ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇತಿಹಾಸ ನಿರ್ಮಾಣದತ್ತ ಜಮ್ಮು–ಕಾಶ್ಮೀರ, ಶಾಂತಿಯುತ ಮತದಾನವೇ ಸಾಕ್ಷಿ: ಸಿನ್ಹಾ

Published : 2 ಅಕ್ಟೋಬರ್ 2024, 14:16 IST
Last Updated : 2 ಅಕ್ಟೋಬರ್ 2024, 14:16 IST
ಫಾಲೋ ಮಾಡಿ
Comments

ಶ್ರೀನಗರ: ಜಮ್ಮು ಮತ್ತು ಕಾಶ್ಮೀರವು 'ಇತಿಹಾಸ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದೆ' ಎಂಬುದಕ್ಕೆ ಶಾಂತಿಯುತ ಮತದಾನ ಹಾಗೂ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ ಎಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಬುಧವಾರ ಹೇಳಿದ್ದಾರೆ.

ರಾಜಭವನದಲ್ಲಿ ನಡೆದ 'ಗಾಂಧಿ ಜಯಂತಿ' ಕಾರ್ಯಕ್ರಮದಲ್ಲಿ ಮಾತನಾಡಿದ ಸಿನ್ಹಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಹಾಗೂ ಪ್ರಗತಿಯನ್ನು ಕಾಣಲು ಬಾಪು (ಮಹಾತ್ಮ ಗಾಂಧಿ) ಸದಾ ಬಯಸುತ್ತಿದ್ದರು. ಹೊಸ ತಲೆಮಾರಿನ ಜನರು ಬಾಪು ಅವರ ಆಲೋಚನೆಗಳಿಂದ ಸ್ಫೂರ್ತಿ ಪಡೆಯಬೇಕು ಎಂದಿದ್ದಾರೆ.

'ಯುವ ಜನಾಂಗವು ಇದನ್ನು (ಮಹಾತ್ಮ ಗಾಂಧಿ ಅವರ ಆಲೋಚನೆಗಳನ್ನು) ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಹಾಗಾಗಿಯೇ, ಹಾನಿಕಾರಕ ಸಾಧನಗಳಾದ ಗನ್‌ಗಳು ಮತ್ತು ಕಲ್ಲುಗಳು ಅವರ ಕೈಯಲ್ಲಿ ಇಲ್ಲ. ಬದಲಾಗಿ, ಶಾಂತಿ ಮತ್ತು ಭರವಸೆಯ ಕನಸುಗಳು ಅವರ ಕಣ್ಣುಗಳಲ್ಲಿ ಕಾಣುತ್ತಿವೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಜಮ್ಮು ಮತ್ತು ಕಾಶ್ಮೀರದಲ್ಲಿ ನಿನ್ನೆ ಮುಕ್ತಾಯವಾಗಿದೆ. ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಮತ್ತು ಸದ್ಯದ ವಿಧಾನಸಭಾ ಚುನಾವಣೆಯು ಶಾಂತಿಯುತ, ಮುಕ್ತ ಮತ್ತು ಪಾರದರ್ಶಕವಾಗಿ ನಡೆದಿವೆ. ಇದು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಚರ್ಚೆಯ ವಿಚಾರವಾಗಿದೆ' ಎಂದು ಹೇಳಿಕೊಂಡಿದ್ದಾರೆ.

ಅಪಾರ ಸಂಖ್ಯೆಯ ಜನರು ಮತದಾನದಲ್ಲಿ ಪಾಲ್ಗೊಂಡಿರುವುದನ್ನು ಉಲ್ಲೇಖಸಿದ ಅವರು, 'ಕೇಂದ್ರಾಡಳಿತ ಪ್ರದೇಶದ 1.4 ಕೋಟಿ ಜನರು ಸಾಂವಿಧಾನಿಕ ಮೌಲ್ಯಗಳಲ್ಲಿ ನಂಬಿಕೆ ಹೊಂದಿರುವುದನ್ನು ಒತ್ತಿ ಹೇಳಿದ್ದಾರೆ. ಮತದಾನದ ಮೂಲಕ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ' ಎಂದು ಪ್ರತಿಪಾದಿಸಿದ್ದಾರೆ.

'ಭಯ ಮುಕ್ತ ಜಮ್ಮು ಮತ್ತು ಕಾಶ್ಮೀರ ನಿರ್ಮಾಣ ಮಾಡುವ ಪ್ರಯತ್ನವು ಕಳೆದ 4–5 ವರ್ಷಗಳಲ್ಲಿ ದೊಡ್ಡ ಯಶಸ್ಸು ಕಂಡಿದೆ ಎಂಬುದಕ್ಕೆ ಇದೇ ಸಾಕ್ಷಿ. ಶಾಂತಿ ಮತ್ತು ಪ್ರಗತಿಯ ವೇಗವನ್ನು ಇದೇ ರೀತಿ ಕಾಯ್ದುಕೊಳ್ಳಬೇಕು ಎಂದು ಯುವ ಜನಾಂಗಕ್ಕೆ ಮನವಿ ಮಾಡುತ್ತೇನೆ. ಸ್ವಾರ್ಥರಹಿತ ಸೇವೆಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು' ಎಂದು ಪ್ರೇರೇಪಿಸಿದ್ದಾರೆ.

'ಪ್ರಜಾಪ್ರಭುತ್ವವನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸುವುದಿರಲಿ, ಶಾಂತಿಯುತ ಚುನಾವಣೆ ನಡೆಸುವುದಾಗಿರಲಿ ಅಥವಾ ಅಭಿವೃದ್ಧಿ ಕಾರ್ಯಗಳೇ ಆಗಿರಲಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ ಐದು ವರ್ಷಗಳಲ್ಲಿ ಆಗಿರುವ ಕೆಲಸಗಳು, ಜಮ್ಮು ಮತ್ತು ಕಾಶ್ಮೀರವು ಹಳೆಯದನ್ನೆಲ್ಲ ಮರೆತು ಇತಿಹಾಸ ನಿರ್ಮಾಣದಲ್ಲಿ ತೊಡಗಿಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ' ಎಂದು ಪ್ರತಿಪಾದಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಲಕ್ಷಾಂತರ ಯುವಕರು ಉದ್ಯಮಗಳನ್ನು ಆರಂಭಿಸಿದ್ದಾರೆ. ಸಾವಿರಾರು ಮಂದಿ ತಮ್ಮದೇ ಸ್ಟಾರ್ಟ್‌–ಅಪ್‌ಗಳಲ್ಲಿ ತೊಡಗಿಕೊಂಡಿದ್ದು, ಅದರಲ್ಲಿ ಮೂರನೇ ಒಂದರಷ್ಟನ್ನು ನಮ್ಮ ಹೆಣ್ಣು ಮಕ್ಕಳು ಮುನ್ನಡೆಸುತ್ತಿದ್ದಾರೆ. ಶಾಲೆಗಳು ವರ್ಷಪೂರ್ತಿ ನಡೆಯುತ್ತಿವೆ ಎಂದಿದ್ದಾರೆ.

ಯುವಕರನ್ನು ದಾರಿತಪ್ಪಿಸುವ ಯತ್ನಗಳು ನಡೆಯುತ್ತಿವೆ ಎಂದೂ ಹೇಳಿರುವ ಸಿನ್ಹಾ, ಹಿಂಸೆಯು ಸಮಾಜವನ್ನು ಸದಾ ವಿಭಜಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತದಾನ ಮುಕ್ತಾಯ
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮಿರ ವಿಧಾನಸಭೆಗೆ ಮೂರು ಹಂತಗಳಲ್ಲಿ ಮತದಾನ ಮುಕ್ತಾಯವಾಗಿದೆ. ಸೆಪ್ಟೆಂಬರ್‌ 18ರಂದು ಮೊದಲ ಹಂತದಲ್ಲಿ 24 ಕ್ಷೇತ್ರಗಳಿಗೆ, ಸೆಪ್ಟೆಂಬರ್‌ 25ರಂದು 2ನೇ ಹಂತದಲ್ಲಿ 26 ಕ್ಷೇತ್ರಗಳಿಗೆ ಹಾಗೂ ಅಕ್ಟೋಬರ್‌ 1ರಂದು 40 ಕ್ಷೇತ್ರಗಳಿಗೆ ಅಂತಿಮ ಹಂತದಲ್ಲಿ ಮತದಾನವಾಗಿದೆ. ಅಕ್ಟೋಬರ್‌ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT