ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಬೈರೂತ್‌ನಲ್ಲಿ ಇಸ್ರೇಲ್ ದಾಳಿ: ಲೆಬನಾನ್–ಸಿರಿಯಾ ನಡುವಿನ ಪ್ರಮಖ ಗಡಿ ಬಂದ್

Published : 5 ಅಕ್ಟೋಬರ್ 2024, 2:51 IST
Last Updated : 5 ಅಕ್ಟೋಬರ್ 2024, 2:51 IST
ಫಾಲೋ ಮಾಡಿ
Comments

ಬೈರೂತ್‌: ಲೆಬನಾನ್‌ನಲ್ಲಿ ಇಸ್ರೇಲ್ ಪಡೆಗಳ ಸೇನಾ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದ್ದು, ರಾಜಧಾನಿ ಬೈರೂತ್‌ ಉಪನಗರದ ಮೇಲೆ ತಡರಾತ್ರಿ ನಡೆಸಿದ ದಾಳಿಯಿಂದಾಗಿ ಸಾವಿರಾರು ಮಂದಿ ಪಲಾಯನಕ್ಕೆ ಬಳಸುತ್ತಿರುವ ಲೆಬನಾನ್ ಹಾಗೂ ಸಿರಿಯಾ ನಡುವಿನ ಪ್ರಮುಖ ಗಡಿ ರಸ್ತೆ ಮುಚ್ಚಲ್ಪಟ್ಟಿದೆ.

ಶುಕ್ರವಾರ ರಾತ್ರಿ ಬೈರೂತ್‌ನ ಉಪನಗರಗಳ ಮೇಲೆ ಈ ದಾಳಿಯ ವೇಳೆ ಆಕಾಶದಲ್ಲಿ ಭಾರಿ ಹೊಗೆ ಹಾಗೂ ಜ್ವಾಲೆಗಳು ಗೋಚರಿಸಿದವು. ಬೈರೂತ್‌ನಿಂದ ಸುಮಾರು ಕಿ.ಮೀ ದೂರ ಇರುವ ಕಟ್ಟಡಗಳೂ ಕಂಪಿಸಿದವು. ಧೈಯಾ ಸುತ್ತಮುತ್ತ ನಡೆಸಿದ ಮತ್ತೊಂದು ದಾಳಿಯಿಂದ ರಕ್ಷಿಸಿಕೊಳ್ಳಲು, ಜನರು ಕಲ್ಲು ಮಣ್ಣುಗಳಿಂದ ತುಂಬಿದ ಬೀದಿಯಲ್ಲಿ ದಿಕ್ಕಾಪಾಲಾಗಿ ಓಡಿದರು. ಕಟ್ಟಡಗಳು ಧ್ವಂಸಗೊಂಡವು, ಕಾರುಗಳು ಹೊತ್ತಿ ಉರಿದವು.

ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಗುಪ್ತಚರ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಮಧ್ಯರಾತ್ರಿ ಈ ದಾಳಿ ನಡೆಸಲಾಯಿತು ಎಂದು ಇಸ್ರೇಲ್ ಸೇನೆ ಹೇಳಿದೆ. ಯಾರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಯಿತು, ದಾಳಿಯಲ್ಲಿ ಮೃತರಾದರವ ಸಂಖ್ಯೆಯನ್ನು ಇಸ್ರೇಲ್ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಕಳೆದ 24 ಗಂಟೆಯಲ್ಲಿ 100 ಹಿಜ್ಬುಲ್ಲಾ ಹೋರಾಟಗಾರರನ್ನು ಕೊಲ್ಲಲಾಗಿದೆ ಎಂದಷ್ಟೇ ಹೇಳಿದೆ.

ಶಸ್ತ್ರಾಸ್ತ್ರಗಳನ್ನು ಸಾಗಿಸಲು ಈ ಗಡಿ ರಸ್ತೆಯನ್ನು ಹಿಜ್ಬುಲ್ಲಾ ಬಂಡುಕೋರರು ಬಳಸುತ್ತಿದ್ದಾರೆ. ಹೀಗಾಗಿ ಅದನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಇರಾನ್‌ ಸೇರಿದಂತೆ ಹಲವು ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡಲು ಬಳಸುತ್ತಿದ್ದ ಸುರಂಗಕ್ಕೆ ನಮ್ಮ ಫೈಟರ್‌ ಜೆಟ್‌ ದಾಳಿ ನಡೆಸಿದೆ ಎಂದು ತಿಳಿಸಿದೆ.

ಇಸ್ರೇಲ್ ದಾಳಿಯಿಂದಾಗಿ ಸ್ಥಳದಲ್ಲಿ ಎರಡು ಬೃಹತ್ ಗುಂಡಿಗಳು ನಿರ್ಮಾಣವಾಗಿದ್ದು, ಜನರು ಕಾರುಗಳಲ್ಲಿ ಪ್ರಯಾಣಿಸಲಾಗದೆ, ತಮ್ಮ ಚೀಲಗಳನ್ನು ಹಿಡಿದುಕೊಂಡು ನಡೆದುಕೊಂಡೇ ಗಡಿ ದಾಟಿದ್ದಾರೆ. ಎರಡು ವಾರದ ಹಿಂದೆ ಇಸ್ರೇಲ್ ಆರಂಭಿಸಿದ ಈ ಕಾರ್ಯಾಚರಣೆ ಬಳಿಕ 2.5 ಲಕ್ಷಕ್ಕೂ ಅಧಿಕ ಸಿರಿಯನ್ನರು ಹಾಗೂ 82 ಸಾವಿರಕ್ಕೂ ಮಿಕ್ಕ ಲೆಬನಾನ್ ಪ್ರಜೆಗಳು ಗಡಿ ಮೂಲಕ ಪಲಾಯನ ಮಾಡಿದ್ದಾರೆ. ಉಭಯ ರಾಷ್ಟ್ರಗಳ ನಡುವೆ 6 ಗಡಿಗಳಿದ್ದು, ಎಲ್ಲವೂ ಮುಕ್ತವಾಗಿವೆ.

ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಲೆಬನಾನ್‌ ಮೇಲೆ ಇಸ್ರೇಲ್ ದಾಳಿ ಆರಂಭಿಸಿದ್ದು, ಈ ವರೆಗೂ ಇದೇ ಪ್ರದೇಶದಲ್ಲಿ ಸತತ 10 ಬಾರಿ ದಾಳಿ ನಡೆಸಿದೆ. ಇದರಲ್ಲಿ ಹಿಜ್ಬುಲ್ಲಾ ಹೋರಾಟಗಾರರು ಹಾಗೂ ನಾಗರಿಕರು ಸೇರಿ 1,400 ಲೆಬನಾನ್ ಪ್ರಜೆಗಳು ಸಾವಿಗೀಡಾಗಿದ್ದಾರೆ, ಸುಮಾರು 12 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಲೆಬನಾನ್‌ನ ಸರ್ಕಾರಿ ವಾರ್ತಾ ಏಜೆನ್ಸಿ ಮಾಹಿತಿ ನೀಡಿದೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT