ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬದ್ಲಾಪುರ, ಕೋಲ್ಕತ್ತ ಲೈಂಗಿಕ ದೌರ್ಜನ್ಯದ ಬಗ್ಗೆ ಮೋದಿ ಮೌನ: ರಾಗಿಣಿ ನಾಯಕ್ ಕಿಡಿ

Published : 23 ಆಗಸ್ಟ್ 2024, 13:41 IST
Last Updated : 23 ಆಗಸ್ಟ್ 2024, 13:41 IST
ಫಾಲೋ ಮಾಡಿ
Comments

ನಾಗ್ಪುರ: ಬದ್ಲಾಪುರ ಹಾಗೂ ಕೋಲ್ಕತ್ತದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕಿ ರಾಗಿಣಿ ನಾಯಕ್‌ ಅವರು ಶುಕ್ರವಾರ ಕಿಡಿಕಾರಿದ್ದಾರೆ.

ಠಾಣೆ ಜಿಲ್ಲೆಯ ಬದ್ಲಾಪುರ ಶಾಲೆಯ ಇಬ್ಬರು ಬಾಲಕಿಯರಿಗೆ ಸ್ವಚ್ಚತಾ ಕಾರ್ಮಿಕ (ಆಗಸ್ಟ್‌ 11 ಮತ್ತು 12ರಂದು) ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯದಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿವೆ.

ಈ ಪ್ರಕರಣಕ್ಕೂ ಮುನ್ನ, ಕೋಲ್ಕತ್ತದ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಆಗಸ್ಟ್‌ 9ರಂದು ಶವ ಪತ್ತೆಯಾಗಿತ್ತು. ಈ ಕೃತ್ಯ ಖಂಡಿಸಿ ದೇಶದಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿವೆ. ಹಲವು ರಾಜ್ಯಗಳಲ್ಲಿ ವೈದ್ಯರು ಒಂದು ವಾರಕ್ಕೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದಾರೆ.

ಬದ್ಲಾಪುರ ಪ್ರಕರಣ ಸಂಬಂಧ ಮುಖ್ಯಮಂತ್ರಿ ಏಕನಾಥ ಶಿಂದೆ ಸರ್ಕಾರದ ವಿರುದ್ಧ ಕಿಡಿಕಾರಿರುವ ನಾಯಕ್‌, ಎಫ್‌ಐಆರ್‌ ದಾಖಲಿಸಿಕೊಳ್ಳಲು ವಿಳಂಬ ಮಾಡಲಾಗಿದೆ. ಜನರು ಬೀದಿಗಿಳಿದ ನಂತರವಷ್ಟೇ ತನಿಖೆ ಆರಂಭಿಸಲಾಗಿದೆ ಎಂದು ಗುಡುಗಿದ್ದಾರೆ. ಪೊಲೀಸರ ನಿಷ್ಕ್ರಿಯತೆ ಬಗ್ಗೆ ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದಾಗಿಯೂ ಹೇಳಿದ್ದಾರೆ.

'ಮಹಾರಾಷ್ಟ್ರ ಸರ್ಕಾರ ಸಂವೇದನಾಶೀಲವಾಗಿ ವರ್ತಿಸಿದ್ದರೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿರಲಿಲ್ಲ. ಪ್ರಕರಣದ ಕೂಲಂಕಷ ತನಿಖೆಗಾಗಿ ವಿರೋಧ ಪಕ್ಷಗಳು ಆಗ್ರಹಿಸಿರುವುದನ್ನು ಬಿಜೆಪಿ ಗೇಲಿ ಮಾಡಿದೆ. ಕೃತ್ಯ ನಡೆದಿರುವ ಶಾಲೆಯ ಆಡಳಿತ ಮಂಡಳಿಯಲ್ಲಿ ಬಿಜೆಪಿ ಮುಖಂಡರು ಇದ್ದಾರೆ' ಎಂದು ಆರೋಪಿಸಿದ್ದಾರೆ.

ಬದ್ಲಾಪುರ ಮತ್ತು ಕೋಲ್ಕತ್ತ ಪ್ರಕರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮೌನವಾಗಿದ್ದಾರೆ ಎಂದಿರುವ ನಾಯಕ್‌, ಬಿಜೆಪಿ ಮತ್ತು ಆರ್‌ಎಸ್‌ಎಸ್‌ 'ಮಹಿಳಾ ವಿರೋಧ ಮನಸ್ಥಿತಿ' ಹೊಂದಿವೆ ಎಂದು ಗುಡುಗಿದ್ದಾರೆ.

ಭಾಷಣಗಳಲ್ಲಿ ಮಾತ್ರವೇ 'ನಾರಿ ಶಕ್ತಿ' ಬಗ್ಗೆ ಪ್ರಸ್ತಾಪಿಸಲಾಗುತ್ತದೆ. ಇಂತಹ ಹೇಯ ಕೃತ್ಯಗಳು ನಡೆದಾಗ ತುಟಿ ಬಿಚ್ಚುವುದಿಲ್ಲ ಎಂದು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಕ್ತಿ ಕ್ರಿಮಿನಲ್‌ ಕಾನೂನು (ಮಹಾರಾಷ್ಟ್ರ ತಿದ್ದುಪಡಿ ಮಸೂದೆ) 2020 ಜಾರಿಯಾಗುವುದು ಯಾವಾಗ ಎಂದೂ ಇದೇ ವೇಳೆ ಪ್ರಶ್ನಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರ ಇದ್ದಾಗ, ಶಕ್ತಿ ಕ್ರಿಮಿನಲ್‌ ಕಾನೂನು (ಮಹಾರಾಷ್ಟ್ರ ತಿದ್ದುಪಡಿ ಮಸೂದೆ) 2020 ಹಾಗೂ ಮಹಾರಾಷ್ಟ್ರ ಶಕ್ತಿ ಕ್ರಿಮಿನಲ್‌ ಕಾನೂನು 2020 ಜಾರಿಗಾಗಿ ವಿಶೇಷ ನ್ಯಾಯಾಲಯ ಮತ್ತು ಆಡಳಿತ ವ್ಯವಸ್ಥೆಗೆ ಉಭಯ ಸದನಗಳು ಅನುಮೋದನೆ ನೀಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT