ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲಾ ನ್ಯಾಯಾಲಯಗಳು ‘ಅಧೀನ’ ಅಲ್ಲ: ಸಿಜೆಐ ಡಿ.ವೈ. ಚಂದ್ರಚೂಡ್

Published : 31 ಆಗಸ್ಟ್ 2024, 15:26 IST
Last Updated : 31 ಆಗಸ್ಟ್ 2024, 15:26 IST
ಫಾಲೋ ಮಾಡಿ
Comments

ನವದೆಹಲ: ಜಿಲ್ಲಾ ಹಂತದ ನ್ಯಾಯಾಲಯಗಳು ನ್ಯಾಯಾಂಗ ವ್ಯವಸ್ಥೆ ಬೆನ್ನೆಲುಬು ಇದ್ದಂತೆ ಎಂದು ಸಿಜೆಐ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ. ಈ ನ್ಯಾಯಾಲಯಗಳನ್ನು ‘ಅಧೀನ ನ್ಯಾಯಾಲಯಗಳು’ ಎಂದು ಕರೆಯುವುದನ್ನು ನಿಲ್ಲಿಸಬೇಕು ಎಂದೂ ಅವರು ಪ್ರತಿಪಾದಿಸಿದ್ದಾರೆ.

ಜಿಲ್ಲಾ ನ್ಯಾಯಾಲಯಗಳ ರಾಷ್ಟ್ರೀಯ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನ್ಯಾಯ ಅರಸುವ ವ್ಯಕ್ತಿಗೆ ಮೊದಲು ಸಿಗುವುದು ಜಿಲ್ಲಾ ಹಂತದ ನ್ಯಾಯಾಲಯಗಳು ಎಂದರು. ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

‘ಕಾನೂನಿಗೆ ಅನುಗುಣವಾದ ಆಡಳಿತದಲ್ಲಿ ಜಿಲ್ಲಾ ನ್ಯಾಯಾಲಯಗಳದ್ದು ಮಹತ್ವದ ಪಾತ್ರ’ ಎಂದರು. ಜಿಲ್ಲಾ ನ್ಯಾಯಾಲಯಗಳು ಬಹಳ ದೊಡ್ಡ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಹೀಗಾಗಿ ಇವನ್ನು ನ್ಯಾಯಾಂಗದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬನ್ನು ಪೋಷಿಸಲು, ಜಿಲ್ಲಾ ನ್ಯಾಯಾಲಯಗಳನ್ನು ‘ಅಧೀನ’ ನ್ಯಾಯಾಲಯಗಳು ಎಂದು ಕರೆಯುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರ, ಬ್ರಿಟಿಷ್ ಕಾಲದ ಇನ್ನೊಂದು ಪಳೆಯುಳಿಕೆಯನ್ನು, ಅಂದರೆ ವಸಾಹತು ಮನಃಸ್ಥಿತಿಯಾದ ಅಧೀನತೆಯನ್ನು, ಹೂತುಹಾಕುವ ಕಾಲ ಬಂದಿದೆ ಎಂದರು.

ನ್ಯಾಯಾಂಗದ ಸೇವೆಗಳಿಗೆ ಮಹಿಳೆಯರು ಸೇರುವ ಪ್ರಮಾಣ ಹೆಚ್ಚಾಗುತ್ತಿದೆ ಎಂದೂ ಚಂದ್ರಚೂಡ್ ತಿಳಿಸಿದರು. ‘ಕಳೆದ ಕೆಲವು ವರ್ಷಗಳಲ್ಲಿ ಜಿಲ್ಲಾ ನ್ಯಾಯಾಲಯಗಳಿಗೆ ಮಹಿಳೆಯರು ಸೇರುವ ಪ್ರಮಾಣ ಹೆಚ್ಚಾಗಿದೆ. 2023ರಲ್ಲಿ ರಾಜಸ್ಥಾನದಲ್ಲಿ ನಡೆದ ಸಿವಿಲ್ ನ್ಯಾಯಾಧೀಶರ ಒಟ್ಟು ನೇಮಕಾತಿಯಲ್ಲಿ ಮಹಿಳೆಯರ ಪ್ರಮಾಣ ಶೇಕಡ 58ರಷ್ಟು ಇತ್ತು’ ಎಂದರು.

2023ರಲ್ಲಿ ದೆಹಲಿಯಲ್ಲಿ ನೇಮಕಗೊಂಡ ನ್ಯಾಯಾಂಗ ಅಧಿಕಾರಿಗಳಲ್ಲಿ ಮಹಿಳೆಯರ ಪ್ರಮಾಣವು ಶೇ 66ರಷ್ಟು ಆಗಿತ್ತು. ಉತ್ತರ ಪ್ರದೇಶದಲ್ಲಿ 2022ರ ಬ್ಯಾಚ್‌ನಲ್ಲಿ ಸಿವಿಲ್ ನ್ಯಾಯಾಧೀಶರ (ಕಿರಿಯ ವಿಭಾಗ) ನೇಮಕಾತಿಯಲ್ಲಿ ಮಹಿಳೆಯರ ಪ್ರಮಾಣವು ಶೇ 54ರಷ್ಟು ಇತ್ತು ಎಂದು ಹೇಳಿದರು.

ಕೇರಳದಲ್ಲಿ ಈಚೆಗೆ ನಡೆದ ನ್ಯಾಯಾಂಗ ಅಧಿಕಾರಿಗಳ ನೇಮಕಾತಿಯಲ್ಲಿ ಶೇಕಡ 72ರಷ್ಟು ಮಂದಿ ಮಹಿಳೆಯರಾಗಿದ್ದರು. ಉದಾಹರಣೆಯಾಗಿ ಉಲ್ಲೇಖಿಸಿರುವ ಈ ಅಂಕಿ–ಅಂಶಗಳು ಭವಿಷ್ಯದ ನ್ಯಾಯಾಂಗವು ಆಶಾದಾಯಕವಾಗಿರುತ್ತದೆ ಎಂಬ ಚಿತ್ರಣವನ್ನು ನೀಡುತ್ತಿವೆ ಎಂದರು. 

Highlights - null

Cut-off box - ನ್ಯಾಯದಾನ ತ್ವರಿತವಾದರೆ ಚೆನ್ನ: ಪ್ರಧಾನಿ ನವದೆಹಲಿ (ಪಿಟಿಐ): ಮಹಿಳೆಯರನ್ನು ಗುರಿಯಾಗಿಸಿಕೊಂಡ ಅಪರಾಧ ಪ್ರಕರಣಗಳಲ್ಲಿ ತ್ವರಿತವಾಗಿ ನ್ಯಾಯದಾನ ಆಗುವಂತೆ ನೋಡಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ತ್ವರಿತ ನ್ಯಾಯದಾನದಿಂದ ಮಹಿಳೆಯರಿಗೆ ತಮ್ಮ ಸುರಕ್ಷತೆಯ ಬಗ್ಗೆ ಹೆಚ್ಚಿನ ಭರವಸೆ ಮೂಡುತ್ತದೆ ಎಂದು ಹೇಳಿದ್ದಾರೆ. ನ್ಯಾಯಾಂಗವನ್ನು ಸಂವಿಧಾನದ ರಕ್ಷಕರಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾಂಗವು ಈ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿವೆ ಎಂದು ಪ್ರಧಾನಿ ಹೇಳಿದ್ದಾರೆ. ಪ್ರಧಾನಿಯವರು ಕಾರ್ಯಕ್ರಮವೊಂದರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಸಮ್ಮುಖದಲ್ಲಿ ಈ ಮಾತು ಹೇಳಿದ್ದಾರೆ. ದೇಶದ ನ್ಯಾಯಾಂಗ ಹಾಗೂ ಸುಪ್ರೀಂ ಕೋರ್ಟ್‌ ಬಗ್ಗೆ ಜನ ಯಾವತ್ತೂ ಅವಿಶ್ವಾಸ ವ್ಯಕ್ತಪಡಿಸಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುವ ದೌರ್ಜನ್ಯ ಕೃತ್ಯಗಳು ಹಾಗೂ ಮಕ್ಕಳ ಸುರಕ್ಷತೆಯು ಸಮಾಜದಲ್ಲಿ ತೀರಾ ಗಂಭೀರ ಸ್ವರೂಪದಲ್ಲಿ ಕಳವಳ ಮೂಡಿಸುವಂಥವು ಎಂದಿದ್ದಾರೆ. ‘ಮಹಿಳೆಯರನ್ನು ಗುರಿಯಾಗಿಸಿಕೊಂಡ ದೌರ್ಜನ್ಯ ಪ್ರಕರಣಗಳಲ್ಲಿ ಎಷ್ಟು ತ್ವರಿತಗತಿಯಲ್ಲಿ ನ್ಯಾಯದಾನ ಆಗುತ್ತದೆಯೋ ಮಹಿಳೆಯರಿಗೆ ತಮ್ಮ ಸುರಕ್ಷತೆಯ ಬಗ್ಗೆ ಅಷ್ಟು ಹೆಚ್ಚು ವಿಶ್ವಾಸ ಮೂಡುತ್ತದೆ’ ಎಂದು ಪ್ರಧಾನಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯಾಯದಾನವು ತ್ವರಿತವಾಗಿ ಆಗುವಂತೆ ನೋಡಿಕೊಳ್ಳಲು ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯೊಳಗೆ ಹೆಚ್ಚಿನ ಮಟ್ಟದ ಸಮನ್ವಯ ಸಾಧ್ಯವಾಗಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT