ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿರುವ ಚಂದ್ರಗುತ್ತಿ ಕೋಟೆಗೆ ಚಂದ್ರಗುಪ್ತಪುರ ಎಂಬ ಹೆಸರೂ ಇತ್ತಂತೆ. ವಿಶೇಷವಾದ ಮಾಹಿತಿ, ವಿಶಿಷ್ಟ ಅನುಭವ ನೀಡುವ ಈ ಕೋಟೆಗೊಂದು ಚಾರಣ.

ದೀಪಾವಳಿಯ ಹಬ್ಬಕ್ಕೆಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರಕ್ಕೆ ಹೋಗಿದ್ದೆ. ಬಹಳ ದಿನಗಳ ಬಳಿಕ ಗೆಳೆಯರೆಲ್ಲರೂ ಬೆಳಕಿನ ಹಬ್ಬದ ಜೊತೆಯಲ್ಲಿ ಪ್ರಕೃತಿಯ ಸೊಬಗನ್ನು ಸವಿಯಲು ಚಾರಣಕ್ಕೆ ಹೊರಡುವ ಆಸೆಯನ್ನು ಮುಂದಿಟ್ಟರು. ಎಲ್ಲಿಗೆ ಹೋಗುವುದು ಎಂದು ಯೋಚಿಸುತ್ತಿರುವಾಗಲೇ ಹೊಳೆದದ್ದು ಹತ್ತಿರವೇ ಇದ್ದ ಐತಿಹಾಸಿಕ ತಾಣ ‘ಚಂದ್ರಗುತ್ತಿ ಕೋಟೆ’.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿರುವ ಚಂದ್ರಗುತ್ತಿ ಎಂದಾಕ್ಷಣ ನೆನಪಾಗುವುದೇ ರೇಣುಕಾಂಬೆ ದೇವಿ. ಪುರಾಣ ಪ್ರಸಿದ್ಧ ಈ ಸ್ಥಳವು ವರದಾ ನದಿಯ ಸಮೀಪದಲ್ಲಿದೆ. ಸಿದ್ದಾಪುರದಿಂದ ಹೊರಟ ನಮ್ಮ ತಂಡವು ಬೆಳಿಗ್ಗೆ 5:45ಕ್ಕೆ ಸರಿಯಾಗಿ ಚಂದ್ರಗುತ್ತಿಯನ್ನು ತಲುಪಿತು.

ಚಾರಣವನ್ನು ಪ್ರಾರಂಭಿಸಬೇಕಾದರೆ ಬೆಟ್ಟದ ಕೆಳಗಿರುವ ರೇಣುಕಾಂಬೆಯ ದೇವಸ್ಥಾನವನ್ನು ದಾಟಿ ಪಕ್ಕದ ಕಿರುದಾರಿಯಿಂದ ಸಾಗಬೇಕಿತ್ತು. ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನಕ್ಕೆ ಹೋಗಬೇಕು. ದೇವಸ್ಥಾನದ ಮೇಲಿರುವ ಆಮೆಯಾಕೃತಿಯ ವಿಶಾಲ ಬಂಡೆಯನ್ನು ನೋಡಿ ಆ ಸ್ಥಳದ ಬಗ್ಗೆ ಮತ್ತಷ್ಟು ತಿಳಿಯುವ ಕುತೂಹಲ ಮೂಡಿತು. ಆದರೆ ಅಷ್ಟು ಮುಂಜಾನೆ ದೇವಳದ ಬಾಗಿಲು ತೆರೆದಿರಲಿಲ್ಲ. ಹಾಗಾಗಿ ನಾವು ಚಾರಣವನ್ನು ಪ್ರಾರಂಭಿಸಿದೆವು. ನಮ್ಮ ಗೆಳೆಯರ ಬಳಗದ ಬಹಳಷ್ಟು ಸ್ನೇಹಿತರಿಗೆ ಈ ಸ್ಥಳ, ಕೋಟೆ ಮತ್ತು ಕ್ರಮಿಸುವ ಮಾರ್ಗದ ಬಗ್ಗೆ ತಿಳಿದಿರಲಿಲ್ಲ. ಆದರೆ ಸಿದ್ದಾಪುರದ ಗೆಳೆಯರೊಬ್ಬರ ನೇತೃತ್ವದಲ್ಲಿ ಚಾರಣ ಪ್ರಾರಂಭವಾಯಿತು.

ಸುತ್ತಲೂ ದಟ್ಟವಾದ ಕಾಡು. ಪ್ರಶಾಂತವಾದ ವಾತಾವರಣ. ಎಲೆಯ ಮೇಲೆ ಇಬ್ಬನಿಗಳ ಮೇಳ. ಹಕ್ಕಿಯ ಚಿಲಿಪಿಲಿ ನಾದ ಕೇಳಿದಾಗ ಬೆಟ್ಟ ಹತ್ತುವ ಉತ್ಸಾಹ ಇನ್ನಷ್ಟು ಗರಿಗೆದರಿತು. ಕೋಟೆಯು ಸುಮಾರು 848 ಮೀಟರ್ ಎತ್ತರದಲ್ಲಿದೆ. ಚಾರಣಕ್ಕೆ ಹೆಜ್ಜೆ ಹಾಕುತ್ತಾ ಸಾಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ‘ಚಂದ್ರಗುತ್ತಿ ಕೋಟೆಯು ಪ್ರಾಚೀನ ಕಾಲದಲ್ಲಿ ಚಂದ್ರಗುಪ್ತಪುರ ಎಂದು ಕರೆಯಲ್ಪಡುತ್ತಿತ್ತು. ಇದು ಕ್ರಿ.ಶ. 3ರಿಂದ 6ನೇ ಶತಮಾನದವರೆಗೆ ಬನವಾಸಿ ಕದಂಬರ ಕಾಲದ ಪ್ರಸಿದ್ಧ ಪಟ್ಟಣವಾಗಿತ್ತು. ವಿಜಯನಗರದ ರಾಜ ವೀರ ಹರಿಹರನ (1377-1404) ಕಾಲದಲ್ಲಿ ಬಾಚಣ್ಣ ಎಂಬ ಸ್ಥಳೀಯ ನಾಯಕ ಚಂದ್ರಗುತ್ತಿ ಮತ್ತು ಇತರ ಪ್ರದೇಶಗಳನ್ನು ಆಳುತ್ತಿದ್ದುದಾಗಿ ಕ್ರಿ.ಶ.1396ರ ಒಂದು ಶಾಸನದಿಂದ ತಿಳಿದುಬರುತ್ತದೆ. ಆನಂತರ ಈ ಸ್ಥಳವು ಕೆಳದಿ ನಾಯಕರ ಆಳ್ವಿಕೆಗೆ ಒಳಪಟ್ಟಿತು’ ಎಂದು ಕೋಟೆಯ ಕಥೆ ಹಾಗೂ ಇತಿಹಾಸದ ಬಗ್ಗೆ ವಿನಾಯಕ ಶಾಸ್ತ್ರಿ ಹೇಳುತ್ತಾ ಸಾಗಿದರು.

ಬೆಟ್ಟವನ್ನು ಹತ್ತಲು ಕೆಲವು ಕಡೆ ಕಲ್ಲಿನಹಾಸು ಇದ್ದು, ಅಲ್ಲಲ್ಲಿ ಬಿದ್ದ ಪಿರಂಗಿಗಳು, ಮಂಟಪದ ಕಂಬಗಳು, ಕುಸಿದ ಗೋಡೆಗಳು, ಮುರಿದು ಬಿದ್ದ ಕಲ್ಲಿನ ದ್ವಾರಗಳು, ಕೋಟೆಯ ಸುತ್ತಲೂ ಆವರಿಸಿರುವ ಸಸ್ಯಗಳನ್ನೆಲ್ಲಾ ನೋಡುತ್ತಿದ್ದಂತೆ ಬಹಳ ವರ್ಷಗಳಿಂದ ಸರಿಯಾದ ನಿರ್ವಹಣೆಯಾಗದ ಕಾರಣ ಕೋಟೆಯ ಚಿತ್ರಣವೇ ಬದಲಾಗಿ ಹೋಗಿರುವ ಅನುಭವವಾಯಿತು. ಈ ಕೋಟೆಗೆ ಎರಡು ಕಡೆಯಿಂದ ಪ್ರವೇಶ ದ್ವಾರಗಳಿದ್ದು, ಪ್ರಾರಂಭದಲ್ಲೇ ಒಂದು ವಿಶಾಲವಾದ ಕೊಳ ಸಿಗುತ್ತದೆ. ಇನ್ನು ಕೋಟೆಯ ಒಳಗೆ ಕುದುರೆಗಳಿಗೆ, ಸೈನಿಕರಿಗೆ ಮದ್ದುಗುಂಡು ಸಾಗಿಸುವ ಸಲುವಾಗಿ ಪ್ರತ್ಯೇಕ ಮಾರ್ಗವಿದ್ದಂತೆ ಕಾಣಿಸಿತು. ಕೋಟೆಯ ಸುತ್ತ ಗಿಡಗಂಟಿಗಳು ಬೆಳೆದ ಕಾರಣ ಸ್ಪಷ್ಟವಾಗಿ ದಾರಿ ಕಾಣುತ್ತಿರಲಿಲ್ಲ. ನಮ್ಮಂತೆ ಚಾರಣಕ್ಕೆಂದು ಬಂದ ಪ್ರವಾಸಿಗರು ನಿರ್ಮಿಸಿದ ಕಾಲುದಾರಿಯನ್ನೇ ಆಶ್ರಯಿಸುತ್ತಾ, ಬಂಡೆಗಳ ಮಧ್ಯದಿಂದ ಹರಿಯುತ್ತಿರುವ ನೀರಿನ ಝುಳು ಝುಳು ನಿನಾದವನ್ನು ಕೇಳುತ್ತಾ, ಒಂದಿಷ್ಟು ಪೋಟೊ, ಸೆಲ್ಫೀ ತೆಗೆದುಕೊಳ್ಳುತ್ತಾ 7:15ಕ್ಕೆ ಸರಿಯಾಗಿ ಬೆಟ್ಟದ ಮೇಲೆ ತಲುಪಿದೆವು.

ಮುಂಜಾನೆಯ ಸೂರ್ಯೋದಯದ ವಿಹಂಗಮ ನೋಟವನ್ನು ಕಣ್ತುಂಬಿಕೊಂಡು ಪುಳಕಿತಗೊಂಡೆವು. ಬೆಟ್ಟದ ಮೇಲೆ ನಿಂತು ಸುತ್ತಲೂ ಇರುವ ಸುಂದರ ಪ್ರಕೃತಿಯ ಸೌಂದರ್ಯ ಸವಿಯುತ್ತಾ ಕೆಲ ಕಾಲ ವಿಶ್ರಾಂತಿ ಪಡೆದೆವು. ಮೇಲ್ಭಾಗದಲ್ಲಿ ಕೋಟೆ ಬಾವಿ, ಎಣ್ಣೆ ಬಾವಿಗಳು ಇದ್ದವು. ಅಲ್ಲೇ ಉತ್ತರ ಭಾಗದಲ್ಲಿರುವ ದುರ್ಗಿ ದಿಬ್ಬವು ಕೋಟೆಯ ಎತ್ತರದ ಸ್ಥಳವಾಗಿತ್ತು. ಅಲ್ಲಿ ಸೈನಿಕರಿಗೆ ವಾಸಿಸಲು ಅನುಕೂಲವಾಗುವಂತಹ ನಾಲ್ಕು ಗುಹೆಗಳಿದ್ದವು. ಅವುಗಳಲ್ಲಿ ಒಂದು ಸುಸ್ಥಿತಿಯಲ್ಲಿದ್ದರೆ ಉಳಿದವೆಲ್ಲಾ ಪಾಳು ಬಿದ್ದಿದ್ದವು. ಅವೆಲ್ಲವನ್ನು ವೀಕ್ಷಿಸುತ್ತಾ, ಬಂದ ದಾರಿಯಲ್ಲೇ ನಿಧಾನವಾಗಿ ಕೆಳಗಿದು ದೇವಸ್ಥಾನ ತಲುಪಿದೆವು.

‘ಮಹಾವಿಷ್ಣುವಿನ ದಶಾವತಾರಗಳಲ್ಲಿ ಒಂದೆನಿಸಿದ ಪರಶುರಾಮರು ತಮ್ಮ ತಾಯಿ ರೇಣುಕಾಂಬೆಯ ತಲೆ ಕಡಿದ ಸ್ಥಳವೇ ಈ ಚಂದ್ರಗುತ್ತಿ’ಯಾಗಿದ್ದು, ಸ್ಥಳ ಪುರಾಣಗಳ ಪ್ರಕಾರ ಶ್ರೀ ಕೃಷ್ಣ ಮತ್ತು ಜರಾಸಂಧರು ಇಲ್ಲಿ ಪರಸ್ಪರ ಯುದ್ಧ ಮಾಡುತ್ತಿರುವಾಗ, ಶ್ರೀ ಕೃಷ್ಣನು ಇಲ್ಲಿಯ ಬೆಟ್ಟದ ಮೇಲಿರುವ ಒಂದು ಗುಹೆಯಲ್ಲಿ ಅವಿತುಕೊಳ್ಳುತ್ತಾನೆ. ಆತನನ್ನು ಹುಡುಕಿ ಸೋತ ಜರಾಸಂಧನು, ಪೂರ್ತಿ ಬೆಟ್ಟವನ್ನೇ ಎತ್ತಲು ಪ್ರಾರಂಭಿಸಿದಾಗ ಅದನ್ನು ನೋಡಿ ಚಂದ್ರನು ನಕ್ಕಿದ್ದರಿಂದ ಈ ಊರಿಗೆ ‘ಚಂದ್ರಗುತ್ತಿ’ ಎಂಬ ಹೆಸರು ಬಂತು ಎಂದು ಅರ್ಚಕರಾದ ರಾಮ ಭಟ್ ವಿವರಿಸಿದರು. ಮಾರ್ಚ್ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ ಹಾಗೂ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ತಮ್ಮ ಹರಕೆಯನ್ನು ತೀರಿಸುತ್ತಾರೆ. ಉತ್ತರ ಕರ್ನಾಟಕದ ಮಂದಿ ಪಾದಯಾತ್ರೆಯ ಮೂಲಕ ಇಲ್ಲಿ ಆಗಮಿಸುತ್ತಾರೆ. ಹೀಗಾಗಿ ಈ ಪವಿತ್ರ ಕ್ಷೇತ್ರವನ್ನು ‘ಕರ್ನಾಟಕದ ಎರಡನೇಯ ಸವದತ್ತಿ’ ಎಂದು ಕರೆಯಲಾಗುತ್ತದೆ.

ನಮ್ಮ ಚಾರಣವು ಇಷ್ಟೆಲ್ಲಾ ವಿಶೇಷವಾದ ಮಾಹಿತಿ ಹಾಗೂ ವಿಶಿಷ್ಟ ಅನುಭವ ನೀಡುತ್ತದೆ ಎಂದು ನಾವ್ಯಾರು ಅಂದುಕೊಂಡಿರಲಿಲ್ಲ. ಇಲ್ಲಿ ಚಾರಣಕ್ಕೆ ಮಕ್ಕಳು ಹಾಗೂ ಮಹಿಳೆಯರು ಬರುವುದು ಸೂಕ್ತವಲ್ಲ. ಇನ್ನು ಪುರುಷರು ಕೋಟೆ ದಾರಿ ತಿಳಿದವರೊಂದಿಗೆ ಚಾರಣಕ್ಕೆ ಬರುವುದು ಒಳ್ಳೆಯದು.

ಎಲ್ಲಿದೆ ಈ ಸ್ಥಳ?

ಸೊರಬದಿಂದ 20 ಕಿಲೊಮೀಟರ್ ಸಿದ್ದಾಪುರದಿಂದ 14 ಕಿಲೊಮೀಟರ್ ಹಾಗೂ ಅತ್ತ ಶಿರಸಿಯ ಬನವಾಸಿಯಿಂದ ಬರುವುದಾದರೆ 18 ಕಿಲೊಮೀಟರ್ ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.