ಹಾಥರಸ್ (ಉತ್ತರ ಪ್ರದೇಶ): ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ನಡೆದ ಸತ್ಸಂಗದ ವೇಳೆ ಕಾಲ್ತುಳಿತದಿಂದ ಸಂಭವಿಸಿದ ದುರಂತ ಘಟನೆ ಕುರಿತಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬುಧವಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿಗಳು ಸಹ ನ್ಯಾಯಾಂಗ ತನಿಖೆ ನಡೆಸುವ ಸಮಿತಿಯಲ್ಲಿ ಇರುವರು. ಈ ದುರ್ಘಟನೆಗೆ ಯಾರು ಕಾರಣ ಎಂಬ ಬಗ್ಗೆ ಸಮಿತಿ ಸಮಗ್ರವಾಗಿ ತನಿಖೆ ನಡೆಸಲಿದೆ ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ.

‘ಮೃತರ ಪೈಕಿ 6 ಮಂದಿ ಹೊರ ರಾಜ್ಯದವರು. ನಾಲ್ವರು ಹರಿಯಾಣ, ತಲಾ ಒಬ್ಬರು ಮಧ್ಯಪ್ರದೇಶ ಮತ್ತು ರಾಜಸ್ಥಾನದವರು’ ಎಂದಿದ್ದಾರೆ.

‘ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಖಾತ್ರಿಪಡಿಸುತ್ತೇವೆ. ಇಂತಹ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿ ಪ್ರಮಾಣಿತ ಕಾರ್ಯವಿಧಾನಗಳನ್ನು (ಎಸ್ಒಪಿ) ರೂಪಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಪಿತೂರಿ ಶಂಕೆ: ಫೂಲರಾಯ್ ಗ್ರಾಮದಲ್ಲಿ ಸಂಭವಿಸಿದ ಕಾಲ್ತುಳಿತದ ಹಿಂದೆ ಪಿತೂರಿ ಇರುವ ಬಗ್ಗೆ ಅವರು ಶಂಕೆ ವ್ಕಕ್ತಪಡಿಸಿದ್ದಾರೆ.

ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ನಂತರ ಹಾಥರಸ್ನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಕಾರ್ಯಕ್ರಮದ ಆಯೋಜಕರು ಹಾಗೂ ‘ಸೇವಾದಾರ’ರನ್ನು ವಿಚಾರಣೆಗೆ ಒಳಪಡಿಸಲಾಗುವುದು. ಸಾಮಾನ್ಯವಾಗಿ, ಅಧಿಕಾರಿಗಳು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳುವುದಕ್ಕೆ ಸೇವಾದಾರರು ಅವಕಾಶ ನೀಡುವುದಿಲ್ಲ. ಈ ದುರ್ಘಟನೆ ಕುರಿತಂತೆ ಸೇವಾದಾರರು ಮಾಹಿತಿ ಮುಚ್ಚಿಟ್ಟಿದ್ದು, ಪೊಲೀಸರು ಸ್ಥಳಕ್ಕೆ ತೆರಳಿದಾಗ ಓಡಿ ಹೋಗಿದ್ದಾರೆ’ ಎಂದು ತಿಳಿಸಿದ್ದಾರೆ.

ಗಾಯಾಳುಗಳ ಭೇಟಿ: ‘ಸತ್ಸಂಗ’ದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬುಧವಾರ ಭೇಟಿ ಮಾಡಿ, ಸಾಂತ್ವನ ಹೇಳಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿದರು. ನಂತರ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಮೃತರ ಸಂಖ್ಯೆ 121ಕ್ಕೆ ಏರಿಕೆ

ಕಾಲ್ತುಳಿತದಲ್ಲಿ ಮೃತರ ಸಂಖ್ಯೆ ಬುಧವಾರ 121ಕ್ಕೆ ಏರಿಕೆಯಾಗಿದೆ. ಈ ದುರ್ಘಟನೆಯಲ್ಲಿ 28 ಜನರು ಗಾಯಗೊಂಡಿದ್ದಾರೆ. ಮೃತಪಟ್ಟಿರುವ 121 ಮಂದಿ ಪೈಕಿ ಬಹುತೇಕರ ಗುರುತು ಪತ್ತೆ ಹಚ್ಚಲಾಗಿದೆ ಎಂದು ಪರಿಹಾರ ಕಾರ್ಯ ಆಯುಕ್ತರ ಕಚೇರಿ ತಿಳಿಸಿದೆ.

ಎಫ್ಐಆರ್ನಲ್ಲಿ ಬಾಬಾ ಹೆಸರಿಲ್ಲ

‘ಸತ್ಸಂಗ’ ಆಯೋಜಕರ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ‘ಕಥಾವಾಚಕ’ ಭೋಲೆ ಬಾಬಾ (ಸಾಕಾರ ವಿಶ್ವಹರಿ ಭೋಲೆ ಬಾಬಾ) ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೆ, ಘಟನೆ ಕುರಿತು ನೀಡಿರುವ ದೂರಿನಲ್ಲಿ ಬಾಬಾ ಹೆಸರು ಇದೆ.

ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 105 (ಉದ್ದೇಶಪೂರ್ವಕವಲ್ಲದ ನರಹತ್ಯೆ), 110 (ಉದ್ದೇಶಪೂರ್ವಕ ನರಹತ್ಯೆಗೆ ಯತ್ನ), 126(2)(ಅಕ್ರಮವಾಗಿ ಬಂಧನದಲ್ಲಿಡುವುದು), 223 (ಅಧಿಕಾರಿಗಳು ಹೊರಡಿಸಿದ ಆದೇಶದ ಉಲ್ಲಂಘನೆ) ಹಾಗೂ 238ರಡಿ (ಸಾಕ್ಷ್ಯ ನಾಶ) ಎಫ್ಐಆರ್ ದಾಖಲಿಸಲಾಗಿದೆ.

‘ಮುಖ್ಯ ಸೇವಾದಾರ’ ದೇವಪ್ರಕಾಶ ಮಧುಕರ ಹಾಗೂ ಇತರ ಆಯೋಜಕರ ಹೆಸರುಗಳನ್ನು ಸಿಕಂದ್ರಾರಾವ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರು ಮತ್ತು ಸ್ಥಳೀಯ ಆಡಳಿತಕ್ಕೆ ಎಫ್ಐಆರ್ನಲ್ಲಿ ಕ್ಲೀನ್ಚಿಟ್ ನೀಡಲಾಗಿದೆ. ಪೊಲೀಸರು ಹಾಗೂ ಸ್ಥಳೀಯ ಆಡಳಿತವು ತಮ್ಮಲ್ಲಿನ ಸಂಪನ್ಮೂಲ ಬಳಸಿಕೊಂಡರು ಅಹಿತಕರ ಘಟನೆ ತಡೆಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ.

80 ಸಾವಿರ ಜನರು ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದ ಅಂದಿನ ಕಾರ್ಯಕ್ರಮದಲ್ಲಿ 2.5 ಲಕ್ಷ ಜನರು ಪಾಲ್ಗೊಂಡಿದ್ದರು. ಪಾಲ್ಗೊಳ್ಳಲಿದ್ದ ಜನರ ಕುರಿತ ಮಾಹಿತಿಯನ್ನು ಪರವಾನಗಿ ಪಡೆಯುವ ವೇಳೆ ಆಯೋಜಕರು ಮುಚ್ಚಿಟ್ಟಿದ್ದರು ಎಂದು ಎಫ್ಐಆರ್ನಲ್ಲಿ ವಿವರಿಸಲಾಗಿದೆ.

ಕಾರ್ಯಕ್ರಮ ಮುಗಿದ ನಂತರ ಜನ ಮತ್ತು ವಾಹನ ದಟ್ಟಣೆ ನಿಯಂತ್ರಿಸಲು ಆಯೋಜಕರು ಸಹಕಾರ ನೀಡಲಿಲ್ಲ. ದುರ್ಘಟನೆ ನಡೆದ ನಂತರ, ಸಾಕ್ಷ್ಯಗಳನ್ನು ಮರೆಮಾಚಲು ಯತ್ನಿಸಿದ್ದಾರೆ ಎಂದೂ ಹೇಳಲಾಗಿದೆ.

‘ಭದ್ರತಾ ಸಿಬ್ಬಂದಿಯ ಲೋಪ’

ಘಟನೆ ಕುರಿತಂತೆ ಸ್ಥಳೀಯ ಆಡಳಿತವೂ ಪ್ರಾಥಮಿಕ ವರದಿಯೊಂದನ್ನು ಸಿದ್ಧಪಡಿಸಿದ್ದು, ಭೋಲೆ ಬಾಬಾ ಭದ್ರತೆ ಉಸ್ತುವಾರಿ ಹೊಣೆ ಹೊತ್ತ ‘ಕಮಾಂಡೊ’ಗಳ ವಿರುದ್ಧ ಆರೋಪ ಹೊರಿಸಲಾಗಿದೆ.

‘ಮಧ್ಯಾಹ್ನ 2 ಗಂಟೆ ಹೊತ್ತಿಗೆ ಭೋಲೆ ಬಾಬಾ ಕಾರ್ಯಕ್ರಮ ನಡೆದ ಸ್ಥಳದಿಂದ ಹೊರಡಲು ಮುಂದಾದಾಗ, ಅವರ ಪಾದಗಳನ್ನು ಸ್ಪರ್ಶಿಸಲು ಭಾರಿ ಸಂಖ್ಯೆಯಲ್ಲಿ ಭಕ್ತರು ಮುಂದಾದಾಗ ನೂಕು ನುಗ್ಗಲು ಉಂಟಾಯಿತು. ‘ಕಮಾಂಡೊ’ಗಳು ಭಕ್ತರನ್ನು ಬಲವಂತದಿಂದ ಚದುರಿಸಲು ಮುಂದಾದರು. ‘ಸೇವಾದಾರ’ರು ಸಹ ಜನರನ್ನು ತಳ್ಳಲು ಆರಂಭಿಸಿದ್ದರಿಂದ ಕಾಲ್ತುಳಿತ ಉಂಟಾಯಿತು’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಕಮಾಂಡೊಗಳು ದೂರ ಸರಿಸಿದ ನಂತರ ಕೆಲ ಭಕ್ತರು ಕಾರ್ಯಕ್ರಮದ ಸ್ಥಳದ ಬಳಿಯ ಜಮೀನುಗಳತ್ತ ಓಡಲು ಆರಂಭಿಸಿದರು. ಆ ಜಾಗ ಇಳಿಜಾರಿನಿಂದ ಕೂಡಿರುವ ಕಾರಣ ಹಲವರು ಕೆಳಗೆ ಬಿದ್ದರು. ಹೊರಗೆ ಓಡಿ ಬರುತ್ತಿದ್ದವರ ಸಂಖ್ಯೆ ಹೆಚ್ಚಿತಲ್ಲದೇ, ಹೀಗೆ ಓಡಿ ಬಂದವರು ಕೆಳಗೆ ಬಿದ್ದವರನ್ನು ತುಳಿಯುತ್ತಾ ಸಾಗಿದರು’ ಎಂದೂ ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.