ವಿವಾದ ಕೈಬಿಡಲು ಉಭಯದೇಶಗಳಿಗೆ ತಜ್ಞರ ಸಲಹೆ
ವಾಷಿಂಗ್ಟನ್: ಭಾರತ ಮತ್ತು ಕೆನಡಾ ನಡುವಣ ವ್ಯಾಪಾರ ಸಂಬಂಧ ಹದಗೆಡದಂತೆ ಕಾಪಾಡುವ ನಿಟ್ಟಿನಲ್ಲಿ ಉಭಯ ದೇಶಗಳು ಈ ವಿವಾದವನ್ನು ಇಲ್ಲಿಗೇ ಕೈಬಿಡಬೇಕು ಎಂದು ತಜ್ಞ ಕೆನಡಾ ಇನ್‌ಸ್ಟಿಟ್ಯೂಟ್‌ನ ವಿಶ್ಲೇಷಕ ಝವೇರ್ ಡೆಲ್ಗಾಡೊ ಅವರು ಸಲಹೆ ನೀಡಿದ್ದಾರೆ. ಈ ಕುರಿತ ಇವರ ಬರಹವನ್ನು ವಿಲ್ಸನ್ ಇನ್ಸ್ಟಿಟ್ಯೂಟ್ ಪೋಸ್ಟ್ ಶುಕ್ರವಾರ ಮಾಡಿದೆ. ಈ ದ್ವಿಪಕ್ಷೀಯ ಕಲಹದಿಂದ ಬಹುವಾಗಿ ಹೊಡೆತ ಬೀಳುವುದು ವ್ಯಾಪಾರ ವ್ಯವಹಾರಕ್ಕೆ. ಉಭಯ ದೇಶಗಳ ನಡುವಿನ ‘ಅರ್ಲಿ ಪ್ರೋಗ್ರೆಸ್ ಟ್ರೇಡ್ ಅಗ್ರಿಮೆಂಟ್’ಗೆ (ಎರಡು ದೇಶಗಳ ನಡುವೆ ನಡೆವ ಸರಕು ವಹಿವಾಟಿಗೆ ಸುಂಕ ಕಡಿತಗೊಳಿಸುವ ಅಥವಾ ರದ್ದುಪಡಿಸುವ ಒಪ್ಪಂದ) ಈಗಾಗಲೇ ತಡೆ ನೀಡಲಾಗಿದೆ. ವಾಣಿಜ್ಯಕ್ಕೆ ಸಂಬಂಧಿಸಿದ ಮಾತುಕತೆಗಳು ಮುರಿದುಬಿದ್ದಿರುವುದರಿಂದ ವಾಣಿಜ್ಯ ವಹಿವಾಟು ಸಂಕಷ್ಟದಲ್ಲಿದೆ ಎಂದು ಹೇಳಿದ್ದಾರೆ. ವಾಣಿಜ್ಯ ಸಂಬಂಧ ಹದಗೆಟ್ಟರೆ ಭಾರತದಿಂದ ಕೆನಡಾಕ್ಕೆ ವಲಸೆ ಬರುವವರ ಸಂಖ್ಯೆಯೂ ಕಡಿಮೆಯಾಗಲಿದೆ. ಇದಲ್ಲದೇ ಭಾರತದ ಪ್ರಭಾವ ಹೆಚ್ಚಿರುವ ಇಂಡೋ–ಪೆಸಿಫಿಕ್ ಕಾರ್ಯತಂತ್ರದ ಭಾಗವಾಗುವ ಅವಕಾಶವೂ ಕೆನಡಾದ ಕೈತಪ್ಪಿ ಹೋಗಬಹುದು ಎಂದು ಹೇಳಿದ್ದಾರೆ. ಈಗಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಕೆನಡಾಕ್ಕೆ ಮಾತ್ರ ನಷ್ಟವಾಗುವುದಿಲ್ಲ. ‘ಪ್ರಜಾಪ್ರಭುತ್ವವಾದಿ ರಾಷ್ಟ್ರ’ ಎಂಬ ಭಾರತದ ಹೆಗ್ಗಳಿಕೆಗೆ ಈ ವಿವಾದದಿಂದ ಹಾನಿಯಾಗಬಹುದು. ಅಲ್ಲದೇ ಚೀನಾ ವಿರುದ್ಧದ ಸ್ಪರ್ಧೆಯಲ್ಲಿ ಭಾರತವು ‘ನಂಬಿಕಸ್ಥ ಮಿತ್ರರಾಷ್ಟ್ರ’ ಎಂಬ ವಿಶ್ವಾಸ ಗಳಿಸಿದೆ. ಈ ವಿಶ್ವಾಸಕ್ಕೆ ಧಕ್ಕೆ ಆಗಬಹುದು ಎಂದೂ ಡೆಲ್ಗಾಡೊ ಹೇಳಿದ್ದಾರೆ.