ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚರ್ಚೆ: ಬೆಂಗಳೂರಿನ ಆಡಳಿತ ಸುಧಾರಣೆಗೆ ಬಿಬಿಸಿ ಜಿಬಿಜಿ ಮಸೂದೆಯೇ ಸೂಕ್ತ

'ಗ್ರೇಟರ್‌ ಬೆಂಗಳೂರು ಆಡಳಿತ’ ಮಸೂದೆಯಿಂದ ರಾಜಧಾನಿಗೆ ಅನುಕೂಲವೇ?
ಶ್ರೀಕಾಂತ್‌ ವಿಶ್ವನಾಥನ್‌
Published : 13 ಸೆಪ್ಟೆಂಬರ್ 2024, 19:30 IST
Last Updated : 13 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments
ಹೊಸ ಮಸೂದೆಯಲ್ಲಿ ಹಲವು ಕೊರತೆಗಳಿದ್ದು ಇದು ಬೆಂಗಳೂರಿನ ಆಡಳಿತವನ್ನು ಸುಧಾರಿಸುವುದಿಲ್ಲ. 2014ರ ಬಿಬಿಸಿ ಜಿಬಿಜಿ ಕರಡು ಮಸೂದೆಯು ಬೆಂಗಳೂರಿನ ಭರವಸೆಯ ಆಶಾಕಿರಣವಾಗಿದೆ. ರಾಜಧಾನಿಯ ಆಡಳಿತ ಮತ್ತು ಜನಜೀವನ ಸುಧಾರಣೆಗೆಬೇಕಾದ ಎಲ್ಲ ಅಂಶಗಳೂ ಅದರಲ್ಲಿ ಅಡಕವಾಗಿವೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಪುನರ್‌ರಚಿಸಲು ಸರ್ಕಾರ ನೇಮಿಸಿರುವ ಈಗಿನ ಬ್ರ್ಯಾಂಡ್‌ ಬೆಂಗಳೂರು ಸಮಿತಿಯ (ಬಿಬಿಸಿ) ಹಿಂದಿನ ರೂಪವಾಗಿದ್ದ ತಜ್ಞರ ಸಮಿತಿಯು 2014ರಲ್ಲಿ ರಚಿಸಿದ್ದ ‘ಗ್ರೇಟರ್‌ ಬೆಂಗಳೂರು ಆಡಳಿತ’ (ಜಿಬಿಜಿ– The Greater Bengaluru Governance (GBG)) ಕರಡು ಮಸೂದೆಯು ಬೆಂಗಳೂರಿನ ಆಡಳಿತವನ್ನು ಸುಗಮಗೊಳಿಸುವ ಆಶಾಕಿರಣ. ಇದು ಮಹಾನಗರದ ಆಡಳಿತ, ಪ್ರದೇಶ ಅಭಿವೃದ್ಧಿ ಯೋಜನೆ ಮತ್ತು ವಿಕೇಂದ್ರೀಕೃತ ಜನ ಸಹಭಾಗಿತ್ವದ ಆಡಳಿತವನ್ನು ಒದಗಿಸುವ ಪ್ರಗತಿಪರ ಮತ್ತು ಆಧುನಿಕ ಮಸೂದೆಯಾಗಿದೆ. ರಾಜಧಾನಿಯ ಈಗಿನ ಅಸಮರ್ಪಕ ಆಡಳಿತವು ಎದುರಿಸುತ್ತಿರುವ ಕುಡಿಯುವ ನೀರು, ಸಂಚಾರ ವ್ಯವಸ್ಥೆ, ನೆರೆ ಅಥವಾ ಕೈಗೆಟಕುವ ವಸತಿ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ. 

ಸಮನ್ವಯದ ಕೊರತೆ: ಮೊದಲನೆಯದಾಗಿ, ಬೆಂಗಳೂರಿಗೆ ಸಂಬಂಧಿಸಿದಂತೆ ಹಲವು ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಯಾವ ಸಂಸ್ಥೆಯೂ ಪರಸ್ಪರ ಸಮನ್ವಯದಿಂದ ಕೆಲಸ ಮಾಡುವುದಿಲ್ಲ. ಉದಾಹರಣೆಗೆ, ಬಿಬಿಎಂಪಿಯು ಬಸ್‌ ತಂಗುದಾಣ, ರಸ್ತೆಗಳ ನಿರ್ಮಾಣ ಜವಾಬ್ದಾರಿ ಹೊತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಗರ ಯೋಜನೆ ಮತ್ತು ಹೊರವರ್ತುಲ ರಸ್ತೆಯಂತಹ ಮೂಲಸೌಕರ್ಯ ಯೋಜನೆಗಳನ್ನು ನಿರ್ವಹಿಸುತ್ತದೆ. ಸಾರಿಗೆ ಬಸ್‌ಗಳ ನಿರ್ವಹಣೆಯ ಹೊಣೆ ಬಿಎಂಟಿಸಿಯದ್ದು. ಬೆಂಗಳೂರು ಸಂಚಾರ ಪೊಲೀಸ್‌ (ಬಿಟಿಪಿ) ಇಲಾಖೆ ವಾಹನಗಳ ಸಂಚಾರ ನಿಯಂತ್ರಿಸುತ್ತದೆ. ಆದರೆ, ನಗರದ ವಿಚಾರದಲ್ಲಿ ಈ ಸಂಸ್ಥೆಗಳು ಏಕರೂಪದ ಕಾರ್ಯತಂತ್ರ ಹೊಂದಿಲ್ಲ ಮತ್ತು ಸಕ್ರಿಯವಾಗಿ ಪರಸ್ಪರ ಸಮನ್ವಯವನ್ನೂ ಸಾಧಿಸುತ್ತಿಲ್ಲ.

ಈ ಸಮಸ್ಯೆಗೆ 2014ರ ಬಿಬಿಸಿ ಜಿಬಿಜಿ ಮಸೂದೆಯಲ್ಲಿ ಪರಿಹಾರವಿದೆ. ಈ ಮಸೂದೆಯು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ರೂಪದಲ್ಲಿ ಏಕೀಕೃತ ಮತ್ತು ಸಂಯೋಜಿತವಾದ ಅಧಿಕಾರವನ್ನು ಸ್ಥಾಪಿಸುತ್ತದೆ. ನಗರದ ಆಡಳಿತ ನಿರ್ವಹಿಸುವ ಮತ್ತು ವಿವಿಧ ಸೇವೆಗಳನ್ನು ಒದಗಿಸುವ ಎಲ್ಲ ಸಂಸ್ಥೆಗಳನ್ನು ಒಟ್ಟಾಗಿ ಈ ಪ್ರಾಧಿಕಾರದ ಅಡಿಯಲ್ಲಿ ತರುತ್ತದೆ. ಮುಖ್ಯಮಂತ್ರಿಯವರು ಜಿಬಿಎಯ ಮುಖ್ಯಸ್ಥರಾಗಬೇಕು. ಸಿಎಂ ನೇತೃತ್ವ ವಹಿಸಿದರೆ, ಎದುರಾಗುವ ಯಾವುದೇ ಬಿಕ್ಕಟ್ಟುನ್ನು ಪರಿಹರಿಸಲು ಮತ್ತು ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಪ್ರಾಧಿಕಾರಕ್ಕೆ ಹೆಚ್ಚು ಶಕ್ತಿ ಬರುತ್ತದೆ. 

ಮಾಸ್ಟರ್‌ ಪ್ಲಾನ್‌ ಅಗತ್ಯ: ಎರಡನೆಯದಾಗಿ, ಬೆಂಗಳೂರು ನಗರವು ಯೋಜನಾರಹಿತವಾದ ಅಭಿವೃದ್ದಿಯಿಂದ ನಲುಗುತ್ತಿದೆ. ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಉತ್ತಮವಾದ ಮಾಸ್ಟರ್‌ ಪ್ಲಾನ್‌ ಇಲ್ಲ. ಈ ಹಿಂದೆ ಅನುಮೋದಿಸಲಾಗಿದ್ದ ಮಾಸ್ಟರ್‌ ಪ್ಲಾನ್‌ನ ಅವಧಿ 2015ಕ್ಕೇ ಕೊನೆಗೊಂಡಿದೆ. ಅತ್ಯುತ್ತಮ ಮಾಸ್ಟರ್‌ ಪ್ಲಾನ್‌ ಹೇಗಿರಬೇಕು ಎಂದರೆ, ಸರ್ಕಾರಿ ಕಚೇರಿಗಳು ಜನರಿಗೆ ಹತ್ತಿರದಲ್ಲಿರಬೇಕು. ಶಾಲೆಗಳು ಮತ್ತು ಆಟದ ಮೈದಾನಗಳಿಗಾಗಿ ಮಕ್ಕಳು ಹೆಚ್ಚು ದೂರ ಪ್ರಯಾಣಿಸುವಂತಿರಬಾರದು. ಹಸಿರು ಪ್ರದೇಶಗಳು (ಉದ್ಯಾನ) ಇರಬೇಕು. ವಲಸಿಗರು ಮತ್ತು ನಗರ ಪ್ರದೇಶದ ಬಡವರಿಗೆ ಕೈಗೆಟಕುವ ದರದಲ್ಲಿ ವಸತಿ ಮತ್ತು ಇತರ ಸವಲತ್ತುಗಳು ಸಿಗುವಂತಾಗಬೇಕು.  ಆದರೆ, ಈ ವಿಷಯಗಳಲ್ಲಿ ‌ಈಗಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಸಮರ್ಥವಾಗಿದೆ ಎಂಬುದು ಸಾಬೀತಾಗಿದೆ. ಅದಕ್ಕೆ ರಾಜಕೀಯ ಹಸ್ತಕ್ಷೇಪವೋ ಅಥವಾ ಜಡತ್ವವೋ ಅಥವಾ ಬೇರೆ ಯಾವುದೇ ಕಾರಣವೋ ಗೊತ್ತಿಲ್ಲ.  ಬಿಬಿಸಿ ಜಿಬಿಜಿ ಮಸೂದೆಯು ಪ್ರಾದೇಶಿಕ ಅಥವಾ ಮಹಾನಗರ ಮಟ್ಟ, ನಗರ ಮಟ್ಟ ಮತ್ತು ವಾರ್ಡ್‌ ಮಟ್ಟಗಳಲ್ಲಿ ವ್ಯವಸ್ಥಿತ ಮತ್ತು ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲು ಪೂರಕವಾಗಿರುವ ಪ್ರಬಲವಾದ ನಿಯಮಗಳನ್ನು ಹೊಂದಿದೆ. 

ಆಡಳಿತದಲ್ಲಿ ಜನರ ಸಹಭಾಗಿತ್ವ: ಮೂರನೆಯದಾಗಿ, ಬೆಂಗಳೂರಿನಂತಹ ಯಾವುದೇ ದೊಡ್ಡ ನಗರ ಪ್ರತಿ ದಿನವೂ ಹಲವು ಸವಾಲುಗಳನ್ನು ಎದುರಿಸುತ್ತಿರುತ್ತದೆ. ಹೀಗಿರುವಾಗ, ನಮ್ಮ ನಾಗರಿಕರಿಗೆ ಕನಿಷ್ಠ ಗುಣಮಟ್ಟದ ಬದುಕನ್ನು ಖಾತ್ರಿಪಡಿಸುವ ದಿಸೆಯಲ್ಲಿ ನಾವು ಒದಗಿಸುವ ಸೇವೆಗಳನ್ನು ನಿರಂತರವಾಗಿ ಹೇಗೆ ಸುಧಾರಿಸಬಹುದು? ಅದಕ್ಕಾಗಿ ವಿಕೇಂದ್ರೀಕೃತ ಜನಸಹಭಾಗಿತ್ವದ ಆಡಳಿತ ಬೇಕು. ಅನುದಾನಗಳ ಕೊರತೆ, ಸಿಬ್ಬಂದಿ ಕೊರತೆ ಮತ್ತು ಅರ್ಥಪೂರ್ಣವಾದ ಯಾವ ಅಧಿಕಾರವೂ ಇಲ್ಲದಿರುವ ಬಿಬಿಎಂಪಿಯಂತಹ ಒಂದು ಸಂಸ್ಥೆ 700 ಚದರ ಕಿ.ಮೀನಷ್ಟು ವಿಸ್ತಾರವಾಗಿರುವ ಮತ್ತು 1 ಕೋಟಿಯಷ್ಟು ಜನಸಂಖ್ಯೆ ಇರುವ ನಗರವೊಂದನ್ನು ನಿರ್ವಹಿಸುವ ಈಗಿನ ಮಾದರಿ ಕಾರ್ಯಸಾಧುವೇ ಅಲ್ಲ. ಜನರಿಗೆ ಹೆಚ್ಚು ಹತ್ತಿರವಾಗಿರುವ ಮತ್ತು ಸ್ಥಳೀಯ ಸರ್ಕಾರಗಳಂತೆ ಹೆಚ್ಚು ಅಧಿಕಾರ ಹೊಂದಿರುವ ನಗರಪಾಲಿಕೆಗಳು ನಮಗೆ ಬೇಕು. ಬಿಸಿಸಿ, ಜಿಬಿಜಿ ಮಮೂದೆಯು ಬಿಬಿಎಂಪಿಗಿಂತ ಹೆಚ್ಚು ಅಧಿಕಾರ ಹೊಂದಿರುವ ಸಣ್ಣ ಸಣ್ಣ ಹಲವು ನಗರ ಪಾಲಿಕೆಗಳನ್ನು ಸೃಷ್ಟಿಸಲು ಅವಕಾಶ ಕಲ್ಪಿಸುತ್ತದೆ.

ನಾಗರಿಕರು ತಮ್ಮ ನೆರೆಹೊರೆಗಳ ನಾಗರಿಕ ವಿಚಾರಗಳ ಮಾಲೀಕತ್ವ ಹೊಂದುವ ಮತ್ತು ಆಡಳಿತದಲ್ಲಿ ಭಾಗಿಯಾಗುವಂತಹ ವ್ಯವಸ್ಥೆ ನಮಗೆ ಅಗತ್ಯವಿದೆ. ಸ್ವಚ್ಛತೆ, ಬೀದಿ ದೀಪಗಳು, ಸುರಕ್ಷತೆ, ಜಲಸಂರಕ್ಷಣೆ, ಫುಟ್‌ಪಾತ್‌ಗಳ ನಿರ್ವಹಣೆ, ಚರಂಡಿ ವ್ಯವಸ್ಥೆ, ಸಾರ್ವಜನಿಕ ಶೌಚಾಲಯಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ವಿವಿಧ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಂಡಿವೆಯೇ ಎಂಬುದರ ಮೇಲೆ ನಿಗಾ ಇಡುವುದು ಸೇರಿದಂತೆ ನೆರೆಹೊರೆಯಲ್ಲಿನ ಸಮಸ್ಯೆಗಳನ್ನು ನಿರ್ವಹಿಸಲು ವಾರ್ಡ್‌ ಮಟ್ಟದ ಅಧಿಕಾರಿಗಳೊಂದಿಗೆ ಪಾಲುದಾರರಾಗಲು ನಾಗರಿಕರಿಗೂ ಅವಕಾಶ ಸಿಗಬೇಕು. ತಮ್ಮ ವಾರ್ಡ್‌ಗಳಲ್ಲಿ ಗುತ್ತಿಗೆದಾರರು ನಡೆಸುತ್ತಿರುವ ಕಾಮಗಾರಿಗಳು ಮತ್ತು ಅವುಗಳ ವೆಚ್ಚ ಸೇರಿದಂತೆ ವಾರ್ಡ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿಗಳೂ ನಾಗರಿಕರಿಗೆ ದೊರಕಬೇಕು. ಆಡಳಿತ ನಿರ್ವಹಣೆಯಲ್ಲಿ ಜನರು ಭಾಗವಹಿಸುವುದರಿಂದ ಸರ್ಕಾರದ ಮೇಲಿನ ನಂಬಿಕೆ ಇನ್ನಷ್ಟು ಬಲಗೊಳ್ಳುತ್ತದೆ. ಹಳೆಯ ಕರಡು ಮಸೂದೆಯು ಆಡಳಿತದಲ್ಲಿ ಜನರ ಸಹಭಾಗಿತ್ವವನ್ನು ಸುಗಮಗೊಳಿಸಲು ವಾರ್ಡ್‌ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ. ಪ್ರದೇಶ ಸಭಾಗಳನ್ನು ರಚಿಸಿಲೂ ಅವಕಾಶ ಕಲ್ಪಿಸುತ್ತದೆ.  

ಸರ್ಕಾರ ಈಗ ಮಂಡಿಸಿರುವ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ಯಲ್ಲಿ ಹಲವು ಕೊರತೆಗಳಿದ್ದು,   ಇದು ಬೆಂಗಳೂರಿನ ಆಡಳಿತವನ್ನು ಸುಧಾರಿಸುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರವು ಬಿಬಿಸಿ ಜಿಬಿಜಿ ಮಸೂದೆಯನ್ನು ಮತ್ತೆ ತಂದು, ಅದನ್ನು ಇನ್ನಷ್ಟು ಸುಧಾರಿಸುವುದಕ್ಕಾಗಿ ಸಾರ್ವಜನಿಕರ ಅಭಿಪ್ರಾಯಪಡೆಯಬೇಕು. ಮತ್ತು ಇನ್ನಷ್ಟು ವಿಳಂಬ ಮಾಡದೇ ಚುನಾವಣೆ ನಡೆಸಬೇಕು. 

ಲೇಖಕ: ‘ಜನಾಗ್ರಹ’ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT