ದೇಹಪ್ರಕೃತಿ, ದೇಶ–ಕಾಲ, ವಯಸ್ಸುಗಳನ್ನು ಅನುಸರಿಸಿ ಮಾಡುವ ಉಪವಾಸ ಆರೋಗ್ಯವರ್ಧಕ; ವಿವೇಚನೆ ಇಲ್ಲದೆ ಮಾಡುವ ಉಪವಾಸ ಅನರ್ಥಕ್ಕೆ ನಾಂದಿ...

ನಮ್ಮ ಹೆಮ್ಮೆಯ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರು ವಿಪತ್ತಿನ ಸಮಯದಲ್ಲಿ ವಾರಕ್ಕೊಂದು ದಿನ ಇಡೀ ದೇಶದ ಜನತೆ ಉಪವಾಸ ಮಾಡುವಂತೆ ಕರೆ ಕೊಟ್ಟಿದ್ದರು. ವಿಪತ್ತು ಕಳೆದ ನಂತರ ಅದು ಧಾರ್ಮಿಕ ಆಚರಣೆಯಾಗಿ ಪರಿವರ್ತನೆಯಾಯಿತು. ನಿರ್ಜಲ, ಸಜಲ, ಫಲಹಾರ ಸೇವಿಸಿ, ಪಾನಕ ಸೇವಿಸಿ, ದಿನಕ್ಕೆ ಒಂದು ಕಾಲದಲ್ಲಿ ಮಾತ್ರ ಆಹಾರವನ್ನು ಸೇವಿಸಿ, ದಿನದಲ್ಲಿ ಒಂದು ಕಾಲದಲ್ಲಿ ಮಾತ್ರ ಆಹಾರವನ್ನು ಸೇವಿಸದೆ – ಹೀಗೆ ಅನೇಕ ರೀತಿಯಲ್ಲಿ ಉಪವಾಸದ ವ್ಯಾಪ್ತಿಯನ್ನು ಕಾಣುತ್ತೇವೆ. ವ್ರತನಿಯಮವಾಗಿ, ಯಾವುದೋ ಹರಕೆಗಾಗಿ, ಹಟ ಅಥವಾ ಸಿಟ್ಟಿನಿಂದ, ಸಾಮಾಜಿಕ ಹೋರಾಟಕ್ಕಾಗಿ, ಆರೋಗ್ಯ ಪ್ರಾಪ್ತಿಗಾಗಿ, ಅನಾರೋಗ್ಯ ನಿವಾರಣೆಗಾಗಿ – ಹೀಗೆ ಅನೇಕ ಕಾರಣಗಳಿಗೆ ಉಪವಾಸ ಕೈಗೊಳ್ಳುತ್ತೇವೆ. ಇವೆಲ್ಲವುಗಳ ಪರಿಣಾಮ ಒಂದೇ ಆಗಿರುತ್ತದೆಯೇ, ಎಂದರೆ ‘ಇಲ್ಲಾ’ ಎಂದೇ ಹೇಳಬೇಕು.

ವ್ರತನಿಯಮವಾಗಿ ಅಥವಾ ಯಾವುದೋ ಹರಕೆಗಾಗಿ ಉಪವಾಸ ಮಾಡುವವರು ಉಪವಾಸದ ಪದದ ಅರ್ಥವನ್ನು ಅನುಸರಿಸಬೇಕು. ಎಂದರೆ (ಭಗವಂತಸ್ಯ) ‘ಉಪ ಸಮೀಪೇ ವಸತಿ ಇತಿ ಉಪವಾಸಃ’ ಎನ್ನುವಂತೆ ಭಗವಂತನ ಸಮೀಪದಲ್ಲಿ ವಾಸ ಮಾಡುವುದು. ಎಂದರೆ ಐಹಿಕ, ಲೌಕಿಕ ಕೆಲಸಗಳನ್ನೆಲ್ಲಾ ತ್ಯಜಿಸಿ ಕೇವಲ ಭಗವಂತನ ಧ್ಯಾನದಲ್ಲಿ ನೆಲಸಿದರೆ ಉಪವಾಸಕ್ಕೊಂದು ಅರ್ಥ ಬಂದೀತು. ಇದಲ್ಲದೆ ಕೇವಲ ಆಹಾರವನ್ನು ತ್ಯಜಿಸಿ, ನಾಲಿಗೆಯಿಂದ ಹಿಡಿದು ಎಲ್ಲಾ ಇಂದ್ರಿಯಗಳಗೆ ಲಗಾಮು ಹಾಕದೆ ಬಿಟ್ಟರೆ ಇದರಿಂದ ಅನರ್ಥವೇ ಆದೀತು. 15 ದಿನಕ್ಕೊಮ್ಮೆ ಬರುವ ಏಕಾದಶಿ ತಿಥಿಯಂದು ಉಪವಾಸ ಮಾಡುವುದು ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿದೆ. ‘ಏಕಾದಶಿ’ ಹೆಸರೇ ಸೂಚಿಸುವಂತೆ ಹನ್ನೊಂದೂ ಇಂದ್ರಿಯಗಳ ಮೂಲಕ ಯಾವ ರೀತಿಯ ಆಹಾರವನ್ನೂ ಸೇವಿಸಬಾರದು ಎಂದು. ಕೇವಲ ಮುಖದಿಂದ ಆಹಾರ ಸೇವಿಸಬಾರದೆಂಬುದು ಸಾಂಕೇತಿಕವಷ್ಟೆ. ಎಲ್ಲಾ ರೀತಿಯ ಶಾರೀರಿಕ ಶ್ರಮ, (ಸತ್/ದುರ್) ವಾಚಿಕ ವ್ಯಾಪಾರಗಳು, ಕೆಟ್ಟ ಚಿಂತನೆಗಳು, ಅತಿಯಾಗಿ ಸಾಮಾಜಿಕ ಮಾಧ್ಯಮಗಳ ಬಳಕೆ – ಹೀಗೆ ಇಂದ್ರಿಯಗಳನ್ನು ಮನಸೋ ಇಚ್ಛೆ ಪವೃತ್ತವಾಗಲು ಬಿಟ್ಟು, ಕೇವಲ ಆಹಾರ ಸೇವಿಸದಿದ್ದರೆ ಅಮ್ಲಪಿತ್ತ, ಚರ್ಮವ್ಯಾಧಿ, ತಲೆನೋವು, ತಲೆಸುತ್ತು, ಜ್ವರ, ಬೆನ್ನುನೋವು, ಮಾನಸಿಕ ಖಿನ್ನತೆ – ಹೀಗೆ ಅನೇಕ ರೋಗಗಳಿಂದ ಬಳಲಬೇಕಾಗುತ್ತದೆ. ಇನ್ನು ಕೆಲವು ವ್ರತಗಳಲ್ಲಿ 15 ದಿನಗಳ ಉಪವಾಸ, ವಾರಕ್ಕೆರಡು ದಿನ ಉಪವಾಸ, ಕೆಲವು ಧರ್ಮಗಳಲ್ಲಿ 49 ದಿನಗಳ ವ್ರತ ಮಾಡುವವರೂ ಇದ್ದಾರೆ. ಯಾವುದೇ ಆದರೂ ಮೌನ, ಧ್ಯಾನಗಳೊಡನೆ ಆಚರಿಸಿದರೆ ಯಾವುದೇ ತೊಂದರೆ ಇರುವುದಿಲ್ಲ, ಇಷ್ಟೆಲ್ಲಾ ಉಪವಾಸ ಮಾಡಿದರೂ ತೊಂದರೆ ತಪ್ಪಲಿಲ್ಲ, ಭಗವಂತ ಒಲಿಯಲಿಲ್ಲ ಎನ್ನುವ ಕೊರಗೂ ಹೋಗುವುದಿಲ್ಲ. ಯಾವುದೇ ಕಾರಣಕ್ಕೂ ಹಟ, ಸಿಟ್ಟು, ದ್ವೇಷ ಭಾವನೆಗಳನ್ನು ಹೊಂದಿ ಆಹಾರ ಸೇವಿಸದಿರುವುದು ತರವಲ್ಲ. ಇದು ಉಪವಾಸದ ಗುಂಪಿಗೆ ಬರುವುದೇ ಇಲ್ಲ. ಇದು ಮನೋರೋಗಕ್ಕೆ ಕಾರಣವಾಗುವುದರ ಜೊತೆಗೆ ಯಕೃತ್ ವಿಕಾರ, ಹೃದಯಸಂಬಂಧಿ ರೋಗಗಳಿಗೆ ಕಾರಣವಾಗುತ್ತದೆ.

ಇನ್ನು ಕೆಲವು ವ್ಯಾಧಿಗಳ ನಿವೃತ್ತಿಗಾಗಿ ಆಹಾರಸೇವನೆಯನ್ನು ಕಡಿಮೆ ಮಾಡಬೇಕಾಗುತ್ತದೆ. ವಿಪರೀತ ಆಜೀರ್ಣವಾದಾಗ ಆಹಾರ ಸೇವಿಸದಿರುವುದು ಚಿಕಿತ್ಸೆಯೇ ಆಗುತ್ತದೆ. ತಿಂದ ಆಹಾರ ಜೀರ್ಣವಾಗಿ ಹಸಿವೆ ಉತ್ಪತ್ತಿಯಾದ ಬಳಿಕ ಮೊದಲು ದ್ರವಾಹಾರ, ನಂತರ ಘನಾಹಾರ ಸೇವಿಸೇಕು. ತೂಕ ಕಡಿಮೆ ಮಾಡಬೇಕು ಆದಕ್ಕಾಗಿ ಆಹಾರ ಸೇವಿಸದಿರುವುದು ಅಥವಾ ಅತಿ ಕಡಿಮೆ ಆಹಾರ ಸೇವಿಸುವುದು, ದ್ರವಾಹಾರವನ್ನು ಮಾತ್ರ ಸೇವಿಸುವುದು – ಹೀಗೆ ಅನೇಕ ವಿಧಾನಗಳನ್ನು ಅನುಸರಿಸುತ್ತಾರೆ. ಆಯಾ ವ್ಯಕ್ತಿಯ ಆರೋಗ್ಯಕ್ಕೆ ಅನುಗುಣವಾಗಿ ಆಹಾರಸೇವನೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಬದಲಾವಣೆ ಮಾಡಿಕೊಳ್ಳಬೇಕು.

ನಿಸರ್ಗ ಚಿಕಿತ್ಸೆಯಲ್ಲಿ ಕೆಲವು ರೋಗಗಳಿಗೆ ಕೇವಲ ಕಲ್ಲಂಗಡಿ ಹಣ್ಣು ಅಥವಾ ಇತರೆ ಕೆಲವು ಹಣ್ಣುಗಳನ್ನು, ತರಕಾರಿಗಳನ್ನು ಮಾತ್ರ ಸೇವಿಸುವುದೇ ಚಿಕಿತ್ಸೆಯಾಗಿರುತ್ತದೆ. ಆಯಾಯ ಹಣ್ಣು–ತರಕಾರಿಗಳನ್ನು ಸೇವಿಸಲು ವಿಶೇಷವಾದ ಕ್ರಮಗಳಿರುತ್ತವೆ. ಆ ಕ್ರಮವನ್ನು ಅನುಸರಿಸಿ ಸೇವಿಸಿದರೆ ಆ ವ್ಯಾಧಿ ಗುಣವಾಗುತ್ತದೆ. ಕ್ರಮವರಿಯದೇ ಸೇವಿಸಿದ ಹಣ್ಣು, ಹಸಿ ತರಕಾರಿಗಳ ಚಿಕಿತ್ಸೆ ಅನರ್ಥವನ್ನೇ ಉಂಟು ಮಾಡಬಹುದು. ಯಾವುದೋ ಮಾಧ್ಯಮದಲ್ಲಿ ತಿಳಿಸಿದರೆಂದು ದೇಶ, ಕಾಲ, ವ್ಯಕ್ತಿಗಳ ಪ್ರಕೃತಿಯನ್ನು ಗಮನಿಸದೆ ವಿವೇಚಿಸದೆ ಹಣ್ಣು ಅಥವಾ ತರಕಾರಿಗಳನ್ನು ಸೇವಿಸಿ ರೋಗವನ್ನು ಗುಣ ಮಾಡಿಕೊಳ್ಳಲು ಹೋದರೆ ಅನರ್ಥಗಳ ಪರಂಪರೆಯನ್ನೇ ಎದುರಿಸಬೇಕಾಗುತ್ತದೆ. ಉದಾಹರಣೆಗೆ, ಕಲ್ಲಂಗಡಿ ಚಿಕಿತ್ಸೆಯಲ್ಲಿ ಹಣ್ಣನ್ನು ಸೇವಿಸಿ ನಂತರ ಬೆನ್ನಾಗಿ ನೀರು ಕುಡಿಯಬೇಕು ಎನ್ನುವ ನಿಯಮವಿದೆ. ಈ ನಿಯಮವನ್ನು ಗಾಳಿಗೆ ತೂರಿದರೆ ಚರ್ಮವ್ಯಾಧಿಯು ಹೆಚ್ಚಾಗುತ್ತದೆ; ಮೂತ್ರ ಸಂಬಂಧಿ, ಮೂತ್ರಕೋಶ ಸಂಬಂಧಿ ರೋಗಗಳಿಗೆ ನಾಂದಿ ಹಾಡುತ್ತದೆ ಕೂಡ.

ಆರೋಗ್ಯರಕ್ಷಣೆಗಾಗಿ ವಾರಕ್ಕೆ ಒಂದು ದಿನ ಅಥವಾ ಹದಿನೈದು ದಿನಕ್ಕೆ ಒಮ್ಮೆ ಉಪವಾಸ ಮಾಡುವುದು ಹಿತಕರವೇ. ಆದರೆ ಅವರವರ ಪ್ರಕೃತಿಗೆ ಅನುಗುಣವಾಗಿ, ದೇಹದಲ್ಲಿ ನೀರಿನಂಶ ಕಡಿಮೆ ಆಗದಂತೆ, ನೋಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಉಪವಾಸ ಮಾಡಿದರೆ ಮೈಕೈ ನೋವು ಬರುತ್ತದೆ ಎನ್ನುವವರು ಹಲವರು, ಇಂತಹವರು ಉಪವಾಸದ ದಿನ ಎ.ಸಿ., ಫ್ಯಾನ್‌ಗಳನ್ನು ಉಪಯೋಗಿಸದಿರುವುದು ಒಳಿತು. ತಂಪಾದ ವಾತಾವರಣ, ಮೈಗೆ ನಿರಂತರವಾಗಿ ಬಿಸುವ ಗಾಳಿ ಚರ್ಮವನ್ನು ಒಣಗಿಸಿ ಮೈನೆವೆ, ಮೈಕೈ ನೋವುಗಳನ್ನು ಉತ್ಪತ್ತಿ ಮಾಡುತ್ತದೆ. ಅಲರ್ಜಿ, ಚರ್ಮವ್ಯಾಧಿ, ಗಂಟು ನೋವುಗಳಿದ್ದರೆ ಅದು ಹೆಚ್ಚಾಗಲೂಬಹುದು. ಉಪವಾಸ ಮಾಡಿದಾಗ ಬೆನ್ನುನೋವು, ಹೊಟ್ಟೆಯುರಿ, ಹೊಟ್ಟೆನೋವು, ತಲೆನೋವು ಬರುತ್ತದೆ ಎಂದಾದರೆ ಅವರು ಯಾವ ಕಾರಣಕ್ಕೂ ನಿರ್ಜಲ ಉಪವಾಸ ಮಾಡಬಾರದು. ಹಸಿವೆಯಾದಾಗ, ಹಾಲನ್ನೋ ಪಾನಕವನ್ನೋ ಅಥವಾ ಹಣ್ಣಿನ ರಸವನ್ನೋ, ಇತರೆ ದ್ರವಾಹಾರಗಳನ್ನೋ ಆಹಾರಕಾಲದಲ್ಲಿ ಸೇವಿಸಲೇಬೇಕು. ಇಲ್ಲದಿದ್ದರೆ, ರಕ್ತಪಿತ್ತ, ಅತಿಸಾರ, ವಾಂತಿ ಮುಂತಾದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಕೆಲವರಿಗೆ ಉಪವಾಸ ಮಾಡಬೇಕೆಂಬ ಅಪೇಕ್ಷೆ ಇರುತ್ತದೆ, ಆದರೆ ಅವರ ನಿತ್ಯದ ಆಹಾರ ಸಮಯವನ್ನು ಮೀರಿದರೂ ಅಮ್ಲಪ್ತಿತ, ಬೆನ್ನುನೋವು ಪ್ರಾರಂಭವಾಗುತ್ತದೆ. ಅಂತಹವರು ಆಹಾರಕಾಲದಲ್ಲಿ ಸುಲಭದಲ್ಲಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು ಉಪವಾಸದ ಪರಿಣಾಮವನ್ನೇ ನೀಡುತ್ತದೆ.

ಮಿತವಾದ ಆಹಾರಸೇವನೆಯ ಕಾಲದಲ್ಲಿ, ಅತಿಯಾದ ಶಾರೀರಿಕ ಶ್ರಮ ಒಳ್ಳೆಯದಲ್ಲ. ಬೇಸಗೆಯಲ್ಲಿ ನಿರ್ಜಲ ಉಪವಾಸ ನಿಷಿದ್ಧ. ಅದರಿಂದ ದೇಹದ ನಿರ್ಜಲಿಕರಣ, ರಕ್ತದ ಒತ್ತಡ ಹೆಚ್ಚಾಗುವುದು, ತಲೆಸುತ್ತು ಕಾಣಿಸಿಕೊಳ್ಳಬಹುದು; ಇವುಗಳ ಪರಿಣಾಮವಾಗಿ ಪಕ್ಷಾಘಾತವೇ ಮೊದಲಾದ ಘೋರ ವ್ಯಾಧಿಗಳಿಗೆ ತುತ್ತಾಗಬಹುದು.

ಉಪವಾಸ ಮಾಡುವುದು ಎಷ್ಟು ಪರಿಣಾಮಕಾರಿಯೋ, ಉಪವಾಸವನ್ನು ಕೈ ಬಿಡುವಾಗಲೂ ಅಷ್ಟೇ ಜಾಗ್ರತೆ ವಹಿಸಬೇಕು. ಉಪವಾಸದ ನಂತರ ಆಹಾರವನ್ನು ಸೇವಿಸುವಾಗ ಮೊದಲು ದ್ರವಾಹಾರ ಸೇವಿಸಿ, ನಂತರ ಘನಾಹಾರ ಸೇವಿಸಬೇಕು. ದೇಹಪ್ರಕೃತಿ, ದೇಶ–ಕಾಲ, ವಯಸ್ಸುಗಳನ್ನು ಅನುಸರಿಸಿ ಮಾಡುವ ಉಪವಾಸ ಆರೋಗ್ಯವರ್ಧಕ ಮತ್ತು ರಕ್ಷಕವಾದರೆ, ವಿವೇಚನೆ ಇಲ್ಲದೆ ಮಾಡುವ ಉಪವಾಸ ಅನರ್ಥಕ್ಕೆ ನಾಂದಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.