ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಸಭಾ ಚುನಾವಣೆ: NCP ಅಭ್ಯರ್ಥಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ನಾಮಪತ್ರ

Published 13 ಜೂನ್ 2024, 10:08 IST
Last Updated 13 ಜೂನ್ 2024, 10:08 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಅವರ ಪತ್ನಿ ಸುನೇತ್ರಾ ಅವರು ರಾಜ್ಯಸಭಾ ಚುನಾವಣೆಗೆ ಎನ್‌ಸಿಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಈ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹದಲ್ಲಿ ಪಕ್ಷದ ಹಿರಿಯ ಮುಖಂಡ ಹಾಗೂ ರಾಜ್ಯದ ಮಂತ್ರಿ ಛಗನ್ ಬುಜಬಲ್ ಇದ್ದರು. ಆದರೆ, ಸುನೇತ್ರಾ ಪವಾರ್ ಅವರ ಸ್ಪರ್ಧೆ ಘೋಷಣೆಯಾಗುತ್ತಿದ್ದಂತೆ, ಇದು ಪಕ್ಷದ ನಿರ್ಧಾರವಾಗಿರುವುದರಿಂದ ಬೇಸರವಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಇದಾದ ಬಳಿಕ ಸುನೇತ್ರಾ ಅವರನ್ನು ರಾಜ್ಯಸಭಾ ಚುನಾವಣೆಯ ಕಣಕ್ಕಿಳಿಸುವ ಕುರಿತು ಎನ್‌ಸಿಪಿ ನಿರ್ಧರಿಸಿತ್ತು. ನಾನು ಸ್ಪರ್ಧಿಸಬೇಕೆಂಬ ಉತ್ಸಾಹದಲ್ಲಿದ್ದೆ. ಆದರೆ ಬುಧವಾರ ಸಂಜೆ ನಡೆದ ಪಕ್ಷದ ಸಭೆಯಲ್ಲಿ, ಸುನೇತ್ರಾ ಅವರ ಹೆಸರು ಅಂತಿಮಗೊಂಡಿತು. ಈ ನಿರ್ಧಾರ ಅಜಿತ್ ಪವಾರ್ ಒಬ್ಬರದ್ದೇ ಅಲ್ಲ’ ಎಂದಿದ್ದಾರೆ. 

ಲೋಕಸಭಾ ಚುನಾವಣೆಯಲ್ಲಿ ಸುನೇತ್ರಾ ಅವರು ಬಾರಾಮತಿ ಕ್ಷೇತ್ರದಿಂದ ತಮ್ಮ ನಾದಿನಿ ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಸುಪ್ರಿಯಾ ಅವರು ಈ ಕ್ಷೇತ್ರದಲ್ಲಿ ನಾಲ್ಕನೇ ಗೆಲುವು ದಾಖಲಿಸಿದ್ದರು. ಅಸ್ಸಾಂ, ಬಿಹಾರ ಹಾಗೂ ಮಹಾರಾಷ್ಟ್ರದ ತಲಾ 2, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತ್ರಿಪುರಾದಿಂದ ತಲಾ 1 ಸ್ಥಾನ ಸೇರಿದಂತೆ ರಾಜ್ಯಸಭೆಯಲ್ಲಿ ತೆರವಾದ 10 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.

ಭುಜಬಲ್ ಅವರು ನಾಸಿಕ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ಹೊಂದಿದ್ದರು. ಆದರೆ ಎನ್‌ಸಿಪಿಯ ಮೈತ್ರಿ ಪಕ್ಷವಾದ ಏಕನಾಥ ಶಿಂದೆ ಅವರ ಶಿವಸೇನೆಯು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿತು. ಆದರೆ ಇಲ್ಲಿ, ಉದ್ಧವ್ ಠಾಕ್ರೆ ಬಣದ ಶಿವಸೇನಾ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಪಿಯೂಷ್ ಗೋಯಲ್ ಹಾಗೂ ಉದಯನ್‌ರಾಜೇ ಬೋಸ್ಲೆ ಅವರ ಅವಧಿ ಕೊನೆಗೊಂಡಿದ್ದರಿಂದ ತೆರವಾದ ಸ್ಥಾನಗಳಿಗೆ ಈ ಚುನಾವಣೆ ಘೋಷಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT