ಗುರುವಾರ, 27 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋವ್ಯಾಕ್ಸಿನ್‌ ಅಡ್ಡಪರಿಣಾಮ: ಬಿಎಚ್‌ಯು ಅಧ್ಯಯನ ವರದಿಗೆ ಐಸಿಎಂಆರ್ ಕಿಡಿ

ಇದೊಂದು ಅತ್ಯಂತ ಕಳಪೆ ಮಾದರಿಯ ಅಧ್ಯಯನ– ಐಸಿಎಂಆರ್ ಮುಖ್ಯಸ್ಥ ಡಾ. ರಾಜೀವ್ ಬಹಲ್‌ ಆಕ್ಷೇಪ
Published 20 ಮೇ 2024, 22:30 IST
Last Updated 20 ಮೇ 2024, 22:30 IST
ಅಕ್ಷರ ಗಾತ್ರ

ನವದೆಹಲಿ: ಭಾರತ್‌ ಬಯೊಟೆಕ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್‌ ತಡೆಯುವ ಕೋವ್ಯಾಕ್ಸಿನ್‌ ಲಸಿಕೆ ಪಡೆದ ಮೂರನೇ ಒಂದರಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡಪರಿಣಾಮಗಳು ಕಂಡುಬಂದಿವೆ ಎಂದು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಸಂಶೋಧಕರು ನಡೆಸಿರುವ ಅಧ್ಯಯನಕ್ಕೆ ಬಳಸಿರುವ ವಿಧಾನವು ಅತ್ಯಂತ ಕಳಪೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ಕೋವ್ಯಾಕ್ಸಿನ್‌ ಲಸಿಕೆ ಪಡೆದ ಶೇ 30ರಷ್ಟು ಜನರಲ್ಲಿ ವರ್ಷದ ಬಳಿಕ ಪಾರ್ಶ್ವವಾಯು, ನರ ಸಂಬಂಧಿತ ಸಮಸ್ಯೆ ಮತ್ತು ಉಸಿರಾಟದ ಅಸ್ವಸ್ಥತೆ ಸೇರಿ ಹಲವು ಅಡ್ಡ ಪರಿಣಾಮಗಳು ಕಂಡುಬಂದಿವೆ ಎಂದು ಅಧ್ಯಯನ ವರದಿ ಹೇಳಿತ್ತು. 2022ರ ಜನವರಿಯಿಂದ 2023ರ ಆಗಸ್ಟ್‌ ನಡುವಣ ಅವಧಿಯಲ್ಲಿ ಈ ಸಂಶೋಧನೆ ಕೈಗೊಂಡು ವರದಿ ಸಿದ್ದಪಡಿಸಲಾಗಿದೆ ಎಂದು ಬಿಎಚ್‌ಯು ಹೇಳಿತ್ತು. 

ಈ ಸಂಶೋಧನಾ ವರದಿಗೆ ಆಕ್ಷೇಪ ವ್ಯಕ್ತಪಡಿಸಿರುವ ಐಸಿಎಂಆರ್, ಅತ್ಯಂತ ಕಳಪೆ ವಿಧಾನದಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ವರದಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ, ಈ ಅಧ್ಯಯನ ವರದಿಯಿಂದ ತಾನು ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ.  

‘ಕೋವ್ಯಾಕ್ಸಿನ್‌ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಬಿಎಚ್‌ಯು ನಡೆಸಿದ ಅಧ್ಯಯನ ಸಮರ್ಪಕವಾಗಿಲ್ಲ. ಸಂಶೋಧನಾ ಲೇಖನ ತಪ್ಪು ದಾರಿಗೆ ಎಳೆಯುತ್ತದೆ. ಐಸಿಎಂಆರ್‌ಗೂ ಈ ಅಧ್ಯಯನಕ್ಕೂ ಸಂಬಂಧ ಇಲ್ಲ. ಬಿಎಚ್‌ಯುನ ಈ ಸಂಶೋಧನೆಗೆ ನಾವು ಯಾವುದೇ ಆರ್ಥಿಕ ಅಥವಾ ತಾಂತ್ರಿಕ ನೆರವು ಒದಗಿಸಿಲ್ಲ’ ಎಂದು ಐಸಿಎಂಆರ್ ಮಹಾನಿರ್ದೇಶಕ (ಡಿಜಿ) ಡಾ. ರಾಜೀವ್ ಬಹಲ್‌ ಹೇಳಿದ್ದಾರೆ.

