ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್ ಭೇಟಿಗೂ ಮುನ್ನ ಮೋದಿಯನ್ನು ಮಣಿಪುರಕ್ಕೆ ಆಹ್ವಾನಿಸಿದ್ದೀರಾ?: ಕಾಂಗ್ರೆಸ್

Published : 28 ಜುಲೈ 2024, 5:45 IST
Last Updated : 28 ಜುಲೈ 2024, 5:45 IST
ಫಾಲೋ ಮಾಡಿ
Comments

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ಗೆ ಭೇಟಿ ನೀಡುವುದಕ್ಕೂ ಮುನ್ನ ದೇಶದಲ್ಲೇ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರಕ್ಕೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದೀರಾ ಎಂದು ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ಪ್ರಧಾನಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆ ಹಾಗೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ನಡೆಯುತ್ತಿರುವ ಸಭೆಗೆ ಮಣಿಪುರ ಸಿಎಂ ಬಿರೇನ್‌ ಭಾಗಿಯಾಗಿದ್ದಾರೆ.

ಈ ಕುರಿತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು, 'ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಗೆ ಮಣಿಪುರ ಮುಖ್ಯಮಂತ್ರಿ ಹಾಜರಾಗಿದ್ದರು. ನಂತರ ಬಿಜೆಪಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಸಭೆಯಲ್ಲೂ ಭಾಗವಹಿಸಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.

ಮುಂದುವರಿದು, 'ಇದೀಗ ಮಣಿಪುರದ ಜನರು ಕೇಳುತ್ತಿರುವ ಸರಳ ಪ್ರಶ್ನೆಗಳೆಂದರೆ, ಶ್ರೀ ಎನ್‌. ಬಿರೇನ್‌ ಸಿಂಗ್‌ ಅವರು ಪ್ರಧಾನಿ ಮೋದಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ 2023ರ ಮೇ 3ರ ರಾತ್ರಿಯಿಂದ ಹೊತ್ತಿ ಉರಿಯುತ್ತಿರುವ ಮಣಿಪುರದ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆಯೇ? ಅವರನ್ನು (ಮೋದಿ) ಉಕ್ರೇನ್‌ ಪ್ರವಾಸ ಕೈಗೊಳ್ಳುವ ಮುನ್ನ ಅಥವಾ ನಂತರವಾದರೂ ಮಣಿಪುರಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆಯೇ?' ಎಂದು ಪ್ರಶ್ನಿಸಿದ್ದಾರೆ.

ಮಣಿಪುರದ ಪ್ರಮುಖ ಬುಡಕಟ್ಟು ಸಮುದಾಯಗಳಾದ ಮೈತೇಯಿ ಮತ್ತು ಕುಕಿ ನಡುವೆ ಮೀಸಲಾತಿ ವಿಚಾರವಾಗಿ ಸಂಘರ್ಷ ನಡೆಯುತ್ತಿದೆ. 2023ರ ಮೇ ತಿಂಗಳಿಂದ 200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT