ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಇಳಿಸುವವರೆಗೂ ನಾನು ಸಾಯುವುದಿಲ್ಲ: ಖರ್ಗೆ

Published : 29 ಸೆಪ್ಟೆಂಬರ್ 2024, 12:52 IST
Last Updated : 29 ಸೆಪ್ಟೆಂಬರ್ 2024, 12:52 IST
ಫಾಲೋ ಮಾಡಿ
Comments

ಜಮ್ಮು: ‘ನನಗೆ ಈಗ 83 ವರ್ಷ. ನಾನು ಇಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಇಳಿಸುವವರೆಗೂ ನಾನು ಬದುಕಿರುತ್ತೇನೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ತಂದುಕೊಡಲು ಹೋರಾಡುತ್ತೇನೆ. ನಿಮಗೆ ಕಿವಿಯಾಗುತ್ತೇನೆ. ನಿಮಗಾಗಿ ನಾನು ಹೋರಾಡುತ್ತೇನೆ...’

-ಹೀಗೆಂದವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಜಸರೋಠಾದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಭಾನುವಾರ ಅವರು ಮಾತನಾಡುತ್ತಿದ್ದ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಯಿತು. ತಲೆ ತಿರುಗಿ, ಮಾತು ತೊದಲಿತು.

ಖರ್ಗೆ ಅವರ ಅಂಗರಕ್ಷಕರು ಹಾಗೂ ವೇದಿಕೆಯಲ್ಲಿ‌ದ್ದ ಪಕ್ಷದ ನಾಯಕರು ಅವರನ್ನು ಕುರ್ಚಿಯಲ್ಲಿ ಕೂರಿಸಿದರು. ತಕ್ಷಣವೇ ವೈದ್ಯರ ತಂಡವು ಖರ್ಗೆ ಅವರಿಗೆ ಚಿಕಿತ್ಸೆ ನೀಡಿತು. ಪ್ರಥಮ ಚಿಕಿತ್ಸೆ ಬಳಿಕ ತುಸು ಸುಧಾರಿಸಿಕೊಂಡ ಖರ್ಗೆ ಅವರು ಮಾತು ಮುಂದುವರಿಸಿ, ಮೇಲಿನ ಮಾತುಗಳನ್ನಾಡಿದರು. ‘ನನಗೆ ಮಾತನಾಡುವ ಇಚ್ಛೆ ಇದೆ. ಆದರೆ, ತಲೆ ತಿರುಗುತ್ತಿರುವ ಕಾರಣ ನಾನು ಕುಳಿತುಕೊಳ್ಳಬೇಕಾಯಿತು. ದಯಮಾಡಿ ಕ್ಷಮಿಸಿ’ ಎಂದೂ ಹೇಳಿದರು.

ಆರಾಮಾಗಿದ್ದಾರೆ: ಪ್ರಿಯಾಂಕ್‌

‘ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತಮಾಡುತ್ತಿದ್ದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯದಲ್ಲಿ ಏರುಪೇರಾಯಿತು. ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿದೆ. ಅವರಿಗೆ ತುಸು ರಕ್ತದೊತ್ತಡ ಹೆಚ್ಚಾಗಿದೆ. ಆದರೆ ಈಗ ಅವರ ಆರೋಗ್ಯ ಸ್ಥಿರವಾಗಿದೆ. ನೀವೆಲ್ಲರೂ ತೋರಿದ ಕಾಳಜಿಗೆ ಧನ್ಯವಾದಗಳು. ಅವರ ದೃಢತೆ ಹಾಗೂ ನಿಮ್ಮೆಲ್ಲರ ಹಾರೈಕೆಯು ಅವರಿಗೆ ಇನ್ನಷ್ಟು ಬಲ ತುಂಬುತ್ತದೆ’ ಎಂದು ಖರ್ಗೆ ಅವರ ಮಗ ಹಾಗೂ ಕರ್ನಾಟಕ ಸರ್ಕಾರದ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ತಮ್ಮ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಾಕಿದ್ದಾರೆ.

‘ಎಕ್ಸ್‌’ನಲ್ಲಿ ಲೇವಡಿ

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಉಗ್ರವಾದವು ಹೆಚ್ಚಾಗುತ್ತದೆ– ಸರ್‌ ಖರ್ಗೆ. ಅವರಿಗೆ ಆರೋಗ್ಯ ಎಷ್ಟೊಂದು ಸರಿ ಇಲ್ಲವೆಂದರೆ ಅವರು ಸತ್ಯ ಮಾತನಾಡುತ್ತಿದ್ದಾರೆ. ಅವರನ್ನು ಮನೆಯಲ್ಲಿ ಕೂರಿಸಿ ಆರಾಮ ನೀಡಿ.  ಪ್ರಚಾರ ಮಾಡುವಂತೆ ಅವರನ್ನು ಗಾಂಧಿ–ನೆಹರೂ ಕುಟುಂಬವು ಒತ್ತಾಯಿ‌ಸುತ್ತಿದೆ ಎಂದೆನಿಸುತ್ತದೆ. ಹದಗೆಟ್ಟ ಆರೋಗ್ಯ ಸ್ಥಿತಿಯನ್ನು ಬಳಸಿಕೊಂಡು ಅನುಕಂಪದಲ್ಲಿ ಮತ ಪಡೆಯಬಹುದು ಎಂಬುದು ಆ ಕುಟುಂಬದದ ಯೋಜನೆ ಇರಬಹುದು’ ಎನ್ನುವ ಪೋಸ್ಟ್‌ವೊಂದು ‘ಎಕ್ಸ್‌’ನಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್‌ಗೆ 7758 ಲೈಕ್ಸ್‌ ಬಂದಿದ್ದು 2374 ಮಂದಿ ಇದನ್ನು ರೀಪೋಸ್ಟ್‌ ಮಾಡಿದ್ದಾರೆ. ಭಾಷಣ ಮಾಡುವ ವೇಳೆಯಲ್ಲಿಯೇ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಹದಗೆಟ್ಟಿತು. ಆದರೂ ಅವರು ತಮ್ಮ ಭಾಷಣವನ್ನು ನಿಲ್ಲಿಸಲಿಲ್ಲ. ಎಚ್ಚರ ತಪ್ಪಿದ ಸ್ಥಿತಿಯಲ್ಲಿಯೇ ಸಣ್ಣ ದನಿಯಲ್ಲಿ ತೊದಲುತ್ತಾ ಮಾತು ಮುಂದುವರಿಸಿದ ವೇಳೆ ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಉಗ್ರವಾದ ಹೆಚ್ಚಾಗುತ್ತದೆ’ ಎಂದಿದ್ದಾರೆ. ಈ ವಿಡಿಯೊವನ್ನು ಹಂಚಿಕೊಂಡು ಹಲವರು ಮೇಲಿನಂತೆ ಪೋಸ್ಟ್‌ ಮಾಡುತ್ತಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯೆಗಳೂ ಬಂದಿದ್ದು ‘ಖರ್ಗೆ ಅವರ ಅನಾರೋಗ್ಯವು ಕಾಂಗ್ರೆಸ್‌ನ ಹೊಸ ಅನುಕಂಪದ ಅಸ್ತ್ರ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ‘ಏನೇ ಮಾಡಿದರು ಸತ್ಯವು ಬಾಯಿಗೆ ಬಂದೇ ಬಿಡುತ್ತದೆ’ ಎಂದಿದ್ದಾರೆ. ‘ಎಷ್ಟೇ ಮುಚ್ಚಿಟ್ಟರು ಸತ್ಯ ಹೊರಗೆ ಬಂದೇ ಬರುತ್ತದೆ. ಕೊನೆಗೂ ಕಾಂಗ್ರೆಸ್‌ ಅಧ್ಯಕ್ಷರ ಬಾಯಿಯಿಂದ ಸತ್ಯ ಹೊರಬಂದಿದೆ’ ‘ಇಂದು ಕಟು ಸತ್ಯವನ್ನು ಹೊರಹಾಕುವ ಮೂಲಕ ಖರ್ಗೆ ಅವರು ನಮ್ಮೆಲ್ಲರ ಹೃದಯ ಗೆದ್ದಿದ್ದಾರೆ’ ಎಂಬೆಲ್ಲಾ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ.

ಗೆಲುವು ಯಾರಿಗೆ?

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಜುಮ್ಮು ಮತ್ತು ಕಾಶ್ಮೀರದ ಚುನಾವಣಾ ಪ್ರಚಾರವು ಭಾನುವಾರ ಅಂತ್ಯಗೊಂಡಿದೆ. ಅಕ್ಟೋಬರ್‌ 1ರಂದು ಕೊನೇ ಹಂತದ ಮತದಾನ ನಡೆಯಲಿದೆ. ಮೂರು ದಶಕಗಳ ಬಳಿಕ ಈ ಬಾರಿಯ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ದಾಳಿ ಅಥವಾ ಅಹಿತಕರ ಘಟನೆ ನಡೆದಿಲ್ಲ. ಕಾಶ್ಮೀರದ ಮಟ್ಟಿಗೆ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಹಾಗೂ ಪಿಡಿಪಿ ಮಧ್ಯೆಯೇ ನೇರ ಹಣಾಹಣಿ ಇದೆ. ಸಣ್ಣ ಪುಟ್ಟ ಪಕ್ಷಗಳು ಕಣದಲ್ಲಿ ಇದ್ದರೂ ಈ ಎರಡು ಪಕ್ಷಗಳ ಪ್ರಾಲಬ್ಯವೇ ಹೆಚ್ಚು. ಪಿಡಿಪಿಯು ‘ಬಿಜೆಪಿ ವಿರೋಧ’ಕ್ಕೆ ತನ್ನ ಪ್ರಚಾರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಇತ್ತ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷವು ‘ಪಿಡಿಪಿಯು 2014ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ರಾಜ್ಯ ಸ್ಥಾನಮಾನ ರದ್ದಾದ ಬಳಿಕ ಈಗ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಿದೆ. ಇದು ಜನರಿಗೆ ಎಸೆದ ದ್ರೋಹ’ ಎನ್ನುವ ವಾದವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದೆ. ಆದರೆ ಎರಡೂ ಪಕ್ಷಗಳು ರಾಜ್ಯ ಸ್ಥಾನಮಾನವನ್ನು ತಂದು ಕೊಡುವುದಾಗಿ ‌ಭರವಸೆ ನೀಡಿವೆ. ಜಮ್ಮುವಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆಯೇ ನೇರ ಹಣಾಹಣಿ ಇದೆ. ರಾಜ್ಯ ಸ್ಥಾನಮಾನ ಮರಳಿ ನೀಡುತ್ತೇವೆ ಎನ್ನುವುದಕ್ಕೇ ಹೆಚ್ಚು ಒತ್ತು ನೀಡಿ ಕಾಂಗ್ರೆಸ್‌ ಪ್ರಚಾರ ನಡೆಸಿದೆ. ಕುಟುಂಬ ರಾಜಕಾರಣ ಫಾರೂಕ್‌ ಅ‌ಬ್ದುಲ್ಲಾ–ಓಮರ್‌ ಅಬ್ದುಲ್ಲಾ ಹಾಗೂ ನೆಹರೂ–ಗಾಂಧಿ ಕುಟುಂಬವನ್ನು ಗುರಿಯಾಗಿಸಿ ಬಿಜೆಪಿ ಪ್ರಚಾರ ನಡೆಸಿದೆ. ಅಕ್ಟೋಬರ್‌ 8ರಂದು ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT