ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲೆ ಯತ್ನ: ಆಂಧ್ರ ಮಾಜಿ ಸಿಎಂ ಜಗನ್, ಇಬ್ಬರು IPS ಅಧಿಕಾರಿಗಳ ವಿರುದ್ಧ ಪ್ರಕರಣ

Published 12 ಜುಲೈ 2024, 9:36 IST
Last Updated 12 ಜುಲೈ 2024, 9:36 IST
ಅಕ್ಷರ ಗಾತ್ರ

ಗುಂಟೂರು: ಮಾಜಿ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ, ಇಬ್ಬರು ಐಪಿಎಸ್‌ ಅಧಿಕಾರಿಗಳು ಹಾಗೂ ಮತ್ತಿಬ್ಬರು ನಿವೃತ್ತ ಅಧಿಕಾರಿಗಳ ವಿರುದ್ಧ ಆಂಧ್ರ ಪ್ರದೇಶ ಪೊಲೀಸರು 'ಕೊಲೆ ಯತ್ನ' ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಡಳಿತಾರೂಢ ತೆಲುಗು ದೇಶಂ (ಟಿಡಿಪಿ) ಪಕ್ಷದ ಶಾಸಕ ಕೆ. ರಘುರಾಮ ಕೃಷ್ಣ ರಾಜು ದೂರು ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

'ರಾಜು ಅವರು ಒಂದು ತಿಂಗಳ ಹಿಂದೆಯೇ ಇ–ಮೇಲ್‌ ಮೂಲಕ ದೂರು ನೀಡಿದ್ದರು. ಕಾನೂನು ಸಲಹೆಗಳನ್ನು ಪಡೆದ ಬಳಿಕ, ಮಾಜಿ ಸಿಎಂ ಹಾಗೂ ಇತರರ ವಿರುದ್ಧ ಗುರುವಾರ ರಾತ್ರಿ 7ಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದೇವೆ' ಎಂದು ಅಧಿಕಾರಿ ಹೇಳಿದ್ದಾರೆ. ಉಂಡಿ ಕ್ಷೇತ್ರದ ಶಾಸಕ ರಾಜು ತಮ್ಮನ್ನು 'ಕಸ್ಟಡಿಯಲ್ಲಿಟ್ಟು ಕಿರುಕುಳ ನೀಡಲಾಗಿತ್ತು' ಎಂದು ಆರೋಪಿಸಿರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.

ಗುಂಟೂರಿನ ನಾಗರಾಮ್‌ಪಳೆಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಎಸ್‌ ಅಧಿಕಾರಿಗಳಾದ ಪಿ.ವಿ. ಸುನೀಲ್‌ ಕುಮಾರ್, ಪಿ.ಎಸ್‌.ಆರ್‌ ಸೀತಾರಾಮಾಂಜನೇಯುಲು ಮತ್ತು ನಿವೃತ್ತ ಅಧಿಕಾರಿಗಳಾದ ಆರ್‌. ವಿಜಯ್‌ ಪೌಲ್‌, ಜಿ.ಪ್ರಭಾವತಿ ಅವರು ಪ್ರಕರಣದಲ್ಲಿ ಸಿಲುಕಿರುವ ಇತರರು.

ಕೋವಿಡ್‌–19ರ 2ನೇ ಅಲೆ ಸಂದರ್ಭದಲ್ಲಿ ರಾಜು ಅವರನ್ನು ಬಂಧಿಸಲಾಗಿತ್ತು. ಆ ವಿಚಾರ ಇದೀಗ ರಾಜ್ಯದಾದ್ಯಂತ ಸುದ್ದಿಯಾಗಿದೆ. ತಮ್ಮ ವಿರುದ್ಧ ಮಾಜಿ ಸಿಎಂ ಹಾಗೂ ಇತರರು 'ಕ್ರಿಮಿನಲ್‌ ಸಂಚು' ನಡೆಸಿದ್ದರು ಎಂದು ರಾಜು ಆರೋಪಿಸಿದ್ದಾರೆ.

'ಆಂದ್ರ ಪ್ರದೇಶದ ಆಗಿನ ಸರ್ಕಾರ ಸಿಐಡಿ ಅಪರಾಧ ದಳದ (ಸಿಬಿಸಿಐಡಿ) ಮೂಲಕ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡಿತ್ತು. ಯಾವುದೇ ರೀತಿಯ ಕಾನೂನಾತ್ಮಕ ಪ್ರಕ್ರಿಯೆಗಳನ್ನು ನಡೆಸದೆ 2021ರ ಮೇ 14ರಂದು ನನ್ನನ್ನು ಬಂಧಿಸಲಾಗಿತ್ತು. ಪೊಲೀಸ್‌ ವಾಹನದಲ್ಲಿ ಅಮಾನವೀಯವಾಗಿ ಹಲ್ಲೆ ಮಾಡಲಾಗಿತ್ತು. ಅದೇ ದಿನ ರಾತ್ರಿ ಬಲವಂತವಾಗಿ ಗುಂಟೂರಿಗೆ ಕರೆದೊಯ್ಯಲಾಗಿತ್ತು' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆಗ ಜಗನ್‌ ಮುಖ್ಯಮಂತ್ರಿಯಾಗಿದ್ದರು. ಸುನೀಲ್‌ ಕುಮಾರ್ ಅವರು ಸಿಐಡಿ ಮುಖ್ಯಸ್ಥರಾಗಿದ್ದರು. ಪೌಲ್‌ ಅವರು ಸಿಐಡಿಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಸೀತಾರಾಮಾಂಜನೇಯುಲು ಗುಪ್ತಚರ ವಿಭಾಗದಲ್ಲಿದ್ದರೆ, ಪ್ರಭಾವತಿ ಗುಂಟೂರು ಜಿಲ್ಲಾಸ್ಪತ್ರೆಯ ಅಧೀಕ್ಷಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT