ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಗೆ ಆಲೂ ಕುರುಕಲು

Published 28 ಜೂನ್ 2024, 20:58 IST
Last Updated 28 ಜೂನ್ 2024, 20:58 IST
ಅಕ್ಷರ ಗಾತ್ರ

ಫ್ರೆಂಚ್ ಫ್ರೈಸ್‌ /ಫಿಂಗರ್ ಚಿಪ್ಸ್‌

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ-4, ಉಪ್ಪು-1 ಟೀ ಚಮಚ, ಎಣ್ಣೆ ಕರಿಯಲು, ಚಾಟ್ ಮಸಾಲೆ ನಿಮ್ಮ ರುಚಿಗೆ ಅನುಗುಣವಾಗಿ, ಅಚ್ಚಖಾರದ ಪುಡಿ ನಿಮ್ಮ ಖಾರಕ್ಕೆ ಅನುಗುಣವಾಗಿ ಹಾಕಿ.
ತಯಾರಿಸುವ ವಿಧಾನ: ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದು ಕೊಳ್ಳಿ. ನಂತರ ಆಲೂಗಡ್ಡೆ ಕಪ್ಪಾಗದಂತೆ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದರಲ್ಲಿ ಮುಳುಗಿಸಿಡಿ. ಬಳಿಕ ಒಂದೇ ರೀತಿಯಲ್ಲಿ ಕೈಯಲ್ಲಿ ಅಥವಾ ಅದನ್ನು ಆಲೂಗಡ್ಡೆಯನ್ನು ಕತ್ತರಿಸುವ ಉಪಕರಣದಲ್ಲಿ ಕತ್ತರಿಸಿ. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಐದು ನಿಮಿಷ ಬಿಸಿ ಮಾಡಿ. ಅದರಲ್ಲಿ ಕತ್ತರಿಸಿದ ಆಲೂಗಡ್ಡೆಯನ್ನು ಮತ್ತು ಸ್ವಲ್ಪ ಉಪ್ಪನ್ನು ಹಾಕಿ ಸ್ವಲ್ಪ ಮೆತ್ತಗಾಗುವರೆಗೆ ಬೇಯಿಸಿ. ನಂತರ ಅದನ್ನು ನೀರಿನಿಂದ ತೆಗೆದು ಒಂದು ಬಟ್ಟೆಯಲ್ಲಿ ಹರಡಿ. ಅದರಲ್ಲಿರುವ ನೀರು ಆರಿದ ಬಳಿಕ ಒಂದು ತಟ್ಟೆಯಲ್ಲಿ ಹಾಕಿ ಫ್ರೀಜರ್‌ನಲ್ಲಿ ಒಂದು ಗಂಟೆ ಕಾಲ ಇಡಿ. ಹೀಗೆ ಮಾಡುವುದರಿಂದ ಫಿಂಗರ್ ಚಿಪ್ಸ್ ಗರಿ ಗರಿಯಾಗಿರುತ್ತದೆ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ಅದರಲ್ಲಿ ಫಿಂಗರ್ ಚಿಪ್ಸ್ ಅನ್ನು ಡೀಪ್ ಫ್ರೈ ಮಾಡಿ. ಒಮ್ಮೆ ಎಲ್ಲಾ ಫ್ರೆಂಚ್ ಫ್ರೈಸ್ ಅನ್ನು ಎಣ್ಣೆಯಲ್ಲಿ ಕರಿದ ನಂತರ ಅದನ್ನು ತಣ್ಣಗಾಗುವರೆಗೆ ಹಾಗೇ ಇಡಿ. ನಂತರ ಮತ್ತೊಮ್ಮೆ ಎಣ್ಣೆಯಲ್ಲಿ ಹಾಕಿ ಕೆಂಬಣ್ಣ ಬರುವರೆಗೆ ಕರಿಯಿರಿ. ಹೀಗೆ ಮಾಡುವುದರಿಂದ ಗರಿ ಗರಿಯಾಗಿರುತ್ತದೆ. ನಂತರ ಒಂದು ಬೌಲಿನಲ್ಲಿ ತಯಾರಿಸಿದ ಫ್ರೆಂಚ್‌ ಫ್ರೈಸ್ ಹಾಕಿ. ಅದಕ್ಕೆ ಚಾಟ್ ಮಸಾಲೆ, ಅಚ್ಚಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ. ರುಚಿಕರವಾದ ಫ್ರೆಂಚ್ ಫ್ರೈಸ್ ಅನ್ನು ಟೊಮೆಟೊ ಕೆಚಪ್ ಅಥವಾ ಯಾವುದಾದರೂ ಚಟ್ನಿಯೊಂದಿಗೆ ತಯಾರಿಸಿ ಸವಿಯಿರಿ.

ಆಲೂ-ಸೂಜಿ ಕಟ್ಲೇಟ್

ಆಲೂ-ಸೂಜಿ ಕಟ್ಲೇಟ್.

ಆಲೂ-ಸೂಜಿ ಕಟ್ಲೇಟ್.

ಬೇಕಾಗುವ ಸಾಮಗ್ರಿಗಳು: ದೊಡ್ಡ ಗಾತ್ರದ ಆಲೂಗಡ್ಡೆ 2, ಸೂಜಿ ರವೆ 1 ಕಪ್, ಗಟ್ಟಿ ಮೊಸರು 3/4 ಕಪ್, ಈರುಳ್ಳಿ 2 ಚಿಕ್ಕದಾಗಿ ಕತ್ತರಿಸಿ, ಕೊತ್ತಂಬರಿ ಸೊಪ್ಪು 2 ಚಮಚ, ಹಸಿಮೆಣಸಿನಕಾಯಿ 2 ಚಿಕ್ಕದಾಗಿ ಕತ್ತರಿಸಿ, ಶುಂಠಿ ಒಂದಿಂಚು ಚಿಕ್ಕದಾಗಿ ಕತ್ತರಿಸಿ, ಜೀರಿಗೆ 1 ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು.

ತಯಾರಿಸುವ ವಿಧಾನ: ಆಲೂಗಡ್ಡೆಯನ್ನು ಬೇಯಿಸಿಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಿ. ಒಂದು ಬೌಲ್‌ನಲ್ಲಿ ಸೂಜಿ ರವೆ ಮತ್ತು ಮೊಸರನ್ನು ಹಾಕಿ ಕಲಸಿ ನಂತರ ಹದಿನೈದು ನಿಮಿಷಗಳ ಮುಚ್ಚಿಡಿ. ಬಳಿಕ ಈ ಮಿಶ್ರಣಕ್ಕೆ ಪುಡಿಮಾಡಿಕೊಂಡ ಆಲೂಗಡ್ಡೆ, ಈರುಳ್ಳಿ, ಜೀರಿಗೆ, ಹಸಿ ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೈಯಿಗೆ ಎಣ್ಣೆಯನ್ನು ಸವರಿ ಕೊಂಡು ತಯಾರಿಸಿದ ಮಿಶ್ರಣದಿಂದ ನಿಮಗೆ ಬೇಕಾದ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಅದನ್ನು ದಪ್ಪವಾಗಿಯೂ ಅಲ್ಲದೆ ತುಂಬಾ ತೆಳುವಾಗಿ ಅಲ್ಲದೆ ಸಮತಟ್ಟಾಗಿ ತಟ್ಟಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ಅದರಲ್ಲಿ ತಯಾರಿಸಿದ ಕಟ್ಲೇಟ್ ಹಾಕಿ ಎರಡೂ ಬದಿಯಲ್ಲಿ ಕೆಂಬಣ್ಣ ಬರುವಂತೆ ಮಧ್ಯಮ ಉರಿಯಲ್ಲಿ ಕರಿಯಿರಿ. ರುಚಿಕರವಾದ ಮತ್ತು ಆರೋಗ್ಯಕರವಾದ ಕಟ್ಲೇಟ್ ಅನ್ನು ಪುದಿನ ಚಟ್ನಿ ಅಥವಾ ಟೊಮೆಟೊ ಕೆಚಪ್‌ನೊಂದಿಗೆ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT