ನಮ್ಮ ಮಗಳು ಸುಪ್ರಿಯಾ ಮಹಾರಾಷ್ಟ್ರದ ಪುಣೆಯಲ್ಲಿದ್ದಾಳೆ. ಅವಳನ್ನು ಭೇಟಿಯಾಗಲು ಅಲ್ಲಿಗೆ ಹೋಗಿದ್ದೆ. ಒಂದು ದಿನ ಇದ್ದು ಮರುದಿನ ಬರಬೇಕೆಂದುಕೊಂಡಿದ್ದೆ. ಅವರ ಮನೆಯವರೆಲ್ಲ ಇನ್ನಷ್ಟು ದಿನ ಇದ್ದು ಹೋಗಲು ಒತ್ತಾಯಿಸಿದರು. ಇರಲೂ ಆಗದೇ, ಹೊರಡಲೂ ಆಗದೇ ಒದ್ದಾಡುತ್ತಿದ್ದೆ.

‘ನಾಳೆ ಗುರುವಾರ. ನಮಗೆ ರಜೆ ಇದೆ. ಒಂದಿಷ್ಟು ತಿರುಗಾಡಿಕೊಂಡು ಬರೋಣ’ ಎಂದು ಸಂಬಂಧಿ ಸುನೀಲ ಹೇಳಿದ. ನಾನು ಒಪ್ಪಿಕೊಂಡೆ.

ಮರುದಿನ ನಮ್ಮ ಪ್ರಯಾಣ ಸುನೀಲ್ ಬೈಕ್ ಮೇಲೆ ಆರಂಭವಾಯಿತು. ಮೊದಲು ಪುಣೆಯಲ್ಲಿರುವ ಶಿರಡಿ ಮಾದರಿಯ ಸಾಯಿಬಾಬಾ ಮಂದಿರ ನೋಡಿದೆವು. ಅಲ್ಲಿಂದ ನಮ್ಮ ಪ್ರಯಾಣ ಆಳಂದಿಗೆ ಹೊರಟಿತು. ಅಲ್ಲಿ ಏನಿದೆ ಎಂದು ನನಗೆ ಗೊತ್ತಿರಲಿಲ್ಲ. ನನ್ನನ್ನು ಅಲ್ಲಿಗೆ ಕರೆದುಕೊಂಡು ಹೊರಟ ಸುನೀಲನೂ ನನಗೆ ಏನೂ ಹೇಳಿರಲಿಲ್ಲ.

ಪುಣೆಯಿಂದ ಆಳಂದಿ ಸುಮಾರು 30 ಕಿಲೋ ಮೀಟರ್ ದೂರದಲ್ಲಿದೆ. ಅಲ್ಲಿಗೆ ಹೋಗಲು ಸಾಕಷ್ಟು ಬಸ್ಸುಗಳೂ ಇವೆಯಂತೆ. ಆಳಂದಿ ಸುಮಾರು 30 ಸಾವಿರ ಜನಸಂಖ್ಯೆಯುಳ್ಳ ಸಣ್ಣ ಊರು. ಊರು ಸಣ್ಣದಾದರೇನು, ಅದೊಂದು ದೊಡ್ಡ ಪ್ರವಾಸಿತಾಣ ಎಂಬುದು ಅಲ್ಲಿಗೆ ಹೋದ ಮೇಲೆಯೇ ಗೊತ್ತಾಯಿತು. ಪ್ರತಿ ವರ್ಷ ಲಕ್ಷ ಲಕ್ಷ ಜನ ಆಳಂದಿಗೆ ಬರುತ್ತಾರೆ. ಮಹಾರಾಷ್ಟ್ರ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಆಳಂದಿಯೂ ಒಂದು.

13ನೇ ಶತಮಾನದಲ್ಲಿ ಆಗಿ ಹೋದ, ವಾರಕರಿ ಸಂಪ್ರದಾಯದ ಬಹು ದೊಡ್ಡ ಸಂತ ಜ್ಞಾನೇಶ್ವರ. ಆತ ಜನಿಸಿದ್ದು ಹಾಗೂ ಸಜೀವವಾಗಿ ಸಮಾಧಿ ಹೊಂದಿದ್ದು ಆಳಂದಿಯಲ್ಲಿಯೇ. 1275ರಲ್ಲಿ ಹುಟ್ಟಿದ ಆತ 1296ರಲ್ಲಿ ಸಮಾಧಿಸ್ತನಾದ. ಆತ ಬದುಕಿದ್ದು ಕೇವಲ 21 ವರ್ಷ ಮಾತ್ರ. ಹೀಗೆ ಹೇಳಿದರೆ ಆತನ ಭಕ್ತರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಆತ ಈಗಲೂ ಬದುಕಿದ್ದಾನೆ ಎಂದು ಅವರು ನಂಬಿದ್ದಾರೆ. ಭಗವದ್ಗೀತೆಯ ಮೇಲೆ ಆತ ಬರೆದ ಮರಾಠಿ ಭಾಷ್ಯ ‘ಜ್ಞಾನೇಶ್ವರಿ’ ಎಂದೇ ಪ್ರಖ್ಯಾತವಾಗಿದೆ. ಅದು ಈಗ ಕನ್ನಡವನ್ನೊಳಗೊಂಡು ಹಲವು ಭಾಷೆಗೆ ಅನುವಾದಗೊಂಡಿದೆ.

ಸಂತ ಜ್ಞಾನೇಶ್ವರ ಸಮಾಧಿ ಹೊಂದಿದ ಸ್ಥಾನದಲ್ಲಿ ಒಂದು ಸುಂದರವಾದ ಹಾಗೂ ಕಲಾತ್ಮಕವಾದ ಮಂದಿರ ನಿರ್ಮಾಣವಾಗಿದೆ. ಅದರೊಂದಿಗೆ ಹಲವು ಮಂದಿರಗಳ ಸಮುಚ್ಚಯವೇ ಇದೆ. ಶ್ರೀಸಿದ್ಧೇಶ್ವರ ಮಂದಿರವೆಂದು ಕರೆಯುವ ಒಂದು ಶಿವನ ಗುಡಿ ಇದೆ. ವಿಠಲ-ರುಕ್ಮಾಯಿಗಳ ಗುಡಿ, ಪುಂಡಲೀಕನ ಗುಡಿ, ಲಕ್ಷ್ಮೀ ನಾರಾಯಣನ ದೇವಾಲಯಗಳಿವೆ. ಈ ಗುಡಿಗಳ ಜೊತೆಗೆ ಅಲ್ಲೊಂದು ಗೋಡೆ ಇದೆ. ಜ್ಞಾನೇಶ್ವರ ಆ ಗೋಡೆಯ ಮೇಲೆ ಕುಳಿತು ಮುಂದೆ ನಡೆ ಎಂದು ಆದೇಶಿಸಿದನಂತೆ. ಆ ಆದೇಶವನ್ನು ಪಾಲಿಸಿದ ಗೋಡೆ ಆತನನ್ನು ಹೊತ್ತು ಸಾಗಿತಂತೆ. ಜ್ಞಾನೇಶ್ವರ ಒಮ್ಮೆ ಕೋಣದ ಬಾಯಿಂದ ವೇದವನ್ನು ಹೇಳಿಸಿದ್ದನಂತೆ. ಜ್ಞಾನೇಶ್ವರ, ಚಾಂಗದೇವ, ನಾಮದೇವ ಮುಂತಾದವರ ಕುರಿತು ಇಂಥ ಪವಾಡಗಳು ಅಲ್ಲಿ ಜನಜನಿತವಾಗಿವೆ.

ಈ ಮಂದಿರಗಳ ಸಮುಚ್ಛಯದ ಪಕ್ಕದಲ್ಲಿಯೇ ಇಂದ್ರಾಯಣಿ ಎಂಬ ಜೀವನದಿ ಹರಿಯುತ್ತದೆ. ಅದರಿಂದಾಗಿಯೇ ಈ ಸ್ಥಾನದ ವೈಭವ ಹಾಗು ಪಾವಿತ್ರತೆ ಹೆಚ್ಚಿದೆ. ವಾರಕರಿ ಸಂಪ್ರದಾಯದವರಿಗೆ ಆಳಂದಿ ಒಂದು ತೀರ್ಥ ಕ್ಷೇತ್ರ. ಪ್ರತಿ ತಿಂಗಳು ಏಕಾದಶಿಯ ದಿನ ಅಲ್ಲೊಂದು ಜಾತ್ರೆಯೇ ಸೇರುತ್ತದೆ. ಅದರಲ್ಲೂ ಆಷಾಡ ಹಾಗೂ ಕಾರ್ತಿಕ ಮಾಸದ ಏಕಾದಶಿಗಳೆಂದರೆ ವಾರಕರಿ ಸಂಪ್ರದಾಯದವರಿಗೆ ವಿಶೇಷ ದಿನಗಳು. ಆ ಎರಡೂ ದಿನ ಭಕ್ತಿಯ ಸಾಗರವೇ ಅಲ್ಲಿ ಸಮಾವಿಷ್ಟಗೊಳ್ಳುತ್ತದೆ.

ಪಂಡರಾಪುರದ ವಿಠಲನೇ ವಾರಕರಿ ಸಂಪ್ರದಾಯದ ಆರಾಧ್ಯ ದೈವ. ಆಷಾಡ ಏಕಾದಶಿಯಂದು ಪಂಡರಪುರ ತಲುಪಲು ಆಳಂದಿ
ಯಿಂದ ಪಾದಯಾತ್ರೆಯೊಂದು ಹೊರಡುತ್ತದೆ. ಸುಮಾರು 150 ಕಿಲೋ ಮೀಟರ್ ಯಾತ್ರೆಗೆ 22 ದಿನ ಬೇಕಾಗುತ್ತದೆ. ಜನ ಸಾಮೂಹಿಕವಾಗಿ ಹಾಡುತ್ತ, ಕುಣಿಯುತ್ತ, ಘೋಷಣೆಗಳನ್ನು ಕೂಗುತ್ತ ಪಂಡರಾಪುರಕ್ಕೆ ಹೊರಡುತ್ತಾರೆ. ಜೊತೆಗೆ ಒಂದು ಪಲ್ಲಕ್ಕಿಯೂ ಇರುತ್ತದೆ. ಅದರಲ್ಲಿ ಜ್ಞಾನೇಶ್ವರನ ಪಾದುಕೆಗಳು ಇರುತ್ತವೆ. ಈ ವಾರಕರಿ ಪಾದಯಾತ್ರಾ ಸಂಪ್ರದಾಯಕ್ಕೆ ಒಂದು ಸಾವಿರ ವರ್ಷದ ಪರಂಪರೆ ಇದೆಯಂತೆ.

ಭಕ್ತರಲ್ಲದವರಿಗೂ ಆಳಂದಿ ಮುದ ನೀಡುವ ಒಂದು ಸುಂದರ ತಾಣ. ಅಲ್ಲಿನ ಪ್ರಶಾಂತ ವಾತಾವರಣ, ಕಲಾತ್ಮಕ ವಿನ್ಯಾಸದ ಕಟ್ಟಡಗಳು, ಸುತ್ತಮುತ್ತ ಇರುವ ಬೆಟ್ಟಗಳು, ಅಷ್ಟು ಸ್ವಚ್ಚವಲ್ಲದಿದ್ದರೂ, ನಿಧಾನವಾಗಿ ಹರಿಯುವ ನೀರಿನ ಹರಿವು... ಮನಸ್ಸಿಗೆ ಅಹ್ಲಾದ ನೀಡುತ್ತವೆ.

ಸೋಲಾಪುರ-ಪುಣೆ ಮಧ್ಯ ಓಡಾಡುವ ಇಂಟರ್‌ಸಿಟಿ ರೈಲಿಗೆ ಈ ನದಿಯ ಹೆಸರನ್ನು ಇಟ್ಟಿರುವುದು ಅತ್ಯಂತ ಸೂಕ್ತ. ಇಂದ್ರಾಯಣಿ ಎಕ್ಸಪ್ರೆಸ್ ರೈಲಿನ ಮೂಲಕವೇ ನಾನು ಪುಣೆಗೆ ಬಂದದ್ದು. ಆ ರೈಲಿನಲ್ಲಿ ಎಷ್ಟು ಗದ್ದಲವಿರುತ್ತದೋ ಅಷ್ಟೇ ಗದ್ದಲ ಆಳಂದಿಯಲ್ಲೂ ಇರುತ್ತದೆ. ನದಿ ಹಾಗೂ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಅಲ್ಲಿನ ಮಹಾನಗರಪಾಲಿಕೆ ಗಮನ ಹರಿಸಿದರೆ ಆಳಂದಿ ಇನ್ನಷ್ಟು ಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆಯಬಹುದು.

ಚಿತ್ರ : ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.