ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ನೀರಿನ ಸಮಸ್ಯೆ ಬಗೆಹರಿಯದಿದ್ದರೆ ನಾಳೆಯಿಂದ ನಿರಶನ: ಪ್ರಧಾನಿಗೆ ಆತಿಶಿ ಪತ್ರ

ದೆಹಲಿ ನೀರಿನ ಅಭಾವ ಪರಿಹರಿಸುವಂತೆ ಒತ್ತಾಯಿಸಿ ಪ್ರಧಾನಿಗೆ ಸಚಿವೆ ಆತಿಶಿ ಪತ್ರ
Published 19 ಜೂನ್ 2024, 13:12 IST
Last Updated 19 ಜೂನ್ 2024, 13:12 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎದುರಾಗಿರುವ ನೀರಿನ ಅಭಾವದ ಪರಿಸ್ಥಿತಿಯನ್ನು ಸರಿಪಡಿಸಬೇಕು ಎಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ಸಚಿವೆ ಆತಿಶಿ ಬುಧವಾರ ತಿಳಿಸಿದ್ದಾರೆ. ಅಲ್ಲದೆ, ಇನ್ನೆರಡು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯದೆ ಇದ್ದರೆ ಜೂನ್ 21ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ದೆಹಲಿ ಪಾಲಿನ ನೀರನ್ನು ಹರಿಯಾಣ ಬಿಡುಗಡೆ ಮಾಡದ ಕಾರಣ ನೀರಿನ ಅಭಾವ ಎದುರಾಗಿದೆ. ಮಂಗಳವಾರ ದೆಹಲಿಗೆ ಬಿಡುಗಡೆಯಾಗಬೇಕಿದ್ದ 613 ಎಂಜಿಡಿ (ದಿನಕ್ಕೆ ದಶಲಕ್ಷ ಗ್ಯಾಲೋನ್) ಪ್ರಮಾಣದಷ್ಟು ನೀರಿನ ಪೈಕಿ ಹರಿಯಾಣವು 513 ಎಂಜಿಡಿಯಷ್ಟು ನೀರನ್ನು ಮಾತ್ರ ಬಿಡುಗಡೆ ಮಾಡಿದೆ. 28,500 ಜನರಿಗೆ ಒಂದು ಎಂಜಿಡಿಯಷ್ಟು ನೀರಿನ ಅಗತ್ಯವಿದೆ. ಈ ಪ್ರಕಾರ ದೆಹಲಿಯ 28 ಲಕ್ಷಕ್ಕೂ ಹೆಚ್ಚು ಜನರಿಗೆ ನೀರು ಸಿಕ್ಕಿಲ್ಲ’ ಎಂದು ದೂರಿದರು.

‘ಜನರು ಕೇವಲ ಶಾಖಾಘಾತದಿಂದ ಅಷ್ಟೇ ಅಲ್ಲದೆ, ನೀರಿನ ಅಭಾವದಿಂದಲೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿನ ಸಮಸ್ಯೆಗೆ ಪರಿಹಾರ ಕೋರಿ ಹರಿಯಾಣ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದೇನೆ’ ಎಂದು ಇದೇ ವೇಳೆ ತಿಳಿಸಿದರು. 

ಏತನ್ಮಧ್ಯೆ, ಈ ಕುರಿತು ಪ್ರತಿಕ್ರಿಯಿಸಿದ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚದೇವ್, ‘ಹರಿಯಾಣದಿಂದ ಮಂಗಳವಾರ ದೆಹಲಿಗೆ ಹೆಚ್ಚುವರಿ ನೀರು ಹರಿದಿದೆ.  ಕಾಳಸಂತೆಯಲ್ಲಿ ನೀರಿನ ಮಾರಾಟ ಮತ್ತು ನೀರಿನ ಕಳ್ಳತನದ ಘಟನೆಗಳನ್ನು ಮರೆಮಾಚುವ ಸಲುವಾಗಿ ಸಚಿವೆ ಆತಿಶಿ ಅವರು ಈ ನಾಟಕದಲ್ಲಿ ತೊಡಗಿದ್ದಾರೆ. ನೀರಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದ ಎಎಪಿ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು. 

ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ದೇವೇಂದರ್ ಯಾದವ್ ಪ್ರತಿಕ್ರಿಯಿಸಿ, ‘ನೀರಿನ ಸಮಸ್ಯೆ ಕುರಿತು ಇದಕ್ಕೂ ಮುಂಚಿತವಾಗಿಯೇ ಆತಿಶಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಬೇಕಿತ್ತು. ಜೊತೆಗೆ ಲಭ್ಯವಿರುವ ನೀರು ಮತ್ತು ಅದರ ಹಂಚಿಕೆ ಕುರಿತು ಉತ್ತಮ ಯೋಜನೆಯೊಂದನ್ನು ಸಿದ್ಧಪಡಿಸಬೇಕಿತ್ತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT