ನನ್ನೆದೆಯೊಳಗೆ ಹೆಪ್ಪುಗಟ್ಟಿದ ಗಂಟುಗಳು ಕ್ಯಾನ್ಸರ್ ಇದ್ದಿರಬಹುದೇ ಎಂಬ ಪ್ರಶ್ನೆ ನನ್ನ ನಿದ್ದೆಗೆಡಿಸಿದ್ದು, ನೆಮ್ಮದಿ ಕಸಿದಿದ್ದು, ಮನಸ್ಸನ್ನು ವಿಚಲಿತಗೊಳಿಸಿದ್ದನ್ನ ಕಳೆದ ವಾರ ಹಂಚಿಕೊಂಡಿದ್ದೆ. ಈಗ ಅದರ ಮುಂದುವರಿದ ಭಾಗ...

ನನ್ನ ಥೈರಾಯ್ಡ್ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂಡೋಕ್ರೈನಾಲಾಜಿಸ್ಟ್ ಡಾ.ಹರೀಶ ಜೋಶಿ ಕೊಟ್ಟ ಲೆಟರ್ ನನ್ನ ಕೈಲಿತ್ತು. ಎಲ್ಲಿ ಸ್ಕ್ಯಾನಿಂಗು, ಮ್ಯಾಮೊಗ್ರಾಂ ಮಾಡ್ಸೋದು ಎಂಬ ಪ್ರಶ್ನೆ ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತು. ನಾನಂದುಕೊಂಡಂತೆ ಆ ಗಂಟು ಕ್ಯಾನ್ಸರ್ ಗಂಟೇ ಆದಲ್ಲಿ ಬಹುಶಃ ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದು ಧಾರವಾಡದ ಎಸ್‌ಡಿಎಂನಲ್ಲೇ ಆಗಬಹುದು. ಆದ್ದರಿಂದ ಅಲ್ಲಿಯೇ ಸ್ಕ್ಯಾನಿಂಗ್ ಮಾಡಿಸಿದರಾಯಿತು ಎಂದು ನಿರ್ಧರಿಸಿದೆ. ನನ್ನ ವಾರದ ರಜೆ ನವೆಂಬರ್ 13ರಂದು (ಶುಕ್ರವಾರ) ಇತ್ತು. ಅವತ್ತು ಅಮ್ಮ ಮತ್ತು ಮಗನೊಟ್ಟಿಗೆ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಹೋದೆ. ಅಲ್ಲಿನ ಸ್ಕ್ಯಾನಿಂಗ್ ವಿಭಾಗದಲ್ಲಿ ಡಾ.ಹರೀಶ ಜೋಶಿ ಕೊಟ್ಟ ಲೆಟರ್ ಕೊಟ್ಟೆ. ರಿಸೆಪ್ಶನಿಸ್ಟ್ ಕೌಂಟರ್‌ನಲ್ಲಿದ್ದವರು ಲೆಟರ್ ನೋಡಿ, ಇದರಲ್ಲಿ ಸೊನೊಗ್ರಫಿ ಒಂದೇ ಮಾಡ್ತೇವೆ. ಆದರೆ ರಿಪೋರ್ಟ್ ಸಿಗೋದು ನಾಲ್ಕು ದಿನ ಆಗಲಿದೆ ಎಂದರು. ಅಷ್ಟು ಲೇಟಾಗೋದಾದ್ರೆ ಬೇಡ ಎಂದು ಅಲ್ಲಿಂದ ಹೊರಟು ಹುಬ್ಬಳ್ಳಿಯ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ವಿಚಾರಿಸಿದೆ. ಅವರು, ಇಲ್ಲಿ ಸ್ಕ್ಯಾನಿಂಗ್ ಯಾವುದು ಇಲ್ಲ ಎಂದರು. ಅಷ್ಟು ಹೊತ್ತಿಗೆ ಮಧ್ಯಾಹ್ನ ಆಗಿತ್ತು. ಅಮ್ಮನ ಹತ್ರ, ಊಟ ಮಾಡಿ ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್‌ಗೆ ಹೋಗೋಣ ಎಂದೆ. ಅಮ್ಮ ಗಡಿಬಿಡಿಯಿಂದ ಅಡುಗೆ ಮಾಡಿದರು. ಊಟ ಮಾಡಿ ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್‌ಗೆ ಹೋದಾಗ 3.30 ಆಗಿತ್ತು. ಅಲ್ಲಿ ಲೆಟರ್ ಕೊಟ್ಟು ಶುಲ್ಕವನ್ನು ಕಟ್ಟಿಸಿಕೊಂಡರು. ವೇಟ್ ಮಾಡಿ ಎಂದರು. ನಾನು, ಅಮ್ಮ, ದಿಗಂತ ಅಲ್ಲೇ ಇದ್ದ ಕುರ್ಚಿಗಳಲ್ಲಿ ಕುಳಿತೆವು. ಅಮ್ಮ ಅವಳ ಪಾಡಿಗೆ ಮೌನವಾಗಿ ಕೂತಿದ್ದರೆ ನಾನು ನನ್ನ ಪಾಡಿಗೆ ಕೂತಿದ್ದೆ. ದಿಗಂತ್ ಮಾತ್ರ ಆಚೆ–ಈಚೆ ಓಡಾಡ್ಕೋತ ಇದ್ದ.

ಮೊದಲು ಮ್ಯಾಮೊಗ್ರಾಂಗೆ ಬನ್ನಿ ಎಂದು ಅದನ್ನು ನಿರ್ವಹಿಸುವ ಮೇಡಂ ಕರೆದರು. ಮ್ಯಾಮೊಗ್ರಾಂ ಹೇಗೆ ಮಾಡ್ತಾರೆ ಅನ್ನೋ ಕಿಂಚಿತ್ ವಿಚಾರವೂ ನನಗೆ ಗೊತ್ತಿರಲಿಲ್ಲ. ಸರಿ ರೂಮೊಳಗೆ ಹೋದೆ. ಟಾಪ್ ತೆಗಿರಿ ಅಂದರು ಮೇಡಂ. ಸರಿ ಎಂದೆ. ಅಲ್ಲಿದ್ದ ಮ್ಯಾಮೊಗ್ರಾಂ ಮಷಿನ್ ಒಳಗೆ R ಎಂಬ ನಮೂದಾಗಿದ್ದ ಎಕ್ಸರೇ ಕಾಪಿಯೊಂದನ್ನು ಇಟ್ಟರು. ಮೊದಲು ಬಲಸ್ತನ ಇಡಿಸಿ ಬಟನ್ ಪ್ರೆಸ್ ಮಾಡಿದರು. ಮುಖ ಹಾಗೂ ಎಡಭಾಗವನ್ನು ಹಿಂದಕ್ಕೆ ಎಳ್ಕೊಳ್ಳಿ. ಅಲುಗಾಡಬೇಡಿ ಎಂದರು ಮೇಡಂ. ಅಷ್ಟು ಹೇಳಿ ಬಾಗಿಲು ಎಳೆದು ಹೊರ ನಡೆದರು. ರೆಡಿಯೇಷನ್ ಸಂಬಂಧ ಅವರು ರೂಮಿನ ಹೊರಗಿನಿಂದಲೇ ಆಪರೇಟ್ ಮಾಡುತ್ತಿದ್ದರು. ಅವರು ಬಟನ್ ಪ್ರೆಸ್ ಮಾಡುತ್ತಲೇ ಟ್ಯುಯ್ ಟ್ಯುಯ್ ಅಂಥ ಶಬ್ದ ಮಾಡುತ್ತ ಮೇಲಿನಿಂದ ಇಳಿದ ಯಂತ್ರದ ಪ್ಲೇಟ್ ಸ್ತನವನ್ನು ಒತ್ತುತ್ತ ಒಂದು ಹಂತಕ್ಕೆ ಬಂದು ನಿಂತಿತು. ಅದೇ ಸ್ತನದಲ್ಲಿ ಗಂಟು ಇದ್ದಿದ್ದರಿಂದ ನೋವಾಯಿತು. ಕೂಗೊ ಹಾಗೂ ಇಲ್ಲ. ರೋಟಿ ಮೇಕರ್‌ನಲ್ಲಿ ಹಿಟ್ಟಿನ ಉಂಡೆ ಚಪಾತಿಯಾದಂತೆ ಅಪ್ಪಚ್ಚಿ ಮಾಡಿತು. ಅಬ್ಬಾ... ಎಷ್ಟು ನೋವಾಗ್ತಿದೆಯಪ್ಪ. ಕೂಗಿಕೊಂಡರೂ ಕೇಳೊ ಕಿವಿಗಳಿರಲಿಲ್ಲ. ನನ್ನಷ್ಟಕ್ಕೆ ನೋವು ನುಂಗಿಕೊಂಡೆ. ಸ್ವಲ್ಪ ಹೊತ್ತಿಗೆ ಶಬ್ದ ನಿಂತು, ರೋಟಿ ಮೇಕರ್ ಓಪನ್ ಆದಂತೆ ಆಯಿತು. ಸದ್ಯ ಮುಗಿತಲ್ಲ ಅಂತ ಅಂದ್ಕೊಳ್ಳುತ್ತಿದ್ದಂತೆ ಆ ಮೇಡಂ ರೂಮೊಳಗೆ ಬಂದರು. L ಎಂದು ನಮೂದಾಗಿರುವ ಮತ್ತೊಂದು ಎಕ್ಸರೇ ಶೀಟ್ ಇಟ್ಟು, ಎಡಭಾಗದ್ದನ್ನು ಇಲ್ಲಿಡಿ ಎಂದು ಹೇಳಿ ಹೋದರು. ಮತ್ತದೇ ಪ್ರಾಸಿಜರ್. ರೋಟಿ ಮೇಕರ್ ಒಳಗೆ ಚಪಾತಿಯಾಗುವ ಸಂದರ್ಭ ಎಡಸ್ತನದ ಪ್ರಾರಬ್ಧವಾಗಿತ್ತು. ಅದೂ ಮುಗಿತು. ಅಬ್ಬಾ ಮುಗಿತಲ್ಲ ಅಂದುಕೊಳ್ಳುವಾಗಲೇ ಬೇರೆ ಆ್ಯಂಗನ್‌ನಲ್ಲಿ ಮತ್ತದೇ ಪ್ರಕ್ರಿಯೆ. ಯಪ್ಪಾ ಕಣ್ಣಲ್ಲಿ ನೀರು ಬರೋದೊಂದೆ ಬಾಕಿಯಿತ್ತು. ಮುಗೀತು ಬನ್ನಿ. ಹೊರಗೆ ಕುತ್ಕೊಂಡಿರ್ರಿ. ಸ್ಕ್ಯಾನಿಂಗ್‌ಗೆ ಕರೆದಾಗ ಹೋಗಿ ಎಂದು ಮೇಡಂ ಎಕ್ಸರೇ ಶೀಟ್‌ಗಳನ್ನು ತೆಗೆದುಕೊಂಡು ಹೋದರು. ಸ್ವಲ್ಪ ಹೊತ್ತಿಗೆ ಅಲ್ಟ್ರಾ ಸೊನೊಗ್ರಫಿ ಸ್ಕ್ಯಾನಿಂಗ್ ರೂಮ್‌ನಿಂದ ಕರೆ ಬರುತ್ತಲೇ ರೂಮೊಳಗೆ ಹೋದೆ. ಬಲಭಾಗದಲ್ಲಿ ಸ್ಕ್ಯಾನಿಂಗ್ ಮುಗಿಸಿದ ಡಾಕ್ಟರ್ ಎಡಭಾಗದ ಸ್ಕ್ಯಾನಿಂಗ್ ಆರಂಭಿಸಿದರು. ನಂತರ ಸಿರೀಂಜ್‌ನಿಂದ ಬಲಸ್ತನದ ಗಂಟಿದ್ದ ಭಾಗಕ್ಕೆ ಚುಚ್ಚಿ ರಕ್ತವನ್ನು ಚಿಕ್ಕ ಬಾಟಲಿಯಲ್ಲಿ ಶೇಖರಿಸಿಟ್ಟರು. ಮತ್ತೊಂದು ಬಾಟಲಿ ಕೊಡಿ ಎಂದು ಅಲ್ಲಿದ್ದ ಮೇಡಂಗೆ ಹೇಳಿದಾಗ ನನಗೆ ಕೊಂಚ ಕಸಿವಿಸಿಯಾಯಿತು. ಅದೇ ಥರ ಎಡಭಾಗದಲ್ಲೂ ಎರಡೆರಡು ಸಲ ಚುಚ್ಚಿ ಚುಚ್ಚಿ ರಕ್ತವನ್ನು ಬಾಟಲಿಯಲ್ಲಿ ಸಂಗ್ರಹಿಸಿದರು. ನನ್ನ ಲೆಕ್ಕದಲ್ಲಿ ಬಲಭಾಗದಲ್ಲಿ ಮಾತ್ರ ಗಂಟಿತ್ತು. ಎಡಭಾಗದಲ್ಲಿ ಏನಿಲ್ಲ ಎಂಬ ಭ್ರಮೆ. ಸರಿ ನೀವು ಹೊರಗೆ ವೇಟ್ ಮಾಡಿ. ರಿಪೋರ್ಟ್ ರೆಡಿಯಾಗ್ಲಿಕ್ಕೂ ಕರಿತಾರೆ ಎಂದು ಡಾಕ್ಟರ್ ಹೇಳಿದ ಮೇಲೆ ಹೊರಬಂದು ಅಮ್ಮನ ಜೊತೆ ಕುಳಿತೆ. ಅಷ್ಟೊತ್ತಿಗೆ ಗಿರೀಶ ಸ್ಕೂಲ್‌ನಿಂದ ಹೊರಟು ಸ್ಕ್ಯಾನಿಂಗ್ ಸೆಂಟರ್ ತಲುಪಿದ್ದರು.

ರಿಪೋರ್ಟ್ ಸಂಜೆ ವೇಳೆಗೆ ಸಿಗೋದಿತ್ತು. ಅಲ್ಲಿವರೆಗೂ ಕಾಯುವುದು ಅನಿವಾರ್ಯ. ಆದರೆ ಅದಾಗಲೇ ನನ್ನ ಮನಸ್ಸು ಕ್ಯಾನ್ಸರ್ ಅಂತ ರಿಪೋರ್ಟ್ ಕೊಟ್ಟಾಗಿತ್ತು. ಆದರೆ ವೈದ್ಯಕೀಯವಾಗಿ ಘೋಷಣೆ ಆಗಬೇಕಿತ್ತಲ್ಲ. ಸಂಜೆವರೆಗೂ ಕಾದೆ. ಮೂವರಲ್ಲೂ ಮೌನ. ದಿಗಂತ ಮಾತ್ರ ಅಲ್ಲಿ ಇಲ್ಲಿ ಓಡಾಡ್ಕೊಂಡಿದ್ದ. ಅಷ್ಟೇ ಹೊತ್ತಿಗೆ ಸ್ಕ್ಯಾನಿಂಗ್‌ಗೆಂದು ಕರೆತಂದಿದ್ದ ಅಜ್ಜನನ್ನು ಮೇಡಂ ಒಬ್ಬರು ಸ್ಕ್ಯಾನಿಂಗ್ ಮುಗಿಸಿ, ವೀಲ್‌ಚೇರ್‌ನಲ್ಲಿ ಕರೆತಂದು ಬಿಟ್ಟು ಹೋದರು. ಅಜ್ಜ ಪಾಪ ಅವರ ಪಾಡಿಗೆ ಕೂತಿದ್ದರು. ಹೊರಹೋಗುವ ಬಾಗಿಲ ಬಳಿ ಕೊಂಚ ಇಳಿಜಾರಿತ್ತು. ನಮ್ಮ ದಿಗಂತ ಹೋಗಿ ಅಜ್ಜ ಕೂತಿದ್ದ ವೀಲ್‌ಚೇರ್‌ಗೆ ಡಿಕ್ಕಿ ಹೊಡೆದೇ ಬಿಟ್ಟ. ವೀಲ್‌ಚೇರ್ ಚಲಿಸುತ್ತ ಆ ಇಳಿಜಾರಲ್ಲಿ ಇಳಿದೇ ಬಿಟ್ಟತು. ಅಲ್ಲಿದ್ದವರೆಲ್ಲ ಹೋ.. ಎಂದು ಕೂಗುತ್ತಲೇ ಅಮ್ಮ ಓಡಿ ಹೋಗಿ ವೀಲ್‌ಚೇರ್ ಅನ್ನು ಹಿಡಿದುಕೊಂಡರು. ಅಬ್ಬಾ... ಅಂದೆ. ಇರೋ ತಲೆಬಿಸಿ ಜೊತೆ ಈ ದಿಗಂತನ ಅವಾಂತರ ಸೇರ್ಕೊಂಡಿತ್ತು. ಅವನಿಗೆ ಗದರಿಸಿ, ಎಳೆದು ತಂದು ಪಕ್ಕದಲ್ಲೇ ಕೂರಿಸಿಕೊಂಡೆ.

ಅಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ಕೊಡುವ ಸುಜಾತಾ ಗಿರಿಯನ್ ಮೇಡಂ ನನಗೆ ಚೆನ್ನಾಗಿ ಗೊತ್ತಿದ್ದವರೇ ಆಗಿದ್ದರು. ನಾನು ಹೊರಗೆ ಹಾಲ್‌ನಲ್ಲಿ ಕುಳಿತಿದ್ದಿದ್ದನ್ನು ಅವರು ಗಮನಿಸಿದ್ದರು. ಆದರೆ ಅವರು ಸಹಿ ಹಾಕಿದ ಆ ಮೆಡಿಕಲ್ ರಿಪೋರ್ಟ್ ನನ್ನದು ಅನ್ನೋದು ತಕ್ಷಣಕ್ಕೆ ಅವರ ಗಮನಕ್ಕೆ ಹೋಗಿರಲಿಲ್ಲ. ಅದೇ ಸಮಯಕ್ಕೆ ನೋಟ್ ಬ್ಯಾನ್ ಗದ್ದಲವೂ ಎದ್ದಿತ್ತು. ಕೌಂಟರ್‌ನಲ್ಲಿ ನೋಟಿನ ಬಗ್ಗೆ ಆಗಾಗ ರೋಗಿಗಳ ಸಂಬಂಧಿಗಳಿಂದ ದೊಡ್ಡ ಧ್ವನಿಗಳು ಕೇಳಿಬರುತ್ತಿದ್ದವು. ನಾನು ಅದನ್ನೆಲ್ಲ ಗಮನಿಸುತ್ತಲೇ ಕಾದು ಕುಳಿತೆ. ಅಮ್ಮನ ಮನದಲ್ಲಿ ದುಃಖ ಮಡುಗಟ್ಟಿದ್ದು ಅವರ ಮೊಗದಲ್ಲೇ ಕಾಣುತ್ತಿತ್ತು. ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ತನ್ನ ಆಟಾಟೋಪ ಮುಂದುವರಿಸಿದ್ದ ನನ್ನ ಐದು ವರ್ಷದ ಮಗನನ್ನು ಸಂಭಾಳಿಸುವುದರಲ್ಲೇ ಅಮ್ಮನ ಸಮಯ ಕಳೆಯುತ್ತಿತ್ತು.

ರಿಪೋರ್ಟ್ ಕೈಗೆ ಸಿಗುತ್ತಲೇ ಕ್ಯಾಬಿನ್‌ನಲ್ಲಿದ್ದ ಮೇಡಂ ಜೊತೆ ನಾನು, ಗಿರೀಶ ಮಾತಿಗೆ ಕುಳಿತೆವು. ಅಲ್ಲಿವರೆಗೂ ಅವರಿಗೂ ಅದು ನನ್ನದೇ ರಿಪೋರ್ಟ್ ಅನ್ನೋ ಕಲ್ಪನೆಯಿರಲಿಲ್ಲ. ರಿಪೋರ್ಟ್ ನಿಮ್ಮದಾ ಕೃಷ್ಣಿ... ಅಂಥ ಉದ್ಗಾರ ಹೊರ ಹಾಕಿದವರೇ, ಎರಡೂ ಕಡೆ ಸಮಸ್ಯೆ ಇದೆ ಅಂದರು. ನಾನು ಅದುವರೆಗೂ ಬಲಸ್ತನವೊಂದರಲ್ಲೇ ಗಂಟು ಇರೋದು ಅಂದ್ಕೊಂಡಿದ್ದೆ. ಆದರೆ ಎಡ ಸ್ತನದಲ್ಲೂ ನೆನೆಸಿದ ಕಡಲೆಕಾಳಿನ ಗಾತ್ರದ ಗಂಟು ಅದಾಗಲೇ ಕೈಗೆ ಹತ್ತಲು ಶುರುವಾಗಿತ್ತು. ಮೇಡಂ ಮತ್ತೊಮ್ಮೆ ಅಲ್ಲೇ ಇದ್ದ ತಮ್ಮ ಖಾಸಗಿ ರೂಮಿಗೆ ಕರೆದೊಯ್ದು ಎಡಸ್ತನದ ಗಂಟಿದ್ದ ಭಾಗಕ್ಕೆ ಸೂಜಿ ಚುಚ್ಚಿ ರಕ್ತ ತೆಗೆದು ಮತ್ತೊಮ್ಮೆ ಪರೀಕ್ಷೆಗೊಳಪಡಿಸಿದರು. ಮೇಡಂ ನನ್ನನ್ನೇ ದಿಟ್ಟಿಸಿ ನೋಡಿದರು. ನಾನೂ ಅವರನ್ನು ಗಮನಿಸುತ್ತಲೇ ದೀರ್ಘವಾಗಿ ಉಸಿರು ಎಳೆದು ಹೊರಹಾಕಿದೆ. ಅಷ್ಟೇ! ಒಂದಿಷ್ಟು ಕಣ್ಣೀರೇನೂ ಬರಲಿಲ್ಲ. ಮೇಡಂ ಧೈರ್ಯ ಹೇಳುತ್ತಲೇ ಸಾಗಿದರು.

‘ಈಗೆಲ್ಲ ಕ್ಯಾನ್ಸರ್‌ಗೆ ಒಳ್ಳೊಳ್ಳೆ ಮೆಡಿಸಿನ್ ಇದೆ ಕೃಷ್ಣಿ. ಕ್ಯೂರ್ ಆಗುತ್ತೆ. ಬಟ್ ಟ್ರೀಟ್‌ಮೆಂಟ್ ತಗೊಳ್ಳುವಾಗ ಹೇರ್ ಫಾಲ್ ಆಗುತ್ತೆ. ಡೋಂಟ್ ವರಿ. ಮತ್ತೆ ಬರುತ್ತೆ.... ಆಗ ಬೇಕಾದ್ರೆ ಬಾಯ್‌ಕಟ್ ಮಾಡಿಸ್ಕೊ, ಬಾಬ್ ಕಟ್ ಮಾಡಿಸ್ಕೊ....ಹೇಗೆ.. ಎನ್ನುತ್ತ ಕಣ್ಣು ಮಿಟುಕಿಸಿದರು. ಸುಜಾತಾ ಮೇಡಂ ಅವರ ಒಂದೊಂದು ಮಾತು ಕೂಡ ನನ್ನಲ್ಲಿ ವಿಶ್ವಾಸ ಹುಟ್ಟುಹಾಕಲು ಶುರು ಮಾಡಿತು. ಅದೇನೋ ಗೊತ್ತಿಲ್ಲ. ರಿಪೋರ್ಟ್ ನೋಡಿ ಭಯಪಡಬೇಕಿದ್ದ ನನ್ನ ಮನದೊಳಗೆ ಮತ್ತಷ್ಟು ಧೈರ್ಯ ಮೂಡಿತ್ತು. ಮನದ ಒಳಗೆ ಬಚ್ಚಿಟ್ಟ ನೋವು, ಆತಂಕ ಬಹಿರಂಗಗೊಂಡಿತಲ್ಲ ಅನ್ನೋ ನಿರಾಳ ಭಾವ ನನ್ನಲ್ಲಿ ಇನ್ನಷ್ಟು ಆತ್ಮವಿಶ್ವಾಸವನ್ನು ಹುಟ್ಟುಹಾಕಿತ್ತು. ಒಂದು ತರಹದ ‘ಪಾಸಿಟಿವ್‌ನೆಸ್’ ನನ್ನೊಳಗೆ ಉದ್ಭವವಾಗಿತ್ತು. ನಾನು ಧೈರ್ಯವಾಗಿದ್ದೆ ಸರಿ. ಆದರೆ ಹೊರಗೆ ಕುಳಿತ ಅಮ್ಮ ಈ ವಿಷಯವನ್ನು ಹೇಗೆ ಸ್ವೀಕರಿಸಬಹುದು ಅನ್ನೋ ಸಣ್ಣ ಆತಂಕವಿತ್ತು. ಹೊರಗೆ ಬಂದವಳೇ ‘ಅಮ್ಮಾ ಅದೇ ಹೌದು. ನೀನು ತಲೆಬಿಸಿ ಮಾಡ್ಕೋಬೇಡಾ’ ಅಂತ ಹೇಳುತ್ತಿದ್ದಂತೆ ಅಮ್ಮನ ಕಣ್ಣಲ್ಲಿ ದಳದಳನೆ ನೀರು ಹರಿಯಲು ಶುರುವಾಯಿತು. ಅವರ ಗಂಟಲು ಕಟ್ಟಿ ಮಾತು ಹೊರಬರದಾಯಿತು.

‘ಈಗ ಅಂತದ್ದು ಏನಾಯ್ತು ಅಂತ ಅಳ್ತಿಯಮ್ಮ, ಸುಮ್ಮನಿರು. ಈಗೆಲ್ಲ ಔಷಧಿಯಿದೆ. ಎಲ್ಲ ಗುಣವಾಗುತ್ತೆ’ ಅಂತ ನಾನು ಹೇಳುತ್ತಿದ್ದರೂ ಅಮ್ಮ ಆ ದೇವರಿಗೆ ಬೈಯಲು ಶುರುಮಾಡಿದ್ದರು. ಸಂಜೆಯಾಗಿ ಕತ್ತಲಾವರಿಸುತ್ತ ಬಂತು. ರಿಪೋರ್ಟ್ ಜೊತೆ ಮತ್ತೆ ಡಾ.ಹರೀಶ ಜೋಶಿ ಅವರನ್ನು ಕಾಣಲು ಹೋದೆ. ರಿಪೋರ್ಟ್ ನೋಡಿದವರೆ, ಆದಷ್ಟು ಬೇಗ ಟ್ರೀಟ್‌ಮೆಂಟ್ ಶುರುಮಾಡ್ಬೇಕು. ತಡ ಮಾಡ್ಬೇಡಿ ಎಂದರು.

7 ಗಂಟೆಯಾಗಿರಬಹುದು. ಅದೇ ವೇಗದಲ್ಲಿ ಸಂಜೆ ನಮ್ಮ ಮನೆಯ ಪಕ್ಕದಲ್ಲೇ ಇರುವ ಖಾಸಗಿ ಆಸ್ಪತ್ರೆಗೆ ಬಂದೆ. ಅಲ್ಲಿರುವ ಡಾಕ್ಟರ್ ಕೂಡ ಕ್ಯಾನ್ಸರ್ ಸ್ಪೆಷಾಲಿಸ್ಟ್. ಆಸ್ಪತ್ರೆಯಲ್ಲಿ ಡಾಕ್ಟರ್ ಅವರನ್ನು ನೋಡಿ, ಮಾತಾಡಬೇಕಿತ್ತು ಅಂದೆ. ಅಲ್ಲೇ ಇದ್ದ ಮಹಿಳಾ ಸಿಬ್ಬಂದಿ ‘ಈಗ ಡಾಕ್ಟರ್ ಇಲ್ಲಾರಿ. ನಾಳೆ ಬೆಳಿಗ್ಗೆ ಬನ್ನಿ..’ ಎಂದು ಮುಖ ತಿರುಗಿಸಿ ಹೋದಳು. ದಿನಾ ಸಾಯೋರಿಗೆ ಅಳೋರ‍್ಯಾರು ಅನ್ನೋ ಭಾವಕ್ಕೆ ಬಿದ್ದವರು ಅವರು. ನಮ್ಮೊಳಗಿನ ದುಗುಡ, ಅರ್ಜೆಂಟ್ ಅನ್ನು ಅವಳೆಲ್ಲಿ ಅರ್ಥೈಸಿಕೊಂಡಾಳು? ಅಂಥವರಲ್ಲಿ ಮಾನವೀಯತೆ ಅನ್ನೋದು ಶವಾಗಾರದಲ್ಲಿ ಮಲಗಿಸಿದ ಹೆಣದಂತೆ ಆಗಿರುತ್ತದೆ. ಸರಿ ಎಂದು ಮನೆಗೆ ಬಂದೆ. ಆದರೆ ಬೆಳಿಗ್ಗೆ ಅದೇ ಆಸ್ಪತ್ರೆಗೆ ಹೋಗಲು ಮನಸ್ಸೊಪ್ಪಲಿಲ್ಲ. ಅಲ್ಲಿನ ಡಾಕ್ಟರ್ ಒಳ್ಳೆಯವರಿದ್ದರೇನು? ಮುಖ ತಿರುವಿ ಮಾತಾಡುವ ಸಿಬ್ಬಂದಿಯಿಂದ ರೋಗಿಗಳ ವೇದನೆ ಇನ್ನಷ್ಟು ಹೆಚ್ಚಲಿದೆಯಷ್ಟೆ.

ಊರಿನಲ್ಲಿ ಅಜ್ಜ, ಅಜ್ಜಿ, ಮಾವಂದಿರು, ಚಿಕ್ಕಮ್ಮ, ಮಾಮಿ ಒಬ್ಬೊಬ್ಬರಿಗೆ ಸುದ್ದಿ ತಿಳಿಯುತ್ತಲೇ ಅವರಿಗೆಲ್ಲ ಆಕಾಶ ಕಳಚಿಬಿದ್ದ ಅನುಭವ. ಪಾಪ ನನ್ನ ಅಜ್ಜಿ, ಮಾವ ಅದೆಷ್ಟು ಬಾರಿ ಟಾಯ್ಲೆಟ್‌ಗೆ ಹೋಗಿಬಂದರೆಂಬುದು ನಂತರ ತಿಳಿಯಿತು. ಅವರಿಗೆಲ್ಲ ಫೋನ್‌ನಲ್ಲಿ ನಾನೇ ಧೈರ್ಯ ಹೇಳಿದೆ. ನನಗೆ ಕ್ಯಾನ್ಸರ್ ಅಂದು ಅಧಿಕೃತವಾಗಿ ಗೊತ್ತಾದಾಗ ನಾನು ಒಂದಿಷ್ಟೂ ಧೈರ್ಯಗೆಡಲಿಲ್ಲ. ಕೊರಗಲಿಲ್ಲ. ನನಗ್ಯಾಕೆ ಈ ಕಾಯಿಲೆ ಎಂದು ದೇವರನ್ನು ಬೈಯ್ಯಲಿಲ್ಲ. ನಾನು ಮಾಡಿದ್ದು ಒಂದೇ ಒಂದು ತಪ್ಪು ಎಂದರೆ ನನ್ನ ದೇಹದಲ್ಲಿ ಮೂಡಿದ ಗಂಟನ್ನು ಯಾರಿಗೂ ಹೇಳದೇ ನನ್ನೊಳಗೆ ಬಚ್ಚಿಟ್ಟಿದ್ದು.

PV Web Exclusive| ಕೈ ಹಿಡಿದಳು ಗಾಯತ್ರಿ 1| ಮಡುಗಟ್ಟಿದ ದುಗುಡಭಾವ

PV Web Exclusive| ಕೈ ಹಿಡಿದಳು ಗಾಯತ್ರಿ 2| ಮೆಮೊಗ್ರಾಂ, ಸ್ಕ್ಯಾನಿಂಗ್ ಪುರಾಣ ಏನ್ ಕೇಳ್ತಿರಿ...

PV Web Exclusive |ಕೈ ಹಿಡಿದಳು ಗಾಯತ್ರಿ 3| ಯಾರ್ರೀ ಪೇಷಂಟ್; ಎಲದಾರ್ರೀ...

PV Web Exclusive| ಕೈ ಹಿಡಿದಳು ಗಾಯತ್ರಿ4| ಕೈ ಹಿಡಿದಳು ಗಾಯತ್ರಿ

PV Web Exclusive| ಕೈ ಹಿಡಿದಳು ಗಾಯತ್ರಿ 5| ಪೆಟ್ (PET) ಸ್ಕ್ಯಾನ್ನ ವಿಭಿನ್ನ ಅನುಭವ

PV Web Exclusive| ಕೈ ಹಿಡಿದಳು ಗಾಯತ್ರಿ 7| ಕೈ ಹಿಡಿದಳು ಗಾಯತ್ರಿ: ದೇಹ ಸೇರಿತು ಚೊಚ್ಚಲ ಕಿಮೊ ಹನಿ

PV Web Exclusive|ಕೈ ಹಿಡಿದಳು ಗಾಯತ್ರಿ8| ಕೇಶ ರಾಶಿಯ ನಾಮಾವಶೇಷ

PV Web Exclusive|ಕೈ ಹಿಡಿದಳು ಗಾಯತ್ರಿ 9| ಕ್ಯಾನ್ಸರ್ ಜೊತೆಗೊಂದು ಪಯಣ 9: ಸಾಥ್ ನೀಡಿದ ಸೋಷಿಯಲ್ ಮೀಡಿಯಾ

PV Web Exclusive|ಕೈ ಹಿಡಿದಳು ಗಾಯತ್ರಿ10| ಕಿಮೊ ಹಾದಿಯಲ್ಲಿ ಮುಗಿದ ಅರ್ಧ ಪಯಣ

PV Web Exclusive|ಕೈ ಹಿಡಿದಳು ಗಾಯತ್ರಿ11| ನರಗಳ ಹಾದಿಯಲ್ಲಿ ಸುಡುವ ಕಿಮೊ

PV Web Exclusive|ಕೈ ಹಿಡಿದಳು ಗಾಯತ್ರಿ12|ಕಿಮೊ ಕಾಂಡದ ಅಂತಿಮ ಅಧ್ಯಾಯ

PV Web Exclusive|ಕೈ ಹಿಡಿದಳು ಗಾಯತ್ರಿ13|ಐಸಿಯುನಲ್ಲಿ ಕಳೆದ ಘೋರ ರಾತ್ರಿ

PV Web Exclusive|ಕೈ ಹಿಡಿದಳು ಗಾಯತ್ರಿ14|ಕತ್ತರಿಸಿದ್ದ ಜಾಗ ಮುಚ್ಚಿದ್ದವು 80 ಪಿನ್ಗಳು!

PV Web Exclusive|ಕೈ ಹಿಡಿದಳು ಗಾಯತ್ರಿ15|ಕ್ಯಾನ್ಸರ್ ಜೊತೆಗೆ ಆತ್ಮವಿಶ್ವಾಸದ ನಡೆ

(ಮುಂದಿನ ವಾರ: ‘ಪೇಶಂಟ್ ಹೆಸರೇನ್ರಿ.. ಎಲ್ಲಿದ್ದಾರ್ರಿ...’)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.