ಈ ವರದಿಯಲ್ಲಿ ಲಸಿಕೆ ಪಡೆಯದವರ ಹೋಲಿಕೆ ಮಾಡುವ ಪ್ರಯತ್ನ ನಡೆಸಿಲ್ಲ. ಎಲ್ಲ ಅಡ್ಡ ಪರಿಣಾಮಗಳನ್ನೂ ಕೋವ್ಯಾಕ್ಸಿನ್ ಲಸಿಕೆ ಜೊತೆ ನಂಟು ಬೆಸೆಯುವ ಅರ್ಥದಲ್ಲಿ ತಜ್ಞರು ಹೇಳಿಕೆ ನೀಡಿದ್ದಾರೆ. ಇದೊಂದು ಅತ್ಯಂತ ಕಳಪೆ ಮಾದರಿಯ ಅಧ್ಯಯನ ಎಂದು ಬಹಲ್‌ ಹೇಳಿದ್ದಾರೆ.  

ಈ ಸಂಬಂಧ ಸಂಶೋಧಕರು ಮತ್ತು ಅಧ್ಯಯನ ಪ್ರಕಟಿಸಿರುವ ಜರ್ನಲ್‌ನ ಸಂಪಾದಕರಿಗೆ ಪತ್ರ ಬರೆದಿರುವ ಬಹಲ್‌, ಅಧ್ಯಯನದ ವರದಿಯಲ್ಲಿ ಐಸಿಎಂಆರ್‌ ಹೆಸರು ತೆಗೆದು ತಪ್ಪು ಸರಿಪಡಿಸುವಂತೆಯೂ ಸೂಚಿಸಿದ್ದಾರೆ. ಇದನ್ನು ಸರಿಪಡಿಸದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.

ಕೋವ್ಯಾಕ್ಸಿನ್ ಪಡೆದವರಲ್ಲಿ ಅಧ್ಯಯನಕ್ಕೆ ಒಳಪಡಿಸಿದ  926 ಮಂದಿಯ ಪೈಕಿ ಶೇ. 30ರಷ್ಟು ಜನರಿಗೆ ಗಂಭೀರ ಅಡ್ಡ ಪರಿಣಾಮಗಳು ಎದುರಾಗಿವೆ. ಈ ಲಸಿಕೆ ಪಡೆದವರ ಪೈಕಿ ಶೇ. 1 ರಷ್ಟು ಮಂದಿ ಪಾರ್ಶ್ವವಾಯು ಹಾಗೂ ದೇಹದ ಆರೋಗ್ಯಕರ ಜೀವಪ್ರತಿಕಾಯಗಳನ್ನು ಕೊಲ್ಲುವ ರೋಗಗಳಿಗೆ (ಆಟೋ ಇಮ್ಯೂನ್ ಡಿಸೀಜಸ್) ಒಳಗಾಗುತ್ತಾರೆ. ಈ ರೋಗಕ್ಕೆ ತುತ್ತಾದವರಲ್ಲಿ ನರ ದೌರ್ಬಲ್ಯ ಎದುರಾಗಲಿದ್ದು, ಕೈ ಹಾಗೂ ಕಾಲುಗಳು ದುರ್ಬಲವಾಗುತ್ತವೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು.

ಇದಲ್ಲದೆ, ಇವರ ಪೈಕಿ ಶೇ. 50 ರಷ್ಟು ಮಂದಿ ಉಸಿರಾಟದ ಸೋಂಕಿನಿಂದ ಬಳಲಿದ ಬಗ್ಗೆಯೂ ಮಾಹಿತಿ ನೀಡಿದ್ದರು. ಶೇ. 30 ರಷ್ಟು ಮಂದಿ ದೈಹಿಕ ಸಮಸ್ಯೆಗಳು ಎದುರಾಗುತ್ತಿವೆ ಎಂದಿದ್ದರು. ಚರ್ಮದ ಸಮಸ್ಯೆ, ನರ ದೌರ್ಬಲ್ಯ ಹಾಗೂ ಮೂಳೆ ಮತ್ತು ಮಾಂಸಖಂಡಗಳ ಸಮಸ್ಯೆಯಿಂದಲೂ ಹಲವರು ಬಾಧಿತರಾಗಿದ್ದಾರೆ ಎಂದು ವರದಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT