ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಥರಸ್‌ ಕಾಲ್ತುಳಿತ ಪ್ರಕರಣ: ವಿವಾದಾತ್ಮಕ ವ್ಯಕ್ತಿ ‘ಭೋಲೆ ಬಾಬಾ‘

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೆರೆವಾಸ
Published 4 ಜುಲೈ 2024, 1:24 IST
Last Updated 4 ಜುಲೈ 2024, 1:24 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯಲ್ಲಿ ಸತ್ಸಂಗ ನಡೆಯುತ್ತಿದ್ದ ವೇಳೆ ಉಂಟಾದ ಕಾಲ್ತುಳಿತದಲ್ಲಿ 121 ಜನರು ಮೃತಪಟ್ಟ ದುರಂತ ಸಂಭವಿಸಿದ ಬೆನ್ನಲ್ಲೇ, ಕಾರ್ಯಕ್ರಮದ ಕೇಂದ್ರಬಿಂದುವೆನಿಸಿದ ‘ಸ್ವಯಂ ಘೋಷಿತ ದೇವ ಮಾನವ’ ಭೋಲೆ ಬಾಬಾ ಕುರಿತ ಅನೇಕ ಸಂಗತಿಗಳು ಹೊರಬರುತ್ತಿವೆ.

ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯ ಬಹದೂರ್ ಎಂಬ ಊರಲ್ಲಿ ಜನಿಸಿರುವ ಭೋಲೆ ಬಾಬಾ ಮೂಲ ಹೆಸರು ಸೂರಜ್‌ ಪಾಲ್‌ ಸಿಂಗ್.

‘ಸೂರಜ್‌ ಸಿಂಗ್ 10 ವರ್ಷಗಳಷ್ಟು ಅವಧಿಗೆ ‍ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದರು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಸುಧೀರ್‌ ಕುಮಾರ್‌ ಹೇಳಿಕೆ ಉಲ್ಲೇಖಿಸಿ ರಾಯಿಟರ್ಸ್‌ ವರದಿ ಮಾಡಿದೆ.

ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸೂರಜ್‌ ಸಿಂಗ್‌ಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿನಿಂದ ಬಿಡುಗಡೆಗೊಂಡ ನಂತರ ತಮ್ಮ ಹೆಸರನ್ನು ‘ಸಾಕಾರ ವಿಶ್ವಹರಿ ಬಾಬಾ’(ಭೋಲೆ ಬಾಬಾ) ಎಂದು ಬದಲಿಸಿಕೊಂಡು ‘ಕಥಾವಾಚಕ’ರಾಗಿರುವ ಅವರು, ‘ಸತ್ಸಂಗ’ಗಳನ್ನು ಆಯೋಜಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

‘ಭೋಲೆ ಬಾಬಾ’ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಆರೋಪಗಳಿವೆ. ಆಗ್ರಾ, ಎಟಾ, ಕಾಸ್‌ಗಂಜ್, ಫರುಖ್ಖಾಬಾದ್ ನಗರಗಳಲ್ಲದೇ, ರಾಜಸ್ಥಾನದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಮೊದಲ ಮಂಗಳವಾರ ‘ಸತ್ಸಂಗ’: 

ಭೋಲೆ ಬಾಬಾ ‘ಸತ್ಸಂಗ’ಗಳನ್ನು ಆಯೋಜಿಸುವ ಮೂಲಕ ಪ್ರಸಿದ್ಧಿಗೆ ಬಂದವರು. ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದಾರೆ. ಉತ್ತರ ಪ್ರದೇಶ,ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರವಾಸ ಕೈಗೊಳ್ಳುವ ಅವರು, ಪ್ರತಿ ತಿಂಗಳು ಮೊದಲ ಮಂಗಳವಾರ ‘ಸತ್ಸಂಗ’ಗಳನ್ನು ಆಯೋಜಿಸುತ್ತಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಾಲ್ತುಳಿತ ದುರ್ಘಟನೆ ನಂತರ ಅವರು ತಲೆ ಮರೆಸಿಕೊಂಡಿದ್ದಾರೆ. ಆಯೋಜಕರಲ್ಲಿ ಒಬ್ಬರಾದ ದೇವಪ್ರಕಾಶ ಮಧುಕರ ಎಂಬುವವರು ಸಹ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಡಿವೈಎಸ್‌ಪಿ ಸುನೀಲ್‌ಕುಮಾರ್‌ ಸಿಂಗ್‌ ಚೌಹಾಣ್ ನೇತೃತ್ವದ ಪೊಲೀಸರ ತಂಡವು ಬಾಬಾ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದೆ. ಮೈನ್‌ಪುರಿಯಲ್ಲಿರುವ ಆಶ್ರಮದ ಮೇಲೂ ದಾಳಿ ನಡೆಸಲಾಗಿದ್ದು, ಬಾಬಾ ಪತ್ತೆಯಾಗಿಲ್ಲ ಎಂದು ಮೂಲಗಳು ಹೇಳಿವೆ.

ತಮ್ಮ ಪೂರ್ವಿಕರ ಗ್ರಾಮದಲ್ಲಿ ‘ಭೋಲೆ ಬಾಬಾ’ ಸ್ಥಾಪಿಸಿರುವ ಆಶ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಅವರ ಆಶೀರ್ವಾದ ಪಡೆಯುವುದಕ್ಕೆ ಹಾತೊರೆಯುತ್ತಾರೆ.

ಪ್ರಮುಖ ರಾಜಕಾರಣಿಗಳೊಂದಿಗೆ ಬಾಬಾ ಸಂಪರ್ಕ ಹೊಂದಿದ್ದು, ಹಿರಿಯ ರಾಜಕಾರಣಿಗಳೊಂದಿಗೆ ಅವರು ಇರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮೌಢ್ಯರಹಿತ ಸಮಾಜದ ಕನಸಿನ ‘ಬಾಬಾ’

  • ಭೋಲೆ ಬಾಬಾ ಅವರು ದಲಿತ ಸಮುದಾಯಕ್ಕೆ ಸೇರಿದವರು. ಮೌಢ್ಯವಿಲ್ಲದ ಸಹಾನುಭೂತಿಯಿಂದ ಕೂಡಿದ ‘ಆದರ್ಶ ಸಮಾಜ’ ನಿರ್ಮಿಸುವ ಗುರಿ ಹೊಂದಿದ್ದಾರೆ ಎಂಬುದಾಗಿ ‘ಸತ್ಸಂಗ’ ನಡೆದ ಕಾರ್ಯಕ್ರಮದಲ್ಲಿ ಹಾಕಿದ್ದ ಹೋರ್ಡಿಂಗ್‌ನಲ್ಲಿ ಹೇಳಲಾಗಿದೆ

  • ಭೋಲೆ ಬಾಬಾ ಅವರ ಯೂಟ್ಯೂಬ್‌ ಚಾನೆಲ್ ಇದ್ದು ಅವರ ಕಾರ್ಯಕ್ರಮಗಳ ಪೋಸ್ಟರ್‌ ಹಾಗೂ ವಿಡಿಯೊಗಳನ್ನು ಈ ಚಾನೆಲ್‌ನಲ್ಲಿ ಪೋಸ್ಟ್‌ ಮಾಡಲಾಗುತ್ತದೆ. ಲಕ್ಷಾಂತರ ಜನರು ಈ ಚಾನೆಲ್‌ ವೀಕ್ಷಿಸುತ್ತಾರೆ.

  • ತಮ್ಮ ಆಶೀರ್ವಾದ ಪಡೆಯಲು ಭಕ್ತರು ಬಂದ ವೇಳೆ ಉಂಟಾಗುವ ನೂಕು ನುಗ್ಗಲು ತಡೆಯುವುದಕ್ಕಾಗಿ ಭೋಲೆ ಬಾಬಾ ‘ನಾರಾಯಣಿ ಸೇನಾ’ ಎಂಬ ಭದ್ರತಾ ತಂಡ ರಚಿಸಿದ್ದಾರೆ. ಪುರುಷರು ಹಾಗೂ ಮಹಿಳೆಯರನ್ನು ಒಳಗೊಂಡಿರುವ ಈ ತಂಡ ‘ಸತ್ಸಂಗ’ದಂತಹ ಕಾರ್ಯಕ್ರಮಗಳ ಸಂದರ್ಭದಲ್ಲಿ ಭೋಲೆ ಬಾಬಾ ಅವರಿಗೆ ಭದ್ರತೆ ಒದಗಿಸುತ್ತದೆ

  • ಮೃತ ಬಾಲಕನನ್ನು ಬದುಕಿಸುವುದಾಗಿ ಹೇಳಿಕೊಂಡಿದ್ದಕ್ಕೆ ಸಂಬಂಧಿಸಿ ಬಾಬಾ ವಿರುದ್ಧ ಕೆಲ ವರ್ಷಗಳ ಹಿಂದೆ ಆಗ್ರಾ ಪೊಲೀಸ್‌ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ.

ಆಗ್ರಾದಲ್ಲಿರುವ ಭೋಲೆ ಬಾಬಾ ನಿವಾಸದ ಮುಂದೆ ಭಕ್ತರು ಕೈಮುಗಿದು ಪ್ರಾರ್ಥಿಸುತ್ತಿರುವುದು –ಪಿಟಿಐ ಚಿತ್ರ

ಆಗ್ರಾದಲ್ಲಿರುವ ಭೋಲೆ ಬಾಬಾ ನಿವಾಸದ ಮುಂದೆ ಭಕ್ತರು ಕೈಮುಗಿದು ಪ್ರಾರ್ಥಿಸುತ್ತಿರುವುದು –ಪಿಟಿಐ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT