ಅಮೃತ ಶಿಲೆಯಂತಹ ಹಾಸುಗಲ್ಲು, ಭವನದ ಒಳಗೆ ಪ್ರಾಂಗಣದಲ್ಲಿ ಆಳೆತ್ತರದ ಸ್ತೂಪದ ಮೇಲೆ ಪೂರ್ವಾಭಿಮುಖದ ಕುವೆಂಪು ಪ್ರತಿಮೆ, ಮುಂಭಾಗದಲ್ಲಿ ಅನಿಕೇತನ ಕವನ, ಹಿಂಬದಿಯ ಗೋಡೆ ಮೇಲೆ ಕವಿಯ ಜಾತಕವಿರುವ ಭಾವಚಿತ್ರ, ಒಳಗೋಡೆಯಲ್ಲಿ ವಿಶ್ವಕವಿಯ ತತ್ವಗಳು ಮತ್ತು ಸಂದೇಶಗಳ ಸಾಲು...

ನೋಡುತ್ತಾ ಕ್ಷಣ ಕಾಲ ನಿಂತವರಿಗೆ ಮಹಾಕವಿಯ ಪ್ರತಿಮೆ ಮುಂದೆ ಕುಳಿತು ತದೇಕ ಚಿತ್ತದಿಂದ ಧ್ಯಾನಾಸಕ್ತವಾಗುವಂತೆ ಪ್ರೇರಣೆ ನೀಡುತ್ತದೆ ಅಲ್ಲಿನ ಪರಿಸರ. ಇದು ರಾಷ್ಟ್ರಕವಿ ಕುವೆಂಪು ಜನ್ಮಸ್ಥಳ ಹಿರೆಕೊಡಿಗೆಯ ಚಿತ್ರಣ. `ಕೈಮುಗಿದು ಒಳಗೆ ಬಾ ಯಾತ್ರಿಕನೆ' ಎಂಬ ಸಂದೇಶವನ್ನೇ ಸಾರುವ ರೀತಿಯಲ್ಲಿದೆ ಇಲ್ಲಿಯ ವಾತಾವರಣ. ಇಂಥ ಅಪೂರ್ವ ಸ್ಥಳ ನೋಡಲು ರಜಾ ದಿನಗಳಲ್ಲಿ ಹೋದರೆ ಮಾತ್ರ ನಿರಾಸೆ. ಸಂದೇಶ ಭವನದ ಬಾಗಿಲಿಗೆ ಹಾಕಿರುವ ಬೀಗವೇ ಸ್ವಾಗತ ಕೋರುತ್ತದೆ! ಇದು ವಿಶ್ವಕವಿಯ ಜನ್ಮ ಸ್ಥಳಕ್ಕೆ ಎದುರಾಗಿರುವ ದುರ್ಗತಿ.

ಸಂದೇಶ ಭವನ ಮೇಲ್ವಿಚಾರಣೆ ಮತ್ತು ನಿರ್ವಹಣೆಗೆ ಸಿಬ್ಬಂದಿ ನೇಮಿಸುವುದಾಗಿ ಈ ಹಿಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕಾನೂನು ಸಚಿವ ಎಸ್.ಸುರೇಶ್‌ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ನೀಡಿರುವ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ. ಕುವೆಂಪು ಗ್ರಂಥಾಲಯದ ಗ್ರಂಥಪಾಲಕಿ ನಾಗರತ್ನ ಎಂಬುವವರೇ ಸದ್ಯಕ್ಕೆ ಸಂದೇಶ ಭವನ ನೋಡಲು ಬರುವ ಮಂದಿಗೆ ಸ್ವಾಗತಕಾರಿಣಿ, ಮಾರ್ಗದರ್ಶಕಿ. ಎರಡು ತಿಂಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ರಜೆ ದಿನಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಆದರೆ, ಅವರಿಗೆ ಇಲ್ಲಿ ಮಾರ್ಗದರ್ಶನ ನೀಡಲು ಯಾರೂ ಇಲ್ಲ. ನಿರಾಸೆಯಲ್ಲಿ ಶಪಿಸಿ ವಾಪಸಾಗುತ್ತಾರೆ.

ಸಂದೇಶ ಭವನದ ಉದ್ದೇಶ
ಕುವೆಂಪು ಜನ್ಮ ಸ್ಥಳದಲ್ಲಿ ವಿಚಾರ ವೇದಿಕೆ ಹುಟ್ಟುಹಾಕಿ, ಕವಿ ಆಶಯ ಮತ್ತು ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಬೇಕು. ರಾಮಕೃಷ್ಣ ಪರಮಹಂಸರು ಮತ್ತು ಕುವೆಂಪು ಅವರ ಚಿಂತನೆಗಳನ್ನು ಪ್ರಸಾರ ಮಾಡುವ ಕೇಂದ್ರ ಇದಾಗಬೇಕು ಎನ್ನುವುದು ಕುವೆಂಪು ಅವರ ಜೀವದ ಗೆಳೆಯ ಅಲಿಗೆ ಪುಟ್ಟಯ್ಯ ನಾಯಕರ ಮನದಾಳದ ಆಸೆಯಾಗಿತ್ತು. ಇಲ್ಲಿ ಪ್ರತಿ ದಿನ ಸಾಹಿತ್ಯ ಚಟುವಟಿಕೆ, ಸಾಂಸ್ಕೃತಿಕ ಚಿಂತನೆ, ವಿಚಾರ ಮಂಥನ ನಡೆಯಬೇಕು ಎನ್ನುವುದು ಅವರ ಉದ್ದೇಶ.

ವೇದಿಕೆ ಹುಟ್ಟು ಹಾಕಲು ಕುವೆಂಪು ಅನುಮತಿ ಕೇಳಿದಾಗ ಮುಕ್ತ ಮನಸಿನಿಂದ ಕುವೆಂಪು ಇದಕ್ಕೆ 1960ರಲ್ಲಿ ಅನುಮೋದನೆ ನೀಡಿದ್ದರು. ವೇದಿಕೆ ಹುಟ್ಟುಹಾಕಲಾಯಿತು. ಸಾಹಿತ್ಯ, ಸಾಂಸ್ಕತಿಕ ಚಟುವಟಿಕೆಗಳನ್ನು 1974ರವರೆಗೆ ನಡೆದುಕೊಂಡು ಬಂದಿತ್ತು. 1986ರಲ್ಲಿ ಈ ವೇದಿಕೆಗೆ ಕುವೆಂಪು `ವಿಶ್ವಮಾನವ ಪ್ರತಿಷ್ಠಾನ' ಹೆಸರು ನೀಡಿದರು. ಈ ಪ್ರತಿಷ್ಠಾನದಡಿ ಚಟುವಟಿಕೆ ಮುಂದುವರಿದವು. ಈಗಲೂ ಪ್ರತಿಷ್ಠಾನ ಅಸ್ತಿತ್ವದಲ್ಲಿದೆ. ಆದರೆ, ನಿರೀಕ್ಷಿತಮಟ್ಟದಲ್ಲಿ ಚಟುವಟಿಕೆ ನಡೆಯುತ್ತಿಲ್ಲ ಎನ್ನುವುದು ಸಾಹಿತ್ಯಪ್ರಿಯರ ಕೊರಗು.

1986-87ರಲ್ಲಿ ಅಂದಿನ ಜಿಲ್ಲಾ ಪರಿಷತ್ ಅಧ್ಯಕ್ಷ ಎಸ್.ವಿ.ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಹಾಸ ಗುಪ್ತ ಅವರು ಈ ಸ್ಥಳದಲ್ಲಿ ಸಂದೇಶ ಭವನ ಕಟ್ಟಡ ನಿರ್ಮಾಣಕ್ಕೆ ನಾಂದಿ ಹಾಡಿದರು. ಅದಕ್ಕೂ ಮೊದಲು 1983ರಲ್ಲಿ ಸಂದೇಶ ಭವನದ ಪಕ್ಕ ಅಂಗನವಾಡಿ ಕಟ್ಟಲಾಗಿತ್ತು. ಆ ನಂತರ ಅಲ್ಲಿ ಕುವೆಂಪು ಗ್ರಂಥಾಲಯ ಸ್ಥಾಪಿಸಲಾಯಿತು. ಈಗ ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನು ಅದರಲ್ಲಿಯೇ ನಡೆಸಲಾಗುತ್ತಿದೆ. ಇತ್ತೀಚೆಗೆ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ, ಹೊಸ ಗ್ರಂಥಾಲಯ ಕಟ್ಟಡ, ಅತಿಥಿ ಗೃಹ ಮತ್ತು ಒಂದು ಸಣ್ಣ ಸಭಾ ಭವನ ನಿರ್ಮಿಸಲಾಗಿದೆ. ಅದು ಬಸ್ ನಿಲ್ದಾಣವೊಂದರಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದಂತಿದೆ! ಮೇಲ್ನೋಟಕ್ಕೆ ಭೌತಿಕ ಅಭಿವೃದ್ಧಿಗಳು ನಡೆದಿವೆ. ಆದರೆ, ಜೀವಂತಿಕೆ ಕಾಣಿಸುತ್ತಿಲ್ಲ. ಜಡ ವಸ್ತುಗಳಂತೆ ಭಾಸವಾಗುತ್ತಿವೆ.

ಕುವೆಂಪು ತಮ್ಮ ಪತ್ನಿ ಹೇಮಾವತಿ ತೀರಿಕೊಂಡ ನಂತರ ಕೊನೆ ಆಸೆಯಾಗಿ ಒಮ್ಮೆ ತಾಯಿ ಮನೆ ಹಿರೆಕೊಡಿಗೆಗೆ ಭೇಟಿ ನೀಡಿದ್ದರು. ಸರ್ಕಾರವೇ ಹೆಲಿಕಾಪ್ಟರ್‌ನಲ್ಲಿ ಅವರನ್ನು ಕರೆತಂದಿತ್ತು. ಅಂದಿನ ಸಣ್ಣ ನೀರಾವರಿ ಸಚಿವ ಮಲ್ಲಿಕಾರ್ಜುನ ಪ್ರಸನ್ನ ಕುವೆಂಪು ಜತೆ ಹೆಲಿಕಾಪ್ಟರ್‌ನಲ್ಲಿ ಬಂದಿದ್ದರು. ಸಂದೇಶ ಭವನದಲ್ಲಿನ ತಮ್ಮ ಪ್ರತಿಮೆ ಮೇಲೆ ತಾವೇ ಸ್ತವನ್ನಿಟ್ಟು ತುಂಬಾ ಹೊತ್ತು ಧ್ಯಾನಸ್ಥರಾಗಿ, ಪ್ರಾರ್ಥಿಸಿದ್ದರು. ಅವರು ಮಲೆನಾಡಿಗೆ ನೀಡಿದ ಭೇಟಿ ಅದೇ ಕೊನೆ.

ಎಂತಹ ಅಭಿವೃದ್ಧಿ
1991ರ ಜನವರಿ 6ರಂದು ಕುವೆಂಪು ಸಂದೇಶ ಭವನ ಉದ್ಘಾಟನೆಗೊಂಡಿದೆ. ಎರಡು ದಶಕಗಳಲ್ಲಿ ಆದಂತಹ ಸಂದೇಶ ಭವನದ ಅಭಿವೃದ್ಧಿ ಕಾಮಗಾರಿಗಳು 2011ರ ಡಿಸೆಂಬರ್ 29ರಂದು ಲೋಕಾರ್ಪಣೆಯಾದವು. ಈ ಭಾಗದಲ್ಲಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ ನೀಡಿರುವ 4 ಕೋಟಿ ರೂಪಾಯಿ ಹಣ ರಸ್ತೆ ಅಭಿವೃದ್ಧಿಗೆ ಮತ್ತು ಸಂದೇಶ ಭವನ ನವೀಕರಣಕ್ಕೆ ವಿನಿಯೋಗಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಸಮಿತಿಯ ಸದಸ್ಯರನ್ನು ಆಹ್ವಾನಿಸಿ ಇದುವರೆಗೆ ಯಾವುದೇ ಸಭೆ ನಡೆಸಿಲ್ಲ. ಸರ್ಕಾರದಿಂದ ಬಂದಿರುವ ಅನುದಾನ ತರಾತುರಿಯಲ್ಲಿ ಖರ್ಚು ಮಾಡುವ ಪ್ರಯತ್ನ ಮಾತ್ರ ನಡೆಯುತ್ತಿದೆ. ಐತಿಹಾಸಿಕ ಸ್ಥಳದಲ್ಲಿ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಆಗಬೇಕಾದ ಕೆಲಸ ಆಗುತ್ತಿಲ್ಲ. ಈಗ ಆಗುತ್ತಿರುವ ಕೆಲಸಗಳೆಲ್ಲವೂ ಕವಿ ಕುವೆಂಪು ಮತ್ತು ಅವರ ಬಾಲ್ಯದ ಗೆಳೆಯ ಅಲಿಗೆ ಪುಟ್ಟಯ್ಯನಾಯಕರ ಆಶಯಕ್ಕೆ ವಿರುದ್ಧದವು ಎನ್ನುವ ಅಪಸ್ವರವಿದೆ.

ಸಂದೇಶ ಭವನದ ಬಳಿ ನಿರ್ಮಿಸಿರುವ ಕಟ್ಟಡದಲ್ಲಿ ಗ್ರಂಥಾಲಯ, ಎರಡು ಕೊಠಡಿಗಳ ಅತಿಥಿ ಗೃಹ, ಒಂದು ಸಭಾಂಗಣವಿದೆ. ಗ್ರಂಥಾಲಯದಲ್ಲಿ ಕುವೆಂಪು ರಚಿತ ಎಲ್ಲ ಕೃತಿಗಳು, ಕುವೆಂಪು ಸಾಹಿತ್ಯ ಕುರಿತು ಹಲವು ಲೇಖಕರು ಬರೆದಿರುವ ಕೃತಿಗಳು ಓದುಗರಿಗೆ ಲಭ್ಯವಿವೆ. ಇಲ್ಲಿ ಕುವೆಂಪು ಜನ್ಮದಿನ ಮತ್ತು ನಿಧನರಾದ ದಿನ ಮಾತ್ರ ಕಾರ್ಯಕ್ರಮ ನಡೆಯುತ್ತವೆ. ಇವು ಕೂಡ ಇತ್ತೀಚೆಗೆ ಕಾಟಾಚಾರಕ್ಕೆ ಎನ್ನುವಂತಾಗಿವೆ. ಸಾಂಸ್ಕೃತಿಕ, ಸಾಹಿತ್ಯಪ್ರಿಯ ಯಾತ್ರಿಕರು ಬಾರದೆ ಸೊರಗುತ್ತಿದೆ ಮಹಾಕವಿಗೆ ಜನ್ಮ ನೀಡಿದ ಸೀತಮ್ಮನವರ ಮನೆ. ಇಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಕವಿ ಆಶಯಕ್ಕೆ ತಕ್ಕಂತೆ ನಿಜವಾದ ಉದ್ದೇಶಗಳನ್ನು ಇಲ್ಲಿ ಸಾಕಾರಗೊಳಿಸಿದ್ದರೆ ಸಂದೇಶ ಭವನಕ್ಕೆ ಜೀವಕಳೆ ಬರುತ್ತಿತ್ತು ಎನ್ನುವುದು ಸಾಂಸ್ಕೃತಿಕ ಚಿಂತಕರ ಕಳಕಳಿ.

ದಶಕದ ಹಿಂದೆ ಕವಿ ಜನ್ಮಸ್ಥಳದ ಸುತ್ತಲೂ ಹಚ್ಚಹಸಿರಿನ ಪರಿಸರ, ದೃಷ್ಟಿ ಹಾಯಿಸಿದೆಡೆಯಲ್ಲಾ ಹಸಿರು ಕಾನನ. ಸಂದೇಶ ಭವನವನ್ನು ಹಸಿರು ತೊಟ್ಟಿಲಿನಲ್ಲಿಟ್ಟಂತಿತ್ತು ಪ್ರಕೃತಿಯ ಸೊಬಗು. ಅಭಿವೃದ್ಧಿಯ ನೆಪದಲ್ಲಿ ನಿಸರ್ಗದತ್ತವಾಗಿದ್ದ ಗುಡ್ಡ, ಗಿಡಮರಗಳನ್ನು ಸವರಿ, ಸಹಜ ಸೌಂದರ್ಯಕ್ಕೆ ಧಕ್ಕೆ ಉಂಟುಮಾಡಲಾಗಿದೆ. ಅಲ್ಲಿದ್ದ ಜೀವಂತಿಕೆಯನ್ನು ಕೊಂದು, ಕಾಂಕ್ರಿಟ್ ಕಟ್ಟಡಗಳನ್ನು ನಾಯಿಕೊಡೆಯಂತೆ ಎಬ್ಬಿಸಲಾಗಿದೆ. ಪ್ರಕೃತಿಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ರಸಋಷಿ ಕುವೆಂಪು ಬದುಕಿದ್ದರೆ ಇಲ್ಲಿ ಒಂದೇ ಒಂದು ಗಿಡಮರ ಕಡಿಯಲು ಅವಕಾಶ ಕೊಡುತ್ತಿರಲಿಲ್ಲ.

ಗುಡ್ಡದ ಬುಡಕ್ಕೆ ಕೊಡಲಿಪೆಟ್ಟು ನೀಡಲು ಬಿಡುತ್ತಿರಲಿಲ್ಲ.ರಸ್ತೆ ವಿಸ್ತರಣೆ ಮಾಡುವಾಗ ಬಡವರಿಗೆ ನಿಜವಾದ ತೊಂದರೆಯಾಗಿದೆ. ರಸ್ತೆಗಾಗಿ ಇದ್ದ ಅಂಗೈಅಗಲ ಭೂಮಿ ಕಳೆದುಕೊಂಡಿರುವ 12 ಕುಟುಂಬಗಳಿವೆ. ಸಂತ್ರಸ್ತರಿಗೆ ಇಂದಿಗೂ ಪರ್ಯಾಯ ವ್ಯವಸ್ಥೆ ಮಾಡಿಕೊಡಲು ಜಿಲ್ಲಾಡಳಿತ ಮನಸು ಮಾಡಿಲ್ಲ. ಅಜ್ಜ, ಮುತ್ತಜ್ಜ, ಅಪ್ಪ, ತಾನು, ತನ್ನ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಆಡಿ ಬೆಳೆದ ಅಂಗಳವನ್ನು ಎಲ್ಲಿಂದಲೋ ಬರುವವರ ವೇಗದ ಸವಾರಿಗೆ ರಸ್ತೆ ಮಾಡಿಕೊಡಲು ಕಳೆದುಕೊಂಡಿದ್ದೇವೆ' ಎಂದರು ಸಂತ್ರಸ್ತರೊಬ್ಬರು.

ಹೀಗೆ ಬನ್ನಿ
ಚಿಕ್ಕಮಗಳೂರು ಜಿಲ್ಲೆಯ ಗಡಿ ಗ್ರಾಮವೇ ಹಿರೆಕೊಡಿಗೆ. ಕೊಪ್ಪ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳ ನಡುವಿನ ಪುಟ್ಟ ಗ್ರಾಮವಿದು. ಕುಪ್ಪಳಿಯಿಂದಲೂ ಮತ್ತು ಕೊಪ್ಪದಿಂದಲೂ 9 ಕಿ.ಮೀ. ಅಂತರ. ಕೊಪ್ಪ-ತೀರ್ಥಹಳ್ಳಿ ಮುಖ್ಯರಸ್ತೆಯಿಂದ ಒಳಹಾದಿಯಲ್ಲಿ ಕೇವಲ 2 ಕಿ.ಮೀ. ಸಾಗಿದರೆ ಮಹಾಕವಿ ಜನ್ಮ ಸ್ಥಳ ಸಿಗುತ್ತದೆ. ಅದೇ ಮಾರ್ಗದಲ್ಲಿ ಸೂರ್ಯನಿಗೂ ನಿರ್ಮಿಸಿರುವ ಅಪರೂಪದ ಸೂರ್ಯದೇವಾಲಯ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.