ಮನುಷ್ಯನ ಜೀವನದ ಪರಮೋದ್ದೇಶವೇ ಸಂತೋಷ. ಇಹ-ಪರಗಳೆರಡರಲ್ಲೂ ದುಃಖವಿಮುಕ್ತಿಯೇ, ಸುಖದ ಕಲ್ಪನೆಯೇ ಸಂತೋಷದ ನೆಲೆ. ಈ ಸಂತಸದ ಬೆದಕಾಟದ ಸುತ್ತವೇ ಬದುಕು ರೂಪಿತವಾಗುವುದು. ನಮ್ಮ ಮಾತು ಆರಂಭವಾಗುವುದೇ, ‘ಚೆನ್ನಾಗಿದ್ದೀರಾ?’ ಎಂಬ ಪ್ರಶ್ನೆಯೊಂದಿಗೆ.

‘ಮಗು ಅಳುತ್ತ ಜಗತ್ತಿಗೆ ಬರುತ್ತದೆ; ಮನುಷ್ಯ ಅಳುತ್ತಲೇ ಬದುಕಿಗೆ ವಿದಾಯ ಹೇಳುತ್ತಾನೆ’ ಎಂದೆಲ್ಲ ಮಾತಾಡುತ್ತೇವೆ. ಆದರೆ ಈ ಮಾತಿನ ಹಿಂದೆ, ಅಳುವನ್ನು ನಿವಾರಿಸಿಕೊಳ್ಳುವ ಬಯಕೆ ಇದೆ ಎಂಬುದನ್ನು ಗುರುತಿಸಬೇಕು. ಅಳುವಿನ ಕಾರಣಗಳನ್ನು ಅದರ ನಿವಾರಣೋಪಾಯಗಳನ್ನು ಬೇರೆ ಬೇರೆ ಧರ್ಮಶಾಸ್ತ್ರಗಳು ವಿವರವಾಗಿ ತಿಳಿಸಿವೆ. ನಮ್ಮ ಗುರಿ ಅಳುವಿನ ಕಾರಣ-ನಿವಾರಣಗಳತ್ತ ಹರಿಸದೆ ಸಂತೋಷದ ಬೀಜಗಳನ್ನು ಬಿತ್ತುವತ್ತ ಇರಬೇಕು. ಆಗ ನಾವು ಸಂತೋಷದಿಂದ ಬದುಕಲು ಸಾಧ್ಯ.

ನಮ್ಮ ಬಾಲ್ಯದ ದಿನಗಳಲ್ಲಿ ನಾವು ಸಣ್ಣಪುಟ್ಟ ಕಾರಣಗಳಿಂದ ಸಂತೋಷವನ್ನು ಕಂಡುಕೊಳ್ಳುತ್ತಿದ್ದೆವು. ಆ ಮನಃಸ್ಥಿತಿಗೆ ನಾವು ಹಿಂದಿರುಗಲು ಪ್ರಯತ್ನಿಸಬೇಕು. ಇದರರ್ಥ, ನಾವು ಸರಳವಾಗಿರಬೇಕು. ಇದೇ ಸಂತೋಷದ ಮೊದಲ ಸೂತ್ರ. ಸರಳತೆ ಸುಮ್ಮನೆ ಬರುವುದಿಲ್ಲ. ಬಾಲ್ಯದ ಸರಳತೆಗೆ ಕಾರಣ ಮನಸ್ಸಿನ ಮುಗ್ಧತೆ. ಆದರೆ ಪ್ರಬುದ್ಧತೆ ಬಂದಾಗ ನಾವೇಕೆ ಸರಳತೆ ಕಳೆದುಕೊಳ್ಳಬೇಕು? ಸಹಬಾಳ್ವೆಗೆ, ಸಮಾಜಮುಖಿ ನಡವಳಿಕೆಗೆ ಸರಳತೆಯೇ ಬೇಕು. ನಮ್ಮ ಜೀವನದಲ್ಲಿ ನಾವು ಕಾಣಲು ಅಪೇಕ್ಷೆಪಡುವ ಹಿರಿಯರನ್ನು ಜ್ಞಾಪಿಸಿಕೊಂಡರೆ, ಅವರಲ್ಲಿ ಗಂಭೀರ ಗದರಿಕೆಯ ಮುಖಗಳೆಷ್ಟು? ನಗುತ್ತ ತಮಾಷೆ ಮಾಡುತ್ತ ಇರುವ ಮುಖಗಳೆಷ್ಟು? ಎರಡನೆಯ ವರ್ಗದವರೇ ಹೆಚ್ಚು ನೆನಪಾಗುತ್ತಾರೆ. ಧರ್ಮಗುರುಗಳು ಬಹಳ ಗಂಭೀರವಾಗಿರಬೇಕು ಎಂಬ ಸಾಮಾನ್ಯ ನಂಬಿಕೆ ಇದೆ. ಆದರೆ ಇದಕ್ಕೆ ವ್ಯತಿರಿಕ್ತರಾದ ಅನೇಕ ಧರ್ಮಗುರುಗಳಿದ್ದಾರೆ; ಮತ್ತು ಹಾಗಿದ್ದರೆ ಚೆಂದ. ಶ್ರೀರಾಮಕೃಷ್ಣರ ಬಳಿ ಸೇರುತ್ತಿದ್ದ ನರೇಂದ್ರ (ಸ್ವಾಮಿ ವಿವೇಕಾನಂದ) ಮತ್ತು ಯುವಕಭಕ್ತರನ್ನು ಅವರು ಎಷ್ಟು ನಗಿಸುತ್ತಿದ್ದರೆಂದರೆ, ಕೊನೆಗೆ ನರೇಂದ್ರ, ‘ಮಹಾಶಯರೆ, ದಯವಿಟ್ಟು ನಿಲ್ಲಿಸಿ. ಇನ್ನು ನಗಲಾರೆವು. ನಕ್ಕು ನಕ್ಕು ಪಕ್ಕೆಯೆಲ್ಲ ನೋಯುತ್ತಿದೆ’ ಎಂದು ಕೋರಿಕೊಳ್ಳುತ್ತಿದ್ದನಂತೆ. ಮುಂದೆ ಅಮೆರಿಕೆಯಲ್ಲಿ ಸ್ವಾಮಿ ವಿವೇಕಾನಂದರನ್ನು ’ಧರ್ಮಗುರುಗಳೆಂದರೆ ಗಂಭೀರವಾಗಿರಬೇಕು. ಆದರೆ ನೀವು ಹಾಗಿಲ್ಲವಲ್ಲ?’ ಎಂದು ಪ್ರಶ್ನಿಸಿದಾಗ ಅವರು, ’ಭಗವಂತ ಆನಂದಸ್ವರೂಪಿ. ಅವನ ಬಗ್ಗೆ ಬೋಧಿಸುವ ಧರ್ಮಗುರುವೇಕೆ ಗಂಭೀರವಾಗಿರಬೇಕು? ಯಾರಾದರೂ ಹಾಗಿದ್ದರೆ ಅವರು ಮಲಬದ್ಧತೆಯಿಂದ ನರಳುತ್ತಿದ್ದಾರೆ ಎಂದು ಭಾವಿಸಬೇಕಷ್ಟೆ’ ಎಂದರಂತೆ. ಸರಳತೆ ಸಂತೋಷದ ಮೊದಲ ಸೂತ್ರ.

‘ತಾಳುವಿಕೆಗಿಂತ ತಪವು ಇಲ್ಲ’ ಎಂಬ ಮಾತಿದೆ. ತಾಳ್ಮೆಯಿಂದ ಸಮಾಧಾನ, ಸಮಾಧಾನದಿಂದ ಸಂತೋಷ. ನಾವು ಪ್ರವಾಸಕ್ಕೆ ಹೋದಾಗ ಅಲ್ಲಿನ ಜನರ ವರ್ತನೆಯನ್ನು ಗಮನಿಸಬೇಕು. ಕೆಲವರು ನಿಧಾನವಾಗಿ ಸುತ್ತಲಿನ ಪರಿಸರದ ಸೊಬಗನ್ನೋ ಅಲ್ಲಿನ ವಿಶೇಷ ತಿನಿಸನ್ನೋ ಆಸ್ವಾದಿಸುತ್ತಿದ್ದರೆ, ಇನ್ನು ಕೆಲವರು ಬೇಗಬೇಗ ಎಲ್ಲವನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿದು, ಗಬಗಬನೆ ಖಾದ್ಯಗಳನ್ನು ನುಂಗಿ ತಮ್ಮ ತಂಡದವರಿಗೆ, ‘ಮುಂದಿನ ಪಾಯಿಂಟ್ಗೆ ಹೊತ್ತಾಯಿತು ನಡೆಯಿರಿ, ನಡೆಯಿರಿ. ಇಲ್ಲದಿದ್ದರೆ ಇಂದು ನೋಡಬೇಕಾದ ಎಲ್ಲ ಸ್ಥಳಗಳನ್ನು ನೋಡಿ ಮುಗಿಸಲಾಗುವುದಿಲ್ಲ’ ಎಂದು ಆತುರಪಡಿಸುತ್ತಿರುತ್ತಾರೆ. ಇವರು ಪ್ರವಾಸವನ್ನು ಆನಂದಿಸಲು ಬಂದಿಲ್ಲ, ಪಟ್ಟಿಯಲ್ಲಿರುವ ಸ್ಥಳಗಳನ್ನು ‘ಮುಗಿಸಲು’ ಬಂದಿದ್ದಾರೆ! ಉಂಡದ್ದು ಅರಗಲು ಸಮಯ ಬೇಕಾದರೆ ಕಂಡದ್ದು ಆಳದ ಅರಿವಾಗಲು ಸಮಯ ಬೇಡವೆ? ನಿಧಾನವೇ ಪ್ರಧಾನ ಎಂಬುದು ಬಂಡಿಗೂ ಬಾಳಬಂಡಿಗೂ ಅನ್ಯವಾಗುವ ಸೂತ್ರ. ಪದವಿ ಮುಗಿಸಬೇಕು, ಕೆಲಸ ಗಿಟ್ಟಿಸಬೇಕು, ದುಡಿಯಬೇಕು, ಸಂಸಾರ ಆರಂಭಿಸಬೇಕು, ಮಕ್ಕಳಾಗಬೇಕು, ಬಡ್ತಿ, ಕಾರು, ಮನೆ ….. ಓ..ಪಟ್ಟಿ ದೊಡ್ಡದು. ಇಲ್ಲಿನ ಎಲ್ಲ ಮಜಲುಗಳ ಮಜಾ ಅನುಭವಿಸದಿದ್ದರೆ ಗಾಣದ ಕೋಣನಿಗೂ ನಮಗೂ ಇರುವ ವ್ಯತ್ಯಾಸವೇನು? ಮೆರವಣಿಗೆಯಲ್ಲಿ ಸಾಗುವಾಗಲೂ ಒಮ್ಮೊಮ್ಮೆ ಹೊರಗೆ ನಿಂತು ಅದು ಸಾಗುವ ಚೆಂದವನ್ನು ಗಮನಿಸಬೇಕು. ಬದುಕಿನ ಮೆರವಣಿಗೆಯನ್ನೂ ಅಷ್ಟೆ! ತಾಳುವಿಕೆ ಸಂತೋಷದ ಎರಡನೆ ಸೂತ್ರ.

ಶಾಂತಗುಣ ಸಂತೋಷದ ಮೂರನೆಯ ಸೂತ್ರ. ಸಂತೋಷ ನಾಶವಾಗುವುದೇ ಮನಸ್ಸಿನ ಕದಡುವಿಕೆಯಿಂದ. ಆ ಕದಡುವಿಕೆಯೇ ಅಶಾಂತಿ. ಆ ಅಶಾಂತಿಗೆ ಕಾರಣವನ್ನು ನಾವು ಹೊರಗೆ ಹುಡುಕುತ್ತೇವೆ. ಅವರಿವರ ಕಡೆ ಬೊಟ್ಟು ಮಾಡಿ ನಮ್ಮ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಸಂತೋಷದ ನೆಲೆ ನಮ್ಮ ಚಿತ್ತ, ನಮ್ಮ ಹೃದಯವೇ ಅದರ ಬಿತ್ತ. ಖಲೀಲ್ ಗಿಬ್ರಾನ್ ಇದನ್ನು ಸೊಗಸಾಗಿ ಹೇಳುತ್ತಾನೆ: ‘ಸಂತೋಷವೆಂಬ ಬಳ್ಳಿ ಬೇರುಬಿಟ್ಟು ಬೆಳೆಯುವುದು ನಮ್ಮ ಹೃದಯದೊಳಗೇ, ಹೊರಗಡೆಯಲ್ಲ.’ ನಮ್ಮ ಸಂತೋಷ ಹೊರಗಿನ ಪ್ರಭಾವಗಳಿಂದ ಹಾಳಾಗುತ್ತಿದೆ ಎನಿಸಿದರೆ ಅದು ನಮ್ಮ ವ್ಯಕ್ತಿತ್ವದ ದೌರ್ಬಲ್ಯವೇ ಹೊರತು ಜಗತ್ತಿನ ದೋಷವಲ್ಲ. ಅದನ್ನು ಮೆಟ್ಟಿ ನಿಲ್ಲುವ ಗಟ್ಟಿತನ ಬೆಳೆದರೆ ಸಂತೋಷದಲ್ಲಿ ನೆಲೆ ನಿಲ್ಲಲು ಸಾಧ್ಯ. ಇಲ್ಲವಾದರೆ, ಮೇಕೆಯನ್ನು ಭೂತವೆಂದು ನಂಬಿ ಕಳ್ಳರ ಕೈಗೊಪ್ಪಿಸಿ ಪೇರಿಕಿತ್ತ ಮೂಢನಂತಾಗುತ್ತದೆ ನಮ್ಮ ಸ್ಥಿತಿ. ಶಾಂತಿ ಎಂದರೆ ಸುಮ್ಮನೆ ತಟಸ್ಥವಾಗಿರುವುದಲ್ಲ. ಜೀವನದ ಎಲ್ಲ ಸವಾಲುಗಳ ಮಧ್ಯೆಯೂ ಲಯ ತಪ್ಪದ ನಡೆಯೇ ಶಾಂತಿ.

ಸಂತೋಷವಾಗಿರುವುದು ನಮ್ಮ ಹಕ್ಕು, ಜವಾಬ್ದಾರಿ. ಮೇಲಿನ ಸೂತ್ರಗಳ ನೆರವಿನಿಂದ ಸಾಧಿಸಿ ಸಂತೋಷವಾಗಿರೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.