ಮಂಡ್ಯ: ಅತ್ತ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ರಾಮಮಂದಿರ ನಿರ್ಮಾಣದ ಭೂಮಿಪೂಜೆ ನಡೆಯುತ್ತಿದ್ದರೆ ಇತ್ತ ಪಾಂಡವಪುರ ತಾಲ್ಲೂಕು ಒನಕೆಬೆಟ್ಟದಲ್ಲಿ ಕುಂತಿಯ ಕುರುಹಾಗಿ ಉಳಿದಿರುವ ‘ಒನಕೆ’ಯ ಪುನರ್ ಪ್ರತಿಷ್ಠಾಪನಾ ಕಾರ್ಯ ನಡೆಯುತ್ತಿತ್ತು. ಸುಮಾರು ಮೂರು ಸಾವಿರ ಅಡಿ ಎತ್ತರದ ಬೆಟ್ಟದ ಮೇಲೆ ಸುಯ್ಯನೆ ಬೀಸುವ ಬರುವ ತಂಗಾಳಿ, ಮೈ ಕೊರೆಯುವ ಚಳಿ, ತುಂತುರು ಮಳೆಯ ನಡುವೆ ವಿವಿಧ ಧಾರ್ಮಿಕ ಚಟುವಟಿಕೆ ನಡೆದವು. 15 ಅಡಿ ಎತ್ತರದ ಕಲ್ಲಿನ ಒನಕೆಯ ಮೇಲೆ ಭಗವಾಧ್ವಜ ಹಾರಿಸಿದ ಯುವಜನರು ಪೌರಾಣಿಕ ಕತೆಯ ಗುರುತಿಗೆ ಹೊಸ ರೂಪ ನೀಡಿದರು.

ಪಾಂಡವರು ವನವಾಸದಲ್ಲಿದ್ದಾಗ ಓಡಾಡಿದ್ದರು ಎನ್ನಲಾದ ಊರು ಪಾಂಡವಪುರ ಆಗಿದೆ. ಅದನ್ನು ಸಾಕ್ಷೀಕರಿಸುವ ಅನೇಕ ಕುರುಹುಗಳು ಪಾಂಡವಪುರದ ಪಕ್ಕದಲ್ಲೇ ಇರುವ ಕುಂತಿಬೆಟ್ಟ, ಒನಕೆ ಬೆಟ್ಟಗಳಲ್ಲಿ ದೊರೆಯುತ್ತವೆ. ಪಾಂಡವರಿಗೆ ಅಡುಗೆ ತಯಾರಿಸುತ್ತಿದ್ದ ಕುಂತಿ ಪೂರ್ವ ದಿಕ್ಕಿನಲ್ಲಿರುವ ಬೆಟ್ಟದ ಮೇಲೆ ಒನಕೆಯಿಂದ ಭತ್ತ ಕುಟ್ಟುತ್ತಿದ್ದಳು. ಆ ಬೆಟ್ಟ ಒನಕೆ ಬೆಟ್ಟ ಎಂಬ ಹೆಸರು ಪಡೆಯಿತು. ಆಕೆ ಬಳಸುತ್ತಿದ್ದ ಒನಕೆಯು ಕುರುಹಾಗಿ ಉಳಿಯಿತು. ಪಶ್ಚಿಮಕ್ಕಿರುವ ಬೆಟ್ಟದಲ್ಲಿ ಕುಂತಿ ವಾಸ್ತವ್ಯ ಹೂಡಿದ್ದಳು, ಅದು ‘ಕುಂತಿ ಬೆಟ್ಟ’ ಎಂದು ಪ್ರಸಿದ್ಧಿ ಪಡೆಯಿತು. ಬೆಟ್ಟದ ಮೇಲಿರುವ ಕೊಳ ‘ಕುಂತಿ ಕೊಳ’ವಾಯಿತು ಎಂಬ ಮಾಹಿತಿ ಸ್ಥಳೀಯರ ನಾಲಗೆಯ ಮೇಲೆ ಹರಿದಾಡುತ್ತದೆ.

ಒನಕೆ ಬೆಟ್ಟದಲ್ಲಿರುವ ಒನಕೆಯು ವರ್ಷದ ಹಿಂದೆ ಕುಸಿದು ಬಿದ್ದಿತ್ತು. ಸುತ್ತಮುತ್ತಲಿನ ಹಳ್ಳಿಯ ಜನರು ಹಣ ಸಂಗ್ರಹಿಸಿ ಏಕಶಿಲೆಯಿಂದ ಹೊಸ ಒನಕೆ ಕೆತ್ತಿಸಿ ಆ.5ರಂದು ಪುನರ್ ಪ್ರತಿಷ್ಠಾಪನೆ ಮಾಡಿದರು. ಕುಂತಿ ಬೆಟ್ಟದ ಕೊಳ, ಕೊಳಕ್ಕೆ ಮರೆಯಾದ ಬಂಡೆಗಲ್ಲು, ಕಲ್ಲಿನ ಮೇಲೆ ಸೀರೆ ಒಣಗಿ ಹಾಕಿರುವ ಗುರುತು ಈಗಲೂ ಕಾಣಸಿಗುತ್ತವೆ.

ಜೊತೆಗೆ ಭೀಮನ ಪಾದ, ಅರ್ಜುನನ ರಥವನ್ನು ಭೀಮ ತುಳಿದಾಗ ಉಂಟಾದ ಹೊಂಡ ‘ಭೀಮನ ಹೊಳಲೆ’ ಎಂದು ಪ್ರಸಿದ್ಧಿ ಪಡೆಯಿತು. ಕುಂತಿಯ ಕೊಳ ಬಿರು ಬೇಸಿಗೆಯಲ್ಲೂ ಒಣಗುವುದಿಲ್ಲ. ಅಲ್ಲಿಯ ನೀರು ವೈದ್ಯಕೀಯ ಗುಣ ಹೊಂದಿದ್ದು ಚರ್ಮ ರೋಗಗಳು ವಾಸಿಯಾಗುತ್ತವೆ. ಅಲ್ಲಿಗೆ ಬಂದವರು ಕುಂತಿಕೊಳದ ನೀರನ್ನು ತಪ್ಪದೇ ತುಂಬಿಕೊಂಡು ತೆರಳುತ್ತಾರೆ.

‘ಪಾಂಡವಪುರ ಸುತ್ತಮುತ್ತಲ ಹಳ್ಳಿಗಳ ಜನರು ₹ 5 ಲಕ್ಷ ಹಣದಲ್ಲಿ ಒನಕೆಗೆ ಹೊಸ ರೂಪ ನೀಡಿದ್ದಾರೆ. 7 ಮಂದಿ ಶಿಲ್ಪಿಗಳು ಒನಕೆಯನ್ನು ಕೆತ್ತಿದ್ದಾರೆ. ಪ್ರತಿ ವರ್ಷ ಕುಂತಿ ಹಾಗೂ ಒನಕೆ ಬೆಟ್ಟದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಾರೆ’ ಎಂದು ಕುಂತಿ ಬೆಟ್ಟದ ತಪ್ಪಲಲ್ಲಿರುವ ಕುವೆಂಪು ಪ್ರೌಢಶಾಲೆ ಮುಖ್ಯ ಶಿಕ್ಷಕ ಪಾರ್ಥೇಗೌಡ ಹೇಳಿದರು.

(ವಿಡಿಯೊ ವರದಿ)

ಬಕಾಸುರನ ಕತೆಗೆ ಕುರುಹು: ಪುಟಾಣಿ ಮಕ್ಕಳಿಗೆ ಹೇಳುವ ಬಕಾಸುರನ ಕತೆಗೂ ಬೆಟ್ಟದ ಅಸುಪಾಸಿನ ಹಳ್ಳಿಗಳಲ್ಲಿ ಕುರುಹುಗಳಿವೆ. ಪಾಂಡವಪುರದ ಹಾರವರಹಳ್ಳಿ (ಈಗಿನ ಹಾರೋಹಳ್ಳಿ) ಗ್ರಾಮದಲ್ಲಿ ಪಾಂಡವರು ವೇಷ ಮರೆಸಿಕೊಂಡು ನೆಲೆಸಿದ್ದರಂತೆ. ರಾಕ್ಷಸನಾಗಿದ್ದ ಬಕಾಸುರ ಪಕ್ಕದ ಬೆಟ್ಟಗಳಲ್ಲಿದ್ದ, ಅವನಿಗೆ ಸುತ್ತಮುತ್ತಲ ಹಳ್ಳಿಗಳ ಜನರು ಒಂದು ಎತ್ತಿನ ಗಾಡಿಯಲ್ಲಿ ಊಟ, ತಿಂಡಿ, ತಿನಿಸುಗಳನ್ನು ತುಂಬಿ ಕಳುಹಿಸುತ್ತಿದ್ದರು. ಗಾಡಿ ಜೊತೆ ಹೋಗುತ್ತಿದ್ದ ವ್ಯಕ್ತಿಯೂ ಬಕಾಸುರನ ಹೊಟ್ಟೆ ಪಾಲಾಗುತ್ತಿದ್ದ.

ಒಮ್ಮೆ ಹಾರವರಹಳ್ಳಿಯ ಬ್ರಾಹ್ಮಣರ ಮಗನ ಸರತಿ ಬಂದಿತ್ತು. ಒಬ್ಬನೇ ಮಗನನ್ನು ಬಕಾಸುರನಿಗೆ ಒಪ್ಪಿಸಬೇಕೆಂಬ ದುಖಃದಲ್ಲಿ ಇಡೀ ಕುಟುಂಬ ಮುಳುಗಿತ್ತು. ಅವರ ಮನೆಗೆ ಭಿಕ್ಷೆಗೆ ತೆರಳಿದ್ದ ಕುಂತಿ, ಬ್ರಾಹ್ಮಣರ ಮಗನ ಬದಲಿಗೆ ತನ್ನ ಮಗ ಭೀಮನನ್ನು ಬಕಾಸುರನ ಬಳಿಗೆ ಕಳುಹಿಸುವುದಾಗಿ ತಿಳಿಸಿದಳು.

ಗಾಡಿಯ ಜೊತೆ ತೆರಳಿದ ಭೀಮ ಒಂದು ಜಾಗದಲ್ಲಿ ನಿಲ್ಲಿಸಿ ಊಟವನ್ನೆಲ್ಲಾ ದೊಡ್ಡದೊಡ್ಡ ಉಂಡೆಗಳನ್ನಾಗಿ ಮಾಡಿಕೊಂಡು ತಿಂದು ಮುಗಿಸಿದ. ಆ ಸ್ಥಳ ಹಿರಿಎಡೆ (ಈಗಿನ ಹಿರೋಡೆ) ಎಂದು ಪ್ರಸಿದ್ಧಿ ಪಡೆಯಿತು. ಇನ್ನೊಂದೆಡೆ ಭೀಮ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ತಿಂದ. ಅದು ಚಿಕ್ಕಎಡೆ (ಈಗಿನ ಚಿಕ್ಕಾಡೆ) ಎಂದು ಪ್ರಸಿದ್ಧಿ ಪಡೆಯಿತು. ನಂತರ ಭೀಮ ಬಕಾಸುರನನ್ನು ಕುಂತಿ ಬೆಟ್ಟದಲ್ಲಿ ವಧೆ ಮಾಡಿ, ಸುತ್ತಮುತ್ತಲ ಜನರಿಗೆ ನೆಮ್ಮದಿ ನೀಡಿದ ಎಂಬ ಕತೆ ಪಾಂಡವಪುರ ಅಕ್ಕಪಕ್ಕದ ಹಳ್ಳಿಗಳಲ್ಲಿ ಜನಜನಿತವಾಗಿದೆ.

ಇದು ‘ಕಂತಿ’ ಬೆಟ್ಟ: ಇನ್ನೊಂದು ಮಾಹಿತಿಯ ಪ್ರಕಾರ ಕುಂತಿ ಬೆಟ್ಟವನ್ನು ‘ಕಂತಿ ಬೆಟ್ಟ’ ಎಂತಲೂ ಕರೆಯುತ್ತಾರೆ. ಇಲ್ಲಿ ಜೈನ ಸನ್ಯಾಸಿಗಳು ಇದ್ದರು, ಕಂತಿ ಎನ್ನುವ ಸನ್ಯಾಸಿ ಕೂಡ ಇಲ್ಲೇ ವಾಸಿಸುತ್ತಿದ್ದಳು. ಈಕೆಯ ಕಾರಣದಿಂದಾಗಿ ಬೆಟ್ಟಕ್ಕೆ ಕಂತಿ ಬೆಟ್ಟ ಎನ್ನಲಾಯಿತು. ಕ್ರಮೇಣ ಅದು ಕುಂತಿ ಬೆಟ್ಟವಾಗಿ ಗುರುತಿಸಲಾಯಿತು ಎಂಬ ಹಿನ್ನೆಲೆ ಕೂಡ ದೊರೆಯುತ್ತದೆ.

ಇದಕ್ಕೆ ಕುರುಹು ಎಂಬಂತೆ ಎರಡೂ ಬೆಟ್ಟಗಳ ನಡುವೆ ಹಲವು ಜೈನ ಬಸದಿಗಳಿವೆ. ಜೀರ್ಣೋದ್ಧಾರವಾಗದ ಕಾರಣ ಈ ಬಸದಿಗಳು ಬೀಳುವ ಸ್ಥಿತಿ ತಲುಪಿವೆ.

ಫ್ರೆಂಚ್ ರಾಕ್ಸ್: ಬ್ರಿಟಿಷರ ಕಾಲದಲ್ಲಿ ಈ ಬೆಟ್ಟಗಳನ್ನು ಫ್ರೆಂಚ್ರಾಕ್ಸ್ ಎಂದು ಕರೆಯಲಾಗುತ್ತಿತ್ತು. ಟಿಪ್ಪುವಿಗೆ ಸಹಾಯ ಮಾಡಲು ಫ್ರಾನ್ಸ್ನಿಂದ ಬಂದಿದ್ದ ಸೈನಿಕರು ಬೆಟ್ಟಗಳ ಮೇಲೆ ಬೀಡುಬಿಟ್ಟಿದ್ದರು. ನಂತರ ಅವರು ಇಲ್ಲೇ ನೆಲೆಸಿದರು. ಅವರ ಸತ್ತ ನಂತರ ಸಮೀಪದ ಹಾರೋಹಳ್ಳಿಯಲ್ಲಿ ಸಮಾಧಿ ಮಾಡಲಾಯಿತು. ಅವರ ಸಮಾಧಿಗಳು ಹಾರೋಹಳ್ಳಿಯಲ್ಲಿ ಈಗಲೂ ಇದ್ದು ಅವುಗಳನ್ನು ಸಂರಕ್ಷಣೆ ಮಾಡಲಾಗಿದೆ. ಮೈಸೂರು ಅರಸರ ಕಾಲದಲ್ಲಿ ಬೆಟ್ಟದ ಮೇಲಿನ ಒನಕೆ ಇರುವ ತುತ್ತು ತುದಿಯಲ್ಲಿ ಸ್ಥಳ ಸಮೀಕ್ಷೆ ನಡೆಸಲಾಗುತ್ತಿತ್ತು ಎಂಬ ಮಾಹಿತಿಯೂ ದೊರೆಯುತ್ತದೆ.

ಎರಡು ಬೆಟ್ಟಗಳ ನಡುವೆ ಹೊಯ್ಸಳರ ಕಾಲದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವಿದೆ. ಮಲ್ಲಿಕಾರ್ಜುನ ಸ್ಥಾಮಿ ದೇವಾಲಯ ಟ್ರಸ್ಟ್ ಸಮಿತಿ ಸದಸ್ಯರು ಈಗ ಗುಡಿಯನ್ನು ಜೀರ್ಣೋದ್ಧಾರ ಮಾಡಿದ್ದಾರೆ.

ಶಾಲೆ ಸ್ಥಾಪನೆ: 1897ರಲ್ಲಿ ತಮಿಳುನಾಡಿನ ಕುರುವನ್ನೂರು ಗ್ರಾಮದಿಂದ ಬಂದ ಶಂಕರಾನಂದ ಭಾರತಿ ಸ್ವಾಮೀಜಿ ಕುಂತಿ ಬೆಟ್ಟದಲ್ಲಿ ಬಂದು ನೆಲೆಸಿದ್ದರು. 1957ರಲ್ಲಿ ಅವರು ಮೃತಪಟ್ಟ ನಂತರ ಅವರ ನೆನಪಿನಲ್ಲಿ ಶಂಕರಾನಂದ ವಿದ್ಯಾಪೀಠ ಸ್ಥಾಪಿಸಿ ಕುವೆಂಪು ಪ್ರಾಥಮಿಕ ಮತ್ತು ಪ್ರೌಢಶಾಲೆ ಆರಂಭಿಸಲಾಯಿತು. ಮಂಡ್ಯ ಜಿಲ್ಲೆಯ ಪ್ರತಿಷ್ಠಿತ ಶಾಲೆಯಲ್ಲಿ ಒಂದಾಗಿರುವ ಈ ಶಾಲೆಯಲ್ಲಿ ಈಗಲೂ 500 ಮಕ್ಕಳು ಕಲಿಯುತ್ತಿದ್ದಾರೆ.

ಚಾರಣಿಗರ ಸ್ವರ್ಗ: ಚಾರಣಿಗರ ಸ್ವರ್ಗ ಎಂದೇ ಪ್ರಸಿದ್ಧಿ ಪಡೆದಿರುವ ಕುಂತಿ– ಒನಕೆ ಬೆಟ್ಟಗಳು ಪ್ರಕೃತಿಯ ಮಡಿಲಿನಲ್ಲಿ ಅರಳಿ ನಿಂತಿವೆ. ಸುತ್ತಲೂ ಇರುವ ನಾಲೆಗಳು, ಕೆರೆಗಳು, ಭತ್ತದ ಗದ್ದೆ, ಕಬ್ಬು, ತೆಂಗಿನ ತೋಟ, ಆಲೆಮನೆಗಳು ಪ್ರವಾಸಿಗರಿಗರ ಮನದಲ್ಲಿ ಆನಂದ ಸೃಷ್ಟಿಸುತ್ತವೆ.

ಕುಂತಿಬೆಟ್ಟ ಹಾಗೂ ಒನಕೆ ಬೆಟ್ಟಗಳನ್ನು ಹತ್ತಲು ಮೆಟ್ಟಿಲುಗಳಿಲ್ಲ. ಬಣ್ಣದಲ್ಲಿ ಬರೆದಿರುವ ಬಾಣದ ಗುರುತುಗಳೇ ಪ್ರವಾಸಿಗರ ದಿಕ್ಸೂಚಿಗಳಾಗಿವೆ. ಎಲ್ಲರಿಂದಲೂ ಈ ಬೆಟ್ಟ ಹತ್ತುಲ ಸಾಧ್ಯವಿಲ್ಲ. ಬಂಡೆಗಲ್ಲುಗಳನ್ನು ಹತ್ತಿ, ಇಳಿದು, ಗುಹೆಯಂತಿರುವ ಸಣ್ಣ ಸಣ್ಣ ಪೊಟರೆಗಳನ್ನು ದಾಟಿ ಮುಂದಕ್ಕೆ ತೆರಳಬೇಕು. ಒಬ್ಬರ ಕೈ, ಇನ್ನೊಬ್ಬರು ಹಿಡಿದು ಸಹಾಯ ಪಡೆದುಕೊಂಡೇ ಬೆಟ್ಟ ಏರಬೇಕು. ಒನಕೆ ಇರುವ ತುತ್ತ ತುದಿ ತಲುಪುವುದು ಸಾಹಸವೇ ಸರಿ. ಧೈರ್ಯ ಹಾಗೂ ಶಕ್ತಿ ಇದ್ದರೆ ಮಾತ್ರ ಅಲ್ಲಿಗೆ ತೆರಳಲು ಸಾಧ್ಯ.

ರಾಜ್ಯ, ಹೊರರಾಜ್ಯಗಳಿಂದಲೂ ಇಲ್ಲಿಗೆ ಚಾರಣಕ್ಕೆ ಬರುತ್ತಾರೆ. ಸೂರ್ಯೋದಯ, ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ ಪ್ರವಾಸೋದ್ಯಮ ಇಲಾಖೆ ಈ ಸುಂದರ ತಾಣವನ್ನು ಅಭಿವೃದ್ಧಿಗೊಳಿಸುವಲ್ಲಿ ವಿಫಲವಾಗಿದೆ. ಬೆಟ್ಟದ ತಪ್ಪಲಲ್ಲಿ ನಿರ್ಮಿಸಿರುವ ಪ್ರವಾಸಿ ಮಂದಿರ ಪಾಳು ಬಿದ್ದಿದೆ. ಬೆಟ್ಟದ ಸುತ್ತಲೂ ನಡೆಯುತ್ತಿರುವ ಅನೈತಿಕ ಚಟುವಟಿಕೆ, ಕುಡುಕರ ಹಾವಳಿಯನ್ನು ತಡೆಯಲು ಸಾಧ್ಯವಾಗಿಲ್ಲ. ಮದ್ಯದ ಬಾಟಲಿಗಳು ಬಿದ್ದು ಚೆಲ್ಲಾಡುತ್ತಿದ್ದು ಸ್ಮಾರಕಗಳ ಪರಂಪರೆಗೆ ಕಪ್ಪು ಚುಕ್ಕೆಯಾಗಿದೆ.

‘ಕುಂತಿ ಬೆಟ್ಟವನ್ನು ಶೀಘ್ರವೇ ಅಭಿವೃದ್ಧಿಗೊಳಿಸಲಾಗುವುದು. ಇಲಾಖೆಯ ವತಿಯಿಂದ ಪ್ರಚಾರ ಮಾಡಿ ಪ್ರವಾಸಿಗರನ್ನು ಸೆಳೆಯಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹರೀಶ್ ಹೇಳಿದರು.

ಅಲ್ಲಿಗೆ ತೆರಳುವುದು ಹೇಗೆ: ಮೈಸೂರು ಕಡೆಯಿಂದ ಬರುವವರು ಪಾಂಡವಪುರಕ್ಕೆ ಬಂದು ಮಂಡ್ಯ ರಸ್ತೆಯಲ್ಲಿ ಬರುವ ದೇವೇಗೌಡನ ಕೊಪ್ಪಲು ಗ್ರಾಮದಲ್ಲಿ ಬಲಕ್ಕೆ ತಿರುಗಬೇಕು. ಬೆಂಗಳೂರು ಕಡೆಯಿಂದ ಬರುವವರು ಪಾಂಡವಪುರ ತಲುಪುವ ಮೊದಲು ಸಿಗುವ ದೇವೇಗೌಡ ಕೊಪ್ಪಲು ಗ್ರಾಮದಿಂದ ಎಡಕ್ಕೆ ತಿರುಗಬೇಕು. ಮುಖ್ಯರಸ್ತೆಯಿಂದ ಬೆಟ್ಟ ಅರ್ಧ ಕಿ.ಮೀ.ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.