ಬಾವಿಕೊಂಡ ಕಲ್ಚುಕ್ಕಿ ಬೆಟ್ಟ - ಪಶ್ಚಿಮಘಟ್ಟ ಪ್ರದೇಶದ ಗಿರಿ ಸರಣಿಯಲ್ಲಿರುವ ತಾಣ. ಕುದುರೆಮುಖ ಶಿಖರಾಗ್ರದ ಸರಹದ್ದಿನಲ್ಲಿ ಕಂಡುಬರುವ ಎತ್ತರದ ಬೆಟ್ಟಗಳಲ್ಲೊಂದು. ಈ ಸುತ್ತಮುತ್ತಲ ಸ್ಥಳೀಕರಿಗೆ ಇದರ ಹೆಸರು ಚಿರಪರಿಚಿತ. ಆದರೆ ಹೊರಜಗತ್ತಿಗೆ ಮಾತ್ರ ಅಷ್ಟಾಗಿ ಪರಿಚಯವಿಲ್ಲ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಿಂದ ಮಲ್ಲೇಶ್ವರದತ್ತ ರಾಜ್ಯ ಹೆದ್ದಾರಿಯಲ್ಲಿ ಪಯಣ ಬೆಳೆಸಬೇಕು. ಆ ರಸ್ತೆಯಲ್ಲಿ ಕಳಸ ತಲುಪಿ ಸಂಸೆ ಮೂಲಕ 10 ಕಿಮೀ ಚಲಿಸಿದರೆ ಬಾಳಗಲ್ ಎಂಬ ಊರನ್ನು ಸೇರಬಹುದು. ಅಲ್ಲಿಂದ ಪುನಃ 6 ಕಿಮೀ ಅಂತರದ ಸವಕಲು ಡಾಂಬರು-ಮಣ್ಣಿನರಸ್ತೆಯಲ್ಲಿ ಸಾಗಿ ಮುಳ್ಳೋಡಿ ಸಿಗುತ್ತದೆ. ಈ ಮುಳ್ಳೋಡಿಯಿಂದಲೇ ಕಲ್ಚುಕ್ಕಿ ಬೆಟ್ಟಕ್ಕೆ ಚಾರಣ ಆರಂಭಿಸಬೇಕು. ಚಾರಣಕ್ಕೆ ಮಾರ್ಗದರ್ಶಕರ ಅಗತ್ಯವಿದೆ. ಮುಳ್ಳೋಡಿಯಿಂದ 1 ಕಿಮೀ ದಕ್ಷಿಣಾಭಿಮುಖವಾಗಿ ಚಾರಣ ಮಾಡಿ ಏರುಬೆಟ್ಟದ ಕಾಲು ದಾರಿಯನ್ನೇ ಅನುಸರಿಸಬೇಕು.

ದಾರಿಯುದ್ದಕ್ಕೂ ಅಷ್ಟೇನೂ ಎತ್ತರವಲ್ಲದ ಹಸಿರು ಹುಲ್ಲುಗಾವಲುಗಳು, ಕುಬ್ಜ ಗಿಡಗಳು, ಸಣ್ಣ-ಪುಟ್ಟ ಕಲ್ಲುಗಳ ನಡುವೆ, ಸ್ಪಷ್ಟವಾಗಿ ಕಾಣಿಸುವ ಅಂಕುಡೊಂಕಾದ ಕಾಲುಹಾದಿಯಲ್ಲಿ 3 ಕಿಮೀ ದೂರದ ಬೆಟ್ಟವನ್ನೇರುತ್ತಿದ್ದಂತೆ ಚಿಕ್ಕ ಕಾಡೊಂದು ಎದುರಾಗುತ್ತದೆ. ಸುಡು ಬಿಸಿಲಿಲ್ಲಿ ಬಂದವರು ಈ ತಂಪಾದ ಸ್ಥಳದಲ್ಲಿ ಕುಳಿತು ವಿರಮಿಸಿಕೊಳ್ಳಬಹುದು. ಮುಂದೆ ಕಚ್ಚಾರಸ್ತೆಯಲ್ಲೇ ಸಾಗಿದರೆ ಕಲ್ಚುಕ್ಕಿ ಬೆಟ್ಟದ ಅಂಚನ್ನು ತಲುಪುತ್ತೀರಿ.

ಕಿಬ್ಬಿಯಲ್ಲಿ(ಬೆಟ್ಟದ ತುದಿ) ಎರಡು ಬಂಡೆಗಳು ಎದ್ದು ನಿಂತಂತೆ ಕಾಣುತ್ತವೆ. ಇದರ ಮೇಲೆ ಕಲಾತ್ಮಕವಾದ ವರ್ಣಚಿತ್ರವನ್ನು ಚಿತ್ರಿಸಿದ್ದಾರೆ. ಇಲ್ಲಿ ಸಣ್ಣ ಮರವೊಂದರ ಕೆಳಗೆ ಕಟ್ಟೆಯಿದೆ. ಬೆಟ್ಟವೇರಿದವರು ಕಟ್ಟೆಯ ಮೇಲೆ ಆಸೀನರಾಗಿ ಪ್ರಕೃತಿಯನ್ನು ಆಸ್ವಾದಿಸಿಕೊಳ್ಳಬಹುದು. ಇಲ್ಲಿ ಸೂರ್ಯಾಸ್ತ ವೀಕ್ಷಣಾ ತಾಣ ಎಂಬ ಫಲಕವಿದೆ.

ಬೆಟ್ಟದ ನೆತ್ತಿಯಲ್ಲಿ ನಿಂತು ಕೆಳಗೆ ನೋಡಿದರೆ ಅಲ್ಲಿನ ದೃಶ್ಯಗಳು ಒಂಥರಾ ಹಸಿರು ಕ್ಯಾನ್ವಾಸ್ ಮೇಲೆ ಚಿತ್ತಾರ ಬಿಡಿಸಿದಂತೆ ಕಾಣಿಸುತ್ತವೆ. ಮನೆಗಳು, ಅಂಕುಡೊಂಕಾಗಿ ಸಾಗುವ ಮಣ್ಣಿನ ರಸ್ತೆ, ಹೊಲ, ಗದ್ದೆ, ತೋಟಗಳ ನಡುವಿನ ಕಾಲು ದಾರಿ, ಕಾಡು, ಕಣಿವೆ, ಹತ್ತಿರ-ದೂರದ ಗಿರಿಪಂಕ್ತಿಗಳು, ದೂರದಲ್ಲೊಂದೆಡೆ ಬಹುದೆತ್ತರದಿಂದ ಗೋಚರಿಸುವ ಕುದುರೆಮುಖ ಶಿಖರದ ಭವ್ಯನೋಟ – ಓಹ್.. ನಿಸರ್ಗ, ಹಬ್ಬದೂಟ ನೀಡಿ ಕಣ್ಮನ ತಣಿಸುತ್ತದೆ. ಈ ದೃಶ್ಯಗಳು ಕುವೆಂಪು ಅವರ ‘ದೇವರು ರುಜು ಮಾಡಿದನು’ ಕವಿತೆಯ ಸಾಲುಗಳನ್ನು ನೆನಪಿಸುತ್ತವೆ. ಕಿಬ್ಬಿಯ ಬಲಭಾಗದ ಅನತಿ ದೂರದಲ್ಲಿ ಲಾಳಾಕಾರದ ರೀತಿ ಬೆಟ್ಟವನ್ನು ಕೊರೆದಿದ್ದಾರೆ. ಆ ಬೆಟ್ಟದಲ್ಲಿ ಮೇಲಿನಿಂದ ಕೆಳ ಭಾಗದವರೆಗೂ ಹಂತಹಂತವಾಗಿ ಹೊಲಗಳಲ್ಲಿ ಉಳುಮೆ ಮಾಡಿರುವುದು ಒಂದು ವಿಶೇಷ ಚಿತ್ತಾರದಂತೆ ಕಾಣುತ್ತವೆ.

ಬಿಸಿಲು ಇಳಿಯುತ್ತಿದ್ದಂತೆ ವಾತಾವರಣ ತಂಪಾಗು ತ್ತದೆ. ಸೂರ್ಯ ಪಶ್ಚಿಮದಲ್ಲಿ ಮನೆಗೆ ಹೊರಡಲು ಅಣಿಯಾಗುತ್ತಿರುತ್ತಾನೆ. ಆಗ ಬೆಟ್ಟದ ತುದಿಯಲ್ಲಿ ನಿಂತು ಸೂರ್ಯಾಸ್ತದ ಹಂತಗಳನ್ನು ಸವಿಯಬಹುದು.

ಸೂರ್ಯಾಸ್ತ ನೋಡುತ್ತಿದ್ದಂತೆ, ನಿಧಾನವಾಗಿ ಕತ್ತಲು ಆವರಿಸುತ್ತದೆ. ಬಾನಿನಲ್ಲಿ ಸಪ್ತರ್ಷಿಮಂಡಲ, ಧ್ರುವ, ಅರುಂಧತಿ, ಕುಂಟಿ, ಅಸಂಖ್ಯ ನಕ್ಷತ್ರಪುಂಜಗಳು ಸ್ಪಷ್ಟವಾಗಿ ಗೋಚರಿಸಲಾರಂಭಿಸುತ್ತವೆ.

ಮುಂದೆ ಯಾತ್ರಾಸ್ಥಳಗಳತ್ತ...

ಚಾರಣ ಪೂರೈಸಿದ ನಂತರ ದಕ್ಷಿಣಕಾಶಿ ಕಳಸದ ಶ್ರೀಕಳಸೇಶ್ವರ ಮತ್ತು ಅಲ್ಲಿಂದ 8 ಕಿಮೀ ಅಂತರದ ಸುಕ್ಷೇತ್ರ ಹೊರನಾಡಿಗೆ ಭೇಟಿ ಕೊಡಬಹುದು. ಅನ್ನಪೂಣೇಶ್ವರಿ ದೇವಳಗಳಿಗೆ ಭೇಟಿ ನೀಡಿ ದೇವರಿಗೆ ಭಕ್ತಿಪೂರ್ವಕವಾಗಿ ನಮಿಸುತ್ತ ಪೂಜಾ ಕೈಂಕರ್ಯಗೊಳ್ಳಬಹುದು. ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಪ್ರತಿನಿತ್ಯ ಅನ್ನಸಂತರ್ಪಣೆ ವ್ಯವಸ್ಥೆ ಇರುತ್ತದೆ.

ಕಳಸದಿಂದ ಒಂದು ಕಿಲೋಮೀಟರ್ ಚಲಿಸಿದರೆ ನಿಸರ್ಗದ ಮಡಿಲಲ್ಲಿ ಹರಿವ ಭದ್ರಾನದಿಗೆ ಅಡ್ಡಲಾಗಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯವರು ಉದ್ದನೆಯ ತೂಗುಸೇತುವೆ (ಹ್ಯಾಂಗಿಂಗ್ ಬ್ರಿಡ್ಜ್) ನಿರ್ಮಿಸಿದ್ದಾರೆ. ಅದರಲ್ಲಿ ತೂಗಾಡಿಕೊಂಡು ನಡೆಯುತ್ತಾ, ಸುತ್ತಲಿರುವ ಅಡಿಕೆ, ಬಾಳೆ, ತೆಂಗಿನ ತೋಟಗಳನ್ನು ನೋಡಬಹುದು.

ವೈವಿಧ್ಯ ಬಾವಿಗಳ ನೋಟ

3 ಕಿಮೀ ಸಮತಟ್ಟಾದ ರಸ್ತೆಯಲ್ಲಿ ಪಯಣಿಸಿ ಬಳಿಕ 3 ಕಿಮೀ ಘಟ್ಟ ಪ್ರದೇಶವನ್ನು ಏರಿದಾಕ್ಷಣ ದೇವರಮನೆ ಎಂಬ ಸ್ಥಳ ಸಿಗುತ್ತದೆ. ಇಲ್ಲಿ ಶ್ರೀಕಾಲಭೈರವೇಶ್ವರಸ್ವಾಮಿ ದೇಗುಲ, ಪುಟ್ಟ ಕೆರೆ, ಅದರೊಳಗೆ ಚೌಕಾಕಾರದ ಕಟ್ಟೆಯೊಳಗೆ ಸಣ್ಣ ಬಾವಿ ನೋಡಬಹುದು. ‘ಇದು ದೇವರ ಬಾವಿ. ಈ ಬಾವಿಯ ನೀರನ್ನು ದೇವರ ನಿತ್ಯ ಪೂಜೆಗೆ ಬಳಸುವುದರಿಂದ ಅರ್ಚಕರ ಹೊರತಾಗಿ ಬೇರೆ ಯಾರೂ ಮುಟ್ಟುವಂತಿಲ್ಲ. ಈ ಬಾವಿಯ ಮೇಲೆ ನಿಂತು ಫೋಟೊ ತೆಗೆಸಿಕೊಳ್ಳುವುದನ್ನು ನಿಷೇಧಿಸಲಾಗಿದೆ’ ಎಂದು ಫಲಕವಿರುತ್ತದೆ, ಗಮನಿಸಿ.

ಅನತಿ ದೂರದಲ್ಲಿ ಬಟ್ಲುಬಾವಿ ಎಂಬ ಸ್ಥಳವಿದೆ. ಬಾವಿ ಬಟ್ಟಲಿನ ಆಕಾರ ಇರುವುದರಿಂದ ಸ್ಥಳೀಕರು ಈ ಹೆಸರು ಇಟ್ಟಿದ್ದಾರೆ. ರಸ್ತೆಯಿಂದ ಕೆಳಗಿರುವ ಕಾಡಿನಲ್ಲಿ ಕೊಂಚ ಇಳಿದಾಗ ಚೌಕಾಕಾರದ ಅತಿಸಣ್ಣ ಬಾವಿ ಕಾಣುತ್ತದೆ. ಈ ಬಾವಿಯಲ್ಲಿ ನೀರು ಸದಾಕಾಲ ತುಂಬಿರುತ್ತದೆ ಎಂಬುದು ಅಲ್ಲಿನವರ ಮಾತು. ಇಲ್ಲಿಗೆ ಭೇಟಿ ನೀಡಿದವರು ದೇವಸ್ಥಾನದ ಆಸುಪಾಸಿನಲ್ಲಿ ಪುಟ್ಟ ಪುಟ್ಟ ಕಲ್ಲುಗಳಿಂದ ಗೋಪುರದ ಹಾಗೆ ಜೋಡಿಸಿ, ಪುಟ್ಟ ಮನೆ ಕಟ್ಟಿ ಹೋಗುತ್ತಾರೆ. ಈ ರೀತಿ ಮನೆಗಳನ್ನು ನಿರ್ಮಿಸಿದರೆ ಮುಂದೆ ಯಾವಾಗಲಾದರೂ ಅವರು ಸ್ವಂತ ಮನೆ ಕಟ್ಟಿಸುತ್ತಾರೆ ಎಂಬ ನಂಬಿಕೆ ಇದೆ.

ಘಟ್ಟವನ್ನಿಳಿದು ತುಸುದೂರ ಸಾಗಿದರೆ ದೇವವೃಂದ ತಲುಪುತ್ತೀರಿ. ಇಲ್ಲಿ ಕ್ರಿಸ್ತಶಕ 1ನೇ ಶತಮಾನದಲ್ಲಿ ಕದಂಬರ ಕಾಲದ ಶ್ರೀಪ್ರಸನ್ನ ರಾಮೇಶ್ವರ ದೇಗುಲವಿದೆ.

ಇಲ್ಲಿಂದ ಮೂಡಿಗೆರೆ ತಾಲ್ಲೂಕಿನ ಕಾಟಿಹಾರ, ಬಂಟಕಲ್ಲು, ಬಲ್ಲಾಳರಾಯನಗವಿ, ವಾಸಂತಿಕ ದೇಗುಲ - ಅಂಗಡಿ, ಮಿಂಚುಕಲ್ಲುಗುಡ್ಡ, ರಾಣಿಬೆಟ್ಟ, ಹನುಮನಗುಂಡಿ ಜಲಪಾತ, ಶ್ರೀಕ್ಷೇತ್ರ ಆಂಜನೇಯಸ್ವಾಮಿ ದೇಗುಲ - ಬಳ್ಳೇಕೆರೆ, ಭೈರಾಪುರ ದೇವಾಲಯದ ಹತ್ತಿರವಿರುವ ಎತ್ತಿನಭುಜ ಅಥವಾ ಶಿಶಿಲಗುಡ್ಡ, ಮೇಕನಗಡ್ಡೆ ಸನಿಹವಿರುವ ಶ್ರೀ ಬೆಟ್ಟದ ಭೈರವೇಶ್ವರ ದೇಗುಲ, ಕುದುರೆಮುಖ ಇತ್ಯಾದಿ ಸ್ಥಳಗಳನ್ನು ನೋಡಬಹುದು.
ಈ ಪ್ರವಾಸದ ಹಾದಿಯಲ್ಲಿ ಸಾಗಿದರೆ ಒಂದು ಪ್ಯಾಕೇಜ್ ಟೂರ್, ಹಲವು ಜಾಗಗಳನ್ನು ತೋರಿಸುತ್ತದೆ.

ಊಟ-ವಸತಿ ವ್ಯವಸ್ಥೆ

ಕಳಸದಲ್ಲಿ ತಂಗಲು ಆರೇಳು ಖಾಸಗಿ ಹೋಟೆಲ್ಗಳಿವೆ. ಹೊರನಾಡಿನಲ್ಲಿ ದೇಗುಲಕ್ಕೆ ಸಂಬಂಧಿತ ಮತ್ತು ಖಾಸಗಿ ಹೋಟೆಲ್ಗಳಿದ್ದು ಅಲ್ಲಿ ಉಳಿದುಕೊಳ್ಳಬಹುದಾಗಿದೆ. ಸಣ್ಣಪುಟ್ಟ ಹೋಟೆಲ್, ಅಂಗಡಿ ಮುಂಗಟ್ಟುಗಳೂ ಸಹ ಇಲ್ಲಿರುತ್ತವೆ.

ಕಳಸ, ಹೊರನಾಡಿನಲ್ಲಿ ದೇವಾಲಯಗಳಿಗೆ ಭೇಟಿ ನೀಡುವವರಿಗೆ ಪ್ರಸಾದ ಲಭ್ಯ. ಚಾರಣ ಹೋಗುವವರು ಆಹಾರ- ನೀರು ಕೊಂಡು ಹೋಗಬಹುದು. ಖಾಸಗಿಯಾಗಿ ತಂಗುತ್ತೇವೆ ಎನ್ನುವವರಿಗೆ, ಕುದುರೆಮುಖ-ಕಳಸ ಆಸುಪಾಸಿನಲ್ಲಿ ನಿಸರ್ಗಪ್ರಿಯ ಹೋಮ್ ಸ್ಟೇ ರೆಸಾರ್ಟ್ಗಳಿವೆ. ಗೂಗಲ್ ಮಾಡಿ, ಇವುಗಳ ಬಗ್ಗೆ ಮಾಹಿತಿ ಪಡೆಯಬಹುದು.

ಇನ್ನು ಏನೇನು ನೋಡಬಹುದು

ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕು ಜಮಾಲಾಬಾದ್ ಬೆಟ್ಟ, ನಾವೂರುಕಜೆ, ಟೆನ್ ಬೈ ಸಿಕ್ಸ್ ಪಾಯಿಂಟ್, ಹಿರಿಮಾರುಗುಪ್ಪೆ, ಹವಳ, ಒಂಟಿಮರ ಪಾಯಿಂಟ್, ಗೋಮುಖ, ಫುಲ್ಸ್ಟಾಪ್ ಪಾಯಿಂಟ್, ಪ್ರಾಜೆಕ್ಟ್ ವ್ಯೂ ಕ್ಯಾಂಪ್, ಕುದುರೆಮುಖ ನಗರ ಅರ್ಥಾತ್ ಮಲ್ಲೇಶ್ವರ ಇವು ಬಾವಿಕೊಂಡ ಕಲ್ಲುಚುಕ್ಕಿ ಬೆಟ್ಟದ ಸಮೀಪದ ತಾಣಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.