ನಗರದ ಎನ್. ಆರ್. ಕಾಲೋನಿಯಲ್ಲಿರುವ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ ಜನರಿಗೆ ಪರಿಚಿತಗೊಂಡಿರುವುದು ಮೌಲ್ಯಯುತ ಉಪನ್ಯಾಸಗಳಿಂದ ಮತ್ತು ಅಷ್ಟೇ ಮೌಲ್ಯಯುತ ಗ್ರಂಥಗಳ ಸುಸಜ್ಜಿತ ಗ್ರಂಥಾಲಯದಿಂದ.

ಸಮಾಜದಲ್ಲಿ ವೈಚಾರಿಕತೆಯನ್ನು ಬೆಳೆಸಬೇಕು ಮತ್ತು ಜನಹಿತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಒಂದು ಸಂಸ್ಥೆಯನ್ನು ಪ್ರಾರಂಭಿಸಬೇಕು ಎಂಬುದು ಡಿ.ವಿ.ಜಿ ಅವರ ಉದ್ದೇಶವಾಗಿತ್ತು. ಅವರ ಈ ಹಂಬಲದ ಫಲವಾಗಿಯೇ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಸರ್. ಎಂ. ವಿಶ್ವೇಶ್ವರಯ್ಯ, ಸರ್. ಮಿರ್ಜಾ ಇಸ್ಮಾಯಿಲ್, ಟಿ.ಆರ್. ವೆಂಕಟರಾಮಶಾಸ್ತ್ರಿ, ಎ.ಆರ್. ನಾಗೇಶ್ವ ರ ಅಯ್ಯರ್ ಇವರೆಲ್ಲ ಈ ಸಂಸ್ಥೆಯ ಸ್ಥಾಪಕ ಸದಸ್ಯರಾಗಿದ್ದರು.

ಸಾರ್ವಜನಿಕರಲ್ಲಿ ವೈಚಾರಿಕತೆ ಬೆಳೆಸುವ ಧ್ಯೇಯದ ಭಾಗವಾಗಿಯೇ 1948 ಆಗಸ್ಟ್ 15ರಂದು ‘ಡಿ.ವಿ.ಜಿ. ಸ್ಮಾರಕ ಗ್ರಂಥಾಗಾರ’ವನ್ನು ಪ್ರಾರಂಭಿಸಲಾಯಿತು. ಇಂದು ಈ ಗ್ರಂಥಾಲಯದಲ್ಲಿ 80,000ಕ್ಕೂ ಹೆಚ್ಚು ಪುಸ್ತಕಗಳು ಇವೆ. ಸುಮಾರು 45,000 ಕನ್ನಡ, 25,000 ಇಂಗ್ಲಿಷ್ ಮತ್ತು 3000 ಸಾವಿರ ಸಂಸ್ಕೃತ ಗ್ರಂಥಗಳನ್ನು ಒಳಗೊಂಡಿದೆ.
‘ನಮ್ಮದು ಪೂರ್ತಿಯಾಗಿ ಸಾರ್ವಜನಿಕರ ಸಹಾಯದಿಂದಲೇ ನಡೆಯುವ ಗ್ರಂಥಾಲಯ’ ಎನ್ನುತ್ತಾರೆ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ಯ ಜಂಟಿ ಕಾರ್ಯದರ್ಶಿ ಕೃಷ್ಣ ಮೂರ್ತಿ. ಅವರು 1963ರಿಂದ ಗೋಖಲೆ ಸಂಸ್ಥೆಯ ಒಡನಾಟದಲ್ಲಿದ್ದಾರೆ.

ಎರಡು ಮಹಡಿಗಳ ವಿಶಾಲ ಜಾಗವನ್ನು ವ್ಯಾಪಿಸಿಕೊಂಡಿರುವ ಈ ಗ್ರಂಥಾಲಯ ಸುವ್ಯವಸ್ಥಿತ ನಿರ್ವಹಣೆಯ ಮೂಲಕವೂ ಗಮನ ಸೆಳೆಯುವಂತಿದೆ. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರು ಬಂದು ಈ ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಆದರೆ ಇಲ್ಲಿನ ಪುಸ್ತಕಗಳನ್ನು ಕಡ ತೆಗೆದುಕೊಂಡು ಹೋಗಿ ವಾಪಸ್ ಕೊಡುವ ಅವಕಾಶ ಇರುವುದು ಗ್ರಂಥಾಗಾರದ ಸದಸ್ಯರಿಗೆ ಮಾತ್ರ.

ಒಮ್ಮೆ ತೆಗೆದುಕೊಂಡು ಹೋದ ಪುಸ್ತಕವನ್ನು ಹದಿನೈದು ದಿನಗಳ ಒಳಗೆ ವಾಪಸ್ ಮಾಡಬೇಕು. ಆ ಗಡಿ ಮೀರಿದರೆ ಪ್ರತಿದಿನ ಐದು ರೂಪಾಯಿ ದಂಡ ವಿಧಿಸಲಾಗುವುದು. ಒಂದು ಸಾವಿರ ರೂಪಾಯಿ ಶುಲ್ಕವನ್ನು ಕಟ್ಟಿ ಯಾರು ಬೇಕಾದರೂ ಈ ಗ್ರಂಥಾಲಯದ ಸದಸ್ಯರಾಗಬಹುದು. ಒಮ್ಮೆ ಸದಸ್ಯರಾದರೆ ಅದು ಆಜೀವ ಪರ್ಯಂತ ಲಾಗೂ ಆಗುತ್ತದೆ. ಒಂದೊಮ್ಮೆ ಸದಸ್ಯತ್ವವನ್ನು ಹಿಂಪಡೆಯಲು ಬಯಸಿದರೆ ಅರ್ಧ ಹಣ ಅಂದರೆ ಐನೂರು ರೂಪಾಯಿಯನ್ನು ಮರಳಿಸಲಾಗುವುದು.

ಪುಸ್ತಕಗಳ ಬಳಕೆ
ಸದಸ್ಯರಿಗೆ ಕೂಡ ಇಲ್ಲಿನ ಎಲ್ಲ ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ‘ನಮ್ಮಲ್ಲಿ ತುಂಬಾ ಹಳೆಯ ಪುಸ್ತಕಗಳು ಸಾಕಷ್ಟಿವೆ. ಆದರೆ ಅವೆಲ್ಲವೂ ಜೀರ್ಣಾವಸ್ಥೆಯಲ್ಲಿವೆ. ಒಮ್ಮೆ ಕಳೆದುಕೊಂಡರೆ ಅವು ಬೇರೆಡೆ ಸಿಗುವುದು ಕಷ್ಟ. ಆದ್ದರಿಂದ 1919ರ ನಂತರ ಮುದ್ರಿತವಾದ ಪುಸ್ತಕಗಳನ್ನು ಮಾತ್ರ ಬಳಕೆಗೆ ನೀಡುತ್ತೇವೆ. ಅದಕ್ಕೂ ಹಿಂದಿನ ಪುಸ್ತಕಗಳನ್ನು ಇಲ್ಲಿಯೇ ಬೇಕಾದರೆ ಓದಬಹುದು’ ಎನ್ನುತ್ತಾರೆ ಕೃಷ್ಣಮೂರ್ತಿ.

ಗ್ರಂಥಾಗಾರ ಪ್ರಾರಂಭವಾದ ಆರಂಭದ ದಿನಗಳಲ್ಲಿ ಅಷ್ಟೇನೂ ವ್ಯವಸ್ಥಿತವಾಗಿರಲಿಲ್ಲ. ಸ್ಥಳಾವಕಾಶವೂ ಕಮ್ಮಿಯಿತ್ತು. ಈ ಕಟ್ಟಡವನ್ನು ವಿಸ್ತರಿಸುವ ಉದ್ದೇಶದಿಂದಲೇ 1971ರಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಆಗ ಸಂಗ್ರಹವಾದ ಒಂದು ಲಕ್ಷ ರೂಪಾಯಿ ದೇಣಿಗೆಯಲ್ಲಿ ಕಟ್ಟಡವನ್ನು ವಿಸ್ತರಿಸಲಾಯಿತು.
‘ಕಟ್ಟಡವನ್ನು ವಿಸ್ತರಿಸಿದ್ದರೂ ಪುಸ್ತಕಗಳ ಸುವ್ಯವಸ್ಥಿತ ನಿರ್ವಹಣೆ ಸಾಧ್ಯವಾಗಿರಲಿಲ್ಲ.

ಈಗ ಕೆಲವು ವರ್ಷಗಳ ಹಿಂದೆ ಮೇಲಿನ ಮಹಡಿಯನ್ನು ಸಂಸದರ ನಿಧಿಯಿಂದಲೂ ಕೆಳಗಿನ ಮಹಡಿಯನ್ನು ಇನ್ಫೊಸಿಸ್ ನೀಡಿದ ₹10 ಲಕ್ಷ ಧನಸಹಾಯದಿಂದಲೂ ನವೀಕರಿಸಲಾಗಿದೆ. ನೆಲಕ್ಕೆ ನುಣುಪುಕಲ್ಲು, ಪುಸ್ತಕಗಳನ್ನು ಇಡಲು ಗಾಜಿನ ರ್ಯಾಕ್ಗಳು, ಅಮೂಲ್ಯ ಗ್ರಂಥಗಳ ಸಂಗ್ರಹಣೆಗೆ ಪ್ರತ್ಯೇಕ ಕೊಠಡಿ ಹೀಗೆ ಸುಸಜ್ಜಿತಗೊಳಿಸಲಾಗಿದೆ.

ಗ್ರಂಥ ವೈವಿಧ್ಯ
ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ಪುಸ್ತಕಗಳು ಇಲ್ಲಿ ಲಭ್ಯ ಇವೆ. ತತ್ವಶಾಸ್ತ್ರ, ಸಾಹಿತ್ಯ, ಕಾನೂನು, ಸಾಮಾನ್ಯ ಜ್ಞಾನದ ಪುಸ್ತಕಗಳು, ವಿಮರ್ಶೆ, ಪುರಾಣದ ಅನೇಕ ಮುಖ್ಯ ಗ್ರಂಥಗಳು ಇಲ್ಲಿವೆ. ಒಂದು ಪ್ರತ್ಯೇಕ ಕೊಠಡಿಯಲ್ಲಿ ಕಾಶ್ಮೀರ ಶೈವಿಸಂ, ಜೈನಧರ್ಮ, ಆಯುರ್ವೇದ, ಸಂಗೀತ, ವೇದ, ಸಂಹಿತಾ, ಬ್ರಾಹ್ಮಣ, ಉಪನಿಷತ್, ವ್ಯಾಕರಣ, ಜ್ಯೋತಿಷ, ದರ್ಶನಗಳು, ನ್ಯಾಯಶಾಸ್ತ್ರ, ಯೋಗಶಾಸ್ತ್ರ, ಪೂರ್ವಮೀಮಾಂಸಾ, ಉತ್ತರ ಮೀಮಾಂಸಾ, ಭಾಗವತ, ಪುರಾಣ, ವಾಲ್ಮೀಕಿ ರಾಮಾಯಣ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ.

ಇಲ್ಲಿಯೇ ಡಿ.ವಿ.ಜಿ. ಅವರ ಅನೇಕ ಕೃತಿಗಳು, ಅವರ ಹಸ್ತಪ್ರತಿಯಲ್ಲಿನ ‘ಮಂಕುತಿಮ್ಮನ ಕಗ್ಗ’ದ ಪದ್ಯಗಳನ್ನೂ ನೋಡಬಹುದು. ಹಾಗೆಯೇ ರಾಜ್ಯಸಭೆ, ಲೋಕಸಭೆಗಳ ಚರ್ಚೆಗಳ ಅಕ್ಷರರೂಪ, ಸಾಹಿತ್ಯ ಪರಿಷತ್ತಿನ ಹಳೆಯ ಪತ್ರಿಕೆಗಳು, ಮಾಸ್ತಿ, ಡಿವಿಜಿ ಸಂಪಾದಕತ್ವದ ಪತ್ರಿಕೆಗಳು ಸೇರಿದಂತೆ ಕನ್ನಡದ ಅನೇಕ ಹಳೆಯ ನಿಯತಕಾಲಿಕೆ ಗಳು ಈ ಗ್ರಂಥಾಲಯದ ಸಂಗ್ರಹದಲ್ಲಿವೆ. ಸಣ್ಣ ಪ್ರಮಾಣದ ತಾಳೆಗರಿಗಳ ಸಂಗ್ರಹವೂ ಇಲ್ಲಿದೆ.

ಕನ್ನಡವಷ್ಟೇ ಅಲ್ಲದ ಕಲೆ, ಸಾಹಿತ್ಯ, ರಾಜಕೀಯ, ಚರಿತ್ರೆಗಳಿಗೆ ಸಂಬಂಧಿಸಿದ ಅನೇಕ ಇಂಗ್ಲಿಷ್ ಪುಸ್ತಕಗಳೂ ಇಲ್ಲಿ ಲಭ್ಯ.
ಹಳೆ ಪುಸ್ತಕಗಳಿಗೇ ಮನ್ನಣೆ ಹಾಗೆ ನೋಡಿದರೆ ಈ ಗ್ರಂಥಾಲಯದಲ್ಲಿ ಹೊಸ ಲೇಖಕರ ಪುಸ್ತಕಗಳು ಕಡಿಮೆಯೇ.
‘ಇಲ್ಲಿ ಹೊಸ ಲೇಖಕರ ಪುಸ್ತಕಗಳನ್ನು ಹುಡುಕಿಕೊಂಡು ಬರುವವರೂ ಕಡಿಮೆಯೇ. ಯಾರಾದರೂ ನಮಗೆ ಪುಸ್ತಕಗಳನ್ನು ದೇಣಿಗೆ ನೀಡಲು ಬಂದರೆ ಅವು 1945ಕ್ಕಿಂತ ಹಿಂದೆ ಪ್ರಕಟವಾಗಿದ್ದರೆ ಮಾತ್ರ ಸ್ವೀಕರಿಸುತ್ತೇವೆ. ಆದ್ದರಿಂದ ನಮ್ಮಲ್ಲಿ ಹಳೆಯ ಪುಸ್ತಕಗಳ ಸಂಗ್ರಹವೇ ಹೆಚ್ಚಿದೆ’ ಎನ್ನುತ್ತಾರೆ ಕೃಷ್ಣಮೂರ್ತಿ.

ಗ್ರಂಥಾಗಾರದ ವಿಳಾಸ: ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’, ಬುಲ್ ಟೆಂಪಲ್ ರಸ್ತೆ, ಎನ್.ಆರ್. ಕಾಲೋನಿ.
ದೂರವಾಣಿ: 080 26613148/ 26613147 ಮಿಂಚಂಚೆ: gipablr@dataone.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.