕ, ಸರ್ಕಾರ ಹಾಗೂ ವಿಮಾ ಕಂಪನಿಗೆ ಮೋಸ ಮಾಡಿದ ಆರೋಪದಡಿ ಡೋಣಿ ಗ್ರಾಮದ ನಿಜಲಿಂಗಪ್ಪ ಕೆ.ಆಲೂರ ಎಂಬುವರ ಮೇಲೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೋಸ ನಡೆದಿರಬಹುದಾದ ಇಂತಹ 211 ಪ್ರಕರಣಗಳು ಜಿಲ್ಲೆಯಲ್ಲಿ ಇದ್ದು, ಜಿಲ್ಲಾಧಿಕಾರಿ ಅವರೆಲ್ಲರ ಪರಿಹಾರ ಹಣ ತಡೆಹಿಡಿದಿದ್ದಾರೆ’ ಎಂದು ಗದಗ ಜಿಲ್ಲೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ವಿವರ ನೀಡುತ್ತಾರೆ.

ನೊಂದ ರೈತರೇ ದೂರು ಕೊಡಲಿ...

ಈ ಹಿಂದೆ ರೈತರ ಹೆಸರಿನಲ್ಲಿ ಯಾರು ಬೇಕಾದರೂ ಬೆಳೆವಿಮೆ ಮಾಡಿಸಬಹುದಿತ್ತು. ಯಾವ ರೈತರು ವಿಮೆ ಕಟ್ಟಿಲ್ಲ ಎಂಬ ಮಾಹಿತಿ ಮಧ್ಯವರ್ತಿಗಳಿಗೆ ಗೊತ್ತಿರುತ್ತದೆ. ಅಂಥವರ ಹೆಸರಿನಲ್ಲಿ ಅವರೇ ವಿಮೆ ಪಾವತಿಸಿ, ಪರಿಹಾರವನ್ನೂ ಪಡೆಯುತ್ತಿದ್ದರು. 2016ರಿಂದ ಇಲ್ಲಿಯವರೆಗೆ ಗದಗ ಜಿಲ್ಲೆಗೆ ₹1,089 ಕೋಟಿ ಬಂದಿದ್ದು, ರೈತರ ಖಾತೆಗೆ ನೇರವಾಗಿ ಜಮಾ ಆಗಿದೆ. ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ.

ಬೆಳೆ ವಿಮೆಯಲ್ಲಿ ಆಗಿರುವ ಅಕ್ರಮಗಳನ್ನು ತಡೆಗಟ್ಟಿ, ನಿಜವಾದ ಫಲಾನುಭವಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಬಾರಿ ಕೃಷಿ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. ಅಧಿಕಾರಿಗಳ ತಂಡಗಳನ್ನೂ ರಚಿಸಲಾಗಿದೆ. ಈಗ ಒಬ್ಬ ರೈತನ ಹೆಸರಿನಲ್ಲಿ ಮತ್ತೊಬ್ಬರು ಬೆಳೆ ವಿಮೆ ತುಂಬಲು ನಿಜವಾದ ಭೂ ಮಾಲೀಕನಿಂದ ಲಿಖಿತ ಒಪ್ಪಿಗೆ ಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿದೆ.

ಬೆಳೆ ವಿಮೆಯಲ್ಲಿ ಗೋಲ್ಮಾಲ್ ಆಗಿರುವುದು ಹೊಸಬಗೆಯ ಅಪರಾಧ. ಮೋಸಕ್ಕೆ ಒಳಗಾದ ನೊಂದ ರೈತ ದೂರು ಕೊಟ್ಟರೆ ಖದೀಮರ ಹೆಡೆಮುರಿ ಕಟ್ಟಬಹುದು. ರೈತರ ಆಕ್ರೋಶ ಭುಗಿಲೆದ್ದರೆ ಅಕ್ರಮ ಮಾಡಿದವರ ಹೆಸರು ಆಚೆಗೆ ಬರುತ್ತದೆ ಎಂಬ ಕಾರಣದಿಂದಲೇ 211 ಪ್ರಕರಣಗಳ ಬೆಳೆ ವಿಮೆಯನ್ನು ತಡೆಹಿಡಿಯಲಾಗಿದೆ. ರೈತರು ಮಧ್ಯವರ್ತಿಗಳ ಆಮಿಷದ ಮಾತುಗಳಿಗೆ ಬಲಿಯಾಗದೇ; ಅಕ್ರಮದ ಹಾದಿ ಹೇಳಿ ಕೊಡಲು ಬರುವವರ ವಿರುದ್ಧ ದೂರು ಕೊಡಬೇಕು.

–ಜಿಯಾವುಲ್ಲಾ ಕೆ., ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ

ಬೆಳೆ ವಿಮೆಯಲ್ಲಿ ಅಕ್ರಮ: ಕ್ರಿಮಿನಲ್ ಪ್ರಕರಣ ದಾಖಲು

ಗದಗ ಜಿಲ್ಲೆಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಯಾರದೋ ಜಮೀನಿನ ಉತಾರವನ್ನು ಬಳಸಿಕೊಂಡು, ಆ ಜಮೀನಿಗೆ ಮತ್ತ್ಯಾರೋ ಬೆಳೆ ವಿಮೆ ತುಂಬಿ ಪರಿಹಾರ ಲಪಟಾಯಿಸುವುದು ಅಪರೂಪದ ಪ್ರಕರಣ. ಬೆಳೆ ವಿಮೆ ಪ್ರಕ್ರಿಯೆಯಲ್ಲಿ ವಿಳಂಬ ಧೋರಣೆ ಮತ್ತು ಅಕ್ರಮ ನಡೆಯದಂತೆ ಹಾಗೂ ಅನ್ನದಾತರಿಗೆ ಸಕಾಲದಲ್ಲಿ ಪರಿಹಾರ ನೀಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

‘ಫಸಲ್ ಬಿಮಾ’ ಯೋಜನೆ ಬಗ್ಗೆ ಪ್ರತಿ ತಾಲ್ಲೂಕಿನಲ್ಲಿ ವಾಹನದ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಜೂನ್ ತಿಂಗಳೊಂದರಲ್ಲೇ ₹404 ಕೋಟಿ ವಿಮೆ ಹಣ ಬಿಡುಗಡೆ ಮಾಡಿಸಿದ್ದೇನೆ. ಕೆಲವೊಮ್ಮೆ ಬೆಳೆ ವಿಮೆಯಲ್ಲಿ ‘ಮಿಸ್ ಮ್ಯಾಚ್’ ಆಗುತ್ತಿತ್ತು. ಅದನ್ನು ತಪ್ಪಿಸಲು ರೈತರೇ ಆ್ಯಪ್ ಮೂಲಕ ತಮ್ಮ ಹೊಲದ ಬೆಳೆ ಸಮೀಕ್ಷೆ ಮಾಡಲು ಕಾರ್ಯಕ್ರಮ ರೂಪಿಸಿದ್ದೇವೆ.

- ಬಿ.ಸಿ.ಪಾಟೀಲ, ಕೃಷಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.