ಹಿಮಾಲಯದ ಹಳ್ಳಿಗಳ ಸುಂದರ ನೋಟ, ಬೆಟ್ಟಗಳಿಂದ ಇಳಿದು ಬರುವ ಝರಿಗಳ ಒಡನಾಟ, ಎತ್ತರದ ಮರಗಳ ತಂಪಿನ ನೆರಳಿನ, ಹದವಾದ ಏರಿಳಿತದ ದಾರಿ..

ಇವೆಲ್ಲ ಒಂದೇ ದಿನದ ಸಣ್ಣ ಚಾರಣದಲ್ಲೇ ಲಭಿಸುವ ಹಲವು ತಾಣಗಳಿರುವುದು ಉತ್ತರಾಖಂಡ ರಾಜ್ಯದಲ್ಲಿ. ಅವುಗಳಲ್ಲೊಂದು ಅನಸೂಯಾದೇವಿ ಹಳ್ಳಿಯ ನಡಿಗೆ.

ದತ್ತಾತ್ರೇಯ ಮುನಿಯ ಜನ್ಮಸ್ಥಾನವೆನ್ನಲಾಗುವ ಈ ಹಳ್ಳಿಯ ಮಾತಾ ಅನಸೂಯಾದೇವಿ ಮಂದಿರ ಸ್ಥಳೀಯವಾಗಿ ಸುಪ್ರಸಿದ್ಧ. ಇದರಿಂದಾಗಿ ಈ ಪುಟ್ಟ ಹಳ್ಳಿಗೂ ಅನಸೂಯಾದೇವಿ ಎಂದೇ ಹೆಸರು.

ಹರಿದ್ವಾರದಿಂದ ಬದರಿಗೆ ಹೋಗುವ ಹಾದಿಯಲ್ಲಿ ಚಮೋಲಿ ಪಟ್ಟಣವಿದೆ. ಅಲ್ಲಿಂದ ಗೋಪೇಶ್ವರ–ಚೋಪ್ಟಾ ಮಾರ್ಗದಲ್ಲಿ ಮಂಡಲ್ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಅನುಸೂಯಾದೇವಿ ಹಳ್ಳಿ ನಾಲ್ಕು ಕಿ.ಮೀ ದಾರಿ. ವಿಶೇಷವೆಂದರೆ, ಅಷ್ಟು ದೂರ ನಡೆದೇ ಹೋಗಬೇಕು.

ಚಾರಣ ಆರಂಭ

ಮಂಡಲ್ನ ರಸ್ತೆ ಬದಿಯ ಸರಳವಾದ ಸಿಮೆಂಟಿನ ಸ್ವಾಗತ ದ್ವಾರದ ಮೂಲಕವೇ ಚಾರಣದ ಆರಂಭ. ಅಗಲ ಕಿರಿದಾದ ಕಾಂಕ್ರಿಟಿನ ದಾರಿಯಲ್ಲಿ ಸಾಗುತ್ತಿದ್ದರೆ ಹಿಮಾಲಯದ ತಪ್ಪಲಿನ ಹಳ್ಳಿಗಳ ಬದುಕು ಹತ್ತಿರದಿಂದ ಕಾಣುತ್ತೇವೆ. ಹೊಲ, ತರಕಾರಿ ತೋಟ, ಮನೆಗಳು, ಹಟ್ಟಿಗಳು ಇವನ್ನೆಲ್ಲ ನೋಡುತ್ತಾ ನಡೆಯುತ್ತಿದ್ದಂತೆ ದಾರಿ ಸದ್ದಿಲ್ಲದೆ ಕಾಡಿಗೆ ನುಗ್ಗುತ್ತದೆ. ಎತ್ತರದ ಪರ್ವತಗಳಲ್ಲೆಲ್ಲೋ ಹುಟ್ಟಿ ಇಳಿದು ಬರುವ ಅಮೃತಗಂಗಾ ನದಿಯನ್ನು ಎಡಕ್ಕೆ ಇಟ್ಟುಕೊಂಡು ಸಾಗುವ ಈ ದಾರಿಯಲ್ಲಿನ ದಟ್ಟ ಕಾಡಿನ ತಣ್ಣಗಿನ ನೆರಳು, ಆಗಾಗ ಬೀಸುವ ತಂಗಾಳಿ ನಡಿಗೆಯ ಆಯಾಸ ಮರೆಸುತ್ತದೆ. ಬಲಭಾಗದ ಗುಡ್ಡದಿಂದ ಆಗೊಮ್ಮೆ ಈಗೊಮ್ಮೆ ಕುಣಿಯುತ್ತಾ ಬರುವ ಪುಟ್ಟ ತೊರೆಗಳು, ಅಮೃತಗಂಗೆಯನ್ನು ಸೇರುವ ಭರದಲ್ಲಿ ನಮ್ಮ ದಾರಿಯನ್ನು ಹಾದು ಹೋಗುತ್ತವೆ. ಯಾವುದೇ ಭಯವಿಲ್ಲದೆ ಈ ನೀರನ್ನೊಮ್ಮೆ ಕುಡಿದು ನೋಡಿ. ಬ್ರಾಂಡೆಡ್ ಮಿನಿರಲ್ ವಾಟರ್ಗಿಂತ ಶುದ್ಧ, ರುಚಿಕರ ಮತ್ತು ಆರೋಗ್ಯಕರ.

ಅಲ್ಲಿಂದ ಸಣ್ಣದೊಂದು ಸೇತುವೆಯ ಮೂಲಕ ಸಾಗಿ ನದಿಯನ್ನು ಬಲಕ್ಕೆ ಕಣಿವೆಯೊಳಗೇ ಬಿಟ್ಟು ದಾರಿ ಬೆಟ್ಟವೇರುತ್ತದೆ. ದಾರಿ ಬದಿಯ ನೀರಿನ ಒರತೆಯೊಂದರ ಬಳಿ ಪುರಾತನ ಶಿಲಾ ಲೇಖನವೊಂದು ಸಿಕ್ಕಿದರೆ ನೀವು ಇನ್ನೇನು ಹಳ್ಳಿ ತಲುಪಿರುತ್ತೀರಿ. ಮುಂದೆ ನಡೆಯುತ್ತಾ ದಾರಿಯ ಎಡದಲ್ಲಿ ಸಣ್ಣದೊಂದು ವಿಘ್ನನಾಶಕ ಗಣೇಶನ ಗುಡಿ ಸಿಕ್ಕಿದರೆ ನೀವು ಅನಸೂಯಾದೇವಿ ಹಳ್ಳಿಯ ಬಾಗಿಲಲ್ಲಿದ್ದೀರಿ ಎಂದರ್ಥ. ಸ್ವಲ್ಪ ದೊಡ್ಡದಾದ, ಸರಳವಾದ ಆದರೆ ಅಂದವಾದ ಸಿಂಧೂರ ವರ್ಣದ ಗಣೇಶನ ಶಿಲಾವಿಗ್ರಹ, ಸಿಮೆಂಟಿನ ಸೂರು, ಚಂದದ ನೆಲ, ಸುತ್ತಲೂ ಕಟ್ಟೆ, ಇದಿಷ್ಟೇ ಗಣೇಶನ ಗುಡಿ. ಮುಂದೆ ಹೆಜ್ಜೆ ಹಾಕಿದರೆ, ಅನಸೂಯಾದೇವಿ ಎಂಬ ಪುಟ್ಟ ಹಳ್ಳಿಯ ಹೊಲಗದ್ದೆಗಳು, ಕೆಲವೇ ಕೆಲವು ಮನೆಗಳ ನಡುವೆ ಇರುವ ದೇವಿ ಮಂದಿರವೂ ಕಾಣ ಸಿಗುತ್ತದೆ.

ದೇಗುಲಗಳ ಸಂಕೀರ್ಣ

ತೀರ ಹಳೆಯ, ಹಿಮಾಲಯನ್ ಶೈಲಿಯಲ್ಲಿ ರುವ ಶಿಲಾದೇಗುಲಕ್ಕೆ, ಬಳಿಕ ಸಿಮೆಂಟಿನ ಕಟ್ಟಡವನ್ನು ಹೊಂದಿಸಿಕೊಂಡಂತೆ ಕಾಣುತ್ತದೆ. ಗುಡಿಯ ಒಳಗೆ ಉತ್ತರ ಭಾರತೀಯ ಶೈಲಿಯ ಅಲಂಕಾರಗಳುಳ್ಳ ದೇವಿಯ ಮೂರ್ತಿ ಇದೆ. ಹೊರಗಡೆ, ಪಂಚ ಪಾಂಡವರು, ಕ್ಷೇತ್ರಪಾಲ, ಆಂಜನೇಯ, ಶಿವಪಾರ್ವತಿ ಇತ್ಯಾದಿ ದೇವರ ವಿಗ್ರಹಗಳಿವೆ. ಮೂರು ಶಿಶುಗಳ ರೂಪದಲ್ಲಿರುವ ಬ್ರಹ್ಮ, ವಿಷ್ಣು, ಮಹೇಶ್ವರರ ಮೂರ್ತಿಗಳೂ ಇವೆ. ಬ್ರಹ್ಮ, ವಿಷ್ಣು, ಮಹೇಶ್ವರರನ್ನೇ ಶಿಶುಗಳನ್ನಾಗಿ ಪಡೆದು ಲಾಲಿಸಿದ ಅನಸೂಯಾದೇವಿ ನೆಲೆಸಿರುವ ಈ ತಾಣದಲ್ಲಿ ಪ್ರಾರ್ಥಿಸಿ ಒಂದು ದಿನ ಉಳಿದುಕೊಂಡರೆ ಸಂತಾನಪ್ರಾಪ್ತಿ ಯಾಗುತ್ತದೆ ಎನ್ನುವ ನಂಬಿಕೆ ಇಲ್ಲಿಯ ಜನರಲ್ಲಿದೆ. ಮಂದಿರದ ಸುತ್ತಮುತ್ತಲ್ಲೆಲ್ಲಾ ಕಟ್ಟಿಬಿಟ್ಟಿರುವ, ಹರಕೆಯ ರೂಪದಲ್ಲಿ ಬಂದ ಗಂಟೆಗಳು ಗಮನ ಸೆಳೆಯುತ್ತವೆ.

ಮಂದಿರದ ಹಿಂಭಾಗದಲ್ಲಿರುವ, ಭಾಗಶಃ ಭಗ್ನಗೊಂಡಿರುವ ಶಿವಪಾರ್ವತಿಯರ ಸುಂದರ ಶಿಲಾಮೂರ್ತಿ ವಿಶೇಷವಾಗಿ ಗಮನ ಸೆಳೆಯುತ್ತದೆ. ನಾಜೂಕಾದ ಕೆತ್ತನೆಗಳುಳ್ಳ ಈ ಸುಂದರ ಶಿಲಾಮೂರ್ತಿಯನ್ನು ಯಾರು ಯಾಕಾಗಿ ಭಗ್ನಗೊಳಿಸಿದರೋ ಗೊತ್ತಿಲ್ಲ. ಇದಲ್ಲದೆ ಮಂದಿರ ಸುತ್ತಿನಲ್ಲಿ ಇನ್ನೂ ಹಲವಾರು ಭಗ್ನ ಶಿಲ್ಪಗಳನ್ನು ಜೋಡಿಸಿಡಲಾಗಿದೆ. ಮಂದಿರದ ಹಿಂದಿರುವ, ಪುರಾತನ ಎನ್ನಲಾದ ಬೃಹತ್ ದೇವದಾರು ವೃಕ್ಷವೊಂದು ವಿಶೇಷ ಗಮನ ಸೆಳೆಯುತ್ತದೆ.

ದೇವಳದ ಹಿಂಭಾಗದಲ್ಲಿ, ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿ ದತ್ತಾತ್ರೇಯ ಮುನಿಯ ಸಣ್ಣ ಗುಡಿಯೊಂದಿದೆ. ಲಿಂಗರೂಪಿ ದತ್ತಾತ್ರೇಯ ಹಾಗೂ ಹಸುವನ್ನು ಒರಗಿ ನಿಂತಿರುವ ದತ್ತಾತ್ರೇಯ ಮುನಿಯ ಬಿಂಬವನ್ನು ಇಲ್ಲಿ ಪೂಜಿಸುತ್ತಾರೆ.

ಒಟ್ಟಿನಲ್ಲಿ ಇದೊಂದು ಪುಟ್ಟ, ಸುಂದರ, ಜನವಿರಳ ತಾಣ. ಡಿಸೆಂಬರ್ ತಿಂಗಳಲ್ಲಿ ಇಲ್ಲೊಂದು ಜಾತ್ರೆ ನಡೆಯುತ್ತದೆ. ಆಗ ಸುತ್ತಮುತ್ತಲ ಹಳ್ಳಿಗಳ ಜನರೆಲ್ಲ ಇಲ್ಲಿ ಸೇರುತ್ತಾರೆ.

ಅತ್ರಿ ಮುನಿ ಗುಹೆ

ಅನಸೂಯಾದೇವಿ ಹಳ್ಳಿಯಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಅನಸೂಯೆಯ ಪತಿ ಅತ್ರಿ ಮುನಿಯ ಗುಹೆಯಿದೆ. ಮೊದಲು ಸಮತಟ್ಟಾಗಿಯೇ ಸಾಗುವ ಕಾಡಿನ ನಡುವಿನ ಈ ದಾರಿ ನಂತರ ನೇರವಾಗಿ ಕಣಿವೆಗೆ ಇಳಿದು ನದಿಯ ಬದಿ ನಿಲ್ಲುತ್ತದೆ. ಮರದ ದಿಮ್ಮಿಗಳ ಮೂಲಕ ಇದನ್ನು ದಾಟಿ, ಮತ್ತೆ ಜಲಪಾತವೊಂದರ ಬಳಿಯಿಂದ ಹೋದರೆ ಅತ್ರಿಮುನಿ ಗುಹೆ ಸಿಗುತ್ತದೆ. ಇದು ಸುಂದರವಾದ ತಾಣವಾದರೂ ಮಳೆಗಾಲದಲ್ಲಿ ಕೊಂಚ ಅಪಾಯಕಾರಿಯೂ ಹೌದು.

ಹೀಗೆ ಊರೆಲ್ಲ ತಿರುಗಾಡಿ ಮತ್ತದೇ ಸುಂದರ ದಾರಿಯಲ್ಲಿ ನಡೆದು ಮಂಡಲ್ ಸೇರಿದರೂ ಆ ಊರು, ಅಲ್ಲಿನ ಕನಸಿನ ಲೋಕದಂಥ ಅಂದದ ದಾರಿ ಮನಸಲ್ಲೇ ಉಳಿದುಬಿಡುತ್ತದೆ.

ಹೋಗುವುದು ಹೇಗೆ ?

ಬದರೀನಾಥಕ್ಕೆ ಹೋಗುವ ಪ್ರವಾಸಿಗರು ತಮ್ಮ ನೋಡಬಹುದಾದ ಸ್ಥಳಗಳ ಪಟ್ಟಿಯಲ್ಲಿ ಈ ತಾಣವನ್ನು ಸೇರಿಸಿಕೊಳ್ಳಬಹುದು. ದೆಹಲಿಯ ಐ.ಯಸ್.ಬಿ.ಟಿ (ಇಂಟರ್ಸ್ಟೇಟ್ ಬಸ್ ಟರ್ಮಿನಲ್)ನಿಂದ ಹರಿದ್ವಾರಕ್ಕೆ ಸಾಕಷ್ಟು ಬಸ್ಸುಗಳಿವೆ. ಡೆಹ್ರಾಡೂನ್ ಕಡೆ ಹೋಗುವ ರೈಲುಗಳಲ್ಲೂ ಹೋಗಿ ಹರಿದ್ವಾರದಲ್ಲಿ ಇಳಿಯಬಹುದು. ಹರಿದ್ವಾರದಿಂದ ಋಷಿಕೇಶ್, ಶ್ರೀನಗರ್, ರುದ್ರಪ್ರಯಾಗ್ ಮಾರ್ಗವಾಗಿ ಬದರೀನಾಥಕ್ಕೆ ಹೋಗುವ ದಾರಿಯಲ್ಲಿ ಚಮೋಲಿ ಸಿಗುತ್ತದೆ. ಅಲ್ಲಿಂದ ದಾರಿ ಬದಲಿಸಿ ಗೋಪೇಶ್ವರ, ಸಗರ್ ಮಾರ್ಗವಾಗಿ ಮಂಡಲ್ ತಲುಪಬಹುದು. ಚಮೋಲಿ-ಮಂಡಲ್ ನಡುವೆ 25 ಕಿ.ಮೀ ಅಂತರ. ಮಂಡಲ್ನಲ್ಲಿ ಸರಳ ವಸತಿ ವ್ಯವಸ್ಥೆ ಇದೆ. ಊಟ –ಉಪಹಾರಕ್ಕೂ ತೊಂದರೆಯಿಲ್ಲ. ಸಗರ್ನಲ್ಲಿ ಉತ್ತಮ ಊಟ -ವಸತಿ ಲಭ್ಯ. ಗೋಪೇಶ್ವರ ಒಂದು ಸಣ್ಣಪಟ್ಟಣ. ಇಲ್ಲಿ ಊಟ, ವಸತಿ ಜತೆಗೆ, ಸಣ್ಣ ಪುಟ್ಟ ಅಂಗಡಿಗಳೂ ಇವೆ. ಆಸ್ಪತ್ರೆ, ಪೆಟ್ರೋಲ್ ಪಂಪ್ ಕೂಡಾ ಇವೆ.

ನಡಿಗೆ ಅನಿವಾರ್ಯ, ಸುಲಭ

ಮಂಡಲ್ ನಿಂದ ಅನುಸೂಯಾದೇವಿ ಹಳ್ಳಿವರೆಗಿನ 4 ಕಿ.ಮೀ ನಡಿಗೆ ಅನಿವಾರ್ಯ. ಕುದುರೆ, ಕಚ್ಛರ್, ಡೋಲಿಗಳ ಸೌಲಭ್ಯವಿಲ್ಲ. ಆದರೆ ಇದೇನು ಅಂಥ ಕಠಿಣವಾದ ದಾರಿಲ್ಲ. ಎತ್ತರ ಪ್ರದೇಶದಲ್ಲಿನ ಉಸಿರಾಟದ ತೊಂದರೆ ಇರುವವರನ್ನು ಬಿಟ್ಟರೆ, ಉಳಿದಂತೆ ಇಳಿವಯಸ್ಸಿನವರೂ ಸಾವಕಾಶವಾಗಿ ನಡೆದು ಹೋಗಬಹುದು. ದಾರಿಯ ಸೊಬಗನ್ನು. ಆಸ್ವಾದಿಸುತ್ತಾ ನಡೆದರೆ ಆಯಾಸವೂ ಗೊತ್ತಾಗದು.

ಆಹಾರ ಜತೆಗಿರಲಿ

ಮಂಡಲ್ನಿಂದ ಅನಸೂಯಾದೇವಿಯವರೆಗಿನ 4 ಕಿಮೀ ಹಾದಿಯಲ್ಲಿ ಒಂದೆಡೆ ಚಹಾ, ನ್ಯೂಡಲ್, ಕುರುಕಲು ತಿಂಡಿಗಳು ಸಿಗುವ ಸಣ್ಣ ಟೀ ಅಂಗಡಿ ಇದೆ. ಆದರೂ ದಾರಿ ಖರ್ಚಿಗಾಗಿ ಒಂದಷ್ಟು ಬಿಸ್ಕೇಟು, ಒಣಹಣ್ಣುಗಳನ್ನು ನಮ್ಮ ಜೊತೆಗೊಯ್ಯುವುದು ಒಳ್ಳೆಯದು. ದಾರಿಯುದ್ದಕ್ಕೂ ಅಲ್ಲಲ್ಲಿ ಸಿಗುವ ಝರಿಗಳ ನೀರನ್ನು ಬಾಟಲಿಗಳಿಗೆ ತುಂಬಿಸಿಕೊಳ್ಳಬಹುದು. ಅನಸೂಯಾದೇವಿಯಲ್ಲಿ ದೇವಸ್ಥಾನದ ಅರ್ಚಕರ ಮನೆಯಲ್ಲೇ, ಅನ್ನ, ದಾಲ್, ಪಲ್ಯಗಳ ಸರಳ ಊಟ ಲಭ್ಯ. ಅದು ಬಿಟ್ಟರೆ ಇಲ್ಲೇನೂ ಸಿಗದು.

ಈ ನಡಿಗೆಯುದ್ದಕ್ಕೂ ಹಿಮಾಲಯ ಪ್ರದೇಶದ ಗ್ರಾಮೀಣ ಬದುಕಿನ ಚಂದದ ನೋಟ ಕಾಣಸಿಗುತ್ತದೆ. ಈಗೀಗಿನ ಕಾಂಕ್ರಿಟ್ ಮನೆಗಳ ನಡುವೆ ಇನ್ನೂ ಇರುವ ಹಳೆಯ ಮನೆಗಳು, ಫಸಲು ತುಂಬಿರುವ ಹೊಲಗಳು, ತರಕಾರಿ ತೋಟಗಳು, ಅವುಗಳ ನಡುವೆ ಹಾದು ಹೋಗುವ ಸಣ್ಣ ಪುಟ್ಟ ತೊರೆಗಳು, ಖುಷಿ ಕೊಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.