ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಯಲ್ಲಿ ಜಗನ್ ಪ್ರತಿಭಟನೆಗೆ ‘ಇಂಡಿಯಾ’ ನಾಯಕರ ಬೆಂಬಲ: ಡ್ರಾಮಾ ಎಂದ ಟಿಡಿಪಿ

Published : 24 ಜುಲೈ 2024, 12:55 IST
Last Updated : 24 ಜುಲೈ 2024, 12:55 IST
ಫಾಲೋ ಮಾಡಿ
Comments

ನವದೆಹಲಿ: ಆಂಧ್ರ ಪ್ರದೇಶದಲ್ಲಿ ರಾಜಕೀಯ ಹಿಂಸಾಚಾರ ಖಂಡಿಸಿ ವೈಎಸ್‌ಆರ್‌ಸಿಪಿ ಅಧ್ಯಕ್ಷ ಜಗನ್ ಮೋಹನ ರೆಡ್ಡಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಇಂಡಿಯಾ ಬಣದ ಸದಸ್ಯರು ಮತ್ತು ಎಐಎಡಿಎಂಕೆ ಸದಸ್ಯರು ಬೆಂಬಲ ಸೂಚಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಮತ್ತು ಎನ್‌ಡಿಎ ಮೈತ್ರಿಕೂಟದಲ್ಲಿರುವ ಟಿಡಿಪಿ ಪಕ್ಷವು ಈ ಆರೋಪಗಳನ್ನು ತಳ್ಳಿಹಾಕಿದೆ. ವೈಎಸ್‌ಆರ್‌ಸಿಪಿ ನಾಯಕ ನಕಲಿ ಡ್ರಾಮಾ ಮಾಡುತ್ತಿದ್ದಾರೆ ಎಂದು ಟೀಕಿಸಿದೆ.

ಇತ್ತೀಚಿನ ವಿಧಾನಸಭೆ ಚುನಾವಣೆ ಬಳಿಕ ಆಂಧ್ರ ಪ್ರದೇಶದಲ್ಲಿ ರಾಜಕೀಯ ಹಿಂಸಾಚಾರಗಳು ಹೆಚ್ಚಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಜಗನ್ ಧರಣಿ ನಡೆಸಿದ್ದಾರೆ.

ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್, ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವುತ್, ಪ್ರಿಯಾಂಕಾ ಚತುರ್ವೇದಿ, ಟಿಎಂಸಿಯ ನದಿಮುಲ್ ಹಕ್ ಮತ್ತು ಎಐಎಡಿಎಂಕೆಯ ತಂಬಿದುರೈ ಅವರು ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಕಾರ್ಯಕರ್ತರ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ.

‘ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ಹಲ್ಲೆಗಳ ಕುರಿತಾದ ಯಾವುದೇ ಚಿತ್ರಗಳು, ವಿಡಿಯೊಗಳನ್ನು ನಾನು ನೋಡಿಲ್ಲ. ಆದರೆ, ಅಧಿಕಾರದಲ್ಲಿರುವವರು ಸರಳತೆಯನ್ನು ರೂಢಿಸಿಕೊಳ್ಳಬೇಕು, ಇತರ ಪಕ್ಷಗಳ ಮಾತುಗಳನ್ನು ಕೇಳಿಸಿಕೊಳ್ಳಬೇಕೆ ಹೊರತು ಅವರ ಜೀವ ತೆಗೆಯಬಾರದು’ ಎಂದು ಅಖಿಲೇಶ್ ಹೇಳಿದ್ದಾರೆ.

‘ವಿರೋಧ ಪಕ್ಷದ ಕಾರ್ಯಕರ್ತರ ಮೇಲಿನ ದಾಳಿಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ಆಂಧ್ರ ಪ್ರದೇಶಕ್ಕೆ ಕಳುಹಿಸಬೇಕು’ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ತಮಿಳುನಾಡಿನಲ್ಲೂ ಇದೇ ಸ್ಥಿತಿ ಇದೆ ಎಂದಿರುವ ತಂಬಿದುರೈ, ‘200 ದಿನಗಳಲ್ಲಿ 595 ಜನರ ಹತ್ಯೆಯಾಗಿದೆ. ಇದು ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯಾಗಿದೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಕುರಿತಂತೆ ಕ್ರಮಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ’ಎಂದಿದ್ದಾರೆ.

ಜಗನ್ ಪ್ರತಿಭಟನೆಗೆ ಪ್ರತಿಯಾಗಿ ಪತ್ರಿಕಾಗೋಷ್ಠಿ ನಡೆಸಿದ ಟಿಡಿಪಿ ಸಂಸದರು, ರೆಡ್ಡಿ ರಾಜಕೀಯದ ದಿಕ್ಕು ತಪ್ಪಿಸುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

‘ದಿಕ್ಕು ತಪ್ಪಿಸುವ ರಾಜಕಾರಣ ಮಾಡಲು ರೆಡ್ಡಿ ದೆಹಲಿಗೆ ಬಂದಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಟಿಡಿಪಿ ಸದಸ್ಯರನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸುವುದರಲ್ಲಿ ನಿರತರಾಗಿದ್ದರು’ಎಂದು ಟಿಡಿಪಿ ಸಂಸದ ಬಿ. ನಾಗರಾಜು ಹೇಳಿದ್ದಾರೆ.

ಇಲ್ಲಿ ಪ್ರತಿಭಟನೆ ನಡೆಸುವ ಬದಲು, ಈ ವಿಷಯಗಳನ್ನು ಆಂಧ್ರ ಪ್ರದೇಶದ ವಿಧಾನಸಭೆಯಲ್ಲಿ ಪ್ರಸ್ತಾಪಿಸುವಂತೆ ರೆಡ್ಡಿಗೆ ಸಂಸದರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